ನಮನ
ಡಾ.ದೊರೇಶ ಬಿಳಿಕೆರೆ
‘ಬಟ್ಟ ಬಯಲೆಲ್ಲ ಗಟ್ಟಿಗೊಂಡೊಡೆ, ಸ್ವರ್ಗ ಮರ್ತ್ಯ ಪಾತಾಳಕ್ಕೆ ಠಾವಿನ್ನೆಲ್ಲಿಹುದೊ? ಮೇಘಜಲವೆಲ್ಲ ಮುತ್ತಾದಡೆ ಸಪ್ತ ಸಾಗರಂಗಳಿಗೆ ಉದಕವನ್ನೆಲ್ಲಿ ಹುದೋ? ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ ಮುಂದೆ ಭವದ ಬಳ್ಳಿಗೆ ಬೀಜ ಇನ್ನೆಲ್ಲಿಹುದೊ? ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ!’
ಎನ್‌ಐಟಿಯಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಜಿಯರಿಂಗ್ ಪದವಿ ಪಡೆದು ವಿಜ್ಞಾನಿಯಾಗಿ ವೃತ್ತಿ ಮಾಡಬಹುದಾಗಿದ್ದ ವ್ಯಕ್ತಿತ್ವವೊಂದು ಶ್ರೀಮಠದ ಗುರುಪರಂಪರೆಗೆ ಬಂದುಚೇತನ ರೂಪಿಯಾಗಿ ಕೋಟ್ಯಂತರ ಜನಮನಸ್ಸನ್ನು ಉದ್ದರಿಸಿ ಜನರ ಸುಂದರ ಬದುಕಿಗೆ ಬೇಕಾದ ತಿಳುವಳಿಕೆ ನೀಡುತ್ತಾ ವ್ಯಕ್ತಿಗಳ ಮನಸ್ಸಲ್ಲಿನ ಕೆಡುಕುಗಳನ್ನು ದೂರಮಾಡಿ ಬದುಕಿನ ಮತ್ತೊಂದು ವಿನ್ಯಾಸವನ್ನು ಧರ್ಮ ಮತು ಜ್ಞಾನದ ನೆಲೆಯಲ್ಲಿ ವಿಸ್ತರಿಸುರುತ್ತಿರುವುದು ಈ ಮನುಕುಲದ ಅದೃಷ್ಟವೇ ಸರಿ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಠವು ದಕ್ಷಿಣ ಭಾರತದ ಪ್ರಸಿದ್ಧ ಮಠವಾಗಿದೆ. ಧರ್ಮ ಕ್ಷೇತ್ರ, ತಪೋಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ಆದಿಚುಂಚನಗಿರಿ ಮಠವು ಸುಮಾರು ೨೦೦೦ ವರ್ಷಗಳ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರದಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ತಮ್ಮ ಸೇವಾಕಾರ್ಯದಲ್ಲಿ ಅಕ್ಷರ, ಅರಿವು ಅನ್ನದ ಗುರಿಯನ್ನು ಸಾಮಾಜಿಕವಾಗಿ ಸಾಧಿಸಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಮಠವನ್ನು ಉನ್ನತ ಸ್ಥಾನದಲ್ಲಿ ಕೊಂಡೊಯ್ಯಲು ಶ್ರಮಿಸಿ ಸಾಧಿಸಿದರು.
ತಮ್ಮ ನಂತರ ೪೭೫ ಕ್ಕೂ ಹೆಚ್ಚು ಶಾಲಾ ಕಾಲೇಜುಗಳು, ಅಂಧ ಮಕ್ಕಳ ಶಾಲೆ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಹತ್ತು ಹಲವು ಸಂಸ್ಥೆ ಗಳನ್ನು, ಶ್ರೀಕ್ಷೇತ್ರದಲ್ಲಿರುವ ಅದ್ಭುತ ದೇವಾಲಯವನ್ನು, ಶ್ರೀಕ್ಷೇತ್ರದ ಆಸ್ತಿಪಾಸ್ತಿ, ಭಕ್ತಾದಿಗಳ ನೋಡಿಕೊಳ್ಳುವ ಮಹೋನ್ನತ ಜವಾಬ್ದಾರಿಯನ್ನು ಮುಂದಾಲೋಚನೆ ಮಾಡಿ ಶ್ರೀನಿರ್ಮಲಾನಂದನಾಥ ಸ್ವಾಮಿಗಳಿಗೆ ಒಪ್ಪಿಸಬೇಕೆಂದು ಬಯಸಿದ್ದರು ಅದರಂತೆ ಈ ಎಲ್ಲ ಜವಾಬ್ದಾರಿಗಳನ್ನು ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅತ್ಯಂತ ಪ್ರೀತಿಯಿಂದ ಮುನ್ನಡೆಸಿಕೊಂಡು
ಬರುತ್ತಿದ್ದಾರೆ.
ಆದಿಚುಂಚನಗಿರಿ ಮಠ ಒಕ್ಕಲಿಗರ ಮಠ ಎಂಬುದೇನೋ ನಿಜ ಆದರೆ ಈ ನಾಡಿನ ಎಲ್ಲ ಸಮುದಾಯಗಳ ಶ್ರದ್ಧಾಕೇಂದ್ರವಾಗಿ ರೂಪಿತವಾಗಿರುವುದು ಅಕ್ಷರಶಃ ಸತ್ಯ, ಹಾಗಾಗಿಯೇ ಈ ನಾಡಿನ ಎಲ್ಲಾ ಅಬಲರು, ಅಂಚಿನ ಸಮುದಾಯದವರು, ಶೋಷಿತರು ಈ ಹೀಗೆ ಅಶಕ್ತರಾದ ಎಲ್ಲಾ ವರ್ಗ, ಸಮುದಾಯಗಳ ಮಕ್ಕಳಿಗೆ ಉಚಿತ ಶಿಕ್ಷಣ ವನ್ನು ನೀಡಲಾಗುವುದು ಎಂಬ ಶ್ರೀಗಳ ಹೇಳಿಕೆ ಈ ನೆಲದ ಅನೇಕ ಸಮುದಾಯಗಳ ಸಾವಿರಾರು ಮಕ್ಕಳಿಗೆ ಜ್ಞಾನದ ರಹ ದಾರಿಯನ್ನು ತೆರೆದಿದೆ. ಚುಮುಚುಮು ಮುಂಜಾನೆಯಲ್ಲಿ ಸಾವಿರಾರು ಮಕ್ಕಳೊಡಗೂಡಿ ಶಿಸ್ತುಬದ್ಧವಾಗಿ ಸಂಸ್ಕಾರ ಭರಿತವಾದ ಶ್ಲೋಕಗಳಿಂದ ನಯನಮನೋಹರ ಪ್ರಕೃತಿ ಮಡಿಲಲ್ಲಿ ಬೆಳೆಯುತ್ತಿರುವ ಶ್ರೀಮಠದ ಮಕ್ಕಳ ಚಟುವಟಿಕೆ ಮುದ ನೀಡುತ್ತದೆ.
ಶ್ರೀ ಮಠಕ್ಕೆ ಪ್ರತಿ ಭಕ್ತರನ್ನೂ ಅತ್ಯಂತ್ಯ ಪ್ರೀತ್ಯಾಧಾರಗಳಿಂದ ಮಾತನಾಡಿಸುವ ಗುರೂಜಿಯವರ ನಡೆಯೇ ಮಾದರಿಯಾದುದು. ಮಕ್ಕಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಭಿತ್ತಿ ಬೆಳೆದು ಅವರನ್ನು ಈ ನಾಡಿನ ಆಸ್ತಿಯಾಗಿ ರೂಪಿಸಬೇಕೆಂಬುದು ಗುರೂಜಿಯವರ ಹೆಬ್ಬಯಕೆ. ತಮ್ಮ ಇಪ್ಪತ್ತೊಂಬತ್ತ ನೆಯ ವಯೋಮಾನದಲ್ಲಿ ಅಧ್ಯಾತ್ಮದ ಸೆಳೆತ ಉಂಟಾಗಿ ಕೃಷಿಕ ಕುಟುಂಬದಲ್ಲಿ ಹುಟ್ಟಿ ಈ ಮಣ್ಣಿನ ಸಂಸ್ಕೃತಿಯ ಅನುಭವಗಳನ್ನು ದಕ್ಕಿಸಿಕೊಂಡು ಮಾನವ ಪ್ರೀತಿಯ ಹುಡುಕುತ್ತಾ ಶ್ರೀಮಠದ ಕಡೆಗೆ ಹೆಜ್ಜೆ ಹಾಕಿದ್ದೇ ಅತ್ಯದ್ಬುತ. ಅಪಾರ ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ, ಶಿಕ್ಷಣದಂತ ಅತ್ಯಮೂಲ್ಯ ಮೌಲ್ಯಗಳನ್ನು ಮನಸ್ಸಲ್ಲಿ ತುಂಬಿಕೊಂಡು ತ್ಯಾಗಮಯಿಯಾಗಿ ಈ ನಾಡಿಗೆ ಶ್ರೀಮಠದ ಮುಖೇನ ಗುರೂಜಿಯವರು ನಡೆಸುತ್ತಿರುವ ಸೇವೆ ಅನನ್ಯವಾದುದು.
ಒಕ್ಕಲಿಗರ ಪರಂಪರೆಯ ಮಠಎಂದು ಪರಿಗಣಿಸಿರುವ ಚುಂಚನಗಿರಿಕ್ಷೇತ್ರದಲ್ಲಿ ಆ ಸಮುದಾಯದ ಭಕ್ತಜನ ಪ್ರೀತಿಸುವುದು ಒಂದುತೂಕವಾದರೆ. ಇಡೀದೇಶ ಮಾತ್ರವಲ್ಲದೆ ಪ್ರಪಂಚದ ಅನೇಕ ರಾಷ್ಟ್ರಗಳ ಬೌದ್ಧಿಕ ವಲಯದ ಚಿಂತಕರು ಗೌರವಿಸುವ ವ್ಯಕ್ತಿತ್ವ ಚುಂಚಶ್ರೀಯವರದ್ದು. ವೇದ, ಆಗಮ, ಸಾಹಿತ್ಯ, ವಿಜ್ಞಾನ, ಸಾಮಾಜಿಕ ದೀಪ್ತತೆಯ ಅಪರೂಪದ ಜ್ಞಾನ ಹೊಂದಿರುವ ಪೂಜ್ಯರು, ದೀರ್ಘ ಇತಿಹಾಸವನ್ನು ಹೊಂದಿರುವ ಶ್ರೀಮಠದ ಉತ್ತರಾಧಿಕಾರಿಯಾಗಿ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಗುರೂಜಿಯವರದ್ದು ಬಹುಮುಖಿ ವ್ಯಕ್ತಿತ್ವ.
ಪ್ರಾಥಮಿಕ ಶಿಕ್ಷಣ- ಮಾವಿನಹಳ್ಳಿ ಸರಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಮಾವಿನಹಳ್ಳಿ ಪ್ರಗತಿಪರ ವಿದ್ಯಾವರ್ಧಕ ಶಾಲೆಯಲ್ಲಿ ಪೂರ್ಣ ಗೊಳಿಸಿ ದರು.‘ಪ್ರೌಢಶಾಲೆ ತರಗತಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಪಡೆದಿರುವ ಅಂಕಗಳ ದಾಖಲೆಯನ್ನು ಇಲ್ಲಿಯವರೆಗೂ ನಮ್ಮ ಶಾಲೆಯಲ್ಲಿ
ಯಾರೂ ಮುರಿದಿಲ್ಲ’ ಎನ್ನುತ್ತಾರೆ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ವಿ.ಬಸವರಾಜ್. ಬಡತನದ ಕಾರಣ ಡಿಪ್ಲೊಮಾ ಪಾಲಿಟೆಕ್ನಿಕ್ ಅಧ್ಯಯನ ವನ್ನು ಒಂದು ವರ್ಷ ಮೊಟಕುಗೊಳಿಸಿದ್ದರು. ಆಗ ಅವರ ತಾತ, ಗುಬ್ಬಿ ಮಾಜಿ ಶಾಸಕ ಎನ್.ವೀರಣ್ಣಗೌಡರ ಬಳಿ ಕರೆದುಕೊಂಡು ಬಂದರು.
ಅವರ ನೆರವಿನಿಂದ ಶಿಕ್ಷಣ ಮುಂದುವರಿಸಿದರು. ವೀರಣ್ಣ ಗೌಡರ ಮನೆ ಹಾಗೂ ತುಮಕೂರು ಬಿ.ಎಚ್.ರಸ್ತೆಯ ಸೈಕಲ್ ಮುದ್ದಣ್ಣ ಕಟ್ಟಡದಲ್ಲಿದ್ದ ವೀರಣ್ಣಗೌಡರ ಕಚೇರಿಯೇ ಅವರ ಆಶ್ರಯತಾಣವಾಗಿತ್ತು. ತುಮಕೂರಿನಲ್ಲಿ ಡಿಪ್ಲೊಮಾ ಮುಗಿಸಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿಗೆ ಸೇರಿದ
ಅವರು, ವಿಜಯನಗರದ ಆದಿಚುಂಚನಗಿರಿ ಮಠದ ವಿದ್ಯಾರ್ಥಿ ನಿಲಯದಲ್ಲಿ ಸೀಟಿಗೆ ಪರದಾಡಿದರು. ಆಗ ಸೀಟು ನಿರಾಕರಿಸಲಾಯಿತು. ವಿದ್ಯಾರ್ಥಿ ನಿಲಯದಲ್ಲಿ ಸೀಟು ಸಿಗದ ನೋವಿನಲ್ಲೇ ತೆರಳಿದ ನಾಗರಾಜ್ ಮುಂದೆ ವೀರಣ್ಣಗೌಡರ ಶಿ-ರಸಿನ ಮೇಲೆ ಹಾಸ್ಟೆಲ್‌ಗೆ ಪ್ರವೇಶ ಗಿಟ್ಟಿಸಿಕೊಂಡರು.ಈಗ ಮಠದ ಪೀಠಾಧಿಪತಿಯಾಗುವವರೆಗೆ ಬೆಳೆದಿದ್ದು ಇತಿಹಾಸ. ಎಂಜಿನಿಯರಿಂಗ್ ಬಳಿಕ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದು ಅಮೆರಿಕದಲ್ಲಿ ಕೈತುಂಬ ಸಂಬಳದ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಅಮೆರಿಕಕ್ಕೆ ಹೋಗುವ ಮುನ್ನ ಹಳೆ ಸ್ನೇಹಿತರನ್ನು ಮಾತನಾಡಿಸಿಕೊಂಡು ಬರಲು ವಿಜಯನಗರದ ಮಠದ ಹಾಸ್ಟೆಲ್‌ಗೆ ಬಂದಿದ್ದರು.
ಅಲ್ಲಿಯವರೆಗೂ ಬಾಲಗಂಗಾಧರನಾಥ ಸ್ವಾಮೀಜಿಗಳ ಜತೆ ಸಣ್ಣ ಸಂಪರ್ಕ ಕೂಡ ಇರಲಿಲ್ಲ. ಮಠದ ಹಾಸ್ಟೆಲ್ ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗನ್ನು ಕಂಡ ಬಾಲಗಂಗಾಧರನಾಥ ಸ್ವಾಮೀಜಿ, ಆ ಹುಡುಗನನ್ನು ಚುಂಚನಗಿರಿಗೆ ಕರೆ ತರುವಂತೆ ಆದೇಶಿಸಿದ್ದರು. ‘ಮಠದಲ್ಲಿ ಸ್ವಾಮೀಜಿ ಎದುರು ನಾಗರಾಜ್
ಅವರನ್ನು ತಂದು ನಿಲ್ಲಿಸಿದಾಗ ನಾಳೆ ಗುರು ಪೂರ್ಣಿಮೆ, ನಿನಗೆ ದೀಕ್ಷೆ ಕೊಡುತ್ತೇನೆ’ ಎಂದು ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು. ‘ಸುಮ್ಮನೆ ತಲೆ ಅಲ್ಲಾಡಿಸಿದ ಅವರಿಗೆ ಮರುದಿನ ಇನ್ನಿತರರೊಂದಿಗೆ ದೀಕ್ಷೆ ನೀಡಿದ್ದು ಈಗಲೂ ಕಣ್ಣ ಮುಂದೆ ಕಟ್ಟಿದಂತಿದೆ’ ಎನ್ನುತ್ತಾರೆ ಸಿದ್ದಲಿಂಗೇಗೌಡ.
ಮೊದಲಿಗೆ ಬಿಳಿ ಬಟ್ಟೆ ತೊಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರ ನಾಗರಾಜ್, ಹೆಸರನ್ನು ನಿರ್ಮಲಾನಂದನಾಥ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು. ಪೂರ್ವಾಶ್ರಮ ತೊರೆದು ಮಠದ ದೀಕ್ಷೆ ತೊಟ್ಟ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮೊದಲಿಗೆ ರಾಮನಗರ ಬಳಿಯ
ಬಾನಂದೂರು (ಬಾಲಗಂಗಾಧರನಾಥ ಸ್ವಾಮೀಜಿ ಹುಟ್ಟೂರು) ಮಠಕ್ಕೆ ಕಳುಹಿಸಿಕೊಡಲಾಯಿತು. ಕೆಲ ವರ್ಷಗಳ ಸೇವೆ ಬಳಿಕ ನಿರ್ಮಲಾನಂದನಾಥ ರಿಗೆ ಕಾವಿ ಬಟ್ಟೆ ನೀಡಿ ಚಿಕ್ಕಬಳ್ಳಾಪುರ ಶಾಖಾ ಮಠಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ನೇಮಿಸಿದರು. ಚಿಕ್ಕಬಳ್ಳಾಪುರದ ಮಠವನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ ಜತೆ ಜತೆಯಲ್ಲೇ ಬಾಲಗಂಗಾಧರನಾಥ ಸ್ವಾಮೀಜಿಗೆ ಅವರು ಅಚ್ಚುಮೆಚ್ಚಿನ ಶಿಷ್ಯರಾದರು.
ಅತ್ಯಂತ ಸರಳ, ಮೃದು ಮಾತಿನಿಂದಾಗಿ ನಿರ್ಮಲಾನಂದ ನಾಥ ಸ್ವಾಮೀಜಿ ಭಕ್ತರ ಮೆಚ್ಚುಗೆ ಗಳಿಸಿರುವುದು ಕೂಡ ನಿಜ ಮೃದು ಸ್ವಭಾವಿ, ಮಿದು ಮಾತಿನವರಾಗಿದ್ದು, ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡೇ ಮಠದ ಅಭಿವೃದ್ಧಿ ಕಾರ್ಯ ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧರ್ಮ ಮತ್ತು ವಿಜ್ಞಾನದ ನಡುವೆ ಅಂತರ ಇರಬಾರದು ಎಂಬುದು ಶ್ರೀಗಳ ನಿಲುವಾಗಿದೆ. ಹಾಗಾಗಿ ಭಕ್ತಾದಿಗಳಿಗೆಂದು ಮಠದ ಆವರಣ ದಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಮೂಲಕ ಧರ್ಮ ಮತ್ತು ವಿಜ್ಞಾನದ ಸಂಯೋಜನೆ ಮಾಡುವುದರ ಮೂಲಕ ಉಚಿತ ಅಂತರ್ಜಾಲ ವ್ಯವಸ್ಥೆ ಮಾಡಿರುವ ಭಾರತದ ಮೊದಲ ಮಠ ಎಂಬ ಖ್ಯಾತಿಗೆ ಆದಿಚುಂಚನಗಿರಿ ಶ್ರಿಕ್ಷೇತ್ರ ಪಾತ್ರವಾಗಲು ಕಾರಣರಾಗಿ ದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೋಕಿನ ಚೀರನಹಳ್ಳಿ ಎಂಬ ಕುಗ್ರಾಮದಲ್ಲಿ ಕೃಷಿಕ ಕುಟುಂಬಕ್ಕೆ ಸೇರಿದ ಒಕ್ಕಲಿಗ ಸಮುದಾಯದ ದಂಪತಿಗಳ ಅಮೃತ ಗರ್ಭದಲ್ಲಿ ಜನಿಸಿದ ಶಿಶುವೊಂದು ಈ ನಾಡಿನ ಮಹಾಸಂತರಾಗಿ ಬೆಳೆದಿರುವ ಪರಿಯೇ ಇವತ್ತಿನ ಬಹುದೊಡ್ಡ ಕೊಡುಗೆ. ಸಿದ್ಧಯೋಗಿಗಳ ತಪಃಶಕ್ತಿ, ಆದಿರುದ್ರ ತಪಸ್ಸನ್ನಾಚರಿಸಿದ ಜ್ವಾಲಪೀಠ, ಪಂಚಲಿಂಗಗಳ ಸಾನ್ನಿಧ್ಯ, ಕಾಲಭೈರವ, ಅಷ್ಟಭೈರವ, ಅಷ್ಟಾಷ್ಟ ಭೈರವ, ಮಾಳಮ್ಮದೇವಿ, ಆದಿಶಕ್ತಿ ಸ್ತಂಭಾಂಬಿಕೆ, ಬಿಂದು ಸರೋವರ, ತಾವರೆಕೊಳ ಮುಂತಾದುವುಗಳನ್ನು ಕಾಣ ಬಹುದಾಗಿದೆ.
ಮಾತ್ರವಲ್ಲ ಅನೇಕ ವನಸ್ಪತಿಯ ಗಿಡಗಳು, ನಾಥಯತಿಗಳು ತಪಸ್ಸಾಚರಿಸಿದ್ದ ಗುಹೆಗಳು, ನಾಗರಕಲ್ಲು, ಕೂಗುಬಂಡೆ, ಗಳಿಗಲ್ಲು, ಮಧ್ಯಸ್ತಂಭ, ಚೋಳೂರು ಕಂಬ ಮುಂತಾದ ಪ್ರಸಿದ್ಧ ಶಕ್ತಿ ತಾಣಗಳಿಂದ ಆದಿಚುಂಚನಗಿರಿ ಕ್ಷೇತ್ರಗುರುತಿಸಲ್ಪಟ್ಟಿದೆ. ನಾಡಿನ ಹೆಮ್ಮೆಯ ಗುರುಪ್ರಭೆ, ಜ್ಞಾನದೀವಿಗೆ, ಅಧ್ಯಾತ್ಮಿಕತೆಯ ನಿರ್ಮಲ ಮನಸ್ಸಿನ ಪರಿಶುದ್ಧ ಬೆಳಕು ನಿರಂತರವಾಗಿ ನಾಡಿನ ಎಲ್ಲೆಡೆ ಬೆಳಗಲಿ ಎಂಬುದು ಭಕ್ತರ ಆಶಯ.
(ಲೇಖಕರು: ಹವ್ಯಾಸಿ ಬರಹಗಾರರು)