Wednesday, 27th November 2024

ಕೇವಲ ಮುಖಪುಟ ನೋಡಿ ವೀರಾವೇಶವೇ ?

ವಚನ ವಿವಾದ

ರವಿ ಹಂಜ್

ಷಟ್‌ಸ್ಥಲ ಸಿದ್ಧಾಂತದ ಪ್ರತಿಪಾದಕರಾದ ಚೆನ್ನಬಸವಣ್ಣನ ಹುಟ್ಟಿನ ಬಗ್ಗೆ ಡಾ. ಎಂ.ಎಂ. ಕಲಬುರ್ಗಿಯವರು ಸಂಶೋಧನೆ ನಡೆಸಿ, “ಚೆನ್ನಬಸವಣ್ಣನು ಬಸವಣ್ಣನವರ ತಂಗಿ ಅಕ್ಕನಾಗಮ್ಮ ಮತ್ತು ಡೋಹರ ಕಕ್ಕಯ್ಯನಿಗೆ ಹುಟ್ಟಿದವನು” ಎಂದು ಒಬ್ಬ ವಿರಕ್ತ ಪೀಠಾಧಿಪತಿಗಳಿಗೆ ತಿಳಿಸಿದರು.

ವಿರಕ್ತರು, “ಓಹ್, ಹಾಗಿದ್ದರೆ ಈ ವಿಚಾರವನ್ನು ಏಕೆ ಎಲ್ಲಿಯೂ ದಾಖಲಿಸಿಲ್ಲ?” ಎಂದಿದ್ದಕ್ಕೆ. “ಕೆಳಜಾತಿಯ ಕಕ್ಕಯ್ಯನನ್ನು ಅಕ್ಕನಾಗಮ್ಮ ಮದುವೆ
ಯಾಗಿದ್ದಳು ಎಂದರೆ ಅದು ಅವಮಾನಕರವೆಂದು ಬಗೆದು ಅದನ್ನು ಮುಚ್ಚಿಡಲಾಗಿದೆ” ಎಂದರು. ಇದು ಕಲಬುರ್ಗಿಯವರ ರೋಚಕ ಸಂಶೋಧನೆ ಯಾಗಿತ್ತು. “ಸರಿ, ಅದಕ್ಕೆ ಆಧಾರವೇನು?” ಎಂದಿದ್ದಕ್ಕೆ, “ಕೆಲವು ಪುರಾಣಗಳಲ್ಲಿ ಚೆನ್ನಬಸವಣ್ಣನನ್ನು ಕಕ್ಕಯ್ಯನ ‘ಪ್ರಸಾದದಿಂದ’ ಹುಟ್ಟಿದವನು ಎಂದಿದೆ. ವಾಚ್ಯವಾಗಿ ಹೇಳಲಾಗದ್ದನ್ನು ಪುರಾಣಗಳಲ್ಲಿ ಹೀಗೆ ಸೂಚ್ಯವಾಗಿ ಹೇಳಲಾಗಿದೆ” ಎಂಬುದು ಅವರ ಪುರಾವೆಯಾಗಿತ್ತು.

ಅವರ ನವರಸ-ಸಂಶೋಧನೆಯಿಂದ ರೋಮಾಂಚನಗೊಂಡ ವಿರಕ್ತ ಮಹಾಸ್ವಾಮಿಗಳು ೨೬.೧೦.೧೯೮೦ರ ಕಾರ್ಯಕರ್ತರ ಮಹಾಸಭೆಯಲ್ಲಿ, “ಚೆನ್ನ ಬಸವಣ್ಣನು ಡೋಹರ ಕಕ್ಕಯ್ಯನ ಮಗ. ಈ ಜನ್ಮರಹಸ್ಯವನ್ನು ನಾಡಿನ ಖ್ಯಾತ ಸಂಶೋಧಕರು ಕಂಡುಹಿಡಿದಿದ್ದಾರೆ” ಎಂದು ಘೋಷಣೆ ಮಾಡಿದ್ದರು. ಇದೇ ತರ್ಕವನ್ನು ‘ನಿನ್ನ ಪ್ರಸಾದ ನಾನಯ್ಯ’ ಎಂಬ ವಚನ ವಿನಯದ ಮಾತಿಗೆ ಅನ್ವಯಿಸಿದರೆ ಆಗುವ ಅನರ್ಥ ಎಂಥದ್ದಿರಬಹುದು?! ಖುದ್ದು ಚೆನ್ನಬಸವಣ್ಣನೇ ನಾನು ನಿಮ್ಮ ಪ್ರಸಾದ ಎಂದು ಬಸವಣ್ಣನ ಕುರಿತು ಈ ವಚನದಲ್ಲಿ ಹೇಳಿದ್ದಾನೆ: ‘ಧರೆಯಾಕಾಶವಿಲ್ಲದಂದು, ಅನಲ ಪವನ ಜಲ ಕೂರ್ಮರಿಲ್ಲದಂದು, ಚಂದ್ರಸೂರ್ಯರೆಂಬವರು ಕಳೆ ದೋರದಂದು, ಆತ್ಮಸ್ಥಲ ಅನುಭಾವಕ್ಕೆ ಬಾರದಂದು, ನಿತ್ಯ ನಿಜಲಿಂಗವ ಬಲ್ಲರಾರಯ್ಯ ನೀವಲ್ಲದೆ? ಮಹಾಘನಕ್ಕೆ ಘನ ವಾಹನವಾಗಿ, ಅಗಮ್ಯಸ್ಥಾನದಲ್ಲಿ ನಿಂದು ಭರಿತರಾಗಿರಬಲ್ಲರಾರಯ್ಯಾ ನೀವಲ್ಲದೆ? ನಿಮ್ಮ ಒಕ್ಕು ಮಿಕ್ಕ ಶೇಷಪ್ರಸಾದದ
ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ ವಿಭೂತಿ ಪಟ್ಟವ ಕಟ್ಟಿ, ಹಸ್ತಮಸ್ತಕಸಂಯೋಗವ ಮಾಡಿ ಎನ್ನನುಳುಹಿದರಾ ರಯ್ಯ ನೀವಲ್ಲದೆ? ಕೂಡಲ ಚೆನ್ನಸಂಗಮದೇವರ ಸಾಕ್ಷಿಯಾಗಿ ನಾನು ನಿಮ್ಮ ಕರುಣದ ಕಂದನೆಂಬುದ ಮೂರು ಲೋಕ ಬಲ್ಲುದು ಕಾಣಾ ಸಂಗನಬಸವಣ್ಣ’.

ಇಲ್ಲಿ ಡಾ.ಎಂ.ಎಂ.ಕಲಬುರ್ಗಿಯವರ ಸಂಶೋಧನಾ ‘ಪ್ರಸಾದ’ದ ತರ್ಕವನ್ನು ಅನ್ವಯಿಸಿದರೆ ಆಗುವ ಅಧ್ವಾನವನ್ನು ಯೋಚಿಸಿದರೆ… ಓಂ ಶ್ರೀ ಗುರು ಬಸವಲಿಂಗಾಯ ನಮಃ! ಇನ್ನು ‘ವೀರಶೈವ’ ಪದವನ್ನು ವಚನಗಳಲ್ಲಿ ತುರುಕಲಾಗಿದೆ ಎನ್ನುವವರು ಪ್ರಮುಖವಾಗಿ ಖ್ಯಾತ ಸಂಶೋಧಕರಾದ
ಎಂ.ಎಂ.ಕಲಬುರ್ಗಿಯವರ ಕಡೆ ಬೆರಳು ತೋರುತ್ತಾರೆ. ಅದಕ್ಕೆ ತಕ್ಕಂತೆ ಡಾ.ಕಲಬುರ್ಗಿಯವರು ವೀರಶೈವ ಎಂಬ ಪದಬಳಕೆಯಾಗಿರುವ ಬಸವ, ಅಲ್ಲಮ, ಅಕ್ಕನ ವಚನಗಳನ್ನು ಪ್ರಕ್ಷೇಪ ವಚನಗಳೆಂದು ತಿರಸ್ಕರಿಸುತ್ತಾರೆ (ಅವರ ಪೂರ್ವೋಕ್ತ ಕೃತಿ, ಪುಟ ೧೪). ಆದರೆ ಅವು ಏಕೆ ಪ್ರಕ್ಷೇಪ ಎನ್ನಲು ಸಮರ್ಥ ಕಾರಣಗಳನ್ನು ಕೊಡುವುದಿಲ್ಲ. ಅದಲ್ಲದೆ ಲಿಂಗಾಯತ ಎಂಬ ಪದಬಳಕೆಯ ವಚನಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವುದಕ್ಕೆ ಸಹ ಅವರು ಯಾವುದೇ ಸಮಜಾಯಿಷಿ ಕೊಟ್ಟಿಲ್ಲ.

ಹೀಗಿದ್ದೂ, ವೀರಶೈವ ಎಂದಿರುವ ಎಲ್ಲಾ ಪ್ರಕ್ಷಿಪ್ತ ವಚನಗಳನ್ನು ಇವರ ಸಂಪಾದಕತ್ವದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗಿದೆ… ಓಂ ಶ್ರೀ ಬಸವ ಲಿಂಗಾಯ ನಮಃ! ಡಾ.ಕಲಬುರ್ಗಿಯವರ ಕೃತಿ ‘ಲಿಂಗಾಯತ ಸ್ವತಂತ್ರ ಧರ್ಮ’ದಲ್ಲಿನ ‘ವೀರಶೈವ ಇತಿಹಾಸ ಮತ್ತು ಭೂಗೋಲ’ ಎಂಬ ಅಧ್ಯಾಯದಲ್ಲಿ “ಹದಿಮೂರನೇ ಶತಮಾನದ ಪಾಲ್ಕು ರಿಕೆ ಸೋಮನಾಥನ ತೆಲುಗು ಭಾಷೆಯಲ್ಲಿರುವ ‘ಬಸವ ಪುರಾಣಮು’ದಲ್ಲಿ ಲಿಂಗವಂತ, ವೀರಮಾಹೇಶ್ವರ ಪದಗಳಿವೆಯಾದರೂ ವೀರಶೈವ ಪದ ಕಂಡುಬರುವುದಿಲ್ಲ” ಎನ್ನುತ್ತಾ, “ಬಸವಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯು (ಕ್ರಿ.ಶ. ೧೩೬೮) ಕೆಲವೊಮ್ಮೆ ಅಲ್ಲಿಯ ವೀರ ಮಾಹೇಶ್ವರ ಪದಕ್ಕೆ ಬದಲು ಇಲ್ಲಿ ವೀರಶೈವ ಪದವನ್ನು ಬಳಸಿದ್ದಾನೆ.

ಕನ್ನಡದಲ್ಲಿ ವೀರಶೈವ ಪದ ಕಂಡುಬರುವುದು ಇದೇ ಮೊದಲು. ಹಾಗಾಗಿ ವೀರಶೈವ ಪದ ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣಮು ಮತ್ತು ಭೀಮಕವಿಯ ಕನ್ನಡ ಬಸವಪುರಾಣದ ಮಧ್ಯದ ಕಾಲಾವಧಿಯಲ್ಲಿ ಹುಟ್ಟಿದೆಯೆಂದು ಸ್ಪಷ್ಟವಾಗಿ ಹೇಳಬಹುದು” ಎನ್ನುತ್ತಾರೆಯೇ ಹೊರತು, ಇದರಲ್ಲಿ ಲಿಂಗಾಯತ ಪದವೂ ಇಲ್ಲದ್ದನ್ನು ಮಾತ್ರ ಅವರು ಹೇಳುವುದಿಲ್ಲ. ಹಾಗೆಯೇ ಮುಂದುವರಿಯುತ್ತ ಡಾ. ಕಲಬುರ್ಗಿಯವರು, “ಈ ಸಂದರ್ಭ ದಲ್ಲಿ ‘ಆಂಧ್ರ ಪ್ರದೇಶದ ವೀರಶೈವ’ ವಿಷಯವನ್ನು ಕುರಿತ ಪಿಎಚ್‌ಡಿ ಪ್ರಬಂಧದಲ್ಲಿ ಹೇಳಲಾಗಿರುವ “Palakuriki Somanatha was the earliest to use word Virashaiva in Andhra. In his Chaturveda Saram, Somanatha describes lord Hari as Virashaiva, because the latter performed certain heroic deeds, such as offering his own eyes to Shiva, as a token of deep devotion. In Basava Puranam however, he appears to have given deeper meaning to Virashaiva, though the word was not actually used’ (Virashaiva in Andhra, K. Lalitamba p 2) ಎಂಬ ಅಭಿಪ್ರಾಯವನ್ನು ಅವಶ್ಯ ಗಮನಿಸಬೇಕು” ಎನ್ನುತ್ತಾರೆ.

ಆದರೆ ಈ ಮೇಲಿನ ಪಿಎಚ್‌ಡಿ ಉದಾಹರಣೆಯಲ್ಲೇ “ಪಾಲ್ಕುರಿಕೆ ಸೋಮನಾಥನು ತನ್ನ ‘ಚಾತುರ್ವೇದ ಸಾರಂ’ ಕೃತಿಯಲ್ಲಿ ವೀರಶೈವ ಪದವನ್ನು ಆಂಧ್ರ ದಲ್ಲಿ ಪ್ರಪ್ರಥಮವಾಗಿ ಬಳಸಿದ್ದಾನೆ. ಬಸವಪುರಾಣದಲ್ಲಿ ವೀರಶೈವ ಪದವನ್ನು ಬಳಸದಿದ್ದರೂ ಅದನ್ನು ಇನ್ನಷ್ಟು ಗಾಢವಾಗಿಸಿದ್ದಾನೆ” ಎನ್ನುವ
ಲಲಿತಾಂಬ ಅವರ ಇಂಗ್ಲಿಷ್ ಒಕ್ಕಣೆಯನ್ನು ಅರಿಯುವಷ್ಟು ಇಂಗ್ಲಿಷ್ ಪ್ರೌಢಿಮೆ ಡಾ. ಕಲಬುರ್ಗಿಯವರಿಗೆ ಇರಲಿಲ್ಲವೇ?! ಇದ್ದರೆ ಈ ಒಕ್ಕಣೆಯನ್ನು ಬಿಟ್ಟು ಉಳಿದದ್ದನ್ನು ಏಕೆ ಹೆಕ್ಕಿಕೊಂಡರು?… ಓಂ ಶ್ರೀ ಗುರು ಬಸವಲಿಂಗಾಯ ನಮಃ! ಇಂಥ ಅವಘಡಗಳ ಸಾಲು ಸಾಲು ಸಾಧನೆಗಳು ಕಲಬುರ್ಗಿ ಯವರ ತೆಕ್ಕೆಯಲ್ಲಿವೆ.

ಇಂಥ ಸಂಶೋಧಕರನ್ನೇ ಇಂದಿನ ರಾಜಕಾರಣಪ್ರೀತ ಆಧುನಿಕ ಲಿಂಗಾಯತ ಧರ್ಮದ ಹೋರಾಟಗಾರರು ತಮ್ಮ ‘ಸಂಶೋಧನಾ ಲಾಂಛನ’ ವಾಗಿರಿಸಿ ಕೊಂಡು ಅವರ ‘ಪ್ರಸಾದ’ದ ಸಿದ್ಧಮಾದರಿ ಸಂಶೋಧನೆಯಲ್ಲಿ ವಚನಗಳನ್ನು ಗೆರೆ ಕೆರೆ ದರ್ಗಾ ಮುರ್ಗಾ ಚರ್ಗಾ ಜಮಾಖರ್ಚುದಾರರು, ಕಮ್ಯುನಿಸ್ಟರು, ಉದಾರಿಗಳು, ವಾಟ್ಸಾಪಿವೀರರು ತಮ್ಮ ತಮ್ಮ ಮೂಗಿನ ನೇರಕ್ಕೆ ಸಿದ್ಧಾಂತಕ್ಕೆ ವಚನಗಳನ್ನು ವ್ಯಾಖ್ಯಾನಿಸಿ/ ಸಮೀಕರಿಸಿ ಮಾಡಿರುವ ಅಧ್ವಾನಗಳು, ಜಗದಗಲ, ಮುಗಿಲಗಲ… ಓಂ ಶ್ರೀ ಗುರು ಬಸವಲಿಂಗಾಯ ನಮಃ! ಇನ್ನು, ಅಂದು ಇವರ ಸಂಶೋಧನೆ ನಂಬಿ ಭೀಷಣ- ಭಾಷಣ ಮಾಡಿದ್ದ ವಿರಕ್ತರ ಮುಂತಲೆಗಳು ತಮ್ಮ ಹೆಸರಿನ ಹಿಂದಿರುತ್ತಿದ್ದ ಶ್ರೀ ಮ.ನಿ.ಪ್ರ.ಕ್ಕೆ ತಿಲಾಂಜಲಿಯಿಟ್ಟು ಮಾತೃಹೃದಯಿ, ರೈತ ಋಣಿ, ವಿದ್ಯಾಗಣಿ, ಕಲ್ಯಾಣಕಣ್ಮಣಿ, ರಂಗಜಂಗಮ ಮುಂತಾದ ಚಿಂತಕ ಬೆಡಗಿನ ಬಿರುದು ಗಳೊಂದಿಗೆ ಕಲಬುರ್ಗಿ-ಸಂಶೋಧನಾ ಪರಂಪರೆಯ ಕಮ್ಯುನಿಸ್ಟ್ ಪ್ರೊಫೆಸರುಗಳು ಪೊಡಮಟ್ಟ ಗೌರವ ಡಾಕ್ಟರೇಟ್ ಇಟ್ಟುಕೊಂಡು ತಮ್ಮ ಅನುರಕ್ತಿಯನ್ನು ಮೆರೆಯುತ್ತಿರುವುದು… ಓಂ ಶ್ರೀ ಗುರು ಬಸವಲಿಂಗಾಯ ನಮಃ!

ಪ್ರಸ್ತುತ, ‘ವಚನ ದರ್ಶನ’ ಕೃತಿಯ ಹಿನ್ನೆಲೆಯಲ್ಲಿ ಕೇವಲ ಮುಖಪುಟ ನೋಡಿ ವೀರಾವೇಶ ಮೆರೆಯುತ್ತಿರುವ ಇವರ ನಡೆ ಹಾಸ್ಯಾಸ್ಪದ. ಇವರು, ತಮ್ಮ ವಚನ ವ್ಯಾಖ್ಯಾನ ಮಾತ್ರವೇ ಸರಿ, ಉಳಿದವರದು ತಪ್ಪು ಎಂಬ ಫರ್ಮಾನು ಹೊರಡಿಸಿದ್ದಾರೆ. ಅಷ್ಟರ ಮಟ್ಟಿಗೆ ವಚನ ಸಾಹಿತ್ಯದ ಮೇಲೆ ಕಮ್ಯುನಿಸ್ಟರ ಹಕ್ಕೊತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಒಬ್ಬ ವಾಟ್ಸಾಪಿವೀರರು ವಚನ ದರ್ಶನದ ಗೌರವ ಸಂಪಾದಕರಿಗೆ ಕೇಳಿದ ವಚನ ಹೀಗಿತ್ತು: ‘ಕಟ್ಟಿದ ಲಿಂಗವ ಕಿರಿದು ಮಾಡಿ, ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ! ಇಂತಪ್ಪ ಲೊಟ್ಟಿಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ’.

ಇಂದು ತಾಯಂದಿರು ಪ್ರಾಥಮಿಕ ಶಾಲೆಯಲ್ಲಿರುವ ತಮ್ಮ ಮಕ್ಕಳಿಗೆ ‘ಟಿವಿ ನೋಡಬೇಡ, ಮೊಬೈಲ್ ಮುಟ್ಟಬೇಡ, ಕಂಪ್ಯೂಟರ್ ಗೇಮ್ ಆಡಬೇಡ, ಕೇವಲ ಪುಸ್ತಕಗಳನ್ನು ಓದು, ಹೋಮ್‌ವರ್ಕ್ ಮಾಡು, ಇಲ್ಲದಿದ್ದರೆ ಹೊಡೆಯುತ್ತೇನೆ’ ಎನ್ನುವುದರ ಹಿಂದಿನ ಉದ್ದೇಶವೇ ಈ ವಚನದ ಹಿಂದಿನ ಉದ್ದೇಶ ಕೂಡ. ಲಿಂಗವೆಂದು ಕಲ್ಲು ಕಟ್ಟಿಕೊಂಡು ಬಂದವರನ್ನೆಲ್ಲ ಅನುಭವ ಮಂಟಪಕ್ಕೆ ಸೇರಿಸಿಕೊಂಡ ಬಸವಣ್ಣ, ಬೇರೆಲ್ಲ ಬಿಟ್ಟು ಮೊದಲು ಲಿಂಗಪೂಜೆಯಲ್ಲಿ ಸಾಧನೆ ಮಾಡಿ ಎಂಬ ಉದ್ದೇಶವನ್ನು ಅಂಬಿಗರ ಚೌಡಯ್ಯ ಹೀಗೆ ವಾಚ್ಯವಾಗಿ ಹೇಳಿದ್ದಾನೆ.

ಇದನ್ನು ಕಮ್ಯುನಿಸ್ಟ್ ಪ್ರಣೀತರು ಮೂರ್ತಿಪೂಜೆ, ದೇವಾಲಯಗಳನ್ನು ಶರಣರು ಬಹಿಷ್ಕರಿಸಿದ್ದರು ಎಂಬ ತಮ್ಮ ಸಿದ್ಧಾಂತದ ಪುರಾವೆಯಾಗಿ ಬಳಸು
ತ್ತಾರೆ. ಇವರ ವಾದವನ್ನು ಒಪ್ಪುವುದಾದರೆ, ಶ್ರೀಶೈಲ ಬೆಟ್ಟದ ಲಿಂಗವ ಹಿರಿದು ಮಾಡಿದ ಅಕ್ಕಮಹಾದೇವಿ, ನದಿ ಸಂಗಮದ, ಗುಹೆಯಲ್ಲಿನ ಸ್ಥಾವರದ ಲಿಂಗಗಳ ಅಂಕಿತ ಮಾಡಿಕೊಂಡ ಬಸವಣ್ಣ, ಅಲ್ಲಮರ ನಡೆಗೆ ಇದನ್ನು ಅನ್ವಯಿಸಿದರೆ ಆಗುವ ಅಧ್ವಾನ… ಓಂ ಶ್ರೀ ಗುರು ಬಸವಲಿಂಗಾಯ ನಮಃ!
‘ಆರುಹ ಪೂಜಿಸಲೆಂದು ಕುರುಹ ಕೊಟ್ಟೆಡೆ, ಅರುಹ ಮರೆತು ಕುರುಹ ಪೂಜಿಸುವ ಹೆಡ್ಡರಾ ನೋಡಾ ಗುಹೇಶ್ವರ!!’

ವಿ.ಸೂ: ಡಾ. ಎಂ.ಎಂ.ಕಲಬುರ್ಗಿಯವರ ‘ಪ್ರಸಾದ’ ಸಂಶೋಧನೆಯ ವಿಚಾರದ ಪುರಾವೆ ಮತ್ತು ಹೆಚ್ಚಿನ ಮಾಹಿತಿಗೆ ಆಸಕ್ತರು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ರಜತ ಮಹೋತ್ಸವದ ಸ್ಮರಣ ಸಂಚಿಕೆಯಾದ ‘ಚಿನ್ಮೂಲಾದ್ರಿ ಚೇತನ’ದಲ್ಲಿನ ಎಲ್. ಬಸವರಾಜು ಅವರ ಲೇಖನವನ್ನು ಪರಾಂಬರಿಸಬಹುದು. ಅಲ್ಲದೇ ಈ ರಜತ ಮಹೋತ್ಸವದ ಸಮಾರಂಭದಲ್ಲಿ ಹಾಜರಿದ್ದ ಡಾ.ಕಲಬುರ್ಗಿಯವರಿಗೆ ಅವರ ಸಂಶೋಧನೆಗಾಗಿ ಭಕ್ತರು ‘ತಕ್ಕ’ ಉಡುಗೊರೆ ನೀಡಿದ್ದ ಐತಿಹಾಸಿಕ ಸತ್ಯದ ಬಗ್ಗೆ ತಮ್ಮ ಹಿರಿತಲೆಗಳನ್ನು ಪ್ರಶ್ನಿಸಬಹುದು.

(ಲೇಖಕರು ದಾವಣಗೆರೆ ಮೂಲದ
ಶಿಕಾಗೊ ವಾಸಿ ಮತ್ತು ಸಾಹಿತಿ)