ಅಭಿಮತ
ರಾಜು ಭೂಶೆಟ್ಟಿ
ಯಾವುದೇ ರಾಷ್ಟ್ರದ ಸಮಗ್ರ ಪ್ರಗತಿಯಲ್ಲಿ ಸ್ವದೇಶಿ ತಂತ್ರಜ್ಞಾನಗಳು ತುಂಬಾ ನಿರ್ಣಾಯಕವಾಗಿವೆ. ಇವು ಒಂದು ದೇಶ ಅಥವಾ ಪ್ರದೇಶದ ನಿರ್ದಿಷ್ಟ ಅಗತ್ಯಗಳು ಮತ್ತು ಸವಾಲುಗಳನ್ನು ಗಣನೆಗೆ ತೆಗೆದುಕೊಂಡು, ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ನಾವೀನ್ಯಗಳು ಮತ್ತು ಪರಿಹಾರೋಪಾಯ ಗಳಾಗಿವೆ; ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ. ದೇಶವು ಸಂಶೋಧನೆ ಮತ್ತು ನಾವೀನ್ಯದ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಿದಾಗ ಸ್ಥಳೀಯ ಸವಾಲುಗಳನ್ನು ಪರಿಣಾಮಕಾರಿಯಾಗಿ
ಎದುರಿಸಬಹುದು.
ಸ್ವದೇಶಿ ತಂತ್ರಜ್ಞಾನಗಳು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಕಾರಣವಾಗುವುದರ ಮೂಲಕ ಉದ್ಯೋಗವನ್ನು ಸೃಷ್ಟಿಸಲು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಸಹಾಯಕವಾಗುತ್ತವೆ. ಸ್ವದೇಶಿ ತಂತ್ರಜ್ಞಾನಗಳು ಆರೋಗ್ಯ ರಕ್ಷಣೆಯ ಕ್ಷೇತ್ರದಲ್ಲಿ ಮಹತ್ತರ ಪಾತ್ರ ವಹಿಸಿ, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆಗಳನ್ನು ದೊರಕಿಸಿಕೊಡಬಲ್ಲವು. ವಿಶೇಷವಾಗಿ ಪಟ್ಟಣ-ನಗರಗಳಿಂದ ದೂರದಲ್ಲಿರುವ ಪ್ರದೇಶಗಳಲ್ಲಿ ಟೆಲಿಮೆಡಿಸಿನ್ ಪರಿಹಾರಗಳು ಮತ್ತು ಸಾಂಪ್ರದಾಯಿಕ ಔಷಧಿ ವ್ಯವಸ್ಥೆಗಳಲ್ಲಿ ಬೇರೂರಿರುವ ಗಿಡಮೂಲಿಕೆಗಳ ಪರಿಹಾರದಂಥ ಆವಿಷ್ಕಾರಗಳು ಜನಸಾಮಾನ್ಯರಿಗೆ ದೊರೆತು ಅವರ ಆರೋಗ್ಯ ನಳನಳಿಸುವಂತಾಗಲು ಇವು ನೆರವಾಗುತ್ತವೆ.
ಹವಾಮಾನ ಬದಲಾವಣೆಯು ಜಾಗತಿಕ ಮಟ್ಟದಲ್ಲಿ ಕೃಷಿ ಕ್ಷೇತ್ರವನ್ನು ಕಂಗಾಲಾ ಗುವಂತೆ ಮಾಡಿರುವುದಂತೂ ಕಟುಸತ್ಯ. ಹೀಗಾಗಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದರ ಜತೆಗೆ ಉತ್ತಮ ಬೆಳೆಯನ್ನು ಪಡೆಯುವ ನಿಟ್ಟಿನಲ್ಲಿ ಸ್ವದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇ ಕಾಗಿದೆ. ಈಗಾಗಲೇ ಲಭ್ಯವಿರುವ ಸಾಂಪ್ರದಾಯಿಕ ಜ್ಞಾನವನ್ನು ಅತ್ಯಾಧುನಿಕ ವಿಧಾನಗಳೊಂದಿಗೆ ಸಂಯೋಜಿಸುವುದರತ್ತ ಚಿಂತನೆಗಳು ನಡೆಯಬೇಕಿವೆ.
ಸೌರಶಕ್ತಿ ಮತ್ತು ಪವನಶಕ್ತಿಯಂಥ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಳ್ಳುವಲ್ಲಿ ಸ್ವದೇಶಿ ತಂತ್ರಜ್ಞಾನಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅದೇ ರೀತಿಯಲ್ಲಿ, ಸ್ಥಳೀಯ ವಿನ್ಯಾಸಗಳನ್ನು ಆಧರಿಸಿದ ಗಾಳಿಯಂತ್ರಗಳು ಮತ್ತು ಜೈವಿಕ ಅನಿಲ ಸ್ಥಾವರಗಳು ಗ್ರಾಮೀಣ ಸಮುದಾಯಗಳಿಗೆ ಶಕ್ತಿ/ಇಂಧನ ಸಂಬಂಧಿತ ಪರಿಹಾರಗಳನ್ನು ಒದಗಿಸಬಲ್ಲವು. ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರ ದಾಯಿಕ ಕರಕುಶಲತೆಗೆ ಹೆಸರುವಾಸಿಯಾಗಿದೆ.
ಕೈಮಗ್ಗದ ಉತ್ಪನ್ನಗಳಿಂದ ಮೊದಲ್ಗೊಂಡು ಕುಂಬಾರಿಕೆ, ಲೋಹದ ವಸ್ತುಗಳವರೆಗಿನ ಕರಕುಶಲ ವಲಯವನ್ನು ಸ್ವದೇಶಿ ತಂತ್ರಜ್ಞಾನದ ನೆರವಿನಿಂದ ಪುನರುಜ್ಜೀವನಗೊಳಿಸುವ ಮೂಲಕ ಸಾಂಪ್ರದಾಯಿಕ ಜೀವನೋಪಾಯವನ್ನು ಮಾತ್ರವಲ್ಲದೆ ಆರ್ಥಿಕ ಸಬಲೀಕರಣವನ್ನೂ ಉತ್ತೇಜಿಸಬಹುದಾಗಿದೆ. ಭಾರತವು ತನ್ನ ಸಾಂಸ್ಕೃತಿಕ ವೈವಿಧ್ಯ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಬಿಂಬಿಸಿಕೊಳ್ಳಲು ಇದು ನೆರವಾಗಬಲ್ಲದು. ಜಾಗತಿಕ ವಾಗಿ ಸವಾಲಾಗಿ ಪರಿಣಮಿಸಿರುವ ಹಲವಾರು ಕಾಯಿಲೆಗಳಿಗೆ ವಿಶ್ವದಲ್ಲೇ ಮೊದಲ ಬಾರಿಗೆ ಭಾರತವು ಹಲವು ಲಸಿಕೆಗಳನ್ನು ಅಭಿವೃದ್ಧಿ ಪಡಿಸಿರುವುದು ಸ್ವದೇಶಿ ತಂತ್ರಜ್ಞಾನದ ನೆರವಿನಿಂದಲೇ ಎಂಬುದು ಕೂಡ ಅಭಿಮಾನಪಡುವ ಸಂಗತಿಯೇ.
ಸ್ವದೇಶಿ ತಂತ್ರಜ್ಞಾನವು ನಮಗೆ ಸ್ವಾವಲಂಬನೆಯನ್ನು ಕಲಿಸುತ್ತದೆ. ಅಂದರೆ ವಿವಿಧ ವಲಯಗಳ ಕಾರ್ಯಚಟುವಟಿಕೆಗಳಿಗೆ ಸಹಾಯಕ್ಕಾಗಿ ಇತರೆ ರಾಷ್ಟ್ರಗಳನ್ನು ಅವಲಂಬಿಸುವುದರಿಂದ ನಮಗೆ ಮುಕ್ತಿ ದೊರೆಯುತ್ತದೆ ಮತ್ತು ಇದು ರಾಷ್ಟ್ರದ ಆರ್ಥಿಕ ಬೆಳವಣಿಗೆಗೂ ಪೂರಕವಾಗುತ್ತದೆ. ಸ್ಥಳೀಯ ವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು ಪರಿಸರ-ಸ್ನೇಹಿ ಆಗಿರುವುದರ ಜತೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನೂ ಸಂರಕ್ಷಿಸುತ್ತವೆ ಹಾಗೂ ಹೆಚ್ಚೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ನಿರುದ್ಯೋಗ ಸಮಸ್ಯೆಗೂ ಪರಿಹಾರ ಒದಗಿಸುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈಜ್ಞಾ ನಿಕ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮತ್ತು ಮುಂಬರುವ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಸ್ವದೇಶಿ ತಂತ್ರಜ್ಞಾನಗಳಿಗೆ ಅಗಾಧ ಸಾಮರ್ಥ್ಯವಿದೆ. ಇವುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಸಂಶೋಧನೆಗಳಾಗ ಬೇಕು, ಅದನ್ನು ಕೈಗೊಳ್ಳಲು ಅಽಕ ಬಂಡವಾಳದ ಹೂಡಿಕೆಯಾಗಬೇಕು. ಅದು ಈ ಕಾಲಘಟ್ಟದ ಅಗತ್ಯ ಮತ್ತು ಅನಿವಾರ್ಯತೆಯೂ ಹೌದು.
(ಲೇಖಕರು ಶಿಕ್ಷಕರು ಮತ್ತು ವಿಜ್ಞಾನ ಸಂವಹನಕಾರರು)