ಲಕ್ಷ್ಮೀಕಾಂತ್ ಎಲ್.ವಿ.
ಇಂದಿನ ಜಗದಲ್ಲಿ ಸ್ವಾರ್ಥ ಎಂದರೆ ವಿಭಿನ್ನ ಅರ್ಥವಿದೆ. ಆದರೆ ಸ್ವಾರ್ಥದಿಂದಲೂ ಸಕಾರಾತ್ಮಕ ಪ್ರಗತಿಯನ್ನು ಸಾಧಿಸಲು ಸಾಧ್ಯ. ಮೋಸವನ್ನು ಮೆಟ್ಟಿ ನಿಲ್ಲಲು ಆರೋಗ್ಯಕರ ಸ್ವಾರ್ಥವು ಪರಿಣಾಮಕಾರಿ ಅಸ್ತ್ರ ಎನ್ನಬಹುದು.
ಇಂದಿನ ಜಗತ್ತಿನ ಈ ನಾಟಕರಂಗದಲ್ಲಿ ಸ್ವಾರ್ಥ ತುಂಬಿದ್ದರೂ, ಇದರಲ್ಲೇ ನಾವೆಲ್ಲಾ ಪಾತ್ರಧಾರಿಗಳು. ಉದರ ನಿಮಿತ್ತಂ ಬಹುಕೃತ ವೇಷಂ ಅನ್ನುವಂತೆ ನಮ್ಮ ದೈನಂದಿನ ಬದುಕಿನಲ್ಲಿ, ಜೀವನ ಸಾಗಿಸಲು ನಾನಾ ವೇಷಗಳನ್ನು ಧರಿಸುತ್ತೇವೆ. ಬಹುಶಃ ಅವೆಲ್ಲಾ ನಮ್ಮ ಅರಿವಿಗೆ ಬಂದಿರಬಹುದು ಅಥವಾ ಬಾರದೇ ಇರಬಹುದು. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ನಮಗೇ ತಿಳಿಯದಂತೆ ಪಾತ್ರಧಾರಿಗಳಾಗುವ ನಾವು ನಮ್ಮ ಬದುಕಿಗೆ ಸ್ವಾರ್ಥದ ಗೀಳನ್ನು ಅಂಟಿಸಿಕೊಂಡಿದ್ದೇವೆ.
ಸ್ವಾರ್ಥವಿಲ್ಲದೆ ಬದುಕು ಸಾಗಿಸಲು ಸಾಧ್ಯವಾಗದು ನಿಜ. ಆದರೆ ಅದೇ ಸ್ವಾರ್ಥದ ಬದುಕು ಮತ್ತೊಬ್ಬರ ನೋವಿಗೆ ಕಾರಣವಾದರೆ.
ಈ ವಿಸ್ಮಯ ಜಗತ್ತಿನಲ್ಲಿ ಪ್ರಾಯಶಃ ಎಲ್ಲರೂ ಮೋಸದ ಬೆನ್ನೇರಿ ಹೊರಟವರೆ. ಹಾಗಾಗಿಯೇ, ಸ್ವಾರ್ಥ ಬೇರೂರಿಬಿಟ್ಟಿದೆ. ಮೋಸದ ಜಗತ್ತಿನಲ್ಲಿ ಸಾಮಾಜಿಕ ಕಟ್ಟುಪಾಡುಗಳ ನಡುವೆ ಬಂಧಿಯಾಗಿ ಬದುಕುವ ನಾವು ಸ್ವಾರ್ಥವಿಲ್ಲದೆ ಜೀವನ ಸಾಗಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸ್ವಾರ್ಥಿಗಳಾಗಿದ್ದೇವೆ ಎಂದರೆ ತಪ್ಪಾಗಲಾರದು.
ಶಿಕ್ಷಣದಲ್ಲಿ ಸ್ವಾರ್ಥ, ಉದ್ಯೋಗದಲ್ಲಿ ಸ್ವಾರ್ಥ. ಆಹಾರದಲ್ಲಿ ಸ್ವಾರ್ಥ, ಪ್ರೀತಿಯಲ್ಲಿ ಸ್ವಾರ್ಥ ಹೀಗೆ ಸ್ವಾರ್ಥದ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಅವನು ನನಗಿಂತ ಓದಿನಲ್ಲಿ ಮುಂದಿದ್ದಾನೆ; ಅವನ ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಕುಂಟು ಮಾಡಿ ಅವನ ಮೊದಲ ಸ್ಥಾನವನ್ನು ಗಿಟ್ಟಿಸಬೇಕೆಂಬ ಸ್ವಾರ್ಥ ಹಟವಾಗಿ ಬದಲಾವಣೆಗೊಂಡರೂ ಅಚ್ಚರಿಯಿಲ್ಲ. ಪ್ರೀತಿಸಿದವನು/ಳು ನನಗೇ ಮೀಸಲು, ನನಗೇ ದಕ್ಕಬೇಕು ಎಂಬ ಸ್ವಾರ್ಥಕ್ಕೆ ಬಲಿಯಾಗಿ ಪ್ರೇಮದಲ್ಲಿ ವಿಫಲಗೊಂಡ ಅನೇಕ ಉದಾಹರಣೆಗಳು ಸಿಗು ತ್ತವೆ. ಇದು ಮುಂದುವರಿದು ಜೀವಗಳನ್ನೇ ಬಲಿ ತೆಗೆದುಕೊಂಡಿದ್ದೂ ಇದೆ. ಹಾಗೆಯೇ ಉದ್ಯೋಗ ಸ್ಥಳಗಳಲ್ಲಿ ಸಹೋದ್ಯೋಗಿಯ
ಬೆಳವಣಿಗೆಯನ್ನು ಸಹಿಸದವರು ಕಾಲೆಳೆದು ಅವನ ಬೆಳವಣಿಗೆಯನ್ನು ಕುಂಠಿತಗೊಳಿಸುವ ಸಂಚು ಹೂಡುವುದನ್ನು ಕಾಣ ಬಹುದು ಈ ಮತ್ಸರ ಜಗತ್ತಿನಲ್ಲಿ. ಮನೆಗಳಲ್ಲಿ ಅಪ್ಪನ/ಅಮ್ಮನ ಪ್ರೀತಿ ಮಗ/ಳ ಮೇಲೆ ಹೆಚ್ಚಾಗಿ ಇದೆ; ಮಗನಾದ ನನ್ನ ಮೇಲೆ ಏಕಿಲ್ಲ ಎಂಬ ಅಸೂಯೆ ಮನೆ ಮಾಡಿ ಕ್ರಮೇಣ ಅದು ವೈರತ್ವ ಬೆಳೆಯಲು ದಾರಿ ಮಾಡಿಕೊಟ್ಟಂತಹ ಉದಾಹರಣೆಗಳು ನಮ್ಮ ಕಣ್ಮುಂದೆ ನಿಲ್ಲುತ್ತವೆ.
ಈ ರೀತಿಯಾಗಿ ಅಸೂಯೆಯ ಜತೆ ಸ್ವಾರ್ಥ ಬೇರೂರಿ ಅದು ಮತ್ತೊಂದು ರೀತಿಯ ಅನಿರೀಕ್ಷಿತ ಸನ್ನಿವೇಶಗಳಿಗೆ ಎಡೆಮಾಡಿ ಕೊಡುತ್ತದೆ. ಈ ಮೋಸದ ಜಗತ್ತಿನಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ಅಲ್ಲಿಯೂ ತಮ್ಮ ಸ್ವಾರ್ಥಕ್ಕಾಗಿ ವಿನಿಯೋಗ ಪಡಿಸಿಕೊಂಡ ಅನೇಕ ಘಟನೆಗಳು ನಮ್ಮ ಮುಂದೆ ಕಾಣಸಿಗುತ್ತವೆ. ಸ್ವಾರ್ಥಕ್ಕೆ ಬಲಿಯಾದ ಜೀವಗಳು, ಬದುಕನ್ನೇ ಕಳೆದು ಕೊಂಡ ಜೀವನಗಳು, ಅಡ್ಡದಾರಿಗಳನ್ನು ಹಿಡಿದ ಸಾಕಷ್ಟು ಉದಾಹರಣೆಗಳಿವೆ. ಇಂತಹ ಸಂದರ್ಭಗಳಲ್ಲಿ ಸಂಬಂಧಗಳು ಹದಗೆಟ್ಟಿರುವುದು, ಸಂಬಂಧಿಕರು ದಾಯಾದಿಗಳಾಗಿರುವುದನ್ನು ಕಾಣಬಹುದು. ಬೇರೆಯವರಿಗೇನೋ ನೂರೆಂಟು ಸಬೂಬು ಹೇಳಿ ಸಮರ್ಥಿಸಿಕೊಂಡು ಬಿಡಬಹುದು. ಆದರೆ, ಆತ್ಮಸಾಕ್ಷಿಯ ಬಳಿ ಮಾತ್ರ ಯಾವ ಆಟವೂ ನಡೆಯದು. ಸ್ವಾರ್ಥದಿಂದ ಮೋಸ ಮಾಡಿಯಾದರೂ ಎಲ್ಲರನ್ನು ಮೆಚ್ಚಿಸಲು ಹೊರಟು ನಿಮ್ಮತನವನ್ನೇ ಕಳೆದುಕೊಂಡು ಸಮಾಜದ ಮುಖವಾಡಗಳ ನಡುವೆಯೇ ಬದುಕು ನಡೆಸುವುದು ಬಹಳ ಕಷ್ಟ.
ಒಟ್ಟಾರೆಯಾಗಿ, ಈ ಮೋಸದ ಜಗತ್ತಿನಲ್ಲಿ ಸ್ವಾರ್ಥ ಎಲ್ಲವನ್ನೂ ಕೊಡುವ ಬದಲಿಗೆ ಎಲ್ಲವನ್ನು ಕಳೆಯುವ ದುಃಖದ ಗೂಡಾಗಿ ಪರಿಣಮಿಸುತ್ತಿದೆ. ಮನುಷ್ಯ ಸ್ವಾರ್ಥಿಯಾಗಿರಬೇಕು ಒಪ್ರೋಣ. ಆದರೆ ಆ ಸ್ವಾರ್ಥ ಆರೋಗ್ಯಕರವಾಗಿದ್ದರೆ ಒಳಿತು. ಎಲ್ಲಿ ಸಮಾನ ಮನಸ್ಥಿತಿ ಇರುತ್ತದೆಯೋ ಅಲ್ಲಿ ಸ್ವಾರ್ಥಕ್ಕೆ ಜಾಗವಿರುವುದಿಲ್ಲ. ಅಂತಹ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಮೊಳೆಯ ಬೇಕು. ಬದಲಾವಣೆ ನಮ್ಮಿಂದಲೇ ಶುರು ಮಾಡಬೇಕು. ಆಗ ಸಮಾಜದ ಬದಲಾವಣೆಯನ್ನು ಬಯಸಬಹುದು.
ನಾವೇ ಬದಲಾಗ ದಿದ್ದಲ್ಲಿ ಬೇರೆಯದನ್ನು ಬಯಸುವುದು ಎಷ್ಟರಮಟ್ಟಿಗೆ ಸರಿ? ಎಲ್ಲಿ ಸ್ವಾರ್ಥ, ಅಸೂಯೆ ಮೂಡುತ್ತದೆಯೋ ಅಲ್ಲಿ ಮೋಸದ ಕಬಂಧಗಳು ಬಾಚಿಕೊಳ್ಳಲು ಕುಳಿತಿರುತ್ತವೆ. ಅದಕ್ಕೆ ಬಲಿಯಾದರೆ ಬದುಕು ಕೂಡ ಬಲಿಯಾಗುತ್ತದೆ. ಹಾಗಾಗಿ, ಈ ಬಗ್ಗೆ ಎಚ್ಚರದಿಂದಿರಬೇಕು. ಸ್ವಾರ್ಥದಿಂದ ಸಕಾರಾತ್ಮಕ ಹೆಜ್ಜೆ ಆರೋಗ್ಯಕರವಾದ ಸ್ವಾರ್ಥ ಮನೋಭಾವ ನಮ್ಮೆಲ್ಲರಲ್ಲಿ ಮೂಡಿದಾಗ ಮಾತ್ರ ಒಂದಿಷ್ಟು ಸ್ವಚ್ಛವಾದ ವಾತಾವರಣ ಕಾಣಬಹುದು.
ಇದರಿಂದಾಗಿ ಎಲ್ಲ ಬಾಂಧವ್ಯಗಳು ಸದಾ ಅನುರಾಗದಿಂದ ಕೂಡಿ ಸದಾ ಹಸಿರಾಗಿ ಉಳಿಯುತ್ತವೆ. ಹಾಗಾಗಿ ನಮ್ಮ ಮನಸ್ಸಿನ
ಸ್ಥಿತಿಯನ್ನು ಬದಲಾಯಿಸಿಕೊಳ್ಳಲು ನಾವೇ ಮುಂದಾಗಬೇಕು. ಸ್ವಾರ್ಥದ ಮನಸ್ಥಿತಿ ಮೈಗೂಡಿದರೆ ಸಂತೋಷದಿಂದ ವಂಚಿತ ರಾಗಬೇಕಾಗುತ್ತದೆ ಎಂಬ ಸತ್ಯದ ಅರಿವಾದಾಗಷ್ಟೆ ನೆಮ್ಮದಿ ಬದುಕು ಸಾಧ್ಯ. ಎಷ್ಟೇ ಪ್ರಾಪಂಚಿಕ, ಭೌತಿಕ ವಸ್ತುಗಳಿದ್ದರೂ ನಮ್ಮಲ್ಲಿ ಸ್ವಾರ್ಥ ಹೆಚ್ಚಾದಾಗ ಆನಂದ, ನೆಮ್ಮದಿ, ತೃಪ್ತಿ ಎಲ್ಲವೂ ಶೂನ್ಯವಾಗುತ್ತದೆ. ಸಂಪಾದಿಸಿದ್ದೆಲ್ಲವೂ ನಗಣ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಸ್ವಾರ್ಥ ಬಿಟ್ಟು ನಿಸ್ವಾರ್ಥದಿಂದ ಬದುಕು ಸಾಗಿಸಿದಲ್ಲಿ ಸಂತೋಷ ಕರ ಜೀವನ ನಮ್ಮದಾಗುತ್ತದೆ. ಹಾಗಾದಾಗ ಮಾತ್ರ ಈ ಮೋಸದ ಜಗತ್ತಿನಲ್ಲಿ ತೆರೆದುಕೊಂಡಿರುವ ಸ್ವಾರ್ಥ ಮರೆಯಾಗಿ ನೆಮ್ಮದಿಯ ಬದುಕು ಎಲ್ಲರದ್ದಾಗುತ್ತದೆ.