Tuesday, 3rd December 2024

ಅರುಣಾ, ಅಭಯಾ, ಹೆಸರು ಮಾತ್ರ ಬೇರೆ !

ವಿದೇಶವಾಸಿ

dhyapaa@gmail.com

ಇತ್ತೀಚೆಗೆ ಬೆಂಗಳೂರಿನಿಂದ ಮುಂಬೈ ಮಾರ್ಗವಾಗಿ ಬಹ್ರೈನ್‌ಗೆ ಬರುತ್ತಿದ್ದೆ. ಇಂಡಿಗೋ ಸಂಸ್ಥೆಯ ಲೋಹಪಕ್ಷಿ ಭೂಮಿ ಬಿಟ್ಟು ನಭಕ್ಕೆ ನೆಗೆದು ಹತ್ತು ನಿಮಿಷವಷ್ಟೇ ಆಗಿತ್ತು. ಅಷ್ಟರಲ್ಲಿ ಗಗನಸಖಿಯ ಧ್ವನಿ ಕೇಳಿಬಂತು- Ladies and gentlemen, it is an emergency. ವಿಮಾನ ದಲ್ಲಿದ್ದವರೆಲ್ಲ ಎಚ್ಚೆತ್ತು ಕೊಂಡರು. ಲಕ್ಷ್ಯ ಕೊಡಬೇಕಾದದ್ದೇ, ಏಕೆಂದರೆ ವಿಮಾನದಲ್ಲಿ ಇಂಥ ಪ್ರಕಟಣೆ ಮಾಡುವುದು ಎರಡೇ ಸಂದರ್ಭದಲ್ಲಿ.

ಹವಾಮಾನ ವೈಪರೀತ್ಯ, ತಾಂತ್ರಿಕ ದೋಷದಿಂದ ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಬೇಕಾದಾಗ ಅಥವಾ ಪ್ರಯಾಣಿಕರ ವೈದ್ಯಕೀಯ ಕಾರಣ ದಿಂದಾಗಿ. ಅಂದಿನ ಪ್ರಕಟಣೆ ಎರಡನೆಯ ಕಾರಣಕ್ಕಾಗಿತ್ತು. ಯಾರಾದರೂ ವೈದ್ಯರಿದ್ದರೆ ದಯವಿಟ್ಟು ಕಾಕ್‌ಪಿಟ್ ಬಳಿ ಬನ್ನಿ. ಪ್ರಯಾಣಿಕ ರೊಬ್ಬರಿಗೆ ಚಿಕಿತ್ಸೆ ಬೇಕಾಗಿದೆ ಎಂಬ ಮಾತು ಕೇಳಿಸಿತು. ವಿಮಾನದ ಮಧ್ಯಸಾಲಿ ನಲ್ಲಿದ್ದ ಸುಮಾರು ೫೫ರ ಪ್ರಾಯದ ವ್ಯಕ್ತಿಯೊಬ್ಬರು ಕೂಡಲೇ ಎದ್ದು ಮುಂಭಾಗಕ್ಕೆ ದೌಡಾಯಿಸಿದರು.

ಅವರ ಹಿಂದೆಯೇ ಒಬ್ಬ ಮಹಿಳೆ, ನನ್ನ ಮುಂದೆ ಕುಳಿತಿದ್ದ ಸುಮಾರು ೫೫ರ ಪ್ರಾಯದ ಯುವತಿಯೂ ವಿಮಾನದ ಮುಂಭಾಗದ ಕಡೆ ಓಡಿದರು. ಮೂವರೂ ವೈದ್ಯರು ಎನ್ನುವುದರಲ್ಲಿ ಸಂದೇಹವಿರಲಿಲ್ಲ. ಅಸ್ವಸ್ಥ ವ್ಯಕ್ತಿಗೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಐದೇ ನಿಮಿಷದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಮೊದಲು ಎದ್ದು ಹೋದ ವೈದ್ಯರು ತುರ್ತುದ್ವಾರದ ಬಳಿ ಕುಳಿತಿದ್ದ ವ್ಯಕ್ತಿಯ ಬಳಿ ಮಾತನಾಡಿ ಆಸನವನ್ನು ಅಸ್ವಸ್ಥ ವ್ಯಕ್ತಿಗೆ ಬಿಟ್ಟುಕೊಡು ವಂತೆ ಮನವೊಲಿಸಿದರು. ಅವರ ಆಸನವೂ ಪಕ್ಕದಲ್ಲಿಯೇ ಇದ್ದದ್ದರಿಂದ ವಿಮಾನ ಮುಂಬೈನಲ್ಲಿ ಇಳಿಯುವವರೆಗೂ ವೈದ್ಯರು ಆ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸಿದ್ದು ಕಂಡುಬಂತು.

‘ದೇವರು ಎಲ್ಲ ಕಡೆಗೂ ಬರಲಾಗುವುದಿಲ್ಲ ಎಂದು ತಾಯಂದಿರನ್ನು ಭೂಮಿಗೆ ಕಳಿಸುತ್ತಾನೆ’ ಎಂಬ ಮಾತಿದೆ. ಬರೀ ತಾಯಂದಿರನ್ನಷ್ಟೇ ಅಲ್ಲ, ಆತ ಸೈನಿಕರನ್ನೂ, ವೈದ್ಯರನ್ನೂ ಕಳಿಸುತ್ತಾನೆ. ಅದನ್ನು ಕೋವಿಡ್ ಒಕ್ಕರಿಸಿದ ಸಂದರ್ಭದಲ್ಲಿ ನೋಡಿದ್ದೇವೆ. ಇರಲಿ, ವಿಮಾನದಿಂದ ಹೊರಗೆ ಬಂದ ನಂತರ, ಶುಶ್ರೂಷೆ ನೀಡಿದ ವೈದ್ಯರು ಸಿಕ್ಕಿದರು. ಅವರ ಹೆಸರು ಡಾ.ನವಲ್ ಕಿಶೋರ್ ಸಾಹು ಎಂದೂ ಅವರು ರಾಯಘಡದಲ್ಲಿ ವೈದ್ಯವೃತ್ತಿಯಲ್ಲಿದ್ದಾ ರೆಂದೂ ತಿಳಿಯಿತು.

ಸಮರೋಪಾದಿಯಲ್ಲಿ ಕೆಲಸ ಮಾಡಿದ ವೈದ್ಯರಿಗೆ ಧನ್ಯವಾದ ಹೇಳಿದಾಗ ಅವರ ಮುಖದಲ್ಲಿ ಸಂತಸ, ಸಂತೃಪ್ತಿ. ಅದರ ಅಪೇಕ್ಷೆಯಾಗಲಿ, ಬಯಕೆ ಯಾಗಲಿ ಇರಲಿಲ್ಲವಾದರೂ, ತಾವು ಮಾಡಿದ ಕೆಲಸವನ್ನು ಇನ್ನೊಬ್ಬರು ಗುರುತಿಸಿದ್ದಾರೆ ಎಂಬ ಧನ್ಯತಾಭಾವ ಅವರಲ್ಲಿ ಕಂಡುಬಂತು. ಉಳಿದಿಬ್ಬರು ವೈದ್ಯೆಯರು ಜನರ ಗುಂಪಿನಲ್ಲಿ ಲೀನವಾಗಿದ್ದರು. ಆದರೆ ನನ್ನ ಮುಂದಿನ ಸಾಲಿನಲ್ಲಿ ಕುಳಿತ ಯುವ ವೈದ್ಯೆಯನ್ನು ಕಂಡಾಗ ಯಾಕೋ ನಾಲ್ಕು ದಿನದ ಹಿಂದಷ್ಟೇ ಕೋಲ್ಕತಾದಲ್ಲಿ ನಡೆದ ಘಟನೆ ನೆನಪಿಗೆ ಬರುತ್ತಿತ್ತು.

ಏನು ಮಾಡುವುದು? ಆ ವೈದ್ಯೆಯ ಸೇವೆ ಪಡೆಯುವ ಭಾಗ್ಯ ನಮ್ಮ ದೇಶಕ್ಕೆ ಇಲ್ಲ ಎಂದೆನಿಸಿತು. ವೈದ್ಯರು ಯಾವ ಸೈನಿಕರಿಗೂ ಕಮ್ಮಿಯಲ್ಲ ಎನ್ನು
ವುದಕ್ಕೆ ಮೇಲಿನ ಉದಾಹರಣೆ ಕೊಡಬೇಕಾಯಿತು. ತುರ್ತುಸ್ಥಿತಿಯಲ್ಲಿ ಪ್ರತಿಕ್ರಿಯಿಸುವುದಕ್ಕೆ ಕೆಲವರಿಂದ ಮಾತ್ರ ಸಾಧ್ಯ. ಸೇನೆ, ನೌಕೆ, ವಾಯುಪಡೆ,
ಪೊಲೀಸ್ ಮೊದಲಾದ ರಕ್ಷಣಾ ಪಡೆಯ ಜತೆಗೆ ವೈದ್ಯರೂ ಆ ಸಾಲಿನಲ್ಲಿ ನಿಲ್ಲುತ್ತಾರೆ. ಅಪಘಾತವಾದಾಗ, ಮಾರಣಾಂತಿಕ ಹಲ್ಲೆ, ಗಲಭೆಗಳು ನಡೆದಾಗ,
ಏನೂ ಬೇಡ, ಮಧ್ಯರಾತ್ರಿ ಯಾರಿಗಾದರೂ ಹೆರಿಗೆ ನೋವು ಬಂದರೂ, ದಿನ-ಸಮಯವನ್ನು ಲೆಕ್ಕಿಸದೆ ವೈದ್ಯರು ಕಾರ್ಯನಿರ್ವಹಿಸುತ್ತಾರೆ. ಅದು ಅವರ
ವೃತ್ತಿಧರ್ಮ. ಈ ಕಾರಣಕ್ಕಾಗಿಯೇ ವೈದ್ಯಕೀಯ ಬಿಟ್ಟು ಬೇರೆ ಕ್ಷೇತ್ರ ಆಯ್ದುಕೊಳ್ಳುವವರೂ ಇದ್ದಾರೆ.

ಆದರೆ ದೇವತಾ ಸ್ವರೂಪಿ ವೈದ್ಯರ ಮೇಲೂ ಬಲಾತ್ಕಾರ ಮಾಡುವ, ಸಾಯಿಸುವ ಜನ ನಮ್ಮ ನಡುವೆಯೇ ಇದ್ದಾರೆಂದರೆ ಅದಕ್ಕಿಂತ ನಾಚಿಕೆಯ
ವಿಷಯ ಇನ್ನೊಂದಿಲ್ಲ. ಅಗಸ್ಟ್ ೮ರಂದು ಕೋಲ್ಕತಾದ ಆರ್.ಜಿ. ಕರ್ ವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನೇ ನೋಡಿ. ಮೊದಲೇ ಹೇಳುತ್ತೇನೆ, ನಾನು ಈ ಘಟನೆಯ ಕುರಿತಂತೆ ತಾಂತ್ರಿಕ ವಿಷಯ ಹೇಳುವ ಪೊಲೀಸ್ ಅಲ್ಲ, ಸಾಕ್ಷ್ಯಾಧಾರದ ವಿಷಯ ಮಾತಾಡುವ ವಕೀಲ ಅಲ್ಲ, ರಾಜಕೀಯ ಮಾತನಾಡುವ ರಾಜಕಾರಣಿಯೂ ಅಲ್ಲ. ಆದರೆ, ಒಬ್ಬ ಮನುಷ್ಯನಾಗಿ, ಪ್ರಜೆಯಾಗಿ ರಾಕ್ಷಸೀಯ ಕೃತ್ಯ ಎಸಗಿದವರನ್ನು ಮತ್ತು ಅಂಥವರನ್ನು ರಕ್ಷಿಸಲು ಮುಂದಾದವರನ್ನು ಖಂಡಿಸುವುದಕ್ಕೆ ಯಾವ ಮುಲಾಜೂ ಇಟ್ಟುಕೊಳ್ಳುವುದಿಲ್ಲ. ಈ ವಿಷಯ ಹೇಳುತ್ತಿದ್ದಂತೆ ಕೆಲವರು ಮಣಿಪುರದ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಉನ್ನಾವ್ ಕುರಿತು ಯಾಕೆ ಹೇಳುವುದಿಲ್ಲ? ಇತ್ಯಾದಿ ಪ್ರಶ್ನಿಸುತ್ತಾರೆ. ಇಂಥ ವಿಷಯದಲ್ಲಿ, ಮಣಿಪುರ, ಅಜ್ಮೇರ್, ಸಂದೇಶ್ ಖಾಲಿ, ಉನ್ನಾವ್, ಹೈದರಾಬಾದ್ ಎಲ್ಲಿಯೇ ಆಗಲಿ, ಯಾರೇ ಮಾಡಿರಲಿ ಅದು ಅಕ್ಷಮ್ಯ.

ಭಾರತದಲ್ಲಿ ಇಂದು ಬಲಾತ್ಕಾರ, ಕೊಲೆಗಳಲ್ಲೂ ರಾಜಕೀಯ ಒಳಹೊಕ್ಕಾಗಿದೆ. ಇಂಥ ವಿಷಯಗಳನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ದುರ್ದೈವ. ಕೋಲ್ಕತಾದಲ್ಲಿ ಅಮಾನುಷ ಕೃತ್ಯಕ್ಕೆ ಒಳಗಾದವಳಿಗೆ ೩೧ರ ಹರೆಯ. ಅಂದರೆ, ಜೀವನದ ಅರ್ಧ ಭಾಗವನ್ನೂ ಆಕೆ ಕಳೆದಿರಲಿಲ್ಲ. ಮುಂದಿನ ದಿನಗಳಲ್ಲಿ ಜನಸೇವೆ ಮಾಡುವ ಕನಸು ಕಂಡ ಅವಳ ಕಣ್ಣಿನೊಳಗೆ ಆಕೆಯ ಕನ್ನಡಕದ ಗಾಜು ಹೊಕ್ಕಿತ್ತು. ಉಟ್ಟ ಬಟ್ಟೆ ಹರಿದಿತ್ತು. ದೇಹದ ಮೇಲೆ ಹತ್ತಕ್ಕೂ ಹೆಚ್ಚು ಕ್ರೌರ್ಯದ ಕಲೆಗಳಿದ್ದವು. ಗುಪ್ತಾಂಗದಲ್ಲಿ ೧೫೦ ಎಂಎಲ್ ದ್ರವ ಇತ್ತು. ಮುಖದ ಮೇಲೆ ಪರಚಿದ ಗುರುತು, ತಿರುಚಿಕೊಂಡ ಕಾಲುಗಳು, ತಲೆಯಿಂದ ಕಾಲಿನವರೆಗೆ ದೇಹದ ಪ್ರತಿ ಅಂಗವೂ ಪೈಶಾಚಿಕ ಕೃತ್ಯವನ್ನು ಚೀರಿ ಚೀರಿ ಹೇಳುತ್ತಿದ್ದವು.

ಮೃಗವೇ ಆದರೂ ತನ್ನ ಬೇಟೆಯನ್ನು ಅಷ್ಟು ಕ್ರೂರವಾಗಿ ಹಿಂಸಿಸುವುದಿಲ್ಲ. ಅದರದ್ದೇನಿದ್ದರೂ ಬೇಟೆ ಸಿಗುವವರೆಗೆ ಮಾತ್ರ. ಬೇಟೆ ಸಿಕ್ಕ ನಂತರ ಪ್ರಾಣ
ತೆಗೆಯಲು ನೇರ ಗೋಣಿಗೆ ಬಾಯಿ ಹಾಕುತ್ತದೆ. ಎಷ್ಟೆಂದರೂ ಮನುಷ್ಯ ಪ್ರಾಣಿಗಿಂತಲೂ ಕಡೆ ಅಲ್ಲವೇ? ಅದನ್ನು ಆಗಾಗ ದೃಢೀಕರಿಸದಿದ್ದರೆ ಹೇಗೆ?
ಇದು ಒಂದು ಕಡೆಯಾದರೆ, ಈ ಹತ್ಯೆಗೆ ಕಾರಣ ಆ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಎಂಬ ಮಾತಿದೆ. ಅಲ್ಲಿ ವೇಶ್ಯಾವಾಟಿಕೆ, ಅಶ್ಲೀಲ
ಚಿತ್ರಗಳ ಚಿತ್ರೀಕರಣ, ಮಾದಕ ವಸ್ತುಗಳ ಸರಬರಾಜು, ಅಕ್ರಮ ಅಂಗಾಂಗ ಕಸಿ, ಇನ್ನೂ ಅನೇಕ ಅವ್ಯವಹಾರಗಳು ನಡೆಯುತ್ತಿದ್ದವು. ಸಾವಿಗೀಡಾದ
ವಳಿಗೆ ಅದರ ಪುರಾವೆ ದೊರಕಿತ್ತು, ಅದಕ್ಕಾಗಿ ಅವಳನ್ನು ಮುಗಿಸಲಾಯಿತು ಎಂಬ ಮಾತೂ ಇದೆ.

ಇರಲೂಬಹುದು, ಏಕೆಂದರೆ ಆ ಆಸ್ಪತ್ರೆಯಲ್ಲಿ ಇಂಥ ಘಟನೆ ನಡೆದದ್ದು ಇದೇ ಮೊದಲ ಬಾರಿ ಯೇನೂ ಆಲ್ಲ. ಅದೇ ಆಸ್ಪತ್ರೆ ಮತ್ತು ವೈದ್ಯಕೀಯ
ವಿದ್ಯಾಲಯದಲ್ಲಿ ಕಳೆದ ೨೦ ವರ್ಷದಲ್ಲಿ ವಿದ್ಯಾರ್ಥಿ ಗಳು, ವೈದ್ಯರು, ಪ್ರಾಧ್ಯಾಪಕರೂ ಸೇರಿದಂತೆ ಕನಿಷ್ಠ ೫ ಅಸಹಜ ಸಾವು ಸಂಭವಿಸಿದೆ. ಆ ಸಾವುಗಳು ಕೈ ನರ ಕತ್ತರಿಸಿಕೊಂಡು, ಮಹಡಿಯಿಂದ ಜಿಗಿದು, ಉರುಳು ಹಾಕಿಕೊಂಡು, ಅತಿಯಾದ ಮಾದಕ ವಸ್ತುಗಳ ಸೇವನೆ ಇತ್ಯಾದಿಗಳಿಂದ ಆದದ್ದು. ವಿಚಿತ್ರ
ವೆಂದರೆ ಇದೆಲ್ಲವನ್ನೂ ಅಲ್ಲಿಯ ಆಡಳಿತ ಮಂಡಳಿ ಆತ್ಮಹತ್ಯೆ ಎಂದಿತು. ಸಂಬಂಧಪಟ್ತವರು ಮೊದಲೇ ಎಚ್ಚೆತ್ತುಕೊಂಡು ತನಿಖೆ ನಡೆಸಿದ್ದಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ.

ಎಂಥ ವಿಚಿತ್ರ ನೋಡಿ, ಜನರ ಪ್ರಾಣ ಉಳಿಸಲು ಹೋರಾಡುವ ವೈದ್ಯರು, ಅದೇ ವೈದ್ಯರನ್ನು ಬಲಾತ್ಕರಿಸಿ ಪ್ರಾಣ ತೆಗೆಯುವ ರಾಕ್ಷಸರು, ಇಬ್ಬರೂ ಒಂದೇ ಜಾಗದಲ್ಲಿ! ಅದಕ್ಕಿಂತಲೂ ವಿಚಿತ್ರ ಎಂದರೆ, ಈ ಘಟನೆಯ ವಿರುದ್ಧ ರಾಜ್ಯದ ಮುಖ್ಯಮಂತ್ರಿ, ಆರೋಗ್ಯ ಮಂತ್ರಿ ಮತ್ತು ಗೃಹಮಂತ್ರಿಯವರಿಂದ (ಮೂರೂ ಒಬ್ಬರೇ) ಪ್ರತಿಭಟನೆ!

ಇಂದು ಜನ ೧೨ ವರ್ಷದ ಹಿಂದೆ ದೆಹಲಿಯಲ್ಲಿ ನಡೆದ ‘ನಿರ್ಭಯಾ’ ಪ್ರಕರಣ, ನಂತರದ ಹೈದರಾಬಾದ್, ಉನ್ನಾವ್, ಸಂದೇಶ್‌ಖಾಲಿ, ಮೊನ್ನೆಯ
‘ಅಭಯಾ’ ಘಟನೆಯಾವರೆಗೆ ಮಾತನಾಡುತ್ತಿದ್ದಾರೆ. ೫೦ ವರ್ಷ ಮೊದಲು ನಡೆದ ಅರುಣಾ ಶಾನ್ ಭಾಗ್ ಕಥೆ ಯಾರೂ ಮಾತನಾಡುತ್ತಿಲ್ಲ ಏಕೆ?
ಮುಂಬೈನಲ್ಲಿ ದಾದಿಯಾಗಿದ್ದ ಕಾರವಾರದ ಕನ್ನಡತಿಯನ್ನು ಎಲ್ಲರೂ ಮರೆತರೇ? ಮರೆಯದೇ ಇನ್ನೇನು? ಆ ತಾಯಿಯನ್ನು ಬಲಾತ್ಕಾರ ಮಾಡಲು
ಯತ್ನಿಸಿ, ಕೊರಳಿಗೆ ಸರಪಳಿ ಸುತ್ತಿ ಸಾಯಿಸಲು ಯತ್ನಿಸಿದ ವ್ಯಕ್ತಿ ಕೇವಲ ೭ ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾದರೆ ಹೇಗೆ ನೆನಪಿರಲು
ಸಾಧ್ಯ? ಅವನಿಗೆ ಬಲಿಪಶುವಾದವಳು ೪೨ ವರ್ಷ ಬಳ್ಳಿಯಿಂದ ಬೇರೆಯಾದ ಕುಂಬಳಕಾಯಿಯಂತೆ ಆಸ್ಪತ್ರೆಯ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದಳು.

ಕೊನೆಗೊಂದು ದಿನ ನ್ಯುಮೋನಿಯಾದಿಂದ ಸಾವನ್ನಪ್ಪಿದಳು. ಅಂದಿನ ಅರುಣಾ ಆಗಲಿ, ನಂತರದ ನಿರ್ಭಯಾ ಆಗಲಿ ಅಥವಾ ಇತ್ತೀಚಿನ ಅಭಯಾ
ಆಗಲಿ, ಏನು ಬದಲಾಗಿದೆ ಎಂದರೆ, ಹೆಸರು, ಸ್ಥಳ ಮಾತ್ರ. ಘಟನೆ, ಪರಿಣಾಮ ಒಂದೇ! ಉಳಿದಂತೆ ವಿಚಾರಣೆಯ ವೇಗದಗಲಿ, ಕ್ರಮದಗಲಿ, ಶಿಕ್ಷೆಯಗಲಿ ಯಾವುದೇ ಬದಲಾವಣೆ ಯಾಗಲಿಲ್ಲ.

ಅದೆಲ್ಲ ಹೋಗಲಿ, ಇಂಥ ಅದೆಷ್ಟೋ ಘಟನೆಗಳು ನಡೆದಾಗ ಎಷ್ಟು ಬಾರಿ ಜನರ ವಿಪರೀತ ಆಕ್ರೋಶ ಭುಗಿಲೆದ್ದಿದೆ? ಕೇವಲ ನಾಲ್ಕೋ-ಐದೋ ಬಾರಿ
ಮಾತ್ರ. ಜನರ ಆಕ್ರೋಶ, ಪ್ರತಿಭಟನೆ ಜೋರಾದಾಗ ಒಮ್ಮೆ ಆಡಳಿತ ಚುರುಕಾಗುತ್ತದೆ, ‘ಕಠಿಣ ಕ್ರಮ(!)’ ಕೈಗೊಳ್ಳುವ ಹೇಳಿಕೆ ಬರುತ್ತದೆ ನಂತರ
ಮಳೆಗಾಲದ ಠುಸ್ ಪಟಾಕಿಯಾಗುತ್ತದೆ. ಭಾರತದಲ್ಲಿ ಪ್ರತಿನಿತ್ಯ ೯೦ ಬಲಾತ್ಕಾರ ನಡೆಯುತ್ತದೆ ಎಂಬ ಅಂಕಿ-ಅಂಶವಿದೆ. ಇದು ಜನರ ಗಮನಕ್ಕೆ ಬಂದು, ಕೇಸು ದಾಖಲಾಗಿರುವ ಸಂಖ್ಯೆ. ಇನ್ನು ಗಮನಕ್ಕೆ ಬಾರದ ಸಂಖ್ಯೆ ಎಷ್ಟು ಎಂಬುದನ್ನು ದೇವರೇ ಬಲ್ಲ. ಮಾನವ ರೂಪದಲ್ಲಿರುವ ಪಿಶಾಚಿಗಳು ಸ್ವತಃ ದೇವರೇ ಬಂದರೂ ಬಿಡುವವರಲ್ಲ.

ಕಾಮಪಿಶಾಚಿಗಳಿಗೆ ಈಗಿನ ಕಾನೂನು ವ್ಯವಸ್ಥೆಯ ಭಯವೇ ಇಲ್ಲ. ಇದ್ದಿದ್ದರೆ, ಕೋಲ್ಕತಾದಲ್ಲಿ ಬಂಧನಕ್ಕೊಳಗಾದ ಆರೋಪಿ ‘ಬೇಕಾದರೆ ನನ್ನನ್ನು ಗಲ್ಲಿಗೆ ಏರಿಸಿ’ ಎಂದು ಹೇಳುತ್ತಿರಲಿಲ್ಲ. ಇದು ಇಷ್ಟು ಬೇಗ ಇತ್ಯರ್ಥವಾಗುವ ವಿಷಯವಲ್ಲ ಎಂಬುದು ಆ ಕ್ರಿಮಿಗೂ ಗೊತ್ತು. ಅಸಲಿಗೆ ಭಾರತದಲ್ಲಿ ಬಹುತೇಕ ಜನರಿಗೆ ಕಾನೂನಿನ ಭಯವೇ ಇಲ್ಲ. ಉಳಿದವರಿಗೆ ಈಗ ಇರುವ ಕಾನೂನಿನ ಮೇಲೆ ಅಥವಾ ವ್ಯವಸ್ಥೆಯ ಮೇಲೆ ನಂಬಿಕೆ ಉಳಿದಿಲ್ಲ. ತನ್ನನ್ನು
ಗಲ್ಲಿಗೇರಿಸಿ ಎಂದವನ ಪರವಾಗಿ ವಾದಿಸಲೂ ಜನ ಸಿಗುತ್ತಾರೆ. ಸಣ್ಣ-ಪುಟ್ಟ ವ್ಯಾಜ್ಯ, ತಕರಾರು, ಕಳ್ಳತನ ಇತ್ಯಾದಿಗಳಾದರೆ ಹೌದು; ಕೊಲೆ, ಬಲಾತ್ಕಾರ,
ಅದರಲ್ಲೂ ಅಮಾನುಷವಾಗಿ ವರ್ತಿಸಿದವರಿಗೆ ಮಾನವ ನಿರ್ಮಿತ, ಮನುಷ್ಯರಿಗಾಗಿ ನಿರ್ಮಿಸಿದ ಕಾನೂನು ಏಕೆ? ಅವರು ಅದಕ್ಕೆ ಅರ್ಹರಲ್ಲ.

ವಿಚಾರಣೆಯ ನೆಪದಲ್ಲಿ ತಿಂಗಳುಗಟ್ಟಲೆ ತೆಗೆದು, ಆಮೇಲೆ ಜೀವಾವಧಿ ಶಿಕ್ಷೆಯ ನೆಪದಲ್ಲಿ ಹದಿನೈದೋ, ಇಪ್ಪತ್ತೋ ವರ್ಷ ಜೈಲಿನಲ್ಲಿಟ್ಟು, ಹೊಟ್ಟೆ ಹೊರೆಯುವುದಕ್ಕಿಂತ ತಿಂಗಳೊಪ್ಪತ್ತಿನ ಒಳಗೆ ವಿಚಾರಣೆ ನಡೆಸಿ, ಅಪರಾಧಿಗೆ ಅವರು ಬೇರೆಯ ವರನ್ನು ಯಾವ ರೀತಿ ಸಾಯಿಸಿದ್ದರೋ ಅದೇ ರೀತಿ ಶಿಕ್ಷೆ ನೀಡುವುದು ಒಳ್ಳೆಯದಲ್ಲವೇ? ಇದು ಶರಿಯಾ ಕಾನೂನು ಎನಿಸ ಬಹುದು. ಆದರೆ, ಈಗಿರುವ ಕಾನೂನಿಗೆ ಜನ ಬೇಸತ್ತಿದ್ದಾರೆ.

ಅದಕ್ಕಾಗಿಯೇ ಹೈದರಾಬಾದಿನಲ್ಲಿ ನಡೆದ ಬಲಾತ್ಕಾರದ ನಂತರ ನಡೆದ ಎನ್ಕೌಂಟರ್ ಅನ್ನು ಬಹುತೇಕ ಭಾರತೀ ಯರು ಹಬ್ಬದೋಪಾದಿಯಲ್ಲಿ ಸಂಭ್ರಮಿಸಿದ್ದು. ಇರಲಿ, ಇಷ್ಟಾದರೂ ಈ ವೈದ್ಯರುಗಳು ಬದಲಾ ಗುವುದಿಲ್ಲ. ಬೇಕಾದರೆ ನೋಡಿ, ನಾಳೆ ಅದೇ ಆರೋಪಿಗೆ ಆರಾಮಿಲ್ಲ ಎಂದಾದರೆ ಯಾವುದೋ ವೈದ್ಯ ಮದ್ದು ಕೊಟ್ಟು ಬರುತ್ತಾನೆ. ಆತನ ಪ್ರಾಣ ಹೋಗುವ ಸಂದರ್ಭ ಬಂದರೆ ಶತಾಯುಗತಾಯು ಆತನ ಪ್ರಾಣ ಉಳಿಸಲು ಯತ್ನಿಸು ತ್ತಾನೆ. ಆ ಕಾಲದಲ್ಲಿ ಅವನ ವೃತ್ತಿಧರ್ಮ ಜಾಗೃತವಾಗುತ್ತದೆ. ವೈದ್ಯರೇ, ಬಿಟ್ಟುಬಿಡಿ, ಅಂಥವರು ನೀವು ನೀಡುವ ಭಿಕ್ಷೆಗೆ ಅರ್ಹರಲ್ಲ.

ರಾಷ್ಟ್ರೀಯ ವೈದ್ಯಕೀಯ ಮಂಡಳಿಯ ಪ್ರಕಾರ ಭಾರತದಲ್ಲಿ ೧೩ ಲಕ್ಷಕ್ಕೂ ಹೆಚ್ಚು ಅಲೋಪತಿ ವೈದ್ಯರಿದ್ದಾರೆ. ಪ್ರತಿ ವರ್ಷ ೭೦-೮೦ ಸಾವಿರ ವಿದ್ಯಾರ್ಥಿ ಗಳು ವೈದ್ಯಕೀಯ ಪದವಿ ಪಡೆದು ಹೊರಬರುತ್ತಿದ್ದಾರೆ. ಹತ್ತು ವರ್ಷದ ಕೆಳಗಿನ ಅಂಕಿ-ಅಂಶಕ್ಕೆ ಹೋಲಿಸಿದರೆ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಶೇ.೮೦ರಷ್ಟು ಹೆಚ್ಚಾಗಿದ್ದು, ಇಂದು ದೇಶದಾದ್ಯಂತ ೭೦೦ಕ್ಕೂ ಅಧಿಕ ಕಾಲೇಜುಗಳಿವೆ. ಇದರ ಜತೆಗೆ ೬.೫ ಲಕ್ಷ ಆಯುಷ್ ವೈದ್ಯರಿದ್ದಾರೆ. ವರದಿಯ ಪ್ರಕಾರ ದೇಶದಲ್ಲಿ ಪ್ರತಿ ೮೫೦ ಜನರಿಗೆ ಒಬ್ಬ ವೈದ್ಯರಿದ್ದಾರಂತೆ. ನಿಜ ಎಂದೇ ಇಟ್ಟುಕೊಳ್ಳೋಣ, ಅಷ್ಟು ಸಾಕೆ? ಸ್ವೀಡನ್, ಗ್ರೀಸ್‌ನಂಥ ದೇಶದಲ್ಲಿ ಪ್ರತಿ ೨೦೦-೨೫೦ ಜನರಿಗೆ ಒಬ್ಬ ವೈದ್ಯರಿರುವಾಗ ಭಾರತ ಎಷ್ಟು ಹಿಂದಿದೆ ಎಂದು ತಿಳಿಯುತ್ತದೆ.

ಭಾರತದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಈಗ ತೆರಬೇಕಾದ ಹಣಕ್ಕೆ ಹೆದರಿ ಕೆಲವರು ವೈದ್ಯಕೀಯ ಅಭ್ಯಾಸ ಮಾಡುತ್ತಿಲ್ಲ. ಸಮಯದ ಮಿತಿ ಇಲ್ಲದೇ ಇರುವುದರಿಂದ ಕೆಲವರು ಆ ವೃತ್ತಿಗೆ ಹೋಗುವುದಿಲ್ಲ. ಇನ್ನು ಅವರಿಗೆ ಸುರಕ್ಷತೆಯೂ ಇಲ್ಲವೆಂದರೆ ಕಥೆ ಮುಗಿಯಿತು. ‘ಬೇಟಿ ಬಚಾವೊ, ಬೇಟಿ ಪಢಾವೊ’, ‘ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ’ ಎನ್ನುತ್ತಾರಲ್ಲ, ಓದುವ ಸ್ಥಳದ ರಕ್ಷಣೆ ಇಲ್ಲದಿದ್ದಾಗ ಓದಿಸುವುದು ಹೇಗೆ? ಬದುಕುವುದು ಹೇಗೆ? ಬದುಕಿಸುವುದು ಹೇಗೆ? ಹೆಣ್ಣು ಮಕ್ಕಳು ಬದುಕಬೇಕು ಎಂದರೆ ಮನುಷ್ಯನ ಮುಖವಾಡ ತೊಟ್ಟ ರಾಕ್ಷಸರಿಗೆ ಸರಿಯಾದ ಪಾಠ ಓದಿಸಬೇಕು.

ಕೊನೆಯದಾಗಿ, ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ನೋಡಿದ ಒಂದು ವಾಕ್ಯ: ‘ಬಲಾತ್ಕಾರವಾದಾಗ ಪ್ರತಿ ಬಾರಿ ಮೇಣದಬತ್ತಿಯನ್ನೇ ಯಾಕೆ
ಸುಡಬೇಕು? ಒಮ್ಮೆಯಾದರೂ ಬಲತ್ಕಾರಿಯನ್ನು ಸುಟ್ಟುಬಿಡಿ!’

ಸಾಧ್ಯವೇ?