ಅನ್ನಸೂಕ್ತ
ಸಂಜೀವ್ ಚೋಪ್ರಾ
ಉತ್ತರ ಪ್ರದೇಶದ ಗಾಜಿಯಾಬಾದ್‌ನ ಪ್ರತಾಪ್ ವಿಹಾರ್ ಬ್ಲಾಕ್‌ನಲ್ಲಿ ನ್ಯಾಯಬೆಲೆ ಅಂಗಡಿ ಡೀಲರ್ ಆಗಿರುವ ಚಮನ್ ಪ್ರಕಾಶ್ ಕಳೆದ ೧೧ ವರ್ಷ ಗಳಿಂದ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಇವರು ಏಕೈಕ ಡೀಲರ್ ಆಗಿದ್ದು, ಬರೋಬ್ಬರಿ ೧,೫೦೦ ಮನೆಗಳಿಗೆ ಸೇವೆ ಸಲ್ಲಿಸು ತ್ತಿದ್ದಾರೆ.
ಚಮನ್ ತಮ್ಮ ನಿಸ್ವಾರ್ಥ ಸೇವೆಯಿಂದಲೇ ಈ ಭಾಗದಲ್ಲಿ ಖ್ಯಾತಿ ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ, ಕೋವಿಡ್ ಸಂದರ್ಭದಲ್ಲಿ ಇವರು ಅಲ್ಲಿನ
ಜನರಿಗೆ ಆಸರೆಯಾಗಿ ನಿಂತು, ಅವರಿಗೆ ಅಗತ್ಯವಿರುವ ಪಡಿತರವನ್ನು ಸತತವಾಗಿ ಪೂರೈಸುತ್ತಿದ್ದರು. ಅಂದಿನಿಂದ ಇವರ ಖ್ಯಾತಿ ಉತ್ತುಂಗಕ್ಕೇರಿ, ಆ ಭಾಗದಲ್ಲಿ ವಿಶ್ವಾಸಾರ್ಹ ವ್ಯಕ್ತಿಯಾಗಿ ಬೆಳೆದರು.
ಆಹಾರಧಾನ್ಯ ವಿತರಣಾ ಏಜೆಂಟ್‌ಗಳಾಗಿ ದೇಶವ್ಯಾಪಿ ಕಾರ್ಯನಿರ್ವಹಿಸುವ ೫.೩ ಲಕ್ಷ ಡೀಲರ್‌ಗಳಲ್ಲಿ ಚಮನ್ ಪ್ರಕಾಶ್ ಕೂಡ ಒಬ್ಬರು. ಈ ಡೀಲರ್ ಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಮೂಲಕ ೮೦ ಕೋಟಿಗೂ ಹೆಚ್ಚು ಜನರಿಗೆ ಆಹಾರ ಭದ್ರತೆ ಒದಗಿಸುತ್ತಿದ್ದಾರೆ. ಇವರ ನ್ಯಾಯ ಬೆಲೆ ಅಂಗಡಿಗಳು ರಾಜ್ಯ ಸರಕಾರಗಳಿಂದ ಲೈಸೆನ್ಸ್ ಪಡೆದಿದ್ದು, ಅವುಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ ಮತ್ತು ಪ್ರತಿ ಕ್ವಿಂಟಾಲ್ ವಹಿವಾಟಿನ ಆಧಾರ ದ ಮೇಲೆ ಡೀಲರ್ ಮಾರ್ಜಿನ್ ಮೂಲಕ ಪರಿಹಾರವನ್ನು ಪಡೆಯುತ್ತವೆ. ಪ್ರತಿ ತಿಂಗಳು ೭ರಿಂದ ೧೦ ದಿನದ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರಧಾನ್ಯ ವಿತರಣೆಯಾಗುತ್ತದೆ.
ಉಳಿದ ದಿನಗಳಲ್ಲಿ ಈ ಅಂಗಡಿಗಳು ಕಡಿಮೆ ಬಳಕೆಯಾಗುತ್ತವೆ. ಹೀಗಾಗಿ ವಿತರಕರಿಗೆ ಯಾವುದೇ ಹೆಚ್ಚುವರಿ ಆದಾಯವನ್ನು ಒದಗಿಸುವುದಿಲ್ಲ. ಇದು ಈ
ವಿತರಣಾ ಜಾಲದ ಆರ್ಥಿಕ ಕಾರ್ಯಸಾಧ್ಯತೆ ಮತ್ತು ಸುಸ್ಥಿರತೆಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ. ಕಳೆದ ಒಂದು ದಶಕದಲ್ಲಿ ನ್ಯಾಯಬೆಲೆ ಅಂಗಡಿಗಳ
ಆಧುನೀಕರಣಕ್ಕಾಗಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಈ ಅಂಗಡಿಗಳಲ್ಲಿ ಇಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇ-ಪಿಒಎಸ್) ಸಾಧನಗಳನ್ನು ಇನ್‌ಸ್ಟಾಲ್ ಮಾಡಲಾಗಿದೆ.
ಈಗ ಶೇ.೧೦೦ರಷ್ಟು ವಹಿವಾಟುಗಳನ್ನು ಬಯೋಮೆಟ್ರಿಕ್ ಆಧರಿತ ಆಧಾರ್ ಕಾರ್ಡ್ ಮೂಲಕ ದೃಢೀಕರಿಸಲಾಗಿದೆ. ಆಹಾರ ಧಾನ್ಯಗಳ ಸರಿಯಾದ ತೂಕವನ್ನು ಖಾತ್ರಿಪಡಿಸಿಕೊಳ್ಳಲು ಇ-ಪಿಒಎಸ್ ಸಾಧನಗಳನ್ನು ಇಲೆಕ್ಟ್ರಾನಿಕ್ ತೂಕದ ಮಾಪಕಗಳೊಂದಿಗೆ ಜೋಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸ ಲಾಗಿದೆ ಮತ್ತು ೨೦೨೪ರ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳಲಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಾದರಿ ನ್ಯಾಯಬೆಲೆ ಅಂಗಡಿಗಳನ್ನು ಅಭಿವೃದ್ಧಿಪಡಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗಿದೆ.
ಫಲಾನುಭವಿಗಳಿಗೆ ಕಾಯುವಕೋಣೆ, ಆಸನದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ಅಂಗಡಿಗಳ ವಿತರಕರಿಗೆ ಹೆಚ್ಚು ವರಿ ಆದಾಯದ ಸ್ಟ್ರೀಮ್‌ಗಳನ್ನು ರಚಿಸಲು ಸಾಮಾನ್ಯ ಸೇವಾ ಕೇಂದ್ರ ಸೇವೆಗಳು ಮತ್ತು ಬಿಜಿನೆಸ್ ಕರೆಸ್ಪಾಂಡೆಂಟ್ ಸೇವೆಗಳಂಥ ಹೆಚ್ಚುವರಿ ಸೇವೆ ಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಒದಗಿಸಲು ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಲಾಗಿದೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಡಿಜಿಟಲ್ ವಾಣಿಜ್ಯಕ್ಕಾಗಿ ಓಪನ್ ನೆಟ್‌ವರ್ಕ್‌ನಲ್ಲಿ ನ್ಯಾಯ ಬೆಲೆ ಅಂಗಡಿಗಳನ್ನು ತೊಡಗಿಸು ವುದಕ್ಕಾಗಿ ಈ ವರ್ಷದ ಜನವರಿಯಲ್ಲಿ ಪೈಲಟ್ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದು ಈ ಅಂಗಡಿಗಳ ಗ್ರಾಹಕರ ನೆಲೆಯನ್ನು ವಿಸ್ತರಿಸುವ ಮತ್ತು ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಈ ಅಂಗಡಿಗಳ ಆರ್ಥಿಕ ಸುಸ್ಥಿರತೆಯು, ವಿತರಕರು ಮತ್ತು
ಸರಕಾರಕ್ಕೆ ಸಮಾನ ಕಾಳಜಿಯ ಕ್ಷೇತ್ರವಾಗಿ ಉಳಿದಿದೆ.
ಫಲಾನುಭವಿಗಳ ಪೌಷ್ಟಿಕಾಂಶದ ಭದ್ರತೆಯು ಮತ್ತೊಂದು ಪ್ರಮುಖ ಸವಾಲಾಗಿದೆ. ಪ್ರಸ್ತುತ ಇಲಾಖೆಯು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಶಕ್ತಿ-ಸಮೃದ್ಧ ಧಾನ್ಯಗಳನ್ನು (ಆಕ್ಕಿ ಮತ್ತು ಗೋಧಿ) ಮಾತ್ರ ಒದಗಿಸುತ್ತದೆ. ಆದರೆ ಜನಸಂಖ್ಯೆಯ ಗಮನಾರ್ಹ ಭಾಗವು ಪೌಷ್ಟಿಕಾಂಶದ
ಕೊರತೆಯನ್ನು ಎದುರಿಸುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ನಮ್ಮ ಜನರಲ್ಲಿ ಕಾಣಬರುವ ರಕ್ತಹೀನತೆಯ ಪ್ರಮಾಣದ ಅಂಕಿ-ಅಂಶಗಳನ್ನು ನೀಡಿದೆ. ೬ರಿಂದ ೫೯ ತಿಂಗಳ ವಯಸ್ಸಿನ ಮಕ್ಕಳಲ್ಲಿ ಶೇ.೬೭.೧ರಷ್ಟು, ಅಂದರೆ ಅತಿಹೆಚ್ಚು ರಕ್ತಹೀನತೆಯ ಪ್ರಮಾಣವಿದೆ. ೧೫ರಿಂದ
೪೯ ವರ್ಷ ವಯಸ್ಸಿನ ಮಹಿಳೆಯರಲ್ಲಿ ಶೇ.೫೭ರಷ್ಟು, ಪುರುಷರಲ್ಲಿ ಶೇ.೨೫ರಷ್ಟು ರಕ್ತಹೀನತೆ ಕಾಣಿಸಿಕೊಂಡಿದೆ.
ಇದರ ಜತೆಗೆ, ೫ ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ, ಕ್ಷೀಣತೆ ಮತ್ತು ಕಡಿಮೆ ತೂಕದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ, ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳಿಗೆ ಆದಾಯದ ಅವಕಾಶಗಳನ್ನು ಹೆಚ್ಚಿಸುವುದರ ಜತೆಗೆ, ಜನಸಂಖ್ಯೆಯ ಆಹಾರ ವೈವಿಧ್ಯೀಕರಣದ ಮೂಲಕ ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸುವ ಸಮಗ್ರ ವಿಧಾನ ಅಗತ್ಯವಾಗಿದೆ. ಈ ಎರಡು ಸವಾಲುಗಳನ್ನು ಎದುರಿಸಲು ಇಲಾಖೆಯು ೬೦ ನ್ಯಾಯಬೆಲೆ ಅಂಗಡಿಗಳನ್ನು ‘ಜನಪೋಷಣ ಕೇಂದ್ರಗಳಾಗಿ’ ಪರಿವರ್ತಿಸಲು ಪೈಲಟ್ ಯೋಜನೆಯನ್ನು ಪ್ರಾರಂಭಿಸಿದೆ.
ಘಾಜಿಯಾಬಾದ್, ಜೈಪುರ, ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಇಂಥ ತಲಾ ೧೫ ಕೇಂದ್ರಗಳಿವೆ. ಇವು ಮುಕ್ತ ಮಾರುಕಟ್ಟೆಗೆ ಹೋಲಿಸಿದಾಗ, ರಾಗಿ, ಬೇಳೆ-ಕಾಳು, ಖಾದ್ಯತೈಲ ಮತ್ತು ಸೋಯಾಬೀನ್‌ನಂಥ ವಿವಿಧ ಪೋಷಕಾಂಶದ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುತ್ತವೆ. ಜನಪೋಷಣ ಕೇಂದ್ರಗಳು ಡೀಲರ್‌ಗಳಿಗೆ ಹೆಚ್ಚುವರಿ ಆದಾಯದ ಮೂಲಗಳನ್ನು ಮತ್ತು ಉತ್ತಮ ಮಾರ್ಜಿನ್‌ಗಳನ್ನು ಒದಗಿಸುವುದರ ಜತೆ ಜತೆಗೆ, ಫಲಾನುಭವಿಗಳು ಮತ್ತು ಸ್ಥಳೀಯ ಜನಸಂಖ್ಯೆಯಲ್ಲಿನ ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸುವ ಗುರಿಯನ್ನೂ ಹೊಂದಿವೆ. ನ್ಯಾಯಬೆಲೆ ಅಂಗಡಿಗಳನ್ನು ನಾಲ್ಕು ಬಹುಮುಖ್ಯ ಅಂಶಗಳ ಆಧಾರದ ಮೇಲೆ ಜನಪೋಷಣ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.
ಅವೆಂದರೆ: ೧) ನ್ಯಾಯಬೆಲೆ ಅಂಗಡಿಗಳ ವಿತರಕರಿಗೆ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ. ೨) ಸರಕುಪಟ್ಟಿ ಹಣಕಾಸು ಮೂಲಕ ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳಿಗೆ ಕಾರ್ಯೋಪಯೋಗಿ ಬಂಡವಾಳದ ಲಭ್ಯತೆ. ೩) ‘ಬಿ-ಟು-ಬಿ’ ಅಗ್ರಿಗೇಟರ್‌ಗಳ ಮೂಲಕ ಮಾರುಕಟ್ಟೆ ಸಂಪರ್ಕಗಳು. ೪) ಪೌಷ್ಟಿಕಾಂಶದ ಪ್ರಚಾರ ಸಾಕ್ಷರತೆ.
ನ್ಯಾಯಬೆಲೆ ಅಂಗಡಿಗಳ ವಿತರಕರ ಸಾಮರ್ಥ್ಯವನ್ನು ಹೆಚ್ಚಿಸಲು, ಕೌಶಲಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಉದ್ಯಮಶೀಲತೆ ಮತ್ತು ಸಣ್ಣ ವ್ಯಾಪಾರ ಅಭಿವೃದ್ಧಿ ಸಂಸ್ಥೆಯೊಂದಿಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ತಿಳಿವಳಿಕೆ ಒಪ್ಪಂದಕ್ಕೆ
(ಎಂಒಯು) ಸಹಿಹಾಕಿದೆ. ಈ ಪಾಲುದಾರಿಕೆಯಲ್ಲಿ ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ಪೌಷ್ಟಿಕಾಂಶದ ಸಾಕ್ಷರತೆ ಮತ್ತು ವ್ಯಾಪಾರ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿದ ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿತರಕರ ತರಬೇತಿ ಕಾರ್ಯಾಗಾರಗಳನ್ನು ೨೦೨೪ರ ಮೇ ಮತ್ತು ಜೂನ್‌ನಲ್ಲಿ ಎರಡು ತಂಡಗಳಲ್ಲಿ ನಡೆಸಲಾಯಿತು.
ಹೆಚ್ಚುವರಿಯಾಗಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಕೈಜೋಡಿಸಿ ‘ಎಫ್ ಪಿಎಸ್-ಸಹಾಯ್’ ಸಾಧನವನ್ನು ರಚಿಸಲು ಮತ್ತೊಂದು ತಿಳಿವಳಿಕೆ ಒಪ್ಪಂದವನ್ನು ಕಾರ್ಯಗತಗೊಳಿಸಿದೆ; ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಡೀಲರ್ ಗಳಿಗೆ, ಪಿಡಿಎಸ್ ಅಲ್ಲದ ಸರಕುಗಳನ್ನು ಖರೀದಿಸಲು ಇನ್ ವಾಯ್ಸ್‌ಗಳಿಗೆ ಹಣಕಾಸು ಒದಗಿಸಲು ಅನುವು ಮಾಡಿಕೊಡುತ್ತದೆ. ನ್ಯಾಯಬೆಲೆ ಅಂಗಡಿಯ ಡೀಲರ್‌ಗಳಿಗೆ ಪೂರೈಕೆ ಸರಪಳಿ ಸಂಪರ್ಕಗಳನ್ನು ಸ್ಥಾಪಿಸಲು ಸಹಾಯಮಾಡುವ ಈ ಪ್ಲಾಟ್ ಫಾರ್ಮ್ ಸೇರಲು ಪ್ರಮುಖ ‘ಬಿ-ಟು-ಬಿ’ ಅಗ್ರಿಗೇಟರ್‌ಗಳನ್ನು ಆಹ್ವಾನಿಸಲಾಗಿದೆ.
ಒಟ್ಟಾರೆ ಹೇಳುವುದಾದರೆ, ಈ ನಾಲ್ಕು ಸ್ತಂಭಗಳ ಮೂಲಕ ಇಲಾಖೆಯು ಸುಸ್ಥಿರ ಮಾದರಿಯ ಅಡಿಪಾಯವನ್ನು ಹಾಕುತ್ತಿದ್ದು, ಅದು ವಿತರಕರಿಗೆ ಮತ್ತು ಅವರು ಸೇವೆ ಸಲ್ಲಿಸುವ ಸಮುದಾಯಗಳಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಇವೆಲ್ಲದರೊಂದಿಗೆ, ಚಮನ್ ಪ್ರಕಾಶ್ ಅವರ ವೃತ್ತಿಪರ ಜೀವನವು ಉತ್ತುಂಗಕ್ಕೇರಿದೆ. ಅವರ ಕೊಡುಗೆಗಳನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ, ಅವರ ಆದಾಯವನ್ನು ಹೆಚ್ಚಿಸುವಲ್ಲಿ ಹಾಗೂ ಜನರ ಆರೋಗ್ಯವನ್ನು
ಸುಧಾರಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಬೆಳವಣಿಗೆಯು ಅವರ ಜೀವನೋಪಾಯವನ್ನು ಹೆಚ್ಚಿಸುತ್ತದೆ. ಹಾಗೆಯೇ, ಭಾರತ ದಾದ್ಯಂತ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಉತ್ತೇಜಿಸುವಲ್ಲಿನ ನ್ಯಾಯಬೆಲೆ ಅಂಗಡಿಗಳ ಪಾತ್ರವನ್ನು ಬಲಪಡಿಸುತ್ತದೆ.
(ಲೇಖಕರು ಕಾರ್ಯದರ್ಶಿಗಳು, ಆಹಾರ ಮತ್ತು
ಸಾರ್ವಜನಿಕ ವಿತರಣಾ ಇಲಾಖೆ, ಭಾರತ ಸರಕಾರ)