Monday, 25th November 2024

ತಾನಾರೆಂದು ತಿಳಿದೊಡೆ – 41

*ಕ್ಷಿತಿಜ್ ಬೀದರ್

ಹಾರ್ಮೋನಿಯಂ ನುಡಿಸುವವರು ಸದಾ ಅದರ ಸ್ವರ ಪಟ್ಟಿ ಮೇಲೆ ಕೈಯಾಡಿಸುತ್ತಾ ಅಭ್ಯಾಸ ಮಾಡುವುದನ್ನು ಯಾವತ್ತೂ ತಪ್ಪಿಸುವುದಿಲ್ಲ. ಪ್ರತಿಯೊಬ್ಬ ಕಲಾವಿದ ಇಂಥ ಅಭ್ಯಾಸ ಕ್ರಮದಲ್ಲಿ ತೊಡಗಿರುವುದನ್ನು ಅಲ್ಲಗೆಳೆಯಲಾಗದು. ಅವರು ಆಟಗಾರರಿರಬಹುದು, ಹಾಡುಗಾರರಿರಬಹುದು, ಸಂಗೀತಗಾರರಿರಬಹುದು. ಕಲೆಯ ಮೂಲ ತತ್ವದ ಬಗ್ಗೆ ನಿಗಾ ವಹಿಸಿದಾಗಲೇ ಅವರು ನಿಪುಣ ಕಲಾಕಾರರಾಗಿ ಕಾಣಬರುತ್ತಾರೆ.

ಇವರಂತೆಯೇ ಧ್ಯಾನಿಗಳು ಕೂಡ ತಮ್ಮ ಸಾಧನೆಯನ್ನು ನಿರಂತರವಾಗಿಡಬೇಕಾಗುತ್ತದೆ. ಹಾರ್ಮೋನಿಯಮ್ ಸಾಧನದಂತೆ ಧ್ಯಾನಿ ತನ್ನ ಇಂದ್ರಿಯಗಳನ್ನೇ ಸಾಧನ ವಸ್ತುವನ್ನಾಗಿ ತೆಗೆದುಕೊಳ್ಳಬೇಕಾಗುತ್ತದೆ. ‘ಬರದೇ ಬಾರಿಸಬೇಡ ತಂಬೂರಿ’ ಎಂದು ಶರೀಫರು ಹೇಳಿರುವುದು ದೇಹದ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸುವ ಬಗ್ಗೆ ಎನ್ನುವುದು ಎಷ್ಟೊಂದು ಅರ್ಥಗರ್ಭಿತವಾಗಿದೆ. ಶರೀರವನ್ನು ಅವರು ತಂಬೂರಿಗೆ ಹೋಲಿಸುತ್ತಾರೆ.

ಧ್ಯಾನವನ್ನು ನಿತ್ಯ ಜೀವನದಲ್ಲಿ ಬದುಕಿನ ಚಟುವಟಿಕೆಯೊಂದಿಗೆ ಜೋಡಿಸಿಕೊಳ್ಳಬಹುದು. ಕತ್ತಲ ಕೋಣೆಯಲ್ಲಿಯೇ ಒಂದೆಡೆ ಪಟ್ಟಾಗಿ ಕುಳಿತು ಧ್ಯಾನಾಸಕ್ತರಾಗಬೇಕಾಗಿಲ್ಲ. ವಾಯು ವಿಹಾರಕ್ಕೆ ನಡಿಗೆಯಲ್ಲಿ ಹೊರಟಾಗಲೂ ಧ್ಯಾನ ಮಾಡಬಹುದಾಗಿದೆ. ನಿರ್ಜನ ಪ್ರದೇಶದಲ್ಲಿ ನಡೆಯುವಾಗ ವ್ಯಾಯಾಮದೊಂದಿಗೆ ಧ್ಯಾನವು ಸೇರಿ ಎರಡು ರೀತಿಯ ಪ್ರಯೋಜನವಾಗುತ್ತದೆ.

ನಡಿಗೆ ಪ್ರಾರಂಭಿಸುವ ಮುನ್ನ ಒಂದು ಸ್ಥಳದಲ್ಲಿ ಕ್ಷಣ ಹೊತ್ತು ನಿಂತು, ಆರಾಮ ಭಂಗಿಯಲ್ಲಿ ಒಳಗೆ ಉಸಿರು ಎಳೆದುಕೊಳ್ಳು ವಾಗ ಒಂದು ಪಾದ ಮೇಲೆತ್ತಿಕೊಳ್ಳಬೇಕು. ಉಸಿರು ಬಿಡುವಾಗ ಪಾದದ ಬೆರಳುಗಳ ಮೇಲೆ ನಿಂತುಕೊಳ್ಳಬೇಕು. ಎರಡು ಕಾಲುಗಳ ಪಾದ ಎತ್ತುವಿಕೆ, ನೆಲಕ್ಕೆ ತಾಗುವಿಕೆ ಪುನರಾವರ್ತಿಸಿ ನಂತರ ನಿಧಾನಕ್ಕೆ ನಡಿಗೆ ಪ್ರಾರಂಭಿಸಬೇಕು. ತಲೆ ಸಡಿಲು ಬಿಟ್ಟು ಕುತ್ತಿಗೆ ನೇರವಾಗಿಟ್ಟು ಸಮತೋಲನ ಕಾಪಾಡಿಕೊಳ್ಳಬೇಕು. ಸಣ್ಣ ಹೆಜ್ಜೆಗಳ ನಡಿಗೆಯಾಗಿರಬೇಕು. ಜಾಗೃತಿಯಲ್ಲಿ ಕೈಗೊಳ್ಳುವ ಅಭ್ಯಾಸ ವಾಗಿರುವುದರಿಂದ ಸಮಗ್ರ ಸಂವೇದನೆಯಲ್ಲಿ ನಡಿಗೆಯ ಇಡೀ ಕಾಲು ಪಾದಗಳು ಪ್ರಬಲವಾಗಿರಬೇಕು. ಅವುಗಳ ಕ್ಷಮತೆ,
ಚಲನೆ ಪ್ರಕ್ರಿಯೆ ಗಮನಿಸುತ್ತಿರಬೇಕು.

ಪ್ರತಿ ಸಲವು ಪಾದ ನೆಲಕ್ಕೆ ಒತ್ತಿ ಎತ್ತಿ ನಡೆಯುವ ಸ್ಪರ್ಶಾನುಭವ ಮನಸ್ಸಿಗೆ ತೆಗೆದುಕೊಳ್ಳಬೇಕು. ನಡಿಗೆ ಕುಣಿತವಾಗಬಾರದು. ಪ್ರಾರಂಭಕ್ಕೆ ಇದು ಕಠಿಣವಾಗಬಹುದು. ನಮ್ಮ ಕಲ್ಪನೆ ಭಾವ ಛಾಯೆಯಲ್ಲಿ ಎಡವಬಹುದು. ನಿರಾಸೆ ಬೇಸರ ಮೂಡಬಹುದು.
ಅವು ಹಾದು ಹೋಗುವುದನ್ನು ಗಮನಿಸಿ ಚಿಂತನೆಗೆ ಸಂಘರ್ಷಕ್ಕೆ ಅವಕಾಶ ನೀಡಬಾರದು.

ಪ್ರತಿ ದಿನದ ಘಟನೆಯನ್ನು ಪರೀಕ್ಷಾ ದೃಷ್ಟಿಯಲ್ಲಿ ಅವಲೋಕಿಸಬೇಕು. ಅದು ನೀಡುವ ಅಚ್ಚರಿ ವಿಸ್ಮಯವನ್ನು ಗುರುತಿಸಬೇಕು. ನಮ್ಮ ಒಳ ಆದೇಶಗಳು ಭಾವನಾ ಲೋಕದ ಕ್ರಿಯೆಗಳು ಸಾಕ್ಷಿ ಭಾವದಲ್ಲಿ ವೀಕ್ಷಿಸುವುದರಿಂದ ನಮ್ಮ ನಿಜ ಸ್ವರೂಪದ ಪರಿಚಯ ವಾಗುತ್ತದೆ. ಇದು ಶಾಂತಿ ಸೌಹಾರ್ದ ಸ್ಥಿತಿಗೆ ದಾರಿ ಮಾಡಿಕೊಡುತ್ತದೆ. ಧ್ಯಾನಕ್ಕಾಗಿ ಹಾಳಾಗುವ ಪ್ರತ್ಯೇಕ ಸಮಯವನ್ನು ಕೂಡ ಸದುಪಯೋಗಪಡಿಸಿಕೊಳ್ಳಬಹುದು.

ಬಸ್ಸು ನಿಲ್ದಾಣದಲ್ಲಿ  ಬಸ್ಸಿಗಾಗಿ ಕಾಯುವ ಸಮಯವನ್ನು, ಪ್ರಯಾಣ ಸಮಯವನ್ನು ಆಯಾ ಸ್ಥಳಗಳಲ್ಲಿ ಮೂಡುವ ಭಾವನೆ ಗಳ ಬಗ್ಗೆ ಧ್ಯಾನಿಸಬಹುದು. ಉದಾಹರಣೆಗೆ, ಆಸ್ಪತ್ರೆಯಲ್ಲಿ ಆತಂಕದಲ್ಲಿ ಕಳೆಯುವ ಸಮಯದಲ್ಲಿ ಆತಂಕವನ್ನೇ ಕೇಂದ್ರೀಕರಿಸಿ ಧ್ಯಾನಿಸಬಹುದು. ಬ್ಯಾಂಕಿನ ಕ್ಯೂನಲ್ಲಿ ಕಿರಿಕಿರಿಯಿಂದ ಕಾಯುವ ಸಮಯದಲ್ಲಿ ‘ಕಿರಿಕಿರಿ’ ಯನ್ನೇ ಕೇಂದ್ರೀಕರಿಸಿ ಧ್ಯಾನಿಸ ಬಹುದು. ದಿನ ನಿತ್ಯದಲ್ಲಿ ಮೂಡುವ ಯಾವುದೇ ಭಾವನೆಯ ಮೇಲೆ ಏಕಾಗ್ರತೆಯಿಂದ ಧ್ಯಾನಿಸುವ ವಿಧಿಯಿಂದ ಸಮಯದ ಸದುಪಯೋಗಪಡಿಸಿಕೊಳ್ಳಬಹುದು.

ಈಗ ನಿಮಗೆ ನಾನು ಹೇಳುತ್ತಿರುವ ‘ಮನತುಂಬಿ ’ ಭಾವ ಪ್ರಜ್ಞೆಯ ಮೂಲ ಉದ್ದೇಶ ಅರ್ಥವಾಗಿರಬಹುದಲ್ಲವೇ…? ಇಡೆಯಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನರಿಯದೆ ಕೆಟ್ಟವರು ಕೋಟಾನುಕೋಟಿ ಪಿಂಗಳೆಯಲ್ಲಿ ಸುಳಿವ ವಾಯುವ ಸ್ವೀಕರಿಸಿ
ನಿಜವನರಿಯದೆ ಕೆಟ್ಟವರು ಕೋಟಾನುಕೋಟಿ ಸುಷುಮ್ನನಾಳದಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನರಿಯದೆ ಕೆಟ್ಟವರು ಕೋಟಾನುಕೋಟಿ ಅಲ್ಲಿಂದತ್ತಲಾದ ಮಹಾಘನ ಲಿಂಗವನರಿಯದೆ ಕೆಟ್ಟವರು ಕೋಟಾನುಕೋಟಿ ಅಪ್ರಮಾಣ ಕೂಡಲಸಂಗಮ ದೇವಯ್ಯನ ನಿಲವ ತಾನೆಂದರಿಯದೆ ಕೆಟ್ಟ ವೇಷಡಂಭಕರ ನಾನೇನೆಂಬೆನಯ್ಯಾ ಬಾಲಸಂಗಯ್ಯಾ ಅಪ್ರಮಾಣ ದೇವ.

(ಮುಗಿಯಿತು)

ಮನತುಂಬಿದ ಧಾರಾವಾಹಿ
ಕಳೆದ ನಲವತ್ತು ವಾರಗಳಿಂದ ಧ್ಯಾನದ ವಿಚಾರವನ್ನು ಪ್ರಮುಖವಾಗಿ ಚರ್ಚಿಸಿದ ‘ತಾನಾರೆಂದು ತಿಳಿದೊಡೆ’ ಲೇಖನ ಸರಣಿ ಈ ವಾರ ಮುಕ್ತಾಯಗೊಂಡಿದೆ. ಕ್ಷಿತಿಜ್ ಬೀದರ್ ಕಾವ್ಯನಾಮದ ಬಸವರಾಜ್ ಮಠಪತಿಯವರು ಬೀದರ್ ಜಿಲ್ಲೆಯ ಬನ್ನಳ್ಳಿ ಗ್ರಾಮದ ದಿ.ನಾಗಯ್ಯ ಸ್ವಾಮಿ ಮತ್ತು ದಿ.ಶಾರದಾ ದಂಪತಿಯ ಜೇಷ್ಠ ಪುತ್ರರಾಗಿದ್ದು, ರೇಷ್ಮೆ ಸಹಾಯಕ ನಿರ್ದೇಶಕರಾಗಿ ನಿವೃತ್ತಿ ಹೊಂದಿ ಈಗ ತುಮಕೂರಿನಲ್ಲಿ ವಾಸವಿದ್ದಾರೆ. ಈವರೆಗೆ 5 ಅಧ್ಯಾತ್ಮಿಕ ಕೃತಿಗಳನ್ನು, 9 ಕಥಾ ಸಂಕಲನಗಳನ್ನು ಪ್ರಕಟಿಸಿದ್ದಲ್ಲದೆ 15
ಕಾದಂಬರಿಗಳನ್ನು ಹೊರತಂದಿದ್ದಾರೆ. ವಿಶ್ವವಾಣಿಯ ಓದುಗರಿಗೆ ಈ ಅಧ್ಯಾತ್ಮ ಸಂಬಂಧಿ ಬರೆಹಗಳನ್ನು ಓದಿಸಿದ ಕ್ಷಿತಿಜ್ ಬೀದರ್ ಅವರಿಗೆ ಧನ್ಯವಾದಗಳು.
-ಸಂ.