Monday, 25th November 2024

ಇಪ್ಪತ್ತು ನಿಮಿಷಗಳಲ್ಲಿ ಫುಲ್ ಚಾರ್ಜ್ !

– ಅಜಯ್ ಅಂಚೆಪಾಳ್ಯ

ಇಂದು ಜನರಿಗೆ ಸಮಯವೇ ಇಲ್ಲ. ಜಗತ್ತಿನಲ್ಲಿ ಮೊದಲಿನಿಂದಲೂ ಒಂದು ದಿನಕ್ಕೆ 24 ಗಂಟೆ. ಆದರೆ, ಈಗಿನ ತಲೆಮಾರಿಗೆ ಮಾತ್ರ ದಿನದ ಸಮಯ ಕಡಿಮೆಯಾಗುತ್ತಿದೆ!

ಅದಕ್ಕೆಂದೇ ಇರಬೇಕು, ಐಫೋನ್‌ನ್ನು ಬಹುಬೇಗನೆ ಚಾರ್ಜ್ ಮಾಡುವ 15 ವ್ಯಾಟ್ ವೈರ್‌ಲೆಸ್ ಚಾರ್ಜರ್ ಮಾರುಕಟ್ಟೆಗೆ ಬಂದಿದೆ. ಈಗ ಚೀನಾದ ಶವೋಮಿ ಸಂಸ್ಥೆಯು, ಇದಕ್ಕಿಂತ ಬಹಳ ವೇಗವಾಗಿ ಚಾರ್ಜ್ ಮಾಡಬಲ್ಲ ಹೊಸ ವೈರ್‌ಲೆಸ್  ಚಾರ್ಜರ್‌ನ್ನು ಹೊರ ತರುತ್ತಿದೆ! ಶವೋಮಿಯ 80 ವ್ಯಾಟ್ ವೈರ್‌ಲೆಸ್ ಚಾರ್ಜರ್‌ನ್ನು ಅಳವಡಿಸಿದರೆ, 4000 ಎಂಎಎಚ್ ಬ್ಯಾಟರಿಯನ್ನು ಸುಮಾರು 20 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು! ಈ ವೈರ್‌ಲೆಸ್ ಚಾರ್ಜರ್ ಬಳಸಿ ಎಂಟೇ ನಿಮಿಷದಲ್ಲಿ ಶೇ.50ರಷ್ಟು ಚಾರ್ಜ್ ಮಾಡಬಹುದು ಎಂದು ಶವೋಮಿ ಹೇಳಿಕೊಂಡಿದೆ. ಈ ವೇಗವು ಪ್ರಾಯೋಗಿಕವಾಗಿ ಕೆಲಸ ಮಾಡಿದರೆ, ಈಗಿರುವ ವೈರ್ ಸಹಿತ ಚಾರ್ಜರ್‌ಗಿಂತಲೂ ವೇಗವಾಗಿ ಚಾರ್ಜ್ ಮಾಡುವ ಅವಕಾಶ ದೊರಕಬಲ್ಲದು. ಹಾಗಿದ್ದರೆ, ಇದನ್ನು ಸಮಯ ಕಡಿಮೆ ಎನ್ನುವ ಈಗಿನ ಜನರಿಗೆ ಹೇಳಿ ಮಾಡಿಸಿದ ಚಾರ್ಜರ್ ಎನ್ನಬಹುದೆ!

ಬಹುಬೇಗನೆ ಚಾರ್ಜ್ ಮಾಡುವ ಚಾರ್ಜರ್‌ಗಳನ್ನು ಎಲ್ಲಾ ಸಂಸ್ಥೆಗಳೂ ಅಭಿವೃದ್ಧಿಪಡಿಸುತ್ತಿವೆ. ಮೂವತ್ತು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಲ್ಲ ಚಾರ್ಜರ್‌ನ್ನು ಈಚೆಗೆ ಒಪ್ರೋ ಅಭಿವೃದ್ಧಿಪಡಿಸಿದ್ದು, ಮಾರುಕಟ್ಟೆಗೆ ಇನ್ನಷ್ಟೇ ಬರಬೇಕಿದೆ. ಶವೋಮಿ ಸಂಸ್ಥೆಯು ಈಗಾಗಲೇ ಬಿಡುಗಡೆ ಮಾಡಿರುವ ಚಾರ್ಜರ್ (ಚೀನಾದಲ್ಲಿ ಲಭ್ಯ) ಕೇವಲ 40 ನಿಮಿಷದಲ್ಲಿ 4500 ಎಂಎಎಚ್ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಬಲ್ಲದು. ಇದು ಸಹ ವೈರ್‌ಲೆಸ್ ಚಾರ್ಜರ್. ಒನ್‌ಪ್ಲಸ್ 8 ಪ್ರೊ ಮಾದರಿಯ ಚಾರ್ಜರ್ 30 ವ್ಯಾಟ್ ವೈರ್‌ಲೆಸ್ ಚಾರ್ಜರ್ ಆಗಿದ್ದು, ಸುಮಾರು 30 ನಿಮಿಷಗಳಲ್ಲಿ ಶೇ.50ರಷ್ಟು ಚಾರ್ಜ್ ಮಾಡಬಲ್ಲದು.

ಸದ್ಯ ಲಭ್ಯವಿರುವ ವೇಗದ ಚಾರ್ಜರ್‌ಗಳು 65 ವ್ಯಾಟ್ ಒಳಗಿನವು. ಈಗ ಶವೋಮಿ ಸಂಸ್ಥೆಯು ಅಭಿವೃದ್ಧಿಪಡಿಸಿದ ಚಾರ್ಜರ್ ಮಾರುಕಟ್ಟೆಗೆ ಬಂದರೆ, 80 ವ್ಯಾಟ್ನ ಸೂಪರ್ ಸ್ಪೀಡ್ ಚಾರ್ಜರ್ ಎಂದು ಗುರುತಿಸಿಕೊಳ್ಳಬಲ್ಲದು. ವೈರ್ ಹೊಂದಿರುವ
ಚಾರ್ಜರ್‌ಗಿಂತಲೂ ಹೆಚ್ಚು ವೇಗವಾಗಿ ಚಾರ್ಜ್ ಮಾಡಬಲ್ಲ ಇಂತಹ ವೈರ್‌ಲೆಸ್ ಚಾರ್ಜರ್ ಗಳು ಈ ತಲೆಮಾರಿನ ಜನರಿಗೆ ಬಹಳ ಇಷ್ಟವಾಗಬಹುದು.ಇಂದಿನ ಕಾಲವೇ ಹಾಗಿದೆ. ದಿನಕ್ಕೆ 24 ಗಂಟೆಗಳು ಎಂಬ ನಿಯಮ ಸಾರ್ವತ್ರಿಕ ಎನಿಸಿದ್ದರೂ, ಈಚಿನ ಒಂದೆರಡು ದಶಕಗಳಲ್ಲಿ ಮಾತ್ರ ಜನರಿಗೆ ಸಮಯವೇ ಸಾಕಾಗುವುದಿಲ್ಲವಂತೆ!

ಹೋಗಲಿ ಬಿಡಿ, ಎಂತಿದ್ದರೂ ಶವೋಮಿಯಂತಹ ಸಂಸ್ಥೆಗಳು ಸಮಯ ಉಳಿಸುವ ಚಾರ್ಜರ್ ಅಭಿವೃದ್ಧಿಪಡಿಸಿ, ಅಂತಹ
ಧಾವಂತದ ವ್ಯಕ್ತಿಗಳಿಗೆ ದಿನದ ಕೆಲವು ನಿಮಿಷಗಳನ್ನು ಗಳಿಸಿಕೊಡಬಲ್ಲವು!

ವೈರ್‌ಲೆಸ್ ಚಾರ್ಜಿಂಗ್‌ನ ಗುಣಾವಗುಣಗಳೇನು?
ಮೊಬೈಲ್‌ಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಎಂಬ ಪರಿಕಲ್ಪನೆ ಹೆಚ್ಚು ಜನಪ್ರಿಯಗೊಂಡದ್ದು 2017ರಲ್ಲಿ. ಅಮೆರಿಕದ ಪ್ರತಿಷ್ಠಿತ ಐಫೋನ್‌ಗಳಿಗೆ ವೈರ್‌ಲೆಸ್ ಚಾರ್ಜರ್ ಬಂದಾಗ, ಎಲ್ಲಾ ಸಂಸ್ಥೆಗಳೂ ಅಂತಹ ಚಾರ್ಜರ್‌ನ್ನು ತಯಾರಿಸಲು ಆರಂಭಿಸಿದವು.
*ವಯರ್ ಬೇಡದೇ ಇರುವ ಚಾರ್ಜರ್ ಆದ್ದರಿಂದ ಹೆಚ್ಚು ಸುರಕ್ಷಿತ
*ಸ್ಮಾರ್ಟ್‌ಫೋನನ್ನು ಚಾರ್ಜರ್ ಮೇಲೆ ಇಟ್ಟರಾಯಿತು
*ಸ್ಮಾರ್ಟ್‌ಫೋನಿನ ಚಾರ್ಜಿಂಗ್ ಪಾಯಿಂಟ್ ಕೆಡುವ ಭಯವಿಲ್ಲ
*ಕೇಬಲ್ ಮರೆತರೂ, ವೈರ್‌ಲೆಸ್ ಚಾರ್ಜರ್ ಇದ್ದರೆ, ಅದನ್ನು ಪ್ಲಗ್‌ಇನ್ ಮಾಡಿ ಚಾರ್ಜ್ ಮಾಡಬಹುದು.