Thursday, 19th September 2024

ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

ಕೃಷ್ಣ ಎಂದಿನಂತೆ ಬೆಣ್ಣೆ ಕದಿಯಲು ಹೋದ. ಯಶೋಧೆಗೆ ಅವನ ತುಂಟತನ ನೋಡಿ ಸಾಕಾಗಿತ್ತು. ಸರಿ ಬೆಣ್ಣೆಯ ಕುಡಿಕೆಯನ್ನ ನೆಲುವಿನ ಮೇಲೆ ಕಟ್ಟಿ ಒಂದು ಗಂಟೆಯನ್ನ ಕಾವಲಿಗೆ ನೇಮಿಸಿ ಕೃಷ್ಣ ಬಂದು ಬೆಣ್ಣೆ ಕದ್ದರೆ ತನಗೆ ಅರುಹುವಂತೆ ಹೇಳುತ್ತಾಳೆ.

ಕೃಷ್ಣ ಬಂದವನು ಅಮ್ಮ ಕಟ್ಟಿದ ಗಂಟೆ ನೋಡುತ್ತಾನೆ. ಸರಿ ಗಂಟೆಗೆ ತಾಕೀತು ಮಾಡುತ್ತಾ ‘ನಾ ಬೆಣ್ಣೆ ಕದಿಯೋದನ್ನ ಅಮ್ಮನಿಗೆ ಹೇಳಬಾರದು’
ಎನ್ನುತ್ತಾನೆ ಗಂಟೆ ಒಪ್ಪಿಕೊಳ್ಳುತ್ತದೆ. ಕೃಷ್ಣ ಎಂದಿನಂತೆ ಗೆಳೆಯರ ಸಹಾಯದಿಂದ ಬೆಣ್ಣೆಯ ಗಡಿಗೆ ಇಳಿಸಿ ಎಲ್ಲರಿಗೂ ಬೆಣ್ಣೆ ಹಂಚುತ್ತಾನೆ. ಗಂಟೆ ಅವನಿಗೆ ಕೊಟ್ಟ ಮಾತಿನಂತೆ ಸುಮ್ಮನಿರುತ್ತದೆ. ಗೆಳೆಯರೆಲ್ಲ ಖುಷಿಖುಷಿಯಿಂದ ಬೆಣ್ಣೆಯನ್ನು ಆಸ್ವಾದಿ ಸುತ್ತಾ ತಿಂದರು. ಎಲ್ಲರಿಗೂ ಹಂಚಿದ ಕೃಷ್ಣ ತಾನೂ ತಿನ್ನಲು ಬಾಯಿಗಿಡುತ್ತಾನೆ ಅಷ್ಟೇ.. ಗಂಟೆ ಒಂದೇ ಸಮ ಸದ್ದು ಮಾಡಲು ಶುರು ಮಾಡುತ್ತದೆ.

ಗೋಪಮ್ಮ ಓಡಿ ಬಂದು ಕೃಷ್ಣನನ್ನ ಹಿಡಿಯುತ್ತಾಳೆ ಎಂದಿನಂತೆ ಬಣ್ಣದ ಮಾತಿನಿಂದ ಅಮ್ಮನನ್ನ ನಗಿಸಿದ ಕೃಷ್ಣ ಅಮ್ಮನಿಂದ ಮುತ್ತು ಪಡೆದು ಕೊಂಡು ಅಮ್ಮನನ್ನ ಮರುಳು ಮಾಡುತ್ತಾನೆ. ಎಲ್ಲ ಆದ ಮೇಲೆ ಗಂಟೆಯನ್ನ ತರಾಟೆಗೆ ತೆಗೆದುಕೊಳ್ಳುತ್ತಾನೆ. ‘ಅಲ್ಲ, ನನಗೆ ಮಾತು ಕೊಟ್ಟಿದ್ದೇ ತಾನೇ? ಎಲ್ಲರೂ ತಿನ್ನುವವರೆಗೂ ಸುಮ್ಮನಿದ್ದು ನಾ ತಿನ್ನುವಾಗ ಏಕೆ ಹೀಗೆ ಮಾಡಿದೆ?’ ಅಂದು ಕೇಳುತ್ತಾನೆ. ಗಂಟೆ ‘ಇದರಲ್ಲಿ ನನ್ನ ತಪ್ಪೇನೂ ಇಲ್ಲ ಗೋಪಾಲ.. ನಿನಗೆ ನೈವೇದ್ಯ ಮಾಡುವಾಗ ನಾನು ಸದ್ದು ಮಾಡುವುದು ನನಗೆ ಅಭ್ಯಾಸವಾಗಿ ಬಿಟ್ಟಿದೆ’ ಅನ್ನುತ್ತದೆ..!

ಕೃಷ್ಣ ನಕ್ಕು ಬಿಡುತ್ತಾನೆ… ಬಾಲಕೃಷ್ಣನ ಈ ತುಂಟಾಟಗಳು ಅವನು ಭಗವಂತ ಎನ್ನುವ ಭಕ್ತಿಗಿಂತ, ನಮ್ಮದೇ ಮನೆಯ ಕೂಸು ಎನ್ನುವ ವಾತ್ಸಲ್ಯವನ್ನ ಅವನಲ್ಲಿ ಮೂಡಿಸುತ್ತದೆ. ನಮ್ಮ ಮನೆಯಲ್ಲಿರುವ ಪುಟ್ಟ ಮಗುವೇ ನಮಗೆ ತುಂಟ ಕೃಷ್ಣನಾಗುತ್ತಾನೆ. ಹೆಣ್ಣು ಮಗು ರಾಧೆಯಾಗುತ್ತಾಳೆ. ಮಗುವಿನ ತುಂಟಾಟಗಳಲ್ಲಿ ಕೃಷ್ಣನನ್ನು ಅವನ ತುಂಟಾಟಗಳನ್ನ ಕಾಣುತ್ತಾ ಸಂತೋಷ ಪಡುತ್ತೇವೆ. ಕೃಷ್ಣ ತತ್ವವೇ ಅಂತದ್ದು ಪ್ರತಿಯೊಂದು ವಯಸ್ಸಿನವರಿಗು ಅವರಿಗೆ ಬೇಕಾದ ಸಾಂತ್ವನ, ಪ್ರೀತಿ, ಧೈರ್ಯ ಸಮಾಧಾನವನ್ನು ನೀಡುವಂತದ್ದು.

ಹೀಗಾಗಿಯೇ ಎಳೆಯ ಮಗುವಿನಿಂದ ಹಣ್ಣು ಹಣ್ಣು ಮುದುಕರವರೆಗೂ ಎಲ್ಲರಿಗೂ ಕೃಷ್ಣ ಪ್ರೀತಿಯ ಬಂಧು. ಅವನಲ್ಲಿ ನಮ್ಮ ಆಸೆಗಳನ್ನು ಹರಿಕೆ ಗಳನ್ನು ಯಾವುದೇ ಮುಲಾಜಿಲ್ಲದೆ ಹೇಳಿಕೊಳ್ಳುವ, ಜಗಳಾಡಿ ನಮಗೆ ಬೇಕಾದನ್ನು ಪಡೆದುಕೊಳ್ಳುವ ಸಲುಗೆ ಇರುವುದು ಕೃಷ್ಣನೊಂದಿಗೆ ಮಾತ್ರ. ಪ್ರೀತಿಯ ಪರಾಕಾಷ್ಟೆಯ ಭಾವ ರೂಪವೂ ಕೃಷ್ಣನೆ. ನಮ್ಮನ್ನು ಪ್ರೀತಿಸುವ ಜೀವ ಕೃಷ್ಣನಂತೆ ನಮ್ಮನ್ನು ಆರಾಧಿಸಬೇಕು, ಅರ್ಥ ಮಾಡಿಕೊಳ್ಳಬೇಕು. ಸ್ನೇಹದಿಂದ ಜೊತೆ ಇರಬೇಕು ಎಂದು ಆಶಿಸುವ ಹೆಣ್ಣು ಮನಸುಗಳಿಗೆ ಕೃಷ್ಣ ಸದಾಕಾಲಕ್ಕೂ ಪ್ರೇಮ ಸ್ವರೂಪಿ.

ಕೃಷ್ಣ ಮಾನವರೂಪಿ ಭಗವಂತನೋ ಅಥವಾ ಭಗವಂತರೂಪಿ ಮಾನವನೋ ಅಂತೂ ಕೃಷ್ಣನೆನ್ನುವ ಕೃಷ್ಣ ಎಲ್ಲರಿಗೂ ಇಷ್ಟವಾಗುವುದು ಅವನ ಅಪರಿಮಿತ ಪ್ರೀತಿ ವಾತ್ಸಲ್ಯದಿಂದ. ಓಹ್ ಇಂತಹ ಒಬ್ಬ ಕಂದನೋ, ಆಪ್ತನೋ, ಪ್ರಿಯಕರನೋ, ಹಿತೈಷಿಯೋ, ಮಂತ್ರಿಯೋ, ರಕ್ಷಕನೋ ಇರಬಾರ ದಿತ್ತೇ ಅನಿಸುವಷ್ಟು ಆಯಾ ವಯಸ್ಸಿಗೆ ಇಷ್ಟವಾಗುತ್ತಾ ಹೋಗುತ್ತಾನೆ. ಕೃಷ್ಣನಂತಹ ಒಬ್ಬ ವ್ಯಕ್ತಿ ನಮ್ಮ ಜೀವನದಲ್ಲಿ ಇದ್ದರೂ ಸದಾ ಕಾಲಕ್ಕೂ ನಮಗೆ ಸರಿಯಾದ ಸಮಯಕ್ಕೆ ಸರಿಯಾದ ದಾರಿ ತೋರಿಸಿ ಜೀವನದಲ್ಲಿ ಗೆಲ್ಲಲು ಬೆಳಕಾಗಿ ನಿಲ್ಲುತ್ತಾನೆ.

ಇಂತಹ ಕೃಷ್ಣನ ವ್ಯಕ್ತಿತ್ವವನ್ನು ಆರಾಧಿಸಿ ನಮ್ಮಲ್ಲಿ ಆವಹಿಸಿಕೊಂಡಾಗ ಮತ್ತೊಬ್ಬರ ನೋವಿಗೆ ಸ್ಪಂದಿಸುವ, ಅವರನ್ನ ಯಾವುದೇ ಅಪೇಕ್ಷೆ ಇಲ್ಲದೆ
ಪ್ರೀತಿಸುವ, ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿ ಪಾತ್ರರಿಗೆ ನೆರವಾಗುವ ವಿಶೇಷ ಗುಣಗಳು ನಮ್ಮಲ್ಲೂ ಚಿಗುರೊಡೆಯಲು ಪ್ರಾರಂಭಿಸುತ್ತದೆ. ಕೃಷ್ಣ ಎಂದರೆ ಎಲ್ಲರಿಗೂ ಪ್ರಿಯ ಎಂದರ್ಥ. ಇಂತಹ ಎಲ್ಲರಿಗೂ ಪ್ರಿಯವಾಗುವ ವ್ಯಕ್ತಿತ್ವ ನಿಮ್ಮದಾಗಲಿ ಎನ್ನುವ ಹಾರೈಕೆ.