ಸಾಯಿನಂದಾ ಚಿಟ್ಪಾಡಿ
ಒಂದಂತೂ ನಿಜ ಕಣೇ, ನಿನ್ನೊೊಂದಿಗೆ ಕಳೆದ ಕ್ಷಣ ಕ್ಷಣವನ್ನೂ ಅಷ್ಟು ಸುಲಭವಾಗಿ ನನ್ನಿಂದ ಮರೆಯಲು ಸಾಧ್ಯನಾ? ಸಾಧ್ಯ ವಾದರೆ ನೀನೇ ಉತ್ತರಿಸಿ ಬಿಡು. ನಿನ್ನ ಸಿರಿವಂತಿಕೆಯ ಮುಂದೆ ನನ್ನದು ಏನೂ ಅಲ್ಲ. ಆದರೆ ನನ್ನ ಹೃದಯ ಸಿರಿವಂತಿಕೆಗೆ ಬೆಲೆ ಕಟ್ಟಲಾರೆ.
ಬೆಳ್ಳಂಬೆಳ್ಳಗೆ ನೀನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದೆ. ಏನೆಂದು ಕುತೂಹಲದಿಂದ ನೋಡಿದರೆ ನಿನ್ನ ಮದುವೆಯ ಲಗ್ನ ಪತ್ರಿಕೆ! ಖುಷಿ ಪಡಬೇಕೊ, ದುಃಖಿಸಬೇಕೋ ತಿಳಿಯಲಿಲ್ಲ. ಆವಾಗಲೇ ಗೊತ್ತಾಗಿದ್ದು, ನೀನು ಎಂದೆಂದಿಗೂ ನನ್ನ ನೆನಪಿಗೆ ಎಳ್ಳು ನೀರು ಬಿಟ್ಟಿದ್ದೆ ಎಂದು. ಒಂದು ದಿನ ದಿಢೀರನೆ ಪ್ರತ್ಯೇಕ್ಷವಾಗಿ ಲಗ್ನ ಪತ್ರಿಕೆ ಕೊಟ್ಟು ಮದುವೆಗೆ ಆಹ್ವಾನಿಸಿ, ಎಲ್ಲ ಹುಡುಗಿಯರ ತರ ಹೇಳೋ ಮಾತುಗಳನ್ನೇ ಹೇಳಿದ್ದೆೆ. ಅಪ್ಪನಿಗೆ ನೋವು ಕೋಡೋಕೆ ಇಷ್ಟ ಇಲ್ಲ.
ಹಾಗಾಗಿ ಈ ಮದ್ವೆಗೆ ಒಪ್ಪಿಕೊಳ್ಳೋಬೇಕಾಯ್ತು. ನಿನಗೆ ನನಗಿಂತ ಚೆನ್ನಾಗಿರೋ ಹುಡುಗಿ ಸಿಗ್ತಾಳೇ. ನನ್ನ ಮರೆತು ಬಿಡೋ. ನಿನ್ನ ಮಾತು ಕೇಳಿಯೇ ಕಿವಿ ತಂಪಾಯ್ತು ಹೇಳಬೇಕಿತ್ತೋ ನಾನು ನಾ ಕಾಣೇ. ನಿನಗೆ ನೆನಪಿದೆಯಾ, ನೀನು ಆವಾಗ ಇಂಜಿನಿಯರಿಂಗ್ ಓದ್ತಾ ಇದ್ದೆ. ನಾನೇನು ನಿನ್ನಷ್ಟು ಓದಿದವನಲ್ಲಾ. ಆದರೆ ಬದುಕಿನ ಅನುಭವ ಚಿಕ್ಕ ವಯಸ್ಸಿನಲ್ಲಿಯೇ ಬಹಳಷ್ಟು ಕಲಿಸಿದ್ದು ಸುಳ್ಳಲ್ಲ. ಹೌದು ಕಣೇ, ಅಪ್ಪನಿಗೆ ನೀನು ಮುದ್ದಿನ ಮಗಳು, ನಿನ್ನ ಅಪ್ಪ ಮೊದಲೇ ಶಿಸ್ತಿನ ಸಿಪಾಯಿ. ಕಣ್ಣು ತಪ್ಪಿಸಿ ನಾವಿಬ್ಬರೂ ಮೀಟ್ ಆಗುವುದು ಮಾಮೂಲಾಗಿತ್ತು. ನಿನ್ನ ಕಾಲೇಜ್ ಡೇ ಫಂಕ್ಷನ್‌ಗೆ ಬರುವುದು, ರಾತ್ರಿಯ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯುತ್ತಿದ್ದರೆ ನಾವಿಬ್ಬರೂ ಅಲ್ಲಿನ ಮರವೊಂದರ ಬೇರಿನ ಮೇಲೆ ಕುಳಿತು ಮಾತನಾಡುತ್ತಾ ಕಾಲ ಕಳೆದದ್ದು, ದೂರದ ಚಾ ಅಂಗಡಿಯಲ್ಲಿ ಆ ರಾತ್ರಿಯ ಚಳಿಗೆ ಸಿಹಿ ಸಿಹಿ ಚಹ ಕುಡಿದದ್ದು, ಹುರಿದ ನೆಲಗಡಲೆ ಬೀಜ ತಿನ್ನುತ್ತಾ ಇಬ್ಬರೂ ಪರಸ್ಪರ ಅನು ಭವ ಹಂಚಿಕೊಂಡದ್ದು!
ಹೀಗೆ ಎಲ್ಲವೂ ನನ್ನ ಬದುಕಿನ ದಿನಚರಿ ಹೋಗಿತ್ತು. ನಿನ್ನ ಕಾಲೇಜಿಗೆ ನಮ್ಮೂರಿನಿಂದ ಮೂರು ಗಂಟೆಯ ದಾರಿ. ಆವಾಗೆಲ್ಲಾ ನೀನೇ ಬದುಕು, ನೀನೇ ಭರವಸೆಯ ಸೆಲೆ ನನ್ನ ಪಾಲಿಗೆ. ಅದಕ್ಕೆ ದಿನಾಲೂ ನೀನು ಕಾಲೇಜಿನಿಂದ ಹೊರಡುವಾಗ ನಾನು ಬಸ್ ನಿಲ್ದಾಣದಲ್ಲಿ ನಿನಗಾಗಿ ಬಂದು ಕಾದು ಕುಳಿತಿರುತ್ತಿದ್ದೆ. ಆಮೇಲೆ ಸುಮಾರು ಒಂದು ಗಂಟೆ ಮಾತು ಹರಟೆ, ಹುಸಿ ಮುನಿಸು. ಬರೋಬ್ಬರೀ ನಾಲ್ಕು ವರ್ಷಗಳು! ನನಗೆ ದಿನಕ್ಕೆ ಆರು ಗಂಟೆ ಬಸ್ಸಿನಲ್ಲಿ ಪಯಣ. ನಿನಗಾಗಿ ಮಾಡುತ್ತಿದ್ದ ತರಲೆ ತುಂಟಾಟಗಳು
ಕಷ್ಟನೇ ಅನಿಸುತ್ತಿರಲಿಲ್ಲ.
ನಿನ್ನದು ಇಂಜಿನಿಯರಿಂಗ್ ಓದು ಮುಗಿಯುವಷ್ಟರಲ್ಲಿ ನನ್ನ ಜೊತೆಗಿನ ಮಾತು ವಿರಳವಾಗುತ್ತಾ ಬಂತು. ಅಂತೂ ನಿನಗೆ ಒಳ್ಳೆಯ ಉದ್ಯೋಗವೂ ಸಿಕ್ಕಿತ್ತು. ದೂರದ ಮಾಯಾನಗರಿಗೆ ಉದ್ಯೋಗಕ್ಕೆಂದು ತೆರಳಿದೆ. ಆಮೇಲೆ ನಡೆದೆಲ್ಲಾ ನಿನಗೆ ಗೊತ್ತಲ್ವಾ. ಒಂದಂತೂ ನಿಜ ಕಣೇ, ನಿನ್ನೊಂದಿಗೆ ಕಳೆದ ಕ್ಷಣ ಕ್ಷಣವನ್ನೂ ಅಷ್ಟು ಸುಲಭವಾಗಿ ನನ್ನಿಂದ ಮರೆಯಲು ಸಾಧ್ಯನಾ? ಸಾಧ್ಯ ವಾದರೆ ನೀನೇ ಉತ್ತರಿಸಿ ಬಿಡು. ನಿನ್ನ ಸಿರಿವಂತಿಕೆಯ ಮುಂದೆ ನನ್ನದು ಏನೂ ಅಲ್ಲ.
ನಿಮ್ಮ ಅಪ್ಪನಿಗೂ, ಮಗಳನ್ನು ದುಡ್ಡಿರೋನಿಗೆ, ದೊಡ್ಡ ಕೆಲಸ ಇರೋನಿಗೆ, ನಗರದಲ್ಲಿ ಸ್ವಂತ ಮನೆ ಇರೋನಿಗೆ ಕೊಟ್ಟು ಮದ್ವೆ ಮಾಡಬೇಕು ಎಂಬ ಹೆಬ್ಬಯಕೆ. ಹೃದಯ ಶ್ರೀಮಂತಿಕೆ ನನಗೆ ನಿನ್ನ ಅಪ್ಪನಷ್ಟೂ ಶ್ರೀಮಂತಿಕೆಯಿಲ್ಲದಿದ್ದರೂ, ಹೃದಯ ಶ್ರೀಮಂತಿಕೆ ಇತ್ತು, ಈಗಲೂ ಇದೆ. ಯಾರದರೂ ಸಹಾಯ ಅಂತ ಬಂದ್ರೆ ಹಿಂದೆ ಮುಂದೆ ನೋಡದೇ ಸಹಾಯ ಮಾಡೋ ಮನಸ್ಸು ನನ್ನಲ್ಲಿತ್ತು. ಆದರೇನು ಮಾಡಲಿ, ನಿನ್ನ ಅಪ್ಪ ಬಯಸೋ ದುಡ್ಡಿನ ಶ್ರೀಮಂತಿಕೆ, ಉನ್ನತ ಸಂಬಳ ತರುವ ಉದ್ಯೋಗದ ಶ್ರೀಮಂತಿಕೆ ನನ್ನಲ್ಲಿರಲಿಲ್ಲ.
ಇನ್ನೇನು? ಮದುಮಗಳಾಗಿ ಇನ್ನೊಬ್ಬನ ಕೈ ಹಿಡಿಯೋ ನಿನಗೆ ನಾನೇನೂ ಹೇಳೋದು! ಹ್ಯಾಪಿ ಮ್ಯಾರೀಡ್ ಲೈಫ್ ಹೇಳ
ಬೇಕಷ್ಟೇ. ನಿನ್ನಪ್ಪನ ಇಷ್ಟದಂತೆ, ನಿನ್ನ ಇಷ್ಟದಂತೆ ನಿನ್ನ ಮದುವೆಯಾಗಲಿ, ನಿನ್ನ ಮನಸ್ಸಿನಲ್ಲಿ ಸಂತೋಷ ತುಂಬಲಿ. ಏಕೆಂದರೆ, ನೀನು ನನ್ನ ಬಾಳಿನಲ್ಲಿ ಸಂತಸ ತಂದುಕೊಟ್ಟವಳು. ನೀನು ಮುಂದಿನ ದಿನಗಳಲ್ಲಿ ಸಂತೋಷವಾಗಿದ್ದರೆ, ನೆಮ್ಮದಿಯ
ಬದುಕನ್ನು ಕಟ್ಟಿಕೊಂಡರೆ ನನಗೆ ಬೇಸರ ಖಂಡಿತಾ ಇಲ್ಲ, ನೀನು ಸಂತಸಪಟ್ಟರೆ ನಾನು ಸಂತಸಪಟ್ಟಂತೆ ಅಲ್ಲವೆ? ನನ್ನ ನೋವೇನಿದ್ದರೂ, ನನ್ನ ಮನದ ಬೇಗುದಿ ಏನಿದ್ದರೂ, ನಾನೇ ನುಂಗಿಕೊಳ್ಳುತ್ತೇನೆ. ನಿನ್ನ ಸಂತೋಷಕ್ಕೆ ನಾನು ಅಡ್ಡ ಬರುವ ವನೇ ಅಲ್ಲ.
ಸುಖವಾಗಿರು, ನೆಮ್ಮದಿಯಿಂದ ಇರು, ಪ್ರೀತಿ ತುಂಬಿದ ಬಾಳನ್ನು ಕಟ್ಟಿಕೋ. ಇಷ್ಟೇ ನಾನು ನಿನಗೆ ಹಾರೈಸುವುದು. ಅದೇನೇ ಆದರೂ ನೀನು ನನ್ನ ಬದುಕಿನ ಸುಂದರ ಸ್ವಪ್ನ.