Tuesday, 3rd December 2024

ಅಪಾರ ಕೀರ್ತಿ ಗಳಿಸಿ ಮೆರೆದ ಪಾರದರ್ಶಕ ಸಾಬೂನು !

ತಿಳಿರುತೋರಣ

srivathsajoshi@yahoo.com

ಅಳಿಯ ಮನೆ ತೊಳಿಯ… ಅಂತೊಂದು ನಾಣ್ಣುಡಿಯಿದೆ ಕನ್ನಡದಲ್ಲಿ. ಅದೇ ಹೆಸರಿನ ಒಂದು ಕನ್ನಡ ಸಿನೆಮಾ ಸಹ ಕೆಲ ವರ್ಷಗಳ ಹಿಂದೆ ಬಿಡುಗಡೆ ಯಾಗಿತ್ತೆಂದು ನೆನಪು. ಒಟ್ಟಾರೆಯಾಗಿ, ಅಳಿಯ ಮನೆ ತೊಳಿಯ ಅಂದರೆ ಸ್ವಲ್ಪ ಕುಹಕದ ನುಡಿಯೇ. ಹೆಣ್ಣು ಕೊಟ್ಟ ಮಾವನ ಗ್ರಹಚಾರ ಮಣ್ಣು ಮುಕ್ಕುವಂತೆ ಮಾಡಲು ವಕ್ಕರಿಸುವ ಹತ್ತನೆಯ ಗ್ರಹ ಎಂಬ ಅಪಕೀರ್ತಿ ಅಳಿಯನದ್ದು.

‘ಸದಾ ರುಷ್ಟಃ ಸದಾ ವಕ್ರಃ ಸದಾ ಪೂಜಾಮಪೇಕ್ಷತೇ| ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||’ ಅಂತ ಸಂಸ್ಕೃತದಲ್ಲೊಂದು ಚಾಟೂಕ್ತಿಯೂ ಇದೆ! ಸದಾ ಮುನಿಸಿಕೊಂಡು, ಮುಖ ಸಿಂಡರಿಸಿಕೊಂಡು ಇರುತ್ತಾನೆ; ತನಗೆ ಮರ್ಯಾದೆ ಸಲ್ಲುತ್ತಲಿರಲಿ ಎಂದು ಅಪೇಕ್ಷಿಸುತ್ತಾನೆ; ಕನ್ಯಾ ರಾಶಿಯಲ್ಲೇ ನೆಲೆನಿಂತಿರುತ್ತಾನೆ; ಅಳಿಯನೆಂದರೆ ಹತ್ತನೆಯ ಗ್ರಹ ಇದ್ದಂತೆ ಎಂದು ಅದರ ಭಾವಾರ್ಥ. ಇದಕ್ಕೆ ತಕ್ಕಂತೆ, ಕೆಲವು ದುರ್ಬುದ್ಧಿಯ ಅಳಿಯಂದಿರು ಅತ್ತೆ-ಮಾವನ
ಮನೆಯಿಂದಲೇ ಹಣ-ಒಡವೆ ಕಳ್ಳತನ ಮಾಡಿದರು, ಕೆಲವರಂತೂ ಕೊಲೆಗಡುಕರೇ ಆದರು ಎಂಬೆಲ್ಲ ಸುದ್ದಿಗಳನ್ನೂ ಆಗಾಗ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ‘ದಶಮೋ ಗ್ರಹಃ’ ಎಂದಾಗ ನೆನಪಾಯ್ತು- ಈಗ ‘ನವಮೋ ಗ್ರಹಃ’ ಎಂದು ಶ್ಲೋಕದಲ್ಲಿ ತಿದ್ದಿಕೊಳ್ಳಬೇಕೇನೋ.

ಪ್ಲುಟೋ ಒಂದು ಗ್ರಹವೇ ಅಲ್ಲವೆಂದು ವಿಜ್ಞಾನಿಗಳು ಹೇಳಿದ್ದಾರೆ. ಹಾಗಾಗಿ ತಾನು ಒಂಬತ್ತನೆಯ ಸ್ಥಾನಕ್ಕೆ ಪ್ರಮೋಷನ್ ಪಡೆದಿದ್ದೇನೆಂದು ಅಳಿಯ ಬೀಗಬಹುದು.
ತಮಾಷೆ ಒತ್ತಟ್ಟಿಗಿರಲಿ. ಅಳಿಯನೊಬ್ಬ ‘ಮನೆ ತೊಳಿಯ’ ನಾಗದೆ ಮಾವ ಸ್ಥಾಪಿಸಿದ ಉದ್ಯಮದ/ ಉತ್ಪನ್ನದ ಕೀರ್ತಿಯನ್ನು ವಿಶ್ವದ ಮನೆಮನೆಯಲ್ಲೂ
ಬೆಳಗಿಸಿದ ಯಶೋಗಾಥೆಯೊಂದಿದೆ. ಅದೇ ಪಿಯರ‍್ಸ್ ಸಾಬೂನಿನ ಕಥೆ. ಈಗ್ಗೆ ಎರಡು ಶತಮಾನ ಗಳುದ್ದಕ್ಕೂ ಖ್ಯಾತಿ ಮತ್ತು ದುಡ್ಡು ಎರಡನ್ನೂ
ಗಳಿಸುತ್ತ ಮೆರೆದಿರುವ ಪಿಯರ‍್ಸ್ ಸೋಪಿನ ಮಹಾತ್ಮೆ.

ಪಿಯರ‍್ಸ್ ಸಾಬೂನಿನ ಆ ಶಿಷ್ಟ ಪರಿಮಳ, ಬಣ್ಣ, ಆಕಾರಗಳ ಚಿತ್ರಣವ ನ್ನೊಮ್ಮೆ ನಿಮ್ಮ ಮನಸ್ಸಿನಲ್ಲಿ ಮೂಡಿಸಿಕೊಳ್ಳಿ. ಅಲ್ಲೊಂದು ನೆನಪುಗಳ ಮೆರವಣಿಗೆ
ಹೊರಡದಿದ್ದರೆ ಆಗ ಕೇಳಿ! ಚಿಕ್ಕ ಮಗುವಾಗಿದ್ದಾಗಿನ ಕೋಮಲ ಶರೀರ… ನಿರ್ಮಲ ಮನಸ್ಸು… ಹಬೆಯಾಡುತ್ತಿರುವ ಬಿಸಿಬಿಸಿನೀರಿನಲ್ಲಿ ಅಮ್ಮ ಮಾಡಿಸಿದ ಸ್ನಾನ… ಪುಟ್ಟ ಕೈಗಳಿಂದ ಹಿಡಿದ ಪಿಯರ‍್ಸ್ ಸೋಪನ್ನು ಮೂಗಿನ ಹೊಳ್ಳೆಗಳ ಹತ್ತಿರ ತಂದಾಗಿನ ಪರಿಮಳ… ಆಹಾ! ನೆನಪುಗಳೂ ಒಂದು ರೀತಿ ಅಮಲೇರಿಸುತ್ತವಲ್ಲವೆ? ಹೌದು, ಇದು ಪಿಯರ‍್ಸ್ ಪರಿಮಳದ ನೆನಪುಗಳ ಅಮಲು. ಈವತ್ತಿನ ತಿಳಿರುತೋರಣ ಅಂಕಣದಲ್ಲಿ ಪಿಯರ‍್ಸ್ ಸೋಪಿನದೇ
ಘಮಲು.

ಇಸವಿ ೧೭೮೯. ಆಂಡ್ರ್ಯೂ ಪಿಯರ‍್ಸ್ ಎಂಬ ಹೆಸರಿನ ಕ್ಷೌರಿಕನೊಬ್ಬ ಬ್ರಿಟನ್‌ನ ಒಂದು ಹಳ್ಳಿಮೂಲೆಯಿಂದ ಲಂಡನ್‌ಗೆ ವಲಸೆ ಬಂದನು. ಲಂಡನ್‌ನ ಸೊಹೊ ಉಪನಗರದ ಜೆರ್ರಾಡ್ ಸ್ಟ್ರೀಟ್‌ನಲ್ಲಿ ಒಂದು ಸೆಲೂನ್ ಆರಂಭಿಸಿದನು. ಸೊಹೊ ಉಪನಗರದಲ್ಲಿ ಶ್ರೀಮಂತರು ಮತ್ತು ವಿಲಾಸಿ ಜನರೇ ಹೆಚ್ಚಾಗಿ ವಾಸ ವಾಗಿದ್ದರು. ಅವರೆಲ್ಲ ಕ್ಷೌರ ಮಾಡಿಸಿಕೊಳ್ಳಲು ಸೆಲೂನ್‌ಗೆ ಬರುವುದಕ್ಕಿಂತ ಆಂಡ್ರ್ಯೂನನ್ನೇ ತಮ್ಮ ಮನೆಗೆ ಕರೆಸಿಕೊಳ್ಳುತ್ತಿ ದ್ದರು. ಈ ಪದ್ಧತಿ ಭಾರತದಲ್ಲಿಯೂ- ಹೆಚ್ಚಾಗಿ ಹಳ್ಳಿಗಳಲ್ಲಿ ಇದ್ದದ್ದೇ. ಹಿರಿಯರು, ಕೇಶಮುಂಡನ ಮಾಡಿಸಿಕೊಳ್ಳುವ ಮಡಿ ಹೆಂಗಸರು ಇರುವ ಮನೆಗಳಿಗೆ ಒಂದೆರಡು ತಿಂಗಳಿಗೊಮ್ಮೆ ಕ್ಷೌರಿಕನೇ ಬಂದುಹೋಗುವ ಕ್ರಮ. ಮತ್ತೆ ಕೆಲವು ಧಾರ್ಮಿಕ ವಿಧಿವಿಧಾನಗಳಲ್ಲೂ ಅವನು ಇರಲೇಬೇಕು. ಬ್ರಿಟನ್‌ನಲ್ಲಿಯೂ ಹಾಗೆಯೇ ಇತ್ತು ಅಂದುಕೊಳ್ಳೋಣ. ಅಂತೂ ಆಂಡ್ರ್ಯೂ ಪಿಯರ್ಸ್ ಆ ವಠಾರದಲ್ಲಿ ತುಂಬ ಜನಪ್ರಿಯನಾಗಿದ್ದನು. ಎಲ್ಲರೂ ಅವನ ಗಿರಾಕಿಗಳೇ.

ಆದರೆ ಆಂಡ್ರ್ಯೂ ಬರೀ ಕ್ಷೌರಿಕನಷ್ಟೇ ಆಗಿರದೆ ತನ್ನ ಕ್ಷೌರದಂಗಡಿಯಲ್ಲೇ ಕೆಲವು ಪೌಡರ್, ಕ್ರೀಮ್, ಲೋಷನ್ ಇತ್ಯಾದಿ ಪ್ರಸಾಧನ ಸಾಮಗ್ರಿಗಳನ್ನೂ ತಯಾರಿಸಿ
ಮಾರುತ್ತಿದ್ದನು. ಸಿರಿವಂತರ ಶೋಕಿಯ ಲಾಭಪಡೆದು, ತನ್ನ ಉತ್ಪನ್ನಗಳಿಂದ ಅವರ ತ್ವಚೆಗೆ ಮೆರುಗನ್ನೂ ತರುತ್ತಿದ್ದನು. ನಿಜವಾಗಿಯಾದರೆ ಅವನು ಅಷ್ಟು ಜನಪ್ರಿಯನಾಗಲು ಅದೇ ಕಾರಣ. ಆ ಕಾಲದಲ್ಲೂ ಜನರಲ್ಲಿ ಸೌಂದರ್ಯಪ್ರಜ್ಞೆ ಅಷ್ಟೊಂದು ಇತ್ತು ನೋಡಿ! ಕಪ್ಪುಮೈಯವರು, ಚರ್ಮಸುಕ್ಕಾದವರು ಮುಂತಾದ ವರೆಲ್ಲ ಸಮಾಜದ ಕೆಳವರ್ಗದವರು, ಕೂಲಿನಾಲಿ ಮಾಡಿಕೊಂಡು ಬದುಕುವವರು, ಅವರಿಗಿಂತ ತಾವು ಶ್ರೇಷ್ಠರಾಗಿರಬೇಕು ಎಂದು ಪ್ರತಿಯೊಬ್ಬರೂ
ಅಂದುಕೊಳ್ಳುತ್ತಿದ್ದರು.

ಪೊಳ್ಳುಪ್ರತಿಷ್ಠೆಗೆ ತ್ವಚೆಯ ಅಂದ ಮತ್ತು ಮೆರುಗು ಮುಖ್ಯವಾದ ಒಂದು ಮಾನದಂಡವಾಗಿತ್ತು. ಆ ಸಾಮಾಜಿಕ ಪರಿಸ್ಥಿತಿಯನ್ನು ಆಂಡ್ರ್ಯೂ ಪಿಯರ‍್ಸ್ ಸೂಕ್ಷ್ಮವಾಗಿ
ಗಮನಿಸಿದ್ದನು. ಎಂತಹ ಚರ್ಮವನ್ನೂ ಲಕಲಕ ಹೊಳೆಯುವಂತೆ ಮಾಡುವ ಒಂದು ಸಾಬೂನನ್ನು ತಯಾರಿಸುವ ಪಣತೊಟ್ಟನು. ಸತತ ಪ್ರಯೋಗ ಪ್ರಯತ್ನ ಗಳು ಕೈಗೂಡಿ ಕೊನೆಗೂ ಒಂದು ಫಾರ್ಮುಲಾವನ್ನು ಕಂಡು ಕೊಂಡನು. ಸೋಪ್ ತಯಾರಿಕೆಯ ವೇಳೆ ಅದರ ಬೇಸ್ ಮಿಶ್ರಣವನ್ನು ಪೂರ್ಣವಾಗಿ ಕಶ್ಮಲರಹಿತ ವನ್ನಾಗಿ ಮಾಡಿ ಮತ್ತಷ್ಟು ಸಂಸ್ಕರಿಸಿ, ಆಮೇಲೆ ಅದಕ್ಕೆ ಹೂಗಳ ಸುಗಂಧದ್ರವ್ಯ ಸೇರಿಸಿ ಹಸನುಗೊಳಿಸಿದನು. ಹಾಗೆ ಉತ್ಕೃಷ್ಟ ಗುಣಮಟ್ಟದ ಮತ್ತು ನೋಡಲಿಕ್ಕೆ ಪಾರದರ್ಶಕವಾದ ಸಾಬೂನಿನ ಬಿಲ್ಲೆ ಆಂಡ್ರ್ಯೂನ ಸೆಲೂನ್‌ನಲ್ಲೇ ತಯಾರಾಯಿತು; ಆ ರಸವಿದ್ಯೆ ಅವನಿಗೆ ಕ್ಷಣಾರ್ಧದಲ್ಲೇ ಸಿದ್ಧಿಸಿತು; ಅದೇ ಫಾರ್ಮುಲಾವನ್ನು ಇಂದಿಗೂ ಉಪಯೋಗಿಸಿಕೊಂಡು ಬಂದಿರುವ ‘ಪಿಯರ‍್ಸ್ ಸೋಪ್’ ಜನ್ಮತಾಳಿತು!

ಆದರೆ ಆಂಡ್ರ್ಯೂ ಮಾತ್ರ ಹೊಟ್ಟೆಪಾಡಿಗಾಗಿ ತನ್ನ ಕ್ಷೌರಿಕವೃತ್ತಿಯನ್ನೇ ಮುಂದುವರೆಸಿದನು. ಬಹುಶಃ ಅದು ತನ್ನ ಕುಲಕಸುಬು, ಬಿಟ್ಟುಬಿಡಬಾರದು ಎಂಬ ಕಳಕಳಿ ಆತನಲ್ಲಿತ್ತು. ಹಾಗಾಗಿ ಸಾಬೂನು ತಯಾರಿಕೆಯ ಜವಾಬ್ದಾರಿಯನ್ನು ತನ್ನ ಮಗ ಫ್ರಾನ್ಸಿಸ್ ಪಿಯರ‍್ಸ್‌ನಿಗೆ ವಹಿಸಿಕೊಟ್ಟನು. ಜೆರ್ರಾಡ್ ಸ್ಟ್ರೀಟ್‌ನಿಂದ ಸ್ಥಳಾಂತರ ಗೊಂಡು ಆಕ್ಸ್ಫರ್ಡ್ ಸ್ಟ್ರೀಟ್ ಎದುರಿನ ಹೊಸಜಾಗದಲ್ಲಿ ಸೋಪ್ ಫ್ಯಾಕ್ಟರಿ ಸ್ಥಾಪನೆಯಾಯಿತು. ಮೊದಲಿಂದಲೂ ವ್ಯಾಪಾರ ಚೆನ್ನಾಗಿಯೇ ಇತ್ತು. ಆಂಡ್ರ್ಯೂ ನಿವೃತ್ತನಾದ ಮೇಲೆ ಸೋಪ್ ತಯಾರಿಕಾ ಘಟಕಕ್ಕೆ ಫ್ರಾನ್ಸಿಸ್ ಪಿಯರ‍್ಸ್ ಸಂಪೂರ್ಣ ವಾರಸುದಾರನಾದನು. ಅವನು ಗುಣಮಟ್ಟಕ್ಕೆ ಇನ್ನಿಲ್ಲದ ಮಹತ್ವ ಕೊಡುವವನು, ಆದ್ದರಿಂದ ಸೋಪಿನ ಬೆಲೆಯೂ ಸ್ವಲ್ಪ ಜಾಸ್ತಿಯೇ ಇತ್ತು. ಆ ಕಾರಣದಿಂದಲೇ ಆಗ ಪಿಯರ‍್ಸ್ ಸೋಪಿಗೆ ಸೀಮಿತ ಮಾರುಕಟ್ಟೆಯಿತ್ತು.

ಶ್ರೀಮಂತ ವರ್ಗದವರು ಮಾತ್ರ ಪಿಯರ‍್ಸ್ ಬಳಸುವ ಪರಮೋಚ್ಚರು ಎಂಬ ಅಲಿಖಿತ ಕಟ್ಟಳೆಯಿತ್ತು. ಹಾಗೆ ನೋಡಿದರೆ ಪಿಯರ‍್ಸ್ ವ್ಯಾಪಾರಕ್ಕೆ ಹೇಳಿಕೊಳ್ಳುವಂಥ ಜಾಹೀರಾತಾಗಲೀ ಉಚಿತ ಕೊಡುಗೆಯಂಥ ಆಮಿಷಗಳಾಗಲೀ ಏನೂ ಬೇಡವಾಗಿತ್ತು. ಹೆಚ್ಚೆಂದರೆ ಯಾವಾಗಲೋ ಒಮ್ಮೆ, ಪ್ರತಿಯೊಂದು ಸೋಪ್ ಪೆಟ್ಟಿಗೆಯ ಮೇಲೆ ಆಂಡ್ರ್ಯೂ ಪಿಯರ‍್ಸ್ ನ ಹಸ್ತಾಕ್ಷರದ ನಮೂನೆ ಮುದ್ರಿತವಾಗಿರುತ್ತಿತ್ತು. ಜನರಿಗೆ ಹಸ್ತಾಕ್ಷರವಿರುವ ಸೋಪ್ ಪೆಟ್ಟಿಗೆಗಳನ್ನು ಕೊಳ್ಳುವ ಕ್ರೇಜ್; ಫ್ರಾನ್ಸಿಸ್ ಪಿಯರ‍್ಸ್‌ಗೆ ಅದು ಮಾರ್ಕೆಟಿಂಗ್ ತಂತ್ರ. ಒಟ್ಟಿನಲ್ಲಿ ಶ್ರೀಮಂತವರ್ಗದ ನೆಚ್ಚಿನ ಸೋಪು ಎಂದು ಮಾರುಕಟ್ಟೆಯಲ್ಲಿ ಪಿಯರ್ಸ್ ಹೆಸರಾಗಿತ್ತು.
ಕ್ರಮೇಣ ಪಿಯರ‍್ಸ್ ಸೋಪಿಗೆ ಪ್ರತಿಸ್ಪಽ ಉತ್ಪನ್ನಗಳು ಬರತೊಡಗಿದವು.

ಮಧ್ಯಮವರ್ಗದವರೂ ದುಬಾರಿ ಸೋಪ್ ಖರೀದಿಸುವ ತಾಕತ್ತುಳ್ಳವರಾದರು. ತನ್ನ ಉದ್ಯಮವನ್ನು ಬೆಳೆಸದಿದ್ದರೆ ಕೊಂಪೆ ಸೇರುತ್ತದೆಂದು ಫ್ರಾನ್ಸಿಸ್‌ಗೆ ಮನವರಿಕೆ ಆಗತೊಡಗಿತು. ಲಂಡನ್‌ನ ರಸ್ಸೆಲ್‌ಸ್ಟ್ರೀಟ್‌ನಲ್ಲೊಂದು ಅಂಗಡಿ ಆರಂಭವಾಯಿತು. ೧೮೬೨ರ ಹೊತ್ತಿಗೆ ಸೋಪ್ ತಯಾರಿಕೆಯ ಹೊಸ ಘಟಕವನ್ನು ಐಲ್‌ವರ್ತ್ ಎಂಬಲ್ಲಿ ತೆರೆದ ಫ್ರಾನ್ಸಿಸ್, ಆ ಘಟಕಕ್ಕೆ ತನ್ನ ಮಗನನ್ನು ಉತ್ತರಾಧಿಕಾರಿಯಾಗಿಸಿದನು. ಅವನ ಹೆಸರು ಸಹ ಆಂಡ್ರ್ಯೂ ಎಂದೇ ಇತ್ತು. ಅಜ್ಜನ ಹೆಸರನ್ನೇ ಮೊಮ್ಮಗನಿಗೆ ಇಡುವುದು ನಮ್ಮಲ್ಲಿಯೂ ಇರುವ ಸಂಪ್ರದಾಯವೇ ತಾನೆ? ಅಂತೂ ಮಾರುಕಟ್ಟೆಯಲ್ಲಿ ಈಸಬೇಕು ಇದ್ದು ಜೈಸಬೇಕು… ಎಂಬಂತೆ ಫ್ರಾನ್ಸಿಸ್ ಸಾಕಷ್ಟು ಶ್ರಮಪಟ್ಟನು.

ಆ ನಿರ್ಣಾಯಕ ಘಟ್ಟದಲ್ಲಿ ರಂಗಪ್ರವೇಶ ಮಾಡಿದವನೇ ಥಾಮಸ್ ಜೆ. ಬೆರ್ರಾಟ್ ಎನ್ನುವ ಯುವಕ. ಆತ ಫ್ರಾನ್ಸಿಸ್ ಪಿಯರ‍್ಸ್‌ನ ಅಳಿಯ. ಅಲ್ಲ, ಮಗಳ ಗಂಡ! ಕುಶಾಗ್ರಮತಿ, ಛಲವಾದಿ, ಸಾಹಸಿಗ ಮತ್ತು ಸಂಪನ್ಮೂಲ ವ್ಯಕ್ತಿ. ಪಿಯರ‍್ಸ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗಗಳಿಗೆ ಹೊಸಚೈತನ್ಯದ ಬಿರುಗಾಳಿ ತಂದ ಬಿಸಿರಕ್ತದವನು. ಉತ್ಪನ್ನ ಕೊಂಚ ದುಬಾರಿಯಾದರೂ ಜಾಹೀರಾತುಗಳ ಮೂಲಕ ವ್ಯಾಪಕ ಪ್ರಚಾರ ಅವನ ಮೂಲಭೂತ ತತ್ತ . ಆ ಪ್ರಚಾರತಂತ್ರಗಳೋ
ಒಂದೊಂದೂ ಅಭೂತಪೂರ್ವ ಮತ್ತು ಅನೂಹ್ಯ. ಅಲ್ಲಿಯವರೆಗೆ ಯಾರೂ ಮಾಡದಿದ್ದ ಪ್ರಯೋಗಗಳನ್ನು ಬೆರ್ರಾಟ್ ಮಾಡಿದ್ದನು. ಅಷ್ಟೊಂದು ರಿಸ್ಕ್ ತೆಗೆದು ಕೊಂಡು ಜುಗಾರಿ ವ್ಯವಹಾರ ಮಾಡಬೇಕಾದ್ದನ್ನು ನೋಡಿ ಕೆಲವೊಮ್ಮೆ ಸ್ವತಃ ಫ್ರಾನ್ಸಿಸ್ಸನಿಗೇ ತಲೆಬಿಸಿ ಆಗುತ್ತಿತ್ತು. ಕೊನೆಗೂ ಅವನು ಪಿಯರ‍್ಸ್ ಉದ್ಯಮದಿಂದ ತನ್ನೆಲ್ಲ ಬಂಡವಾಳವನ್ನು ಹಿಂತೆಗೆದುಕೊಂಡು ನಾಲ್ಕು ಸಾವಿರ ಪೌಂಡುಗಳನ್ನಷ್ಟೇ ಮಗ ಆಂಡ್ರ್ಯೂ ಮತ್ತು ಅಳಿಯ ಬೆರ್ರಾಟ್‌ರಿಗೆ ಸಾಲರೂಪದಲ್ಲಿ
ಉಳಿಸಿ ಉದ್ಯಮದ ನೊಗವನ್ನು ಅವರಿಬ್ಬರ ಹೆಗಲಿಗೆ ವರ್ಗಾಯಿಸಿ ನಿವೃತ್ತನಾದನು.

ಅವರಿಬ್ಬರೂ ಸೇರಿ ಏನಾದರೂ ಮಾಡಿಕೊಳ್ಳಲಿ ಎಂದು ನಿಟ್ಟುಸಿರಿಟ್ಟನು. ಬೆರ್ರಾಟ್ ತನ್ನ ಚಾಣಾಕ್ಷತನವನ್ನೆಲ್ಲ ಉಪಯೋಗಿಸಿ ಹೊಸಹೊಸ ಮಾರ್ಕೆಟಿಂಗ್ ವಿಧಾನಗಳನ್ನು ಅಳವಡಿಸಿ ಕೊಂಡನು. ಮಿಲಿಯಗಟ್ಟಲೆ ಫ್ರೆಂಚ್ ಸೆಂಟೈನ್ ನಾಣ್ಯಗಳನ್ನು ತರಿಸಿ ಅವುಗಳ ಮೇಲೆ ‘ಪಿಯರ‍್ಸ್’ ಎಂಬ ಮುದ್ರೆಯೊತ್ತಿ ಚಲಾವಣೆಗೆ ತಂದನು (ಆಗ ಬ್ರಿಟನ್‌ನಲ್ಲಿ ಪೆನ್ನಿ ಮತ್ತು ಸೆಂಟೈನ್ ನಾಣ್ಯಗಳು ಸಮಬೆಲೆಯವು ಆಗಿದ್ದವು. ನಾಣ್ಯಗಳ ಮೇಲೆ ಆ ರೀತಿ ಖಾಸಗಿ ಜಾಹೀರಾತು ಮುದ್ರಿಸುವುದಕ್ಕೆ
ಕಾನೂನಿನ ಸಮ್ಮತಿಯಿತ್ತು). ಬ್ರಿಟನ್‌ನ ಪ್ರಸಿದ್ಧ ವೈದ್ಯರಿಂದ, ಚರ್ಮತಜ್ಞ ರಿಂದ, ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರಿಂದ ಪಿಯರ‍್ಸ್ ಸೋಪ್‌ನ ಶಿಫಾರಸು ಮಾಡಿಸಿದನು. ಪತ್ರಿಕೆಗಳಲ್ಲಿ ಜಾಹೀರಾತುಗಳು, ಕರಪತ್ರಗಳು, ಪೋಸ್ಟರ್‌ಗಳು- ಹೀಗೆ ಸಾಂಪ್ರದಾಯಿಕ ವಿಧಾನಗಳನ್ನೂ ಅನುಸರಿಸಿದನು. ಯುರೋಪ್‌ನ ಪ್ರಖ್ಯಾತ ನಟ-ನಟಿಯರು ಪಿಯರ‍್ಸ್ ಸೋಪಿನ ರೂಪದರ್ಶಿಗಳಾದರು.

ಸಂಭಾವನೆಯ ದೊಡ್ಡ ಗಂಟು ಬರುತ್ತದಷ್ಟೇ ಅಲ್ಲ, ತಮಗೆ ಒಳ್ಳೆಯ ಪ್ರಚಾರವೂ ಸಿಗುತ್ತದೆ ಎಂದುಕೊಂಡು ಆ ರೂಪದರ್ಶಿಗಳೆಲ್ಲ ಪಿಯರ‍್ಸ್ ಸಾಬೂನಿಗೆ ಧಾರಾಳವಾಗಿ ರೂಪ ದರ್ಶಿಸಿದರು. ಆಗಿನ ಪ್ರಖ್ಯಾತ ಆಂಗ್ಲ ನಟಿ ಲಿಲ್ಲಿ ಲ್ಯಾಂಗ್‌ಟ್ರಿ ೧೮೮೨ರಲ್ಲಿ ಪಿಯರ‍್ಸ್ ಸೋಪಿನ ಪೋಸ್ಟರ್ ಗರ್ಲ್ ಆದಾಗ ಗೃಹಬಳಕೆಯ
ಉತ್ಪನ್ನವೊಂದನ್ನು ಅನುಮೋದಿಸಿದ ಮೊತ್ತಮೊದಲ ಸೆಲೆಬ್ರಿಟಿ ಬ ಕೀರ್ತಿ ಆಕೆಯದಾಯಿತು. ಸೌಂದರ್ಯವರ್ಧಕ ಉತ್ಪನ್ನ ಎಂದು ಜನರಲ್ಲಿ ಭ್ರಮೆ ಹುಟ್ಟಿಸಲಿಕ್ಕೆ ಸೌಂದರ್ಯದ ಖನಿಗಳಿಗಿಂತ ಹೆಚ್ಚು ಸೂಕ್ತ ಬೇರೆ ಯಾರು ಬೇಕು!

ಯುರೋಪ್‌ನ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಬಳಿಕ ಅಮೆರಿಕದತ್ತ ದೃಷ್ಟಿಯಿಟ್ಟ ಬೆರ್ರಾಟ್, ತನ್ನ ಸೋಪಿನ ಶಿಫಾರಸಿಗೆ ಅಮೆರಿಕದಲ್ಲಿ ಆಗ ಅತ್ಯಂತ ಪ್ರಭಾವಿ ಧರ್ಮಗುರುವಾಗಿದ್ದ ಹೆನ್ರಿ ವಾರ್ಡ್ ಬೀಚರ್‌ನ ನೆರವು ಪಡೆದನು. ಆ ಪಾದ್ರಿಯಂತೂ ‘ಶುಚಿತ್ವವು ದೈವಿಕತೆಗೆ ಸೋಪಾನ, ಮತ್ತು ಅದಕ್ಕೆ ಪಿಯರ‍್ಸ್ ಸುಲಭಸಾಧನ…’ ಎಂದು ಕಮಾಂಡ್‌ಮೆಂಟ್ ಹೊರಡಿಸಿದನು! ಅದೇ ಇಛಿZಜ್ಞಿಛಿoo ಜಿo ಛ್ಡಿಠಿ ಠಿಟ ಎಟbಜ್ಞಿಛಿoo ಎನ್ನುವ ಮಹಾನ್ ಪದಪುಂಜ! ‘ನ್ಯೂಯಾರ್ಕ್ ಹೆರಾಲ್ಡ್’ ಪತ್ರಿಕೆಯ ಮುಖಪುಟದಲ್ಲಿ ಪಿಯರ‍್ಸ್‌ನ ಜಾಹೀರಾತು ಎಲ್ಲರ ಗಮನ ಸೆಳೆಯಿತು. ಮುಂದೆ ‘ಟೈಮ್’ ಮ್ಯಾಗಜಿನ್‌ನಲ್ಲಿ ಜನನವಾರ್ತೆ ಪ್ರಕಟಿಸುವವರಿಗೆ ಉಚಿತ ಪಿಯರ‍್ಸ್ ಗಿಫ್ಟ್ ಹ್ಯಾಂಪರ್ ತಲುಪಿಸುವ ವ್ಯವಸ್ಥೆ ಮಾಡಿಸಿದನು ಬೆರ್ರಾಟ್. ಅಂತೂ ಪ್ರಚಾರಕಾರ್ಯದಲ್ಲಿ ಆತ ಯಾವ ‘ಕಲ್ಲನ್ನೂ ತಿರುಗಿಸದೇ’ ಇರಲಿಲ್ಲ.

ಅಷ್ಟು ಸಾಲದೆಂಬಂತೆ, ಸರ್ ಜಾನ್ ಎವರೆಟ್ ಮಿಲಾಯಿಸ್ ಎಂಬ ಪ್ರಖ್ಯಾತ ಬ್ರಿಟಿಷ್ ಚಿತ್ರಕಾರನ ಕಲಾಕೃತಿ ‘ಬಬಲ್ಸ್’ (ಕಲಾವಿದನ ಮೊಮ್ಮಗು ಸಾಬೂನಿನ ಗುಳ್ಳೆಗಳನ್ನು ದೃಷ್ಟಿಸುತ್ತ ಕುಳಿತಿರುವ ಚಿತ್ರ)ವನ್ನು ಹೇಗೋ ಪುಸಲಾಯಿಸಿ ತಂದ ಬೆರ್ರಾಟ್ ಅದನ್ನು ಪಿಯರ‍್ಸ್ ಸೋಪಿನ ಜಾಹೀರಾತಿಗೆ ಉಪಯೋಗಿಸಿದನು. ಕಲಾಪ್ರಕಾರವೊಂದನ್ನು ಜಾಹೀರಾತಿಗೆ ಬಳಸಿದ್ದಕ್ಕೆ ಸಾಕಷ್ಟು ಛೀಮಾರಿಯನ್ನೂ ಹಾಕಿಸಿಕೊಂಡನು. ಹಾಗೆಯೇ ಪಿಯರ‍್ಸ್ ಸೋಪಿನ ಕೆಲವು ಜಾಹೀರಾತುಗಳು
ವರ್ಣಭೇದ ನೀತಿಯನ್ನು ಢಾಳಾಗಿ ತೋರಿಸುತ್ತಿವೆ, ಜನಾಂಗೀಯ ನಿಂದನೆ ಮಾಡುತ್ತಿವೆ ಎಂದು ಕೂಡ ಗುಲ್ಲೆದ್ದಿತ್ತು.

ಒಂದು ಜಾಹೀರಾತಿನಲ್ಲಂತೂ ಸ್ನಾನದ ತೊಟ್ಟಿಯಲ್ಲಿ ಕಪ್ಪು ಬಣ್ಣದ ಮಗು ಪಿಯರ‍್ಸ್ ಸಾಬೂನು ಹಚ್ಚಿಕೊಂಡು ಜಳಕ ಮಾಡಿದಾಗ ಬಿಳಿ ಬಣ್ಣದ್ದಾಗುವ ಮ್ಯಾಜಿಕ್ ತೋರಿಸಲಾಗಿತ್ತು. ಈಗಿನ ಕಾಲದಲ್ಲಾದರೆ ಅಂತಹ ಜಾಹೀರಾತು ಕಾಣಿಸಿಕೊಳ್ಳಲಿಕ್ಕೇ ಸಾಧ್ಯವಿಲ್ಲ. ಆಗಲೂ ಅಷ್ಟಿಷ್ಟು ಪ್ರತಿರೋಧ ಇದ್ದೇ ಇರುತ್ತಿತ್ತೇನೋ. ಆದರೆ ಯಾವುದಕ್ಕೂ ಜಗ್ಗದ ಆ ‘ಅಸಾಧ್ಯ ಅಳಿಯ’ ಅದ್ಭುತ ಛಲವಾದಿಯಾಗಿ ವಿಶ್ವದ ಪ್ರತಿಯೊಂದು ದೇಶದಲ್ಲೂ ಪಿಯರ‍್ಸ್ ಸಾಬೂನನ್ನು ಪರಿಚಯಿಸಿದನು. ‘ಮಿಸ್ ಪಿಯರ‍್ಸ್’ ಸ್ಪರ್ಧೆಗಳನ್ನು ಏರ್ಪಡಿಸಿದನು. ೧೯ನೆಯ ಶತಮಾನದ ಕೊನೆಯ ವರ್ಷಗಳಲ್ಲಿ ‘ಪಿಯರ‍್ಸ್ ವಾರ್ಷಿಕ ಸಂಚಿಕೆ’ ಎಂಬ ಆಕರ್ಷಕ ಪುಸ್ತಕವನ್ನೂ
ಪ್ರಕಟಿಸಿದನು.

೧೯೧೪ರಲ್ಲಿ ಬೆರ್ರಾಟ್ ಅಸುನೀಗಿದಾಗ ಪತ್ರಿಕೆಗಳು, ಜಾಹೀರಾತು ಕಂಪನಿಗಳು ಭಾವಪೂರ್ಣ ಕಂಬನಿಗರೆದವು. ನೀವು ನಂಬುತ್ತೀರೋ ಇಲ್ಲವೋ ಪಿಯರ‍್ಸ್ ಸೋಪಿನ ಹಳೆಯ ಜಾಹೀರಾತುಗಳ ಪೇಂಟಿಂಗ್‌ಗಳಿಗೆ ಈಗಲೂ ಬೇಡಿಕೆ ಇದೆ! ಅವುಗಳನ್ನು ಕಲಾಕೃತಿಗಳಂತೆ, ಹಳೆಯ ದಿನಗಳ ಮಧುರಸ್ಮೃತಿಗಳಂತೆ ಜತನದಿಂದ ಇಟ್ಟುಕೊಳ್ಳುವವ ರಿದ್ದಾರೆ. ಗೂಗಲ್‌ನಲ್ಲಿ ಹುಡುಕಿ ನೋಡಿದರೆ ಸುಮಾರು ೧೯೨೦ರಲ್ಲಿ ಭಾರತದ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಜಾಹೀರಾತು ಕೂಡ ಸಿಗುತ್ತದೆ. ಸರೋವರದಲ್ಲಿರುವ ಒಂದು ಸುಂದರ ಕಮಲದಲ್ಲಿ ಲಕ್ಷ್ಮಿಯಂತೆ ಆಸೀನರಾದ ತಾಯಿ-ಮಗು ಜೋಡಿ.

PಛಿZo ಖಟZm Pಛಿ ಅo Seಛಿ ಔಟಠ್ಠಿo ಎಂದು ಅಕ್ಷರಗಳಲ್ಲಿ ಕೆಳಗೆ ಅಚ್ಚಾಗಿರುವುದು. ಗ್ರಾಹಕರು ಮನಸೋಲುವಂತೆ ಮಾಡುವುದು ಹೇಗೆಂಬುದಕ್ಕೆ ಮಾದರಿ.
ಆ ದೃಷ್ಟಿಯಿಂದ ನೋಡಿದರೆ ಈಗಿನ ಜಾಹೀರಾತು ತಂತ್ರಗಳೆಲ್ಲ ಒಂದಲ್ಲ ಒಂದು ವಿಧದಲ್ಲಿ ಬೆರ್ರಾಟ್‌ನ ಯೋಜನೆಗಳದೇ ಪ್ರತಿರೂಪಗಳು. ಮುದ್ದಾದ ಮಕ್ಕಳನ್ನು, ಪ್ರಾಣಿಗಳನ್ನು, ಹೂವುಗಳನ್ನು, ಹೂವಿನಂಥ ಸುಂದರಿಯರನ್ನು ಜಾಹೀರಾತುಗಳಲ್ಲಿ ಬಳಸುವ ಕ್ರಮ ಶುರುವಾದದ್ದು ಬೆರ್ರಾಟ್ ನಿಂದಲೇ. ಜಾಹೀರಾತಿನ ಚಿತ್ರಗಳು ಕಾಲಕಾಲಕ್ಕೆ ಬದಲಾಗುತ್ತಿದ್ದರೂ IZಠ್ಚಿeಛಿoo ಟ್ಟ ಠಿeಛಿ ಟಞmಛ್ಡಿಜಿಟ್ಞ, ಎಟಟb ಞಟ್ಟ್ಞಜ್ಞಿಜ! ಏZqಛಿ qsಟ್ಠ oಛಿb PಛಿZo ಖಟZm?
ಮುಂತಾದ ಸರಳ ಆದರೆ ತತ್‌ಕ್ಷಣವೇ ಮನಸ್ಸಿನಲ್ಲಿ ಅಚ್ಚಾಗುವ ಜಿಂಗಲ್‌ಗಳು, ಸ್ಲೋಗನ್‌ಗಳು ಪಿಯರ‍್ಸ್ ಸೋಪನ್ನು ಹೊಸ ಸಹಸ್ರಮಾನಕ್ಕೂ ಕರೆದುಕೊಂಡುಬಂದಿವೆ. ೨೦ನೆಯ ಶತಮಾನ ಆರಂ ವಾದಾಗಿಂದ ಪಿಯರ‍್ಸ್ ಸೋಪ್ ಉತ್ಪಾದನೆ ಮತ್ತು ವಿತರಣೆಯ ಹಕ್ಕು ಯುನಿಲಿವರ್ (ಭಾರತದಲ್ಲಿ ಹಿಂದುಸ್ಥಾನ್ ಯುನಿಲಿವರ್) ಕಂಪನಿಯ ಪಾಲಾಗಿದೆ.

ಜಾಹೀರಾತುಗಳ ವಿಷಯದಲ್ಲಿ ಈಗಲೂ ಅದು ಬೆರ್ರಾಟ್‌ನ ಹೆಜ್ಜೆಗಳನ್ನೇ ಅನುಸರಿಸಿದೆ. ಪಿಯರ‍್ಸ್ ಸಾಬೂನಿನ ಘಮ ಎಲ್ಲೆಡೆಗೂ ಪಸರಿಸಿದೆ. ಆರಂಭದಲ್ಲಿದ್ದ ಸಹಜ ಕಂದು ಬಣ್ಣದಲ್ಲಷ್ಟೇ ಅಲ್ಲದೇ ಈಗ ಪುದೀನಾ ಸ್ವಾದವುಳ್ಳ ನೀಲಿ ಬಣ್ಣ, ನಿಂಬೆಯ ಸ್ವಾದವುಳ್ಳ ಹಸುರು ಬಣ್ಣ ಮುಂತಾಗಿ ವಿವಿಧ ಬಣ್ಣಗಳಲ್ಲಿ ಪಿಯರ‍್ಸ್ ಸೋಪ್ ಸಿಗುತ್ತದೆ. ಅವು ಹೇಗಿರುತ್ತವೆಂದು ನೋಡಲಿಕ್ಕೆ ನಾನೂ ಒಂದೆರಡು ಸರ್ತಿ ತಂದು ಬಳಸಿದ್ದಿದೆ. ಚೆನ್ನಾಗಿಲ್ಲವೆಂದು ತಿರಸ್ಕರಿಸಿದ್ದಿದೆ. ಈಗ ಕಂದು ಬಣ್ಣದ್ದಕ್ಕೂ ಮೊದಲಿದ್ದ ಖದರಿಲ್ಲ. ಹಳೇ ಕಾಲದ ಒರಿಜಿನಲ್ ಕಂದು ಬಣ್ಣದ ಪಿಯರ‍್ಸ್ ಸೋಪ್‌ನ ಪ್ಯಾಕೇಜಿಂಗ್, ಪಾರದರ್ಶಕವಾದ ಆ ಬಿಲ್ಲೆಯ ಆಕಾರ, ಅದು ಸೂಸುತ್ತಿದ್ದ ಪರಿಮಳ, ಒದ್ದೆ ಮೈಗೆ ಉಜ್ಜಿಕೊಂಡಾಗ ಬರುತ್ತಿದ್ದ ನೊರೆ, ಮತ್ತು ಆ ಒಂದು ವಿಶೇಷ ಅನುಭವವು ಹೊರಡಿಸುವ ನೆನಪುಗಳ ಮೆರವಣಿಗೆ… ಆಹಾ!
ಅದಕ್ಕೆ ಬೇರೆ ಯಾವುದೂ ಸಾಟಿಯಾಗುವುದು ಬಿಡಿ, ಹತ್ತಿರವೂ ಸುಳಿಯಲಾರದು.