ಸ್ಮರಣೆ
ಡಾ.ಕೆ.ಉಲ್ಲಾಸ ಕಾರಂತ
ಅರಣ್ಯ ಸಂರಕ್ಷಕ ಗೋಡಿಲ್ಲ ವಿಶ್ವನಾಥ ರೆಡ್ಡಿಯವರನ್ನು ನಾನು ಮೊದಲು ಭೇಟಿಯಾಗಿದ್ದು ೧೯೯೭ರಲ್ಲಿ. ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ನಾನು ಹುಲಿಗಳ ಸಮೀಕ್ಷೆ ನಡೆಸಲು ಕ್ಯಾಮೆರಾ ಟ್ರಾಪ್‌ಗಳನ್ನು ಅಳವಡಿಸುತ್ತಿದ್ದೆ. ಆಗಿನ ಅರಣ್ಯ ಸಂರಕ್ಷಣಾಧಿಕಾರಿಗಳು ಹುಲಿಗಳ ಗಣತಿಗೆ ‘ಪಗ್ ಮಾರ್ಕ್ ಸೆನ್ಸಸ್’ (ಹೆಜ್ಜೆ ಗುರುತಿನ ಗಣತಿ) ವಿಧಾನವನ್ನೇ ಕಡ್ಡಾಯವಾಗಿ ಅನುಸರಿಸಬೇಕೆಂದು ಹೇಳುತ್ತಿದ್ದರು. ಆ ವಿಧಾನ ಆಗಲೇ ಹಳತಾಗಿತ್ತು. ಆದರೂ ನಿಯಮಗಳ ನೆಪವೊಡ್ಡಿ ಪಗ್‌ಮಾರ್ಕ್ ವಿಧಾನವನ್ನೇ ಗಣತಿಗೆ ಬಳಸುತ್ತಿದ್ದರು.
ಅಂತಹ ಅಧಿಕಾರಶಾಹಿಯ ಒಂದು ಭಾಗ ಜಿ.ವಿ.ರೆಡ್ಡಿ ಕೂಡ ಆಗಿದ್ದರು. ಆದರೆ ನಾನು ಆಗಲೇ ಪಗ್‌ಮಾರ್ಕ್ ವಿಧಾನವನ್ನು ವೈಜ್ಞಾನಿಕವಾಗಿ ಟೀಕಿಸು ವುದಕ್ಕೆ ಪ್ರಸಿದ್ಧನಾಗಿದ್ದೆ! ಹೀಗಾಗಿ ಆ ಪದ್ಧತಿಯ ಬೆಂಬಲಿಗರು ನನ್ನನ್ನು ‘ಧರ್ಮ ದ್ರೋಹಿ’ಯಂತೆ ನೋಡುತ್ತಿದ್ದರು. ರೆಡ್ಡಿಯವರು ಆ ಸಮಯದಲ್ಲೇ ರಣಥಂಬೋರ್‌ನ ದಂತಕತೆಯಾಗಿದ್ದರು. ಬೇಟೆಗಾರರು, ಮರಗಳ್ಳರು, ಹಸು ಮೇಯಿಸುವವರ ಕೈಲಿ ಸಿಲುಕಿ ನಲುಗುತ್ತಿದ್ದ ರಣಥಂಬೋರ್ ಉದ್ಯಾನವನ್ನು ಅವರು ಯಶಸ್ವಿಯಾಗಿ ರಕ್ಷಿಸಿದ್ದರು. ಅವರು ರಣಥಂಬೋರ್‌ಗೆ ಹೋಗುವುದಕ್ಕೂ ಮುನ್ನ ಆ ರಾಷ್ಟ್ರೀಯ ಉದ್ಯಾನವೇ ಹೆಚ್ಚುಕಮ್ಮಿ ಅವಸಾನದ ಅಂಚಿಗೆ ಹೋಗಿತ್ತು.
ರೆಡ್ಡಿಯವರು ಹೋದ ಮೇಲೆ ಅದಕ್ಕೆ ಮತ್ತೆ ಜೀವಕಳೆ ಮರಳಿತ್ತು. ಹೀಗಾಗಿ ಅವರು ಅಲ್ಲಿ ಹೀರೋ ಆಗಿದ್ದರು. ಅವರು ಕೂಡ ಹುಲಿ ಗಣತಿಗೆ ಪಗ್‌ಮಾರ್ಕ್ ವಿಧಾನವನ್ನು ಬೆಂಬಲಿಸಿದ್ದ ಅಧಿಕಾರಿಯೇ ಆಗಿದ್ದರೂ, ಅವರೊಬ್ಬ ನುರಿತ ಸಸ್ಯಶಾಸ್ತ್ರಜ್ಞನೂ ಆಗಿದ್ದರಿಂದ ವೈಜ್ಞಾನಿಕ ಸುಧಾರಣೆಗೆ
ಯಾವತ್ತೂ ಮುಕ್ತ ಮನಸ್ಸು ಹೊಂದಿದ್ದರು. ಹೀಗಾಗಿ ನಾನು ಪ್ರಾಣಿಗಳ ಗಣತಿಗೆ ಎಲ್ಲೆಡೆ ವ್ಯಾಪಕವಾಗಿ ಬಳಕೆಗೆ ತರಲು ಪ್ರಯತ್ನಿಸುತ್ತಿದ್ದ ಕ್ಯಾಮೆರಾ ಟ್ರ್ಯಾಪ್ ವಿಧಾನದ ನಿಖರತೆ ಹಾಗೂ ಪ್ರಾಯೋಗಿಕ ಯಶಸ್ಸು ಅವರ ಗಮನ ಸೆಳೆದಿತ್ತು.
ಕ್ರಮೇಣ ಅವರು ನನ್ನ ವಿಧಾನವನ್ನು ಮೆಚ್ಚಿಕೊಳ್ಳತೊಡಗಿದ್ದರು. ಈ ಕಾರಣಕ್ಕಾಗಿಯೇ ಅವರು ಮುಂದಿನ ವರ್ಷಗಳಲ್ಲಿ ಮೂರು ವರ್ಷಗಳ ಅಧ್ಯಯನ ರಜೆ ಪಡೆದು ನನ್ನ ಮಾರ್ಗದರ್ಶನದಲ್ಲಿ ನಾಗರಹೊಳೆಯಲ್ಲಿ ಪಿಎಚ್.ಡಿ ಮಾಡಲು ಬಂದಿದ್ದರು. ರಣಥಂಬೋರ್ ಉದ್ಯಾನವನ್ನು
ನೋಡಿಕೊಳ್ಳುವ ಜವಾಬ್ದಾರಿಯ ಹೊರೆಯನ್ನು ಬದಿಗಿಟ್ಟು ಬನ್ನಿ ಎಂದು ನಾನೇ ಹೇಳಿದ್ದೆ. ಅದಕ್ಕವರು ಒಪ್ಪಿಕೊಂಡು ಬಂದಿದ್ದರು.
ರೆಡ್ಡಿಯವರನ್ನು ಬಹಳ ಹತ್ತಿರದಿಂದ ತಿಳಿಯಲು ನನಗೆ ಅವಕಾಶವಾಗಿದ್ದೇ ಆಗ. ನಿಜವಾಗಿಯೂ ಅವರೊಬ್ಬ ಪ್ರಾಮಾಣಿಕ ಮತ್ತು ವಿನಯವಂತ ವ್ಯಕ್ತಿ. ಅರಣ್ಯ ಇಲಾಖೆಯಲ್ಲಿ ಕನ್ಸರ್‌ವೇಟರ್ ರ‍್ಯಾಂಕ್‌ನ ಹಿರಿಯ ಅಽಕಾರಿಯಾಗಿದ್ದರೂ ಅವರು ನಾಗರಹೊಳೆಯಲ್ಲಿ ಫಾರೆಸ್ಟ್ ಗಾರ್ಡ್‌ಗಳ ಎರಡು ಕೋಣೆಯ ಗುಡಿಸಿಲಿನಂತಹ ಮನೆಯಲ್ಲಿ ಉಳಿದುಕೊಂಡಿದ್ದರು. ತಮ್ಮ ಕುಟುಂಬವನ್ನು ದೂರದ ಮೈಸೂರಿನಲ್ಲಿ ಬಿಟ್ಟು ಬಂದು ನಾಗರಹೊಳೆಯ ಕಾಡಿನಲ್ಲಿ ಪ್ರಾಣಿಗಳನ್ನು ಹುಡುಕುತ್ತಾ ಬುಡಕಟ್ಟು ಸಹಾಯಕರ ಜತೆಗೆ ಹೆಜ್ಜೆ ಹಾಕುತ್ತಿದ್ದರು.
ತಮಗೆ ಬೇಕಾದ ದತ್ತಾಂಶಗಳನ್ನು ಸಂಗ್ರಹಿಸಲು ನುರಿತ ಜೀವಿಶಾಸಜ್ಞರು ಹಾಗೂ ಅವರ ಸಹಾಯಕರು ಕಾಡಿನಲ್ಲಿ ಅಲೆಯುವಂತೆ ರೆಡ್ಡಿ ಕೂಡ ತಾವೇ ಸ್ವತಃ ಕಾಡಿನಲ್ಲಿ ನಡೆದು ಹೋಗುತ್ತಿದ್ದರು. ಕೊನೆಗೆ ಪ್ರತಿಷ್ಠಿತ ಸ್ಪ್ರಿಂಜರ್ ಮಾನೋಗ್ರಾಫ್ ಸರಣಿಯಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ವನ್ಯಜೀವಿಗಳನ್ನು ಹಾಗೂ ಅವುಗಳ ಆವಾಸವನ್ನು ಸಂರಕ್ಷಣೆ ಮಾಡಬೇಕೆಂದರೆ ಅದು ಸಂಪೂರ್ಣವಾಗಿ ಮಾನವನ ಮೇಲಿನ ಪರಿಣಾಮಗಳ ಪ್ರಭಾವದಿಂದ ಹೊರಗಿರಬೇಕು. ಯಾವುದೇ ರೀತಿಯ ಸಂರಕ್ಷಣಾ
ವಿಧಾನವನ್ನು ಅಳವಡಿಸಿಕೊಂಡರೂ ಅದರಿಂದ ಮನುಷ್ಯನ ಮೇಲಾಗುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಅವರ ಸಂಶೋಧನೆ ಸ್ಪಷ್ಟವಾಗಿ ಹೇಳುತ್ತಿತ್ತು.
ಸಾಮಾನ್ಯವಾಗಿ ನಮ್ಮ ದೇಶದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಒಳ್ಳೆಯ ಅಽಕಾರಿಗಳು ಯಾವುದೋ ನಿಷ್ಪ್ರಯೋಜಕ ಹುದ್ದೆಗಳಲ್ಲಿ ಕೊಳೆಯುತ್ತಿರುತ್ತಾರೆ. ಹಾಗೆಯೇ ಪಿಎಚ್.ಡಿ ಮುಗಿಸಿದ ನಂತರ ರೆಡ್ಡಿ ಕೂಡ ವನ್ಯಜೀವಿ ಸಂರಕ್ಷಣೆ ಅಥವಾ ವಿಜ್ಞಾನ ಆಧಾರಿತ ಅರಣ್ಯ ಸಂರಕ್ಷಣೆಗೆ ಸಂಬಂಧವೇ ಇಲ್ಲದ
ಹುದ್ದೆಗಳಲ್ಲಿ ಕೆಲಸ ಮಾಡಬೇಕಾಯಿತು. ಆ ಸಮಯದಲ್ಲಿ ಇಂಡೋನೇಷ್ಯಾದಲ್ಲಿ ಬಹಳ ದೊಡ್ಡ ಪ್ರಮಾಣದ ಅರಣ್ಯ ಸಂರಕ್ಷಣೆ ಯೋಜನೆಯೊಂದು ಜಾರಿಯಾಗುವುದರಲ್ಲಿತ್ತು. ಅಲ್ಲಿ ನನ್ನ ಸ್ನೇಹಿತ ಹಾಗೂ ವನ್ಯಜೀವಿ ಸಂರಕ್ಷಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದ ಮೈಕ್
ಗ್ರಿಫಿತ್ ಅವರಿಗೆ ನಾನು ಜಿ.ವಿ.ರೆಡ್ಡಿಯವರ ಹೆಸರು ಸೂಚಿಸಿದ್ದೆ. ಅಂತಾರಾಷ್ಟ್ರೀಯ ಹಣಕಾಸಿನ ನೆರವು ಪಡೆದು ಸುಮಾತ್ರದಲ್ಲಿ ಜಾರಿಗೊಳ್ಳುತ್ತಿದ್ದ ಯೋಜನೆ ಅದಾಗಿತ್ತು.
ಅಲ್ಲಿ ರೆಡ್ಡಿಯವರು ೧೫,೦೦೦ ಚದರ ಕಿಲೋಮೀಟರ್ ವಿಸ್ತೀರ್ಣದ ಗುನುಂಗ್ ಲ್ಯೂಸರ್ ನ್ಯಾಷನಲ್ ಪಾರ್ಕ್ ಅನ್ನು ಬೇಟೆಗಾರರು ಹಾಗೂ ಅರಣ್ಯ ಕಳ್ಳರಿಂದ ರಕ್ಷಿಸಬೇಕಿತ್ತು. ಈ ಕಳ್ಳರಿಂದಾಗಿ ಅಲ್ಲಿನ ರೈನೋಸಾರ್, ಹುಲಿ, ಆನೆ ಹಾಗೂ ಒರಾಂಗುಟನ್‌ಗಳಿಗೆ ಅಪಾಯ ಬಂದೊದಗಿತ್ತು. ರೆಡ್ಡಿ ಆ
ಸವಾಲನ್ನು ತೆಗೆದುಕೊಂಡರು. ಇಂಡೋನೇಷ್ಯಾಕ್ಕೆ ಹೋಗಿ ಬದ್ಧತೆಯಿಂದ ಕೆಲಸ ಮಾಡಿ, ವನ್ಯಜೀವಿ ಸಂರಕ್ಷಣೆಯಲ್ಲಿ ತಮಗಿದ್ದ ಎಲ್ಲ ಅನುಭವ ಗಳನ್ನೂ ಬಳಸಿ ರಾಷ್ಟ್ರೀಯ ಉದ್ಯಾನವನ್ನು ಮತ್ತೆ ವನ್ಯಜೀವಿ ಸಂಪತ್ತಿನಿಂದ ನಳನಳಿಸುವಂತೆ ಮಾಡಿದರು. ಅಲ್ಲಿ ಅವರು ಸನ್ಯಾಸಿಯಂತೆ ಬದುಕು ತ್ತಿದ್ದ ರೀತಿ, ಅವರ ಮಿತವ್ಯಯ, ತತ್ವಜ್ಞಾನಿಯಂತೆ ನಡೆದುಕೊಳ್ಳುವ ಅವರ ಮನಸ್ಥಿತಿಯನ್ನು ನೋಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ರೆಡ್ಡಿಯವರ ಸರಳತೆಗೆ ಮಾರುಹೋಗಿದ್ದರು. ಅವರೆಲ್ಲರೂ ಇವರನ್ನು ‘ಪಾ ರೆಡ್ಡಿ’ ಎಂದು ಕರೆಯುತ್ತಿದ್ದರು.
ಇಂಡೋನೇಷ್ಯಾದ ಭಾಷೆಯಲ್ಲಿ ಅದು ಕೂಡು ಕುಟುಂಬದ ಹಿರಿಯ ವ್ಯಕ್ತಿಯನ್ನು ಗೌರವದಿಂದ ಕರೆಯುವ ರೀತಿಯಾಗಿತ್ತು. ಅಲ್ಲಿಂದ ಭಾರತಕ್ಕೆ ಮರಳಿದ ಬಳಿಕ ಇಲ್ಲಿನ ‘ವ್ಯವಸ್ಥೆ’ ಮತ್ತೆ ರೆಡ್ಡಿಯವರನ್ನು ಕಡೆಗಣಿಸಿತು. ವನ್ಯಜೀವಿ ಸಂರಕ್ಷಣೆಯಲ್ಲಿ ಅವರಿಗಿದ್ದ ವೈಜ್ಞಾನಿಕ ಹಾಗೂ ಆಡಳಿತಾತ್ಮಕ ಕೌಶಲಗಳನ್ನು ಸರಕಾರ ಗುರುತಿಸಲಿಲ್ಲ. ದೇಶದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಮಹತ್ವಾಕಾಂಕ್ಷಿ ಹುಲಿ ಸಂರಕ್ಷಣಾ ಯೋಜನೆಗೆ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಬಹುದಿತ್ತು. ಆ ಹುದ್ದೆಗೆ ರೆಡ್ಡಿ ಯೋಗ್ಯರಾಗಿದ್ದರು. ಆದರೆ ಅಲ್ಲೂ ಕಡೆಗಣಿಸಿದರು.
ಹೀಗಾಗಿ ಸರಕಾರೇತರ ವ್ಯವಸ್ಥೆಯಲ್ಲಿ ವನ್ಯಜೀವಿ ಸಂರಕ್ಷಣೆಗೆ ಕೆಲಸ ಮಾಡುವುದಕ್ಕೆ ಅವರನ್ನು ಕರೆತರಲು ನಾನು ಸಾಕಷ್ಟು ಪ್ರಯತ್ನ ಮಾಡಿದೆ. ನಾನು ಮೂರು ದಶಕಗಳ ಕಾಲ ಮುಖ್ಯಸ್ಥನಾಗಿ ಕೆಲಸ ಮಾಡಿದ್ದ ಡಬ್ಲ್ಯೂಸಿಎಸ್ ಇಂಡಿಯಾಕ್ಕೆ ಅವರನ್ನು ಉತ್ತರಾಧಿಕಾರಿ ಮಾಡಬೇಕೆಂದು ಬಯಸಿದ್ದೆ. ಆದರೆ ಆರಂಭಿಕ ದಿನಗಳಲ್ಲಿ ಅವರಿಗೆ ಮಾರ್ಗದರ್ಶಕರೂ, ಗುರುಗಳೂ ಆಗಿದ್ದ ವಲ್ಮೀಕ್ ಥಾಪರ್ ಹಾಗೂ ರಣಥಂಬೋರ್‌ನ ಇನ್ನಿತರ ಹುಲಿ ವೀಕ್ಷಕರ ಅಣತಿಯಂತೆ ಆ ಪ್ರಯತ್ನವನ್ನೂ ಕೈಬಿಡಬೇಕಾಯಿತು. ನಂತರ ಅವರೇ ಕೊನೆಗೂ ‘ವ್ಯವಸ್ಥೆ’ಗೆ ಮನವರಿಕೆ ಮಾಡಿಕೊಟ್ಟು ರೆಡ್ಡಿಯವರನ್ನು ರಾಜಸ್ಥಾನದ ಚೀಫ್ ವೈಲ್ಡ್‌ಲೈಫ್ ವಾರ್ಡನ್ ಹುದ್ದೆಗೆ, ನಂತರ ರಾಜಸ್ಥಾನದ ಅರಣ್ಯ ಇಲಾಖೆಯ ಮುಖ್ಯಸ್ಥನ ಹುದ್ದೆಗೆ ಏರಿಸುವಲ್ಲಿ ಯಶಸ್ವಿಯಾದರು. ಎರಡೂ ಹುದ್ದೆಗಳಲ್ಲೂ ರೆಡ್ಡಿ ಅಪರಿಮಿತ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಕೆಲ ವರ್ಷಗಳ ಹಿಂದೆ ನಿವೃತ್ತರಾಗಿದ್ದರು.
ರೆಡ್ಡಿಯವರ ಅದ್ಭುತವಾದ ವೃತ್ತಿಜೀವನದ ಉದ್ದಕ್ಕೂ, ಅವರ ಎಲ್ಲಾ ಏಳುಬೀಳುಗಳಲ್ಲೂ, ತುಂಬಾ ಗಟ್ಟಿಗಾತಿಯಾದ ಪತ್ನಿ ಶೋಭಾ ಬೆಂಬಲವಾಗಿ ನಿಂತಿದ್ದರು. ಅವರಿಂದಾಗಿಯೇ ರೆಡ್ಡಿ ಅರಣ್ಯ ಸಂರಕ್ಷಣೆಯಲ್ಲಿ ತಮ್ಮನ್ನು ಆ ಮಟ್ಟಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂಬುದರಲ್ಲಿ ಯಾವ
ಅನುಮಾನವೂ ಇಲ್ಲ. ರೆಡ್ಡಿಯವರು ನಿವೃತ್ತಿಯಾದ ಬಳಿಕ ಒಂದು ವಾರ ಅವರ ಜೊತೆಗೆ ರಾಜಸ್ಥಾನದಲ್ಲಿ ಉಳಿದುಕೊಂಡು ಅಲ್ಲಿನ ವನ್ಯಜೀವಿ ಸಂಪತ್ತನ್ನು ವೀಕ್ಷಿಸುವ ಅವಕಾಶ ನನಗೆ ಸಿಕ್ಕಿತ್ತು. ಆಗ ಅವರು ಅಲ್ಲಿನ ಅರಣ್ಯ ಇಲಾಖೆಯಲ್ಲಿ ಎಷ್ಟು ಜನಪ್ರಿಯರಾಗಿದ್ದರು ಎಂಬುದನ್ನು ಖುದ್ದಾಗಿ ನೋಡಿದ್ದೆ. ಎಲ್ಲಿಗೇ ಹೋದರೂ ಫಾರೆಸ್ಟ್ ವಾಚರ್‌ಗಳು, ಗಾರ್ಡ್‌ಗಳು ಹಾಗೂ ರೇಂಜರ್ ಗಳು ಅಕ್ಷರಶಃ ರೆಡ್ಡಿಯವರ ಕಾಲಿಗೆ ಬೀಳುತ್ತಿದ್ದರು.
ಅವರ ಜತೆಗೆ ಕೆಲಸ ಮಾಡುವಾಗ ರೆಡ್ಡಿಯವರು ತೋರಿದ್ದ ಉದಾರ ಮನೋಭಾವ ಹಾಗೂ ಬೆಂಬಲದ ಒಂದೆರಡಾದರೂ ಘಟನೆಗಳನ್ನು ಮೆಲುಕು ಹಾಕುತ್ತಿದ್ದರು. ಹಾಗೆ ಕಾಲಿಗೆ ಬಿದ್ದು ಹೊಗಳುವವರಲ್ಲಿ ಯಾವುದೋ ತಪ್ಪಿಗೆ ರೆಡ್ಡಿಯವರಿಂದ ಕಠಿಣ ಶಿಕ್ಷೆಗೊಳಗಾಗಿದ್ದ ಅಧಿಕಾರಿಗಳು ಅಥವಾ ಸಿಬ್ಬಂದಿಯೂ ಇರುತ್ತಿದ್ದರು! ಅವರಿಗೆಲ್ಲ ರೆಡ್ಡಿಯವರು ನನ್ನನ್ನು ತೋರಿಸಿ ‘ಇವರು ನನ್ನ ಗುರು’ ಎಂದು ಪರಿಚಯಿಸುತ್ತಿದ್ದುದು ನನಗೊಂಥರಾ ಹೆಮ್ಮೆ ಅನ್ನಿಸುತ್ತಿತ್ತು. ಇಷ್ಟಕ್ಕೂ ನಾನೇನೂ ಅವರಿಗೆ ಗುರುವಾಗಿರಲಿಲ್ಲ. ವನ್ಯಜೀವಿ ಸಂರಕ್ಷಣೆಯ ವಿಜ್ಞಾನದಲ್ಲಿ ಕೆಲವು ಹೊಸ ತಂತ್ರಗಳನ್ನಷ್ಟೇ ನಾನು ಕಲಿಸಿಕೊಟ್ಟಿದ್ದೆ. ಅದನ್ನೇ ಅವರು ಹೋದಲ್ಲಿ ಬಂದಲ್ಲಿ ಹೇಳಿ ನನ್ನನ್ನು ಮೆರೆಸುತ್ತಿದ್ದರು.
ಅಂತಹ ಒಬ್ಬ ನಿಸ್ಪೃಹ ಹೃದಯದ ಪ್ರಾಮಾಣಿಕ ಹಾಗೂ ದಕ್ಷ ಅರಣ್ಯ ಸಂರಕ್ಷಕ ಸ್ನೇಹಿತನನ್ನು ಮೊನ್ನೆ ಜುಲೈ ೧೪ರಂದು ನಾವು ಕಳೆದುಕೊಂಡೆವು. ವನ್ಯಜೀವಿ ಸಂರಕ್ಷಣೆಯಲ್ಲಿ ಅವರು ತೋರಿದ್ದ ನೈತಿಕ ಬದ್ಧತೆ, ಸಮರ್ಪಣಾ ಮನೋಭಾವ, ಕರ್ತವ್ಯಪರತೆ ಹಾಗೂ ಪರಿಶುದ್ಧವಾದ ವಿನಯವಂತಿಕೆ ಸದಾ ನನ್ನ ನೆನಪಿನಲ್ಲಿ ಹಸಿರಾಗಿ ಉಳಿಯಲಿದೆ.
(ಲೇಖಕರು: ಹವ್ಯಾಸಿ ಬರಹಗಾರರು ಹಾಗೂ
ವೈಲ್ಡ್‌ಲೈಫ್ ಸೈನ್ಸ್ ಏಷ್ಯಾದ ವಿಜ್ಞಾನಿ)