Friday, 29th November 2024

ಜನರ ಬದುಕಿನಲ್ಲಿ ರಣರಂಗ ಸೃಷ್ಟಿಸುತ್ತಿರುವ ರಂಗನ್ ವರದಿ !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಅಧಿಕಾರದಲ್ಲಿರುವ ಸರಕಾರವು ಒಂದು ಪಕ್ಷದಾಗಿದ್ದರೆ, ಕೆಲ ಭಾಗದ ಚುನಾಯಿತ ಶಾಸಕರು, ಸಂಸದರು ಮತ್ತೊಂದು ಪಕ್ಷಕ್ಕೆ ಸೇರಿದ್ದರೆ ಆ ಭಾಗದ ಜನರ ಸಂಕಷ್ಟಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ ಎಂದುಕೊಂಡೇ ಕಾಲ ತಳ್ಳಬೇಕಾದ ಸ್ಥಿತಿ. ಯಾಕೆಂದರೆ, ಸೂಕ್ತ-ಸಮರ್ಪಕ ಅನುದಾನ ಬಿಡುಗಡೆ ಆಗದಿರುವುದು, ಆಡಳಿತ ಯಂತ್ರದ ನೀರಸ ಪ್ರಕ್ರಿಯೆ, ಆಡಳಿತಾರೂಢ ಕ್ಷೇತ್ರಗಳತ್ತ ಹೆಚ್ಚಾಗಿ ಗಮನಹರಿಸುವುದರಿಂದ ಇತರರ ಕ್ಷೇತ್ರಗಳನ್ನು ಅವರವರೇ ಸರಿಪಡಿಸಿಕೊಳ್ಳಬೇಕಾದ ವಿಶೇಷ ಹೊಣೆ.

ಇಂಥವುಗಳ ಮದ್ಯೆ, ಇತ್ತೀಚೆಗಷ್ಟೆ ನೀಡಿದ ಕರ್ನಾಟಕ ರಾಜ್ಯ ಪರಿಸರ ಸಚಿವರ ಹೇಳಿಕೆಯು ಮತ್ತೆ ಮಲೆನಾಡಿಗರನ್ನು ಕೆರಳಿಸಿದೆ. ಕಸ್ತೂರಿ ರಂಗನ್ ವರದಿ ಜಾರಿಗೆ ಬಗ್ಗೆ ಚಿಂತಿಸಲಾಗುವುದು ಎಂಬ ಹೇಳಿಕೆಯು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ನಿಜವೇ ಆಗಿದ್ದರೆ, ಮಲೆನಾಡು, ಕರಾವಳಿ ಸೇರಿದಂತೆ ಈ ಭಾಗದ ಜನರ ಜೀವನನ್ನು ಅಧಿಕೃತವಾಗಿ ಕೊಲ್ಲುವುದಲ್ಲದೇ ಶವದ ಪೆಟ್ಟಿಗೆಗೆ ಸರಕಾರದಿಂದಲೇ ಮೊಳೆ ಹೊಡೆವ ಕಾಯಕ ಆರಂಭವಾದಂತಾಗುತ್ತದೆ.

ದಶಕಗಳು ಕಳೆಯುತ್ತ ಬಂದರೂ ಮೂಲ ಸೌಕರ್ಯಗಳಾದ ರಸ್ತೆ, ಕುಡಿಯಲು ಯೋಗ್ಯವಾದ ನೀರು, ನದಿ, ಹಳ್ಳಕೊಳ್ಳಗಳಿಗೆ ಬೇಕಾದ ಕಾಲುವೆ-ಸಂಕ ಗಳನ್ನು ಮಾಡಿಸಿಕೊಳ್ಳಲೇ ಹತ್ತಾರು ವರ್ಷ ಕಾಯಬೇಕಾದ ಪರಿಸ್ಥಿತಿ. ಇಂಥವುಗಳ ಮದ್ಯೆ, ರಾಜಧಾನಿಯಿಂದ ಆರಂಭಗೊಂಡ ಹತ್ತು ಹಲವು ಯೋಜನೆಗಳು, ಆ ಜಿ ಈ ಜಿ ಎಂದು ದಾಟುತ್ತ ಮಲೆನಾಡ ಭಾಗಗಳಾದ ಉಡುಪಿ, ಕುಂದಾಪುರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬರುವಷ್ಟರಲ್ಲಿ ಆರಂಭ ಗೊಂಡ ಯೋಜನೆಗಳೇ ನಿಂತುಹೋಗಿರುತ್ತವೆ ಅಥವಾ ಯಾವುದೋ ತಗಾದೆ ತೆಗೆದು ಮದ್ಯಂತರ ವಿರಾಮ ಪಡೆದು ಚಿರನಿದ್ರೆಗೆ ಜಾರಿಬಿಡುತ್ತವೆ. ಮತ್ತದೇ ಸ್ವಪರಿಶ್ರಮವನ್ನೇ ನಂಬಿಕೊಂಡು ಎಂದಿನಂತೆ ಬದುಕು ಕಟ್ಟಿಕೊಳ್ಳಲು ಹೆಣಗಾಡಬೇಕಾದ ಬದುಕಿನ ಸ್ಥಿತಿ.

ಕಸ್ತೂರಿ ರಂಗನ್ ವರದಿ ಕುರಿತ ಹೇಳಿಕೆಯು ವಿವಾದಿತ ಮತ್ತು ಚರ್ಚಿತ ವಿಷಯವಾಗಿ ಕಂಡು ಬರುತ್ತಿದ್ದಂತೆ, ‘ಅದು ಹಾಗಲ್ಲ, ಈ ಕಸ್ತೂರಿ ರಂಗನ್ ವರದಿಯು ೧೦ ವರ್ಷಗಳಷ್ಟು ಹಳೆಯದಾಗಿದೆ. ಇಂದಿಗೆ ಇದು ಅಪ್ರಸ್ತುತ ಎಂಬ ವಿಚಾರವೂ ಮುನ್ನಲೆಗೆ ಬಂದಿದೆ. ಜತೆಗೆ ಈ ಭಾಗದ ಜನರ ಜೀವನೋ ಪಾಯಕ್ಕೆ ಆಮೂಲಾಗ್ರ ಅಪಾಯ ತಂದೊಡ್ಡುವ ಭೀತಿಯೂ ಇದೆ. ಜತೆಗೆ, ಸಂಜಯ್ ಕುಮಾರ್ ಸಮಿತಿ ಕೂಡ ಕಸ್ತೂರಿ ರಂಗನ್ ವರದಿಯಲ್ಲಿ ಕೆಲ ಸಡಲಿಕೆ, ಮಾರ್ಪಾಡು ಮಾಡಲು ಸಮ್ಮತಿಸುತ್ತಿದೆ.’ ಎಂದು ಇದೇ ಸಚಿವರು ಹೇಳಿದ್ದು ಸ್ವಲ್ಪ ಸಮಾಧಾನ ತರುವ ವಿಷಯವೇ ಆದರೂ, ಜನರ
ಆತಂಕವನ್ನು ಸಂಪೂರ್ಣವಾಗಿ ತೊಡೆದು ಹಾಕುವ, ಒಕ್ಕೋರಲಿನ ನಿರ್ಧಾರದ ಮೂಲಕ ಕೇಂದ್ರಕ್ಕೆ ಒತ್ತಡ ತರುವ ಘನ ಜವಾಬ್ದಾರಿ ಮತ್ತು ನೈತಿಕತೆ ರಾಜ್ಯ ಸರಕಾರದ ಮೇಲಿದೆ.

ಅಷ್ಟಕ್ಕೂ ಈ ಕಸ್ತೂರಿ ರಂಗನ್ ವರದಿ ಏನು ಎಂಬುದನ್ನು ಗಮನಿಸಿದಾಗ, ಇಸ್ರೋದ ಮಾಜಿ ಮುಖ್ಯಸ್ಥರೂ, ರಾಜ್ಯಸಭೆ ಮತ್ತು ಯೋಜನಾ ಆಯೋಗದ ಸದಸ್ಯರಾಗಿದ್ದ ಡಾ. ಕೆ. ಕಸ್ತೂರಿ ರಂಗನ್ ಅವರ ನೇತೃತ್ವದ ಸಮಿತಿ ಗುರುತಿಸಿರುವ ಪಶ್ಚಿಮಘಟ್ಟದ ೫೯,೯೪೯ ಚ.ಕಿ.ಮೀ ವ್ಯಾಪ್ತಿಯ ಪ್ರದೇಶ ಅಂದರೆ ಶೇಕಡಾ ೩೬.೪ರಷ್ಟು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಬೇಕು. ಎಲ್ಲ ರೀತಿಯ ಗಣಿಗಾರಿಕೆ ಮುಂದಿನ ೫ ವರ್ಷ ಮುಗಿತ್ತಿದ್ದಂತೆ ಸ್ಥಗಿತ ಗೊಳಿಸಬೇಕು. ೨೦,೦೦೦ ಚ. ಮೀ. ನಷ್ಟು ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.

ಇಎಸ್‌ಎನಿಂದ ೧೦ ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವುದಿದ್ದರೂ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ ಎಂಬಿತ್ಯಾದಿಗಳ ಕಠಿಣ ನೀತಿ ನಿಯಮಗಳನ್ನು
ಮತ್ತು ಈ ಭಾಗದಲ್ಲಿ ವಾಸಿಸುವ ಜನರ ನಿತ್ಯದ ಬದುಕಿನಲ್ಲಿ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಲು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ನಿರ್ಬಂಧ ಹೇರುವ ವಿಚಾರ ಇದರಲ್ಲಿ ಸೇರಿದೆ.

ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆ ಬೀಳುವುದರಿಂದ ಪ್ರಮುಖ ಬೆಳೆ ಏಲಕ್ಕಿ, ಕಾಫಿ, ಕಾಳು ಮೆಣಸು ಬೆಳೆ ಸಂಕಷ್ಟದಲ್ಲಿದ್ದು, ಬಹುತೇಕ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದ್ದು, ರೈತರು ತಾವು ಬೆಳೆದ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳು ವುದು ಕಷ್ಟವಾಗಿದೆ. ಇದರಿಂದ ಹೊರಬರಲು ಕೆಲ ರೈತರು ಬ್ಯಾಂಕ್‌ಗಳಿಂದ ಸಾಲ ಪಡೆದು, ತಮ್ಮ ಜಮೀನುಗಳಲ್ಲಿ ಹೋಂ ಸ್ಟೇಗಳನ್ನು ನಡೆಸಿ ತಮ್ಮ
ಬದುಕು ಕಟ್ಟಿಕೊಂಡಿದ್ದಾರೆ.

ಈ ಭಾಗದಲ್ಲಿ ಅತೀ ಹೆಚ್ಚು ಪ್ರವಾಸಿ ತಾಣ ಇರುವುದರಿಂದ ರೈತರು ಹೋಂ ಸ್ಟೇ ಸ್ಥಾಪಿಸಿದ್ದು, ಇದರಿಂದ ಬರುವ ಆದಾಯದಲ್ಲಿ ತಮ್ಮ ಕೃಷಿ ಜಮೀನಿನ ಕೆಲಸಗಳನ್ನು ಮಾಡಿಸುತ್ತಾರೆ. ಒಂದು ವೇಳೆ ಯೋಜನೆ ಜಾರಿಯಾದರೆ ಲಕ್ಷಾಂತರ ರು. ಖರ್ಚು ಮಾಡಿರುವ ತೋಟ, ಹೋಂ ಸ್ಟೇಗಳನ್ನು ತೆರವು ಗೊಳಿಸುವ ಪರಿಸ್ಥಿತಿ ಬಂದು ಸಂಕಷ್ಟದಲ್ಲಿ ಸಿಲುಕಲಿದ್ದಾರೆ. ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯ ಸೇರಿದಂತೆ ಒಟ್ಟು ೫೬,೮೭೪ ಚದರ ಕಿಲೋ ಮೀಟರ್ ವಿಸ್ತಿರ್ಣದ ಪ್ರದೇಶವನ್ನು ಅತಿ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್ ಸಮಿತಿ ವರದಿ ನೀಡಿದೆ.

ಕರ್ನಾಟಕದಲ್ಲಿ ಪಶ್ಚಿಮಘಟ್ಟ ೪೪,೪೪೮ ಚ,ಕಿ.ಮೀ. ವಿಸ್ತೀರ್ಣ ಹೊಂದಿದೆ. ಅದರಲ್ಲಿ ೨೦,೬೬೮ ಚ.ಕಿ.ಮೀ. ಪ್ರದೇಶವು ಈ ವರದಿಯ ಪ್ರಕಾರ, ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್‌ಎ) ವ್ಯಾಪ್ತಿಯಲ್ಲಿ ಬರುವುದು. ಇದು ೧೫೭೩ ಗ್ರಾಮಗಳನ್ನು ಒಳಗೊಂಡಿದೆ. ಅಂದಿನ ರಾಜ್ಯ ಸರಕಾರ ಇದನ್ನು ೮೫೦ ಗ್ರಾಮಗಳಿಗೆ ಸೀಮಿತಗೊಳಿಸಬೇಕೆಂದು ಕೇಳಿಕೊಂಡಿತ್ತು. ಈಗಾಗಲೇ ಅರಣ್ಯ ರಕ್ಷಣೆ ಮಾಡಲಾಗುತ್ತಿದೆ, ಈ ರೀತಿ ವರದಿ ಅವೈeನಿಕವಾಗಿದೆ. ಕಾಡು / ಅರಣ್ಯ ಪ್ರದೇಶ ಕೂಡ ನಮ್ಮಲ್ಲಿ ಜಾಸ್ತಿ ಆಗಿದೆ. ಹೀಗಿದ್ದರೂ, ಪುನಃ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ ಸಿಎಂ ನೇತೃತ್ವದಲ್ಲಿ ಕೇಂದ್ರದ ಸಚಿವ ರನ್ನು ಭೇಟಿಯಾಗಿ ಇದನ್ನು ರದ್ದು ಮಾಡುವಂತೆ ಈಗಾಗಲೇ ಮನವಿ ಮಾಡಿದ್ದೇವೆ. ಮತ್ತೆ ಪಶ್ಚಿಮ ಘಟ್ಟದ ಶಾಸಕರ ನೇತೃತ್ವದ ನಿಯೋಗ ದೆಹಲಿಗೆ ತೆರಳಲು ನಿರ್ಧಾರ ಮಾಡಲಾಗಿದೆ.

ಯಾವುದೇ ಕಾರಣಕ್ಕೂ ಇಂತಹ ಅವೈಜ್ಞಾನಿಕ ವರದಿ ಒಪ್ಪೋದಕ್ಕೆ ಸಾಧ್ಯ ಇಲ್ಲ ಅಂತ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಮಹತ್ವದ ಸಭೆ ನಡೆಸಿ ಸ್ಪಷ್ಟಪಡಿಸಿತ್ತು. ಇದಾಗಿ, ಕೇಂದ್ರದಿಂದ ಮತ್ತೊಮ್ಮೆ ಅಧಿಸೂಚನೆ ಹೊರಡಿಸಿದ ಮೇಲೆ, ಅಧಿಕಾರದಲ್ಲಿ ರುವ ಪ್ರಸ್ತುತ ಕಾಂಗ್ರೆಸ್ ರಾಜ್ಯ ಸರಕಾರವು ಈ ವಿಚಾರದಲ್ಲಿ ಒಮ್ಮತದ ಮೂಲಕ ಯಾವೊಂದು ಸ್ಪಷ್ಟತೆ ತೋರದಿರುವುದು ಮಲೆನಾಡು, ಘಟ್ಟ ಪ್ರದೇಶದ ಜನರ ಬಗ್ಗೆ ತೋರುತ್ತಿರುವ ಸ್ಪಷ್ಟ ಅಸಡ್ಡೆಯಾಗಿದೆ ಎಂದೇ ಎಲ್ಲರ ಭಾವನೆಯಾಗಿದೆ. ನೂರಾರು ವರ್ಷಗಳ ಕಾಲ ಈ ಕಾಡಿನೊಂದಿಗೆ ನಂಟು ಬೆಳೆಸಿಕೊಂಡು ನಮ್ಮ ಹಿರಿಕರು ಹಾಕಿಕೊಟ್ಟ ಸಂಸ್ಕಾರದಂತೆ ಕಾಡನ್ನು ನಮ್ಮ ಜೀವನದ ಒಂದು ಭಾಗವಾಗಿ ದೇವರಂತೆ ಕಾಣುತ್ತ ಅದರ ರಕ್ಷಣೆಯನ್ನು ಮಾಡುತ್ತ ಬಂದವರು ನಾವು. ಇದ್ದಕ್ಕಿದ್ದಂತೆ ಅದ್ಯಾವುದೋ ಒಂದು ವರದಿಯನ್ನು ಆಧರಿಸಿ, ನಮ್ಮನ್ನು ಪರಕೀಯರಂತೆ ಕಾಣುವುದು, ಪ್ರಕೃತಿ ನಾಶಕರಂತೆ ನೋಡುವುದು ಎಷ್ಟು ಸರಿ ಎನ್ನಾತ್ತಾರೆ ಘಟ್ಟದವಾಸಿಗಳು.

ನೆಲ-ಜಲ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ದೇಶದ ಸಂವಿಧಾನದ ಪ್ರಸ್ತಾಪಿಸಲಾಗಿದೆ. ಮೂಲಭೂತ ಹಕ್ಕುಗಳಿಗೆ ಆದ್ಯತೆ ನೀಡುವಂತೆ ಪ್ರತಿಯೊಬ್ಬರೂ ಕರ್ತವ್ಯ ನಿಭಾಯಿಸಬೇಕು ಜತಗೆ, ಪರಿಸರ ರಕ್ಷಣೆಯಗಲಿ, ಸಸ್ಯಸಂಕುಲವನ್ನು ಉಳಿಸಿ ಬೆಳೆಸುವ ಬಗ್ಗೆಯಾಗಲಿ, ಸಹ್ಯಾದ್ರಿ ಸಾಲಿನ ನಿವಾಸಿಗಳು ತಮ್ಮ ತಲೆಮಾರಿನಿಂದಲೂ ಮಾಡುತ್ತ ಬಂದಿದ್ದಾರೆ.

ಇಲ್ಲದಿದ್ದರೆ, ಇಷ್ಟೊತ್ತಿಗೆ ಇಡೀ ಕಾಡು, ಸಸ್ಯ – ಪ್ರಾಣಿ ಸಂಕುಲವೇ ನಶಿಸಿಹೋಗುತ್ತಿತ್ತು. ಕಾನೂನು ಕಟ್ಟಳೆಗಳ ಪೂರ್ವದಲ್ಲಿ, ಕಾಡನ್ನು ರಕ್ಷಣೆ ಮಾಡುತ್ತ ಅದರ ಭಾಗವಾಗಿಯೇ ಬೆಳದು ಬಂದವರು ನಾವು, ಅದ್ಹೇಗೆ ನಾಶಮಾಡಬವು ಎನ್ನುತ್ತಾರೆ ಇಲ್ಲಿನ ಜನತೆ. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಆಯಾ ಕಾಲದಲ್ಲಿ ಅಧಿಕಾರಕ್ಕೆ ಬರುವ ಸರಕಾರಗಳಲ್ಲಿ ಕೆಲ ಗೊಂದಲಗಳಿವೆ. ಒಂದು ಸ್ಪಷ್ಟತೆ, ನಿಖರ ದೃಷ್ಟಿಕೋನ ಹೊಂದಿದ್ದರೆ, ಪ್ರಕೃತಿಯೊಂದಿಗೆ ಬದುಕು ತ್ತಿರುವ ಜನರ ಬದಕನ್ನೂ ಗಮನದಲ್ಲಿಸಿಕೊಳ್ಳುವ ಜೊತೆಯಲ್ಲಿ ಪ್ರಕೃತಿ ರಕ್ಷಣೆಯಂತಹ ಸೂಕ್ಷ್ಮ ವಿಚಾರಗಳನ್ನು ಸ್ಥಳೀಕರ ಅಭಿಪ್ರಾಯ ಪಡೆದು ನೀತಿ-ನಿಯಮಗಳನ್ನು ರೂಪಿಸಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಾರೆ ತೊಂಬತ್ತಾರರ ಹಿರಿಯಜ್ಜ.

‘ಇನ್ನು ಕೆಲ ಮಾನವ ಹಕ್ಕುಗಳ ಹೋರಾಟಗಾರರು, ಈ ವರದಿ ರೂಪಿಸಿರುವುದರ ದೋಷವಿದೆ. ಇದು ಜನ ಸಮುದಾಯದ ಬೇಡಿಕೆಯಲ್ಲ. ವರದಿ ಸಿದ್ಧಪಡಿಸುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಕಸ್ತೂರಿರಂಗನ್ ವರದಿ ಅನುಷ್ಠಾನಗೊಂಡರೆ ಮಾನವ ಸಹಿತ ಸಮತೋಲಿತ ಪರಿಸರ ಸಂರಕ್ಷಣೆ ಅಸಾಧ್ಯ. ಹಾಗಾಗಿ, ಕಸ್ತೂರಿ ರಂಗನ್ ಹಾಗೂ ಗಾಡ್ಗೀಳ್ ವರದಿಗಳನ್ನು ಸಂಪೂರ್ಣ ವಿರೋಧಿಸಬೇಕು ಎಂದು ತಮ್ಮ ಆಕ್ರೋಶವನ್ನು ಹೊರಹಾಕುತ್ತಾರೆ ಇಲ್ಲಿನ ಯುವಜನತೆ.

೨೦೧೪ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ೨೦೧೪ರ ಮೇ ತಿಂಗಳಲ್ಲಿ ರಾಜ್ಯ ಸರಕಾರ ಮೊದಲ ಬಾರಿಗೆ ಆಕ್ಷೇಪಣೆ ಸಲ್ಲಿಸಿತ್ತು. ಕೇಂದ್ರ ಸರಕಾರ ೨೦೧೫, ೨೦೧೭ ಹಾಗೂ ೨೦೧೮ರಲ್ಲಿ ಪುನಃ ಅಽಸೂಚನೆ ಹೊರಡಿಸಿತ್ತು. ರಾಜ್ಯ ಸರ್ಕಾರ ಇದಕ್ಕೆ ಪ್ರತಿಯಾಗಿ
೨೦೧೫ರ ಅ.೨೦, ೨೦೧೭ರ ಏ.೨೨ ಹಾಗೂ ೨೦೧೮ರ ಡಿ.೧೩ರಂದು ಆಕ್ಷೇಪಣೆ ಸಲ್ಲಿಸಿ, ವರದಿ ಅನುಷ್ಠಾನ ಬೇಡ ಎಂಬುದನ್ನು ಮತ್ತೊಮ್ಮೆ ಪುನರು ಚ್ಚರಿಸಿತ್ತು.

ಕೇರಳಕ್ಕೆ ಈ ಭಯವಿಲ್ಲ ಏಕೆಂದರೆ, ಕೇಂದ್ರ ಸರಕಾರ ಹೊರಡಿಸಿದ್ದ ಮೊದಲ ಎರಡು ಅಧಿಸೂಚನೆಯಲ್ಲೂ ಕೇರಳ ಹೆಸರನ್ನು ಪ್ರಸಾಪಿಸಿತ್ತು. ಕೇರಳ ಸರಕಾರ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಪ್ರಬಲವಾದ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಕೇಂದ್ರ ಸರಕಾರವೇ ಅಧಿಸೂಚನೆಯಲ್ಲಿ ಕೇರಳದ
ಹೆಸರನ್ನು ಕೈಬಿಟ್ಟಿತ್ತು. ಹೀಗಾಗಿಯೇ ಕೇರಳಕ್ಕೆ ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಯಾವುದೇ ಭಯ ಇಲ್ಲ. ಕರ್ನಾಟಕದಲ್ಲಿ ಪಶ್ಚಿಮ ಘಟ್ಟ ಉಳಿಸಬೇಕು ಎಂಬ ಕೂಗೆಬ್ಬಿಸಿ, ಅದಕ್ಕಾಗಿ ಹೋರಾಡಿದವರೇ ಮಲೆನಾಡಿಗರು.

ಇಂದಿಗೂ ‘ಅರಣ್ಯ ಉಳಿದಿರುವುದು ಅರಣ್ಯವಾಸಿಗಳಿಂದಲೇ ಹೊರತು ಅಧಿಕಾರಿಗಳು, ಸರಕಾರಗಳಿಂದ ಅಲ್ಲ’ ಎಂಬುದನ್ನು ಆಳುವ ಸರಕಾರ ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಸರ್ವಪಕ್ಷಗಳ ನಿಯೋಗದ ಜತೆಯಲ್ಲಿ ಸಾರ್ವಜನಿಕರ ಹಿತಕಾಯಲು ಈ ರೀತಿಯ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು.
ಸರ್ವಜನಾಂಗದ ಶಾಂತಿಯ ತೋಟದಲ್ಲಿ ಎಲ್ಲ ಭಾಗ ದವರ ಸಹಬಾಳ್ವೆಯ ಜೀವನವೂ ಮುಖ್ಯವಲ್ಲವೇ?!