Saturday, 23rd November 2024

ಸಾಧನೆಗೆ ಸಿದ್ದ ಫಾರ್ಮುಲಾ ಇಲ್ಲ, ಒಮ್ಮೆಲೆ ಸಾಧನೆಯೂ ಆಗಲ್ಲ

ಶಿಶಿರಕಾಲ

shishirh@gmail.com

ದಿನಕ್ಕೆ ಹತ್ತಾರು ಮಂದಿ ಸಾಧಕರ ಬಗ್ಗೆ, ಅವರ ಸಾಧನೆಯ ಬಗ್ಗೆ ಒಂದಿಂದು ಮೂಲದಿಂದ ಕೇಳುತ್ತೇವೆ. ಇನ್ನು ಕೆಲವು ಈಗಾಗಲೇ ಗೊತ್ತಿರುವ ಸಾಧಕರ ದಾಟಿದ ಇನ್ನೊಂದು ಮೈಲಿಗಲ್ಲಿನ ಸುದ್ದಿ. ಕೆಲವರ ಹೊಸ ಸಾಧನೆಗಳು ಕೊನೆ ಕೊನೆಗೆ ಆಶ್ಚರ್ಯವನ್ನು ಕೂಡ ಹುಟ್ಟಿ ಹಾಕುವುದಿಲ್ಲ. ತೆಂಡೂಲ್ಕರ್, ಕೊಹ್ಲಿ ಸೆಂಚುರಿ ಹೊಡೆದಂತೆ. ಓದಿ – ಕೇಳಿ – ನೋಡಿ ಖುಷಿಯಾಗುತ್ತದೆ – ಆದರೆ ಆಶ್ಚರ್ಯವಾಗುವುದಿಲ್ಲ.

ಬೆಳಿಗ್ಗೆ ಎದ್ದು ಪತ್ರಿಕೆ ತೆರೆದರೆ ಒಂದಿಷ್ಟು ಸಾಧನೆಗಳು – ಒಂದೆರಡು ಹೊಸ ಸಾಧಕರು ಪ್ರತೀ ದಿನ ಗೊತ್ತಾಗುತ್ತಾರೆ. ಸ್ಪೋರ್ಟ್ಸ್ ಪುಟ ಎಂದರೆ ಅದು
ಸಾಧನೆಯ ಸುದ್ದಿಯೇ. ವಿಜ್ಞಾನಿಯ ಬಗ್ಗೆ, ಆಟಗಾರನ ಬಗ್ಗೆ, ಸಾಹಿತಿಯ ಬಗ್ಗೆ, ಬಿಸಿನೆಸ್ ಪರ್ಸನಾಲಿಟಿಯ ಬಗ್ಗೆ ಒಬ್ಬರು ಬರೆದಿದ್ದಾರೆ ಎಂದರೆ ಅದು ಸಾಧನೆಗೆ ಸಂಬಂಧಿಸಿದ್ದೇ. ಏನೇನೋ ಸಾಧನೆಗಳು, ಯಾವ ಯಾವುದೋ ಫೀಲ್ಡ್, ಎಂಥೆಂಥದ್ದೇ ಮೂಲ, ಸ್ಥಿತಿಯಿಂದ ಬಂದವರು, ಎಲ್ಲಿಂದೆಲ್ಲಿಗೊ ಹೋಗಿ ಮುಟ್ಟಿದವರು. ಕೆಲವರ ಸ್ಥಿತಿ ನಮ್ಮ ಬದುಕಿಗೆ ಸರಿಹೊಂದುವಂತದ್ದು. ಇನ್ನು ಕೆಲವು ಮಹತ್ ಸಾಧಕರ ಸ್ಥಿತಿ ಮೂಲದಲ್ಲಿ ಅದೆಷ್ಟೋ ಕಷ್ಟ ಕಾರ್ಪಣ್ಯಗಳು. ಇಂದಿನ ದಿನದಲ್ಲಿ ಹೆಸರುವಾಸಿಯಾಗಲು ಸಾಧಕರೇ ಆಗಬೇಕೆಂದಿಲ್ಲ. ಕುಖ್ಯಾತಿಯಿಂದ ಹೆಸರು ಮಾಡುವುದು ತೀರಾ ಸುಲಭ ಎನ್ನುವುದು ಬೇರೆ ವಿಚಾರ.

ಸಾಧಕರ ಬಗ್ಗೆ ಮೊದಲು ಕೇಳಿದಾಗ ಸುಮಾರಾಗಿ ನಾವೆಲ್ಲ ಅವರನ್ನು ಎರಡರಲ್ಲಿ ಒಂದು ಬುಟ್ಟಿಗೆ ಹಾಕಿ ಅವರ ಬಗ್ಗೆ – ಅವರ ಸಾಧನೆಯ ಬಗ್ಗೆ ಒಂದು ಇತ್ಯರ್ಥಕ್ಕೆ ಬಂದು ಬಿಡುತ್ತೇವೆ. ಒಂದೋ ತೀರಾ ಕಷ್ಟಪಟ್ಟು – ಪ್ರಯತ್ನಿಸಿ ಬಂದವರು ಇಲ್ಲವೇ ಸಹಜವಾಗಿ ಜೀನ್ಸ್‌ನಿಂದ ಬಳುವಳಿ ಪಡೆದು ಬಂದವರು, ಅವರು ಬೆಳೆದು ಬಂದ ವಾತಾವರಣದಿಂದ ಹುಟ್ಟಿದ ಸಾಧಕರು ಅಥವಾ ಅವರು ಗಿಫ್ಟೆಡ್. ಆದರೆ ಸಾಧನೆ ಎಂದರೆ ಪ್ರಯತ್ನ ಎಂದು ಬಹುವಾಗಿ ನಂಬುವವರು ನಾವು. ಪ್ರಯತ್ನ ಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದೇ ನಮ್ಮೆಲ್ಲರ ದೃಢ ನಂಬಿಕೆ. ಅದರ ಜೊತೆ ಕೆಲವರನ್ನು ಗಿಫ್ಟೆಡ್ ಎನ್ನುವ ಬುಟ್ಟಿಗೆ ಹಾಕಿ ತೂಗುತ್ತೇವೆ.

ಕೆಲವರದು ಸ್ವಾಭಾವಿಕ ಜನ್ಮ ಸಹಜ ಪ್ರತಿಭೆ. ಸಾಧಕರನ್ನು ಈ ರೀತಿ ವರ್ಗೀಕರಿಸಿ ನೋಡಿದಾಗಲೇ ಯಡವಟ್ಟಾಗುವುದು. ಸಾಧಕರು ಸ್ಪೂರ್ತಿ ಹೌದು ಆದರೆ ಸಾಧನೆಗೆ ಕೇವಲ ಶತ ಪ್ರಯತ್ನವೊಂದೇ ಕಾರಣ ಅಥವಾ ಅವರು ಗಿಫ್ಟೆಡ್ ಎಂದಾಕ್ಷಣ ಸಾಧನೆಯ ಬಗ್ಗೆ ನಾವು ರೂಪಿಸಿಕೊಳ್ಳುವ ಚಿತ್ರಣ ತಪ್ಪಾಗುತ್ತದೆ. ಸಾಮಾನ್ಯವಾಗಿ ಪರ್ಸನಾಲಿಟಿ ಡೆವಲಪ್ಮೆಂಟ್ ಬಗ್ಗೆ ಮಾತನಾಡುವವರೆಲ್ಲ ಒತ್ತಿ ಹೇಳುವುದು ಒಂದೇ. ಯಾರು ಬೇಕಾದರೂ ಏನನ್ನು ಬೇಕಾದರೂ ಸಾಧಿಸ ಬಹುದು.

ಹಾಗಾದರೆ Believe in you and you can achieve it ಎನ್ನುವುದೊಂದೇ ಮಂತ್ರವೇ? ಇದು ಎಷ್ಟರ ಮಟ್ಟಿಗೆ ಸತ್ಯ? ನಮ್ಮ ಮಕ್ಕಳಿಗೆ ಕ್ರಿಕೆಟ್ ಬ್ಯಾಟ್ ಕೊಟ್ಟು – ದಿನವಿಡೀ ಬಾಲ್ ಹೊಡೆಯಲು ಬಿಟ್ಟರೆ ಅಥವಾ ವಿರಾಟ್ ಕೊಹ್ಲಿಯಿಂದಲೇ ಕ್ರಿಕೆಟ್ ಪ್ರಾಕ್ಟೀಸ್ ಮಾಡಿಸಿದರೆ ಕೊಹ್ಲಿಗಿಂತ ಒಳ್ಳೆಯ ಬ್ಯಾಟರ್ ಆಗಬಹುದೇ? ಅಥವಾ ಮಗು ಗಿಫ್ಟೆಡ್ ಕೂಡ ಆಗಿರಬೇಕೇ? ಚೆಸ್ ಆಡುವುದನ್ನು ಬಾಲ್ಯದ ಕಲಿಸಿ ಗ್ರಾಂಡ್ ಮಾಸ್ಟರ್ ಮಾಡಬಹುದೇ? ಟೆನ್ನಿಸ್ ಆಡಲು
ಐದನೆಯ ವಯಸ್ಸಿನಿಂದಲೇ ಕಲಿಸಿ ಬೆಳೆಸಿದರೆ ನಿಮ್ಮ ಮಗು ರೋಜರ್ ಫೆಡೆರರ್ ಆಗಬಹುದೇ? ಮಾಲ್ಕಮ್ ಗ್ಲಾಡ್ವೆಲ್ಲ್ ಎನ್ನುವ ಲೇಖಕ ೨೦೦೮ರಲ್ಲಿ
ಪ್ರಕಟಿಸಿದ Outlier, The Story of Success ಎನ್ನುವ ಪುಸ್ತಕದಲ್ಲಿ ಸಾಧನೆ ಎಂದರೆ ಏನು ಎಂದು ಬಹು ವಿವರವಾಗಿ ಬರೆಯುತ್ತಾನೆ. ಸಾಧನೆ ಎನ್ನುವ ವಿಚಾರವನ್ನೇ ಡೈಸೆಕ್ಟ್ ಮಾಡಲು ಹೊರಡುವ ಪುಸ್ತಕವದು. ಏನಾದರೊಂದನ್ನು ಸಾಧಿಸುವುದು ಹೇಗೆ ಎನ್ನುವುದನ್ನು ಪರೋಕ್ಷವಾಗಿ ಕೆಲವು ತನ್ನದೇ ಆದ ಸಿದ್ಧಾಂತಗಳಿಂದ ವಿವರಿಸುತ್ತಾನೆ ಲೇಖಕ. ಈ ಪುಸ್ತಕದಲ್ಲಿ ಹತ್ತಾರು ಸಾಧಕರನ್ನು ಅವರ ಸಾಧನೆಗೆ ಪಟ್ಟ ಶ್ರಮವನ್ನು ವಿವರವಾಗಿ ಬರೆಯುತ್ತ ಒಂದು ಸಿದ್ಧಾಂತ
Theory of 10,000 hours ಅನ್ನು ಪುಸ್ತಕದುದ್ದಕ್ಕೂ ಪ್ರತಿ ಪಾದಿಸುತ್ತಾ ಹೋಗುತ್ತಾನೆ. ಇದಕ್ಕೆ ಹಲವಾರು ಉದಾಹರಣೆಗಳನ್ನು ಕೂಡ ಉಲ್ಲೇಖಿಸುತ್ತಾನೆ.

ಈ ಸಿದ್ಧಾಂತಕ್ಕೆ ಆತ ಬಿಲ್ ಗೇಟ್ಸ್‌ನಿಂದ ಹಿಡಿದು ಹಲವಾರು ಮಹಾನ್ ಸಾಧಕರನ್ನು ಬಳಸಿಕೊಳ್ಳುತ್ತಾನೆ. ಆತನ ಪ್ರಕಾರ ಎಲ್ಲ ಸಾಧಕರು ಸುಮಾರು ಹತ್ತು ಸಾವಿರ ತಾಸಿಗಿಂತ ಹೆಚ್ಚಿಗೆ ಪ್ರಯತ್ನಿಸಿರಬೇಕು. ಪ್ರತೀ ದಿನ ಮೂರು ತಾಸು ಹತ್ತು ವರ್ಷ ಸತತ ಪ್ರಯತ್ನಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಎಂದರೆ ಸಾಧನೆ ಯನ್ನು ಪ್ರಯತ್ನಿಸಿದ ವ್ಯಯಿಸಿದ ಸಮಯದ ಲೆಕ್ಕಕ್ಕೆ ಕಟ್ಟಿ ಹಾಕುವ ಕೆಲಸ ಅವನದು. ಇಡೀ ಪುಸ್ತಕ ಓದಿ ಮುಗಿಸಿದಾಗ ಈ ಗಿಫ್ಟೆಡ್ – ಸ್ವಾಭಾ ವಿಕ ಸಹಜ ಪ್ರತಿಭೆ ಎನ್ನುವುದೆಲ್ಲ ಬೊಗಳೆ – ಹತ್ತು ಸಾವಿರ ತಾಸು ಸರಿಯಾಗಿ ವ್ಯಯಿಸಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವ ಭಾವವನ್ನು
ಲೇಖಕ ಹುಟ್ಟಿಹಾಕುತ್ತಾನೆ. ಈ ಸಿದ್ಧಾಂತದ ಪ್ರಕಾರ ೧೦,೦೦೦ ತಾಸು ಸಾಧನೆಗೆ ವ್ಯಯಿಸಬೇಕು.

ಹಾಗಾಗಿ ಆದಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಯತ್ನ ಶುರುಮಾಡಿಕೊಂಡರೆ ಸಾಧನೆ ಪಕ್ಕಾ. ಈ ವಿವರಣೆಯ ಪ್ರಕಾರ ಮಗುವನ್ನು ಸಾಧಕನನ್ನಾಗಿ ಮಾಡಲು ಪೋಷಕರು ಅವರನ್ನು ಚಿಕ್ಕಂದಿನ ಪ್ರಯತ್ನಕ್ಕೆ ಹೆಚ್ಚಿಸಬೇಕು. ಹೀಗೆ ಚಿಕ್ಕ ವಯಸ್ಸಿನ ಸಾಧನೆಯ ಪ್ರಯತ್ನಕ್ಕೆ ಹಚ್ಚಿ ಸಫಲರಾದವರು ಹಲವರಿದ್ದಾರೆ. ಉದಾ ಹರಣೆಗೆ ಗಾಲ್ಫ್ ಆಟದ ಜೀವಂತ ದಂತಕತೆ ಟೈಗರ್ ವುಡ್ಸ್. ಟೈಗರ್ ಏಳು ತಿಂಗಳ ಮಗುವಾಗಿದ್ದಾಗ ಆತನ ತಂದೆ ಪುಟ್ಟ ಗಾಲ್ಫ್ ಬ್ಯಾಟ್ (ಪಡ್ಡರ್) ಅನ್ನು ಕೈಗೆ ಕೊಟ್ಟಿದ್ದರಂತೆ. ಹತ್ತು ತಿಂಗಳ ಮಗುವಾದ ಟೈಗರ್ ತಂದೆ ಪಡ್ಡರ್ ಅನ್ನು ಬೀಸುವುದನ್ನು ನೋಡಿ ಮಗು ಟೈಗರ್ ಕೂಡ ತಂದೆಯಂತೆ ಕೈ ಬೀಸುತ್ತಿದ್ದನಂತೆ.

ಟೈಗರ್ ಎರಡನೆಯ ವರ್ಷವಾಗುವುದರಲ್ಲಿ ಪಡ್ಡರ್ ಅನ್ನು ಬೀಸಿ ಗಾಲ್ಫ್ ಬಾಲ್ ಅನ್ನು ಹೊಡೆಯುವುದನ್ನು ಕಲಿತುಬಿಟ್ಟಿದ್ದ. ಆತನನ್ನು ಅಂದೇ ಅಮೆರಿಕದ ರಾಷ್ಟ್ರೀಯ ವಾಹಿನಿಯೊಂದು ಜನರಿಗೆ ತೋರಿಸಿ ಎಲ್ಲರ ಅಚ್ಚರಿಗೆ ಪಾತ್ರ ನಾಗಿದ್ದ. ಟೈಗರ್ ಅನ್ನು ಆತನ ತಂದೆಯೇ ಚಿಕ್ಕಂದಿನಿಂದ ರೂಪಿಸಿದ್ದು. ಟೈಗರ್ ತನ್ನ ಇಪ್ಪತ್ತೊಂದನೆಯ ವಯಸ್ಸು ಮುಟ್ಟುವಾಗಲೇ ಜಗತ್ತಿನ ಅತಿ ಶ್ರೇಷ್ಠ ಗಾಲ್ಫ್ ಆಟಗಾರನಾಗಿ ಹೊರ ಹೊಮ್ಮಿದ. ಟೈಗರ್ ವುಡ್ಸ್‌ನ ಕಥೆ ಕೇಳಿದರೆ ಎಲ್ಲ ತಂದೆಗೆ ತನ್ನ ಮಗನನ್ನು ಇದೆ ರೀತಿ ಬೆಳೆಸಿ ಸಾಧಕನನ್ನಾಗಿಸಬೇಕು ಎಂದೆನಿಸುತ್ತದೆ. ಈ ಇಡೀ ಪ್ರಕರಣದಲ್ಲಿ ಟೈಗರ್‌ನ ಆಟದ ಚಾಕಚಕ್ಯತೆಗಿಂತ ಆತನ ಬಾಲ್ಯದಿಂದ ಪಟ್ಟ ಪ್ರಯತ್ನ ಮತ್ತು ಆತನ ತಂದೆಯ ಶ್ರಮವಷ್ಟೇ ಸಾಧನೆಗೆ ಕಾರಣವೆನಿಸುತ್ತದೆ.

ಹಾಗಾದರೆ ಕೇವಲ ಅದೇ ಹಾದಿಯನ್ನು ಯಥಾವತ್ತು ಇನ್ನೊಬ್ಬ ತಂದೆ ಮಾಡಿದರೆ ಇನ್ನೊಬ್ಬ ಟೈಗರ್ ತಯಾರು ಮಾಡಬಹುದೇ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಈ ಟೈಗರ್ ವುಡ್ ನ ಕಥೆಯನ್ನು ಕೂಡ Outlier ಪುಸ್ತಕದ ಹತ್ತು ಸಾವಿರ ತಾಸಿನ ಸಿದ್ಧಾಂತಕ್ಕೆ ಬಳಸಿಕೊಳ್ಳಲಾಗಿದೆ. ಹಲವು ಪೋಷಕರು ಕೂಡ ಇಂಥದ್ದೇ ಕೆಲಸಕ್ಕೆ ಹೊರಟು ನಿಲ್ಲುವುದನ್ನು ನಾನು ನೋಡಿದ್ದೇನೆ, ನೀವೂ ನೋಡಿರುತ್ತೀರಿ. ಮಗುವಿಗೆ ಇಷ್ಟವಿದೆಯೋ ಇಲ್ಲವೋ, ಅಥವಾ ಇಷ್ಟ ಇದೆಯೋ ಇಲ್ಲವೋ ಎನ್ನುವ ಅರಿವಾಗುವ ವಯಸ್ಸು ಮತ್ತು ಮ್ಯಾಚುರಿಟಿ ಹುಟ್ಟುವ ಮೊದಲೇ ಏನೋ ಒಂದು ಪ್ರಯತ್ನಕ್ಕೆ ಹಚ್ಚಿಸುತ್ತಾರೆ. ಈಗಿನಿಂದಲೇ ಪ್ರಯತ್ನಪಟ್ಟರೆ ದೊಡ್ಡ ಸಾಧಕ ನಾಗುತ್ತಾನೆ ಎಂದು ಮಗುವಿನ ಮೇಲೆ ಎಲ್ಲಿಲ್ಲದ ಒತ್ತಡವನ್ನು ಹೇರುತ್ತಾರೆ.

ಆಟಕ್ಕೋ, ಸಂಗೀತಕ್ಕೋ ಅಥವಾ ಇನ್ಯಾವುದೋ ಒಂದು ಕ್ಷೇತ್ರವನ್ನಾರಿಸಿ ಮಗುವಿನ ಬಾಲ್ಯ ಸಹಜ ಚಟುವಟಿಕೆಗೆ ಕೂಡ ಅವಕಾಶ ಕೊಡದೇ, ಮಗುವಿನ ಜಗತ್ತೇ ಒಂದು ತಮ್ಮಿಷ್ಟದ ಸಾಧನೆಗೆ ಸೀಮಿತವಾಗಿರಬೇಕೆಂದು ಹೊರಡುತ್ತಾರೆ. ಆ ಕ್ಷೇತ್ರದ ಸಾಧಕನ ಸಾಧನೆಯ ಹಾದಿಯನ್ನು ಅರ್ಧಂಬರ್ಧ ತಿಳಿದು ತನ್ನದೇ ಕಾಲ್ಪನಿಕ ಅಚ್ಚು ತಯಾರಿಸಿ – ಮಗು ಎನ್ನುವ ಎರಕವನ್ನು ಅದರಲ್ಲಿ ಹೊಯ್ದರೆ ಅದೇ ಸಾಧಕನ ರೂಪ ತಾಳಿಬಿಡುತ್ತಾನೆ ಎಂದು ಹೊರಡುತ್ತಾರೆ. ‘ಆ ಸಾಧಕ ನಿನ್ನಂತೆಯೇ ಇದ್ದ – ಆತ ಇದನ್ನು ಮಾಡಿದ, ನೀನು ಹಾಗೆಯೇ ಮಾಡು – ಅವನಂತೆಯೇ ಆಗುತ್ತಿ’ ಎಂದು ಹೇಳುವ ಅದೆಷ್ಟೋ ಪೋಷಕರಿದ್ದಾರೆ.

ಹಲವು ಪೋಷಕರಿಗೆ ತಾನು ಕಂಡ ಕನಸನ್ನು ಮಗು ಸಾದರಗೊಳಿಸಬೇಕು. ತನಗೇಕೆ ಸಾಧನೆ ಮಾಡಲಾಗಲಿಲ್ಲ ಎಂಬ ಕಾರಣಗಳನ್ನು ಹೆಕ್ಕಿ ಆ ಕಾರಣಗಳು ಮಗುವಿಗೆ ಎದುರಾಗದಂತೆ ನೋಡಿಕೊಂಡು – ‘ಈ ಸಮಸ್ಯೆ ತೊಡಕು ನನಗಿತ್ತು, ನಿನಗಿಲ್ಲ, ಹಾಗಾಗಿ ನೀನು ಇದನ್ನು ಸಾಧಿಸಬೇಕು’ ಎನ್ನುವ ತಾಕೀತು. ಅಲ್ಲ ಮಗು ಕೂಡ ಇನ್ನೊಂದು ವ್ಯಕ್ತಿತ್ವ ಎನ್ನುವ ವಿಚಾರವೇ ಗೌಣ ಅಥವಾ ನಗಣ್ಯವಾಗುತ್ತದೆ. ಸಾಧನೆ ಎನ್ನುವುದು ಕೇವಲ ಪ್ರಯತ್ನವೊಂದರಿಂದಲೇ ಹುಟ್ಟುವ ಪ್ರಣಾಳ ಶಿಶು ಅನಿಸಿದಾಗ, ಅದೇ ಹತ್ತು ಸಾವಿರ ತಾಸಿನಂತಹ ಥಿಯರಿಯನ್ನು ಇಟ್ಟು ನಮ್ಮ ಮಕ್ಕಳನ್ನು ಸಾಧಕರನ್ನಾಗಿ ಮಾಡಲು ಹೊರಡುವುದು ಆಧುನಿಕ ಪೋಷಕತ್ವದ ಟ್ರೆಂಡ್ ಆದಂತಿದೆ.

ಟೈಗರ್ ವುಡ್ಸ್ ಬಿಟ್ಟು ಈ ರೀತಿ ಚಿಕ್ಕಂದಿನಿಂದಲೇ ಪೋಷಕರಿಂದ ಪ್ರಯತ್ನ ಹಚ್ಚಿಸಿಕೊಂಡು ಸಾಧನೆಯ ಮೆಟ್ಟಿಲು ಹತ್ತಿದ ಇನ್ನೂ ಹತ್ತಾರು ಉದಾಹರಣೆಗಳು ಇದೆ. ಆದರೆ ಸಾಧಕರನ್ನು ದೊಡ್ಡ ಸಂಖ್ಯೆಯಲ್ಲಿ ಅಭ್ಯಸಿಸಿದಾಗ ಇನ್ನು ಕೆಲವು, ಈ ಲೆಕ್ಕದ ಹೊರತಾದ ವಿಚಾರಗಳು ತಿಳಿದುಬರುತ್ತವೆ. ಹಾಗಾದರೆ ಎಲ್ಲ
ಸಾಧಕರು ಚಿಕ್ಕ ಮಗುವಿರುವಾಗಲೇ ಪ್ರಯತ್ನಕ್ಕೆ ಹೊರಟವರೇ? ಚಿಕ್ಕ ವಯಸ್ಸಿನ ಪ್ರಯತ್ನ ಶುರುಮಾಡಿಕೊಳ್ಳದಿದ್ದರೆ ಅತ್ಯುತ್ತಮರಾಗಲು ಸಾಧ್ಯವೇ ಇಲ್ಲವೇ?
ಜಗತ್ತಿನ ಅತ್ಯುಚ್ಚ ಆಟಗಾರರನ್ನು ಗಣನೆಗೆ ತೆಗೆದುಕೊಂಡರೆ ಅವರಲ್ಲಿ ಬಹುತೇಕರು ಸಾಧನೆಗೈದ ಆಟವನ್ನು ಆಡುವುದನ್ನು ಗಂಭೀರವಾಗಿ ತೆಗೆದುಕೊಳ್ಳುವ ಮೊದಲು ಹಲವಾರು ಆಟಗಳನ್ನು ಪ್ರಯತ್ನಿಸಿರುತ್ತಾರೆ.

ಆಟಗಾರರಷ್ಟೇ ಅಲ್ಲ, ಎಲ್ಲ ಸಾಧಕರೂ ಕೇವಲ ಒಂದೇ ಒಂದು ವಿಷಯವನ್ನಿಟ್ಟು ಅದರಲ್ಲಿಯೇ ಪ್ರಯತ್ನಿಸಿ ಯಶಸ್ಸಾಗುವುದಕ್ಕಿಂತ ಹತ್ತಾರು ಬೇರೆ ಬೇರೆ ಪ್ರಯತ್ನಗಳನ್ನು ಮಾಡಿ ಕೊನೆಯಲ್ಲಿ ತಮ್ಮಿಷ್ಟದ ಒಂದನ್ನು ಆರಿಸಿಕೊಂಡು ಅದರಲ್ಲಿ ಸಾಧನೆ ಮಾಡುತ್ತಾರೆ. ಯಾವೊಬ್ಬ ಮಹಾನ್ ಸಾಧಕನನ್ನು ನೋಡಿದರೂ ಸಾಮಾನ್ಯವಾಗಿ ಆತ ಯಾವುದರಲ್ಲಿ ಸಾಧನೆ ಮಾಡಿರುತ್ತಾನೋ ಅದನ್ನು ಬಿಟ್ಟು ಇನ್ನೊಂದಿಷ್ಟು ವಿಷಯಗಳಲ್ಲಿ ಪರಿಣಿತಿ ಹೊಂದಿರುತ್ತಾನೆ. ಅದಕ್ಕೆ ಕಾರಣ ಆತ ಇನ್ನೊಂದಿಷ್ಟು ವಿಷಯಗಳಲ್ಲಿ ಪ್ರಯತ್ನಿಸಿರುತ್ತಾನೆ ಎಂದೇ ಅರ್ಥ.

ರೋಜರ್ ಫೆಡೆರರ್ ವಿಶ್ವ ಕಂಡ ಅತ್ಯುಚ್ಚ – ಶ್ರೇಷ್ಠ ಟೆನಿಸ್ ಆಟಗಾರನಾಗುವ ಮೊದಲು ಬಾಸ್ಕೆಟ್ ಬಾಲ, ಟೇಬಲ್ ಟೆನಿಸ್, ಈಜು, ಬಾಕ್ಸಿಂಗ್ ಹೀಗೆ ಹತ್ತಾರು ಆಟಗಳಲ್ಲಿ ಪ್ರಯತ್ನಿಸಿ ಕೊನೆಯಲ್ಲಿ ಟೆನಿಸ್ ಅನ್ನು ಆರಿಸಿಕೊಂಡವ. ಪ್ರತಿಯೊಬ್ಬ ಶೇಷ್ಠ ಆಟಗಾರರzಲ್ಲ ಇದೇ ಕಥೆ. ಪ್ರತಿಯೊಬ್ಬ ಅಪ್ರತಿಮ ವಿಜ್ಞಾನಿ, ಸಿಇಒ ಎಲ್ಲರೂ ಇನ್ನೊಂದು ಜಗತ್ತೇ ತಿಳಿದಿರದ ಹವ್ಯಾಸ ಇಷ್ಟಪಟ್ಟವರಾಗಿರುತ್ತಾರೆ. ಇವರನ್ನೆಲ್ಲ ಮಲ್ಟಿ ಟ್ಯಾಲೆಂಟೆಡ್ ಎನ್ನುವುದಕ್ಕಿಂತ ಇವರು ಹಲವಾರು ಸ್ಯಾಂಪ್ಲಿಂಗ್ ಮಾಡಿರುತ್ತಾರೆ ಮತ್ತು ತದನಂತರ ತಮ್ಮಿಷ್ಟದ ಒಂದನ್ನು ಆರಿಸಿಕೊಂಡವರಾಗಿರುತ್ತಾರೆ ಎನ್ನುವುದನ್ನು ನಾವು ಗ್ರಹಿಸಬೇಕಾಗುತ್ತದೆ.

ಇದರ ಬದಲು ಸಾಧಕ ಚಿಕ್ಕಂದಿನ ಪ್ರಯತ್ನಿಸಿ ಆಮೇಲೆ ಸಾಧಿಸಿದ ಎನ್ನುವ ಒಂದೇ ವಿಚಾರವನ್ನು ಪರಿಗಣಿಸಿ ಅದನ್ನೇ ಸಾಧನೆಯ ಗುಟ್ಟು ಎಂದು ನಿಮ್ಮ ಮಗುವನ್ನು ‘ಸ್ಯಾಂಪ್ಲಿಂಗ್’ ಗೆ ಅವಕಾಶವೇ ಕೊಡದಿದ್ದಲ್ಲಿ ಆತ / ಆಕೆ ಮಹಾನ್ ಸಾಧಕರಾಗುವ ಸಾಧ್ಯತೆ ತೀರಾ ಕಡಿಮೆ. ಅದೇ ಕಾರಣಕ್ಕೆ ಚಿಕ್ಕಂದಿನಲ್ಲಿ
ಹೆಸರು ಮಾಡಿದ, ಟಿವಿಯಲ್ಲಿ ಪತ್ರಿಕೆಯಲ್ಲಿ ಅರಳುತ್ತಿರುವ ಬಾಲ ಪ್ರತಿಭೆ ಎಂದು ಹೆಸರುವಾಸಿಯಾಗುವ ಹಲವಾರು ಮಕ್ಕಳು ಆಮೇಲೆ ಹೇಳ ಹೆಸರಿಲ್ಲದಂತೆ ಮರೆಯಾಗುವುದು. ಸ್ಪೆಲ್ಲಿಂಗ್ ಬೀ ಆದ ಮಕ್ಕಳು ನಂತರ ಇಂಗ್ಲಿಷ್‌ನಲ್ಲಿ ಯಾವೊಂದು ಸಾಧನೆಯನ್ನು ಮಾಡದೇ ಇರುವುದಕ್ಕೆ, ಮ್ಯಾಥ್ ಬೀ ಆದವರು
ಕೊನೆಗೆ ಬೇರೊಂದು ವಿಷಯವನ್ನು ಇಷ್ಟಪಡುವುದಕ್ಕೆ ಶುರುಮಾಡುವುದಕ್ಕೆ ಕೂಡ ಇದೆ ಕಾರಣ.

ನಮ್ಮಲ್ಲಿ ಬಹುತೇಕ ಪಾಲಕರಿಗೆ ಮಗುವನ್ನು ಬೆಳೆಸುವುದು ಒಂದು ರೀತಿಯಲ್ಲಿ ಅರಲು ಗzಯಲ್ಲಿ ಕೋಣನನ್ನು ಓಡಿಸಿದಂತೆ. ಜಗತ್ತು ತುಂಬಾ ಕಾಂಪಿಟೇಟಿವ್ ಎನ್ನುವ ವಿಚಾರದಿಂದ ಹುಟ್ಟುವ ಆತಂಕ ಪಾಲಕರನ್ನು ಏನೇನನ್ನೆಲ್ಲ ಮಾಡಿಸುತ್ತದೆ. ಇನ್ನು ಕೆಲವು ಪಾಲಕರು ಈ ಸ್ಯಾಂಪ್ಲಿಂಗ್ ಅನ್ನೇ ಅತಿಯಾಗಿ ಮಾಡುತ್ತಾರೆ. ಚಿಕ್ಕಂದಿನ ಸಂಗೀತ ಕಲಿಸಬೇಕು, ಕರಾಟೆ ಬ್ಲಾಕ್ ಬೆಲ್ಟ ಮಾಡಬೇಕು, ಚೆಸ್ ಕಲಿಸಬೇಕು, ಇಂಗ್ಲಿಷ್ ಕಲಿಸಬೇಕು ಹೀಗೆ ಮಗುವಿಗೆ ಹತ್ತಾರು ಕ್ಲಾಸಿಗೆ ಹಾಕಿ ಮಗುವಿಗೆ ಅವಶ್ಯಕವಿರುವ ಆಟೋಟವನ್ನೇ ಬೈದು ಮಾಡಿಸುತ್ತಾರೆ. ಇದು ಇನ್ನೊಂದು ವಿಪರೀತ. ಪ್ರತಿಯೊಬ್ಬ ಮಗುವಿಗೂ ಹತ್ತಾರು ಅವಕಾಶಗಳ ಅವಶ್ಯಕತೆ ಯಿರುತ್ತದೆ ಆದರೆ ಅವಕಾಶಗಳೇ ಅತಿಯಾಗಬಾರದು ಕೂಡ. ಪೋಷಕರಾದವರು ಅವಕಾಶವನ್ನು ಹದವಾಗಿ ಒದಗಿಸಬೇಕು ಮತ್ತು ಮಗು ಯಾವುದನ್ನು ಆಯ್ಕೆಮಾಡಿಕೊಳ್ಳುತ್ತದೋ ಅದಕ್ಕೆ ಬೆಂಬಲ ಕೊಡಬೇಕೆ ವಿನಃ ತಂದೆ ತಾಯಿ ಸಾಧಿಸಬೇಕೆನ್ನುವ ವಿಷಯವನ್ನು ಮಗು ಸಾಽಸಬೇಕೆನ್ನುವುದು ಶತ ಮೂರ್ಖತನ ಮತ್ತು ಬಾಲಿಶ.

ಕೆಲವೊಮ್ಮೆ ಮಗು ಒಂದನ್ನು ಅರ್ಧಕ್ಕೆ ನಿಲ್ಲಿಸಿ ಇನ್ನೊಂದಕ್ಕೆ ಕೈ ಹಾಕಲು ಹೊರಡುತ್ತದೆ. ಇದು ಮಗುವಿನ ಚಂಚಲತೆ ಎಂದು ಪರಿಗಣಿಸುವುದಕ್ಕಿಂತ ಮಗುವಿನ ಇಷ್ಟ ಮತ್ತು ಒಲವು ಎನ್ನುವುದನ್ನು ಪೋಷಕರು ಅರಿಯಬೇಕು. ಪ್ರತಿಯೊಬ್ಬ ಮಗು ಕೂಡ ಇಂಥದ್ದೊಂದು ಸ್ಯಾಂಪ್ಲಿಂಗ್ ಪೀರಿಯೆಡ್ ಅನ್ನು ಅನುಭವಿಸಬೇಕು. ಅದಕ್ಕೆ ಅವಕಾಶವನ್ನೊದಗಿಸುವ ಕೆಲಸ ಮಾತ್ರ ಪೋಷಕರು ಮಾಡಬೇಕು. ಮಗುವಿನಲ್ಲಿ ಉತ್ಕಟ ಇಷ್ಟ ಅದಾಗಿಯೇ ಹೊಟ್ಟಬೇಕೇ ವಿನಃ ಅದನ್ನು ಒತ್ತಾಯ ದಿಂದ ಮೂಡಿಸಲು ಯಾವೊಬ್ಬ ಪಾಲಕರೂ ಕೈ ಹಾಕಬಾರದು. ಅದಲ್ಲದೇ ಪ್ರತಿಯೊಬ್ಬ ಮಗುವೂ ಬೆಳೆದು ಒತ್ತಾಯಕ್ಕೆ ಮಹಾನ್ ಸಾಧಕರಾಗಿಬಿಡುವುದಿಲ್ಲ ಎನ್ನುವ ಸೂಕ್ಷ್ಮ ಪಾಲಕರಲ್ಲಿ ಮೂಡಬೇಕು.

You never own your kid. ತಂದೆ ತಾಯಿಯಾಗುವುದೇ ಒಂದು ಭಾಗ್ಯ ಅದನ್ನು ಬಿಟ್ಟು ತಂದೆ ತಾಯಿಯಾದ ತಕ್ಷಣ ಮಗುವಿನ ಮೇಲೆ ಹಕ್ಕು ದತ್ತವಾಗಿ ಬಿಡುವು ದಿಲ್ಲ ಎನ್ನುವ ಸೂಕ್ಷ್ಮದ ಅರಿವು ಪ್ರತಿಯೊಬ್ಬ ಪೋಷಕರಲ್ಲಿರಲೇ ಬೇಕು. ಈ ಸೂಕ್ಷ್ಮತೆಯೇ ಉತ್ತಮ ಪೋಷಕರನ್ನು ಉಳಿದವರಿಂದ ಪ್ರತ್ಯೇಕಿಸುವಂಥದ್ದು. ಸಾಧನೆಗೆ ಯಾವುದೇ ಸಿದ್ಧ ಫಾರ್ಮುಲಾ ಅಥವಾ ಅಚ್ಚು ಇಲ್ಲ ಮತ್ತು ಮಕ್ಕಳು ತೆಳ್ಳಗಿನ ಎರಕವೂ ಅಲ್ಲ. ಮಕ್ಕಳನ್ನು ಸಾಧಕರನ್ನಾಗಿಸಬೇಕೆನ್ನುವ ವಿಪರೀತ ಹಂಬಲದ ನಡುವೆ ನಾವು ವಿಫಲ ಪೋಷಕರಾಗಬಾರದು. ಮಕ್ಕಳ ಸಾಧನೆ ನಮ್ಮ ಸಾಧನೆ, ಮಕ್ಕಳು ಏನಾದರೊಂದು ಸಾಧಿಸದಿದ್ದಲ್ಲಿ ಅದು ಪೋಷಕರಾದ ನಮ್ಮ ವೈಫಲ್ಯ ಎನ್ನುವ ಹುಚ್ಚು ಭಾವನೆಯಿಂದ ಮೊದಲು ಹೊರಬರಬೇಕು. ‘ಸಾಧನೆ ಪ್ರನಾಳ ಶಿಶುವಲ್ಲ – ಸಾಧಕ ಒತ್ತಾಯಕ್ಕೆ ಹುಟ್ಟುವುದಿಲ್ಲ’ ಎನ್ನುವ ಅರಿವನ್ನು ನಾವು ಪೋಷಕರು ಮೊದಲು ಹೊಂದಬೇಕು.