Wednesday, 27th November 2024

ಅಡಕೆಯಿಂದ ಹೋದ ಬದುಕನ್ನು ಕಟ್ಟಿಕೊಡೋದ್ಯಾರು ?

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಬಡವಾ ನೀ ಮಡಗಿದಂಗಿರು’ ಎಂಬ ಹೇಳಿಕೆಯನ್ನು ‘ರೈತನೇ ರಾಜಕೀಯ ಆಡುಂಬೊಲದಲ್ಲಿ ಸದಾ ಕುಣಿಯುತ್ತಿರು’ ಎಂದು ಪೂರ್ಣಗೊಳಿಸ ಬಹುದೇನೋ! ಯಾಕೆಂದರೆ, ರಾಜ-ಮಹಾರಾಜರಿಂದ ಹಿಡಿದು ಕವಿಪುಂಗವರು ಕೂಡ ರೈತನ ಹಿರಿಮೆಯನ್ನು ಕೊಂಡಾಡಿದ್ದಾರೆ. ಈತ ಶ್ರಮವಹಿಸಿ ಬೆಳೆ ಬೆಳೆಯದಿದ್ದರೆ, ಹೊಟ್ಟೆಗೆ ಯಾರೆಲ್ಲ ಅನ್ನ ತಿನ್ನುತ್ತಿzರೋ ಅವರೆಲ್ಲ ಮಣ್ಣು ತಿನ್ನುವ ಕಾಲ ಬರುತ್ತದೆ. ಇಂಥ ಸಂದರ್ಭದಲ್ಲಿ, ಆ ದೇವರ ಸೃಷ್ಟಿಯನ್ನು ಬಳಸಿ ಅನ್ನ ಬೆಳೆಯುತ್ತಿರುವ ರೈತ, ಮರೆಯಲ್ಲಿ ನಿಂತು ಕಡುಕಷ್ಟದಲ್ಲೂ ವಿಷಾದದಿಂದ ನಗುತ್ತಿರುವುದನ್ನು ಮಾತ್ರ ಯಾರೂ ಕಾಣುತ್ತಿಲ್ಲವಷ್ಟೇ!

ಕಾಳುಮೆಣಸು ಆಮದು ಕಾರಣದಿಂದ ಒಂದೇ ತಿಂಗಳಲ್ಲಿ ಕೆ.ಜಿ.ಗೆ ೫೫ ರು.ನಷ್ಟು ಬೆಲೆ ಕುಸಿತ ಕಂಡಿದೆ. ಇದಲ್ಲದೆ, ಶುಂಠಿ ಬೆಲೆಯ ಕುಸಿತಕ್ಕೆ ಬೆಳೆಗಾರರು ಕಂಗಾಲಾಗಿದ್ದು, ಒಂದೇ ತಿಂಗಳಲ್ಲಿ ಕ್ವಿಂಟಲಗೆ ೪೦,೫೦೦ರಿಂದ ೪,೦೦೦ ರು.ಗೆ ಇಳಿದಿದೆ. ಇಂಥ ಸಂಕಷ್ಟಗಳ ನಡುವೆಯೇ, ಅಕ್ರಮವಾಗಿ/ಕಳ್ಳಸಾಗಣೆ
ಮೂಲಕ ಕಳಪೆ ಅಡಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ರೈತರ ಬದುಕಿನೊಂದಿಗೆ ಅಡಕೆ ಬೆಳೆಗಾರರೊಂದಿಗೆ ಆಟವಾಡುತ್ತಿದ್ದಾರೆ. ಭಾರತ ದಲ್ಲಿ ಅಡಕೆ ಉತ್ಪಾದನೆಯು ಕರಾವಳಿ ಪ್ರದೇಶದಲ್ಲಿ ಕರಾವಳಿ ರೇಖೆಯಿಂದ ೪೦೦ ಕಿ.ಮೀ. (೨೫೦ ಮೈಲಿ) ಒಳಗೆ ಮತ್ತು ಕೆಲ ಕರಾವಳಿಯೇತರ ರಾಜ್ಯ ಗಳಲ್ಲಿ ಪ್ರಬಲವಾಗಿದೆ.

ಒ೯ಇದು ಅರೆಕೇಸಿಯ ಕುಟುಂಬದ ತಾಳೆಮರ ಜಾತಿಗೆ ಸೇರಿದ್ದು, ಭಾರತದಲ್ಲಿ ಮಾತ್ರವಲ್ಲದೆ ಚೀನಾ, ಆಗ್ನೇಯ ಏಷ್ಯಾದಲ್ಲಿಯೂ ವಾಣಿಜ್ಯ-ಆರ್ಥಿಕ ಪ್ರಾಮುಖ್ಯ ಹೊಂದಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ೨೦೧೭ರ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಅಡಕೆ ಉತ್ಪಾದನೆಯು ವಿಶ್ವದ ಅತಿ ದೊಡ್ಡದಾಗಿದ್ದು, ವಿಶ್ವ ಉತ್ಪಾದನೆಯ ಶೇ.೫೪.೦೭ರಷ್ಟಿದೆ. ೨೦೧೩-೧೪ರ ನಂತರದಲ್ಲಿ ಕರ್ನಾಟಕವು ಶೇ.೬೨.೬೯ರಷ್ಟು ಬೆಳೆಯನ್ನು ಉತ್ಪಾದಿಸಿ ದ್ದರೆ, ಕೇರಳ ಮತ್ತು ಅಸ್ಸಾಂ ಸೇರಿ ಮೂರು ರಾಜ್ಯಗಳು ಉತ್ಪಾದನೆಯ ಶೇ. ೮೮.೫೯ರಷ್ಟನ್ನು ಹೊಂದಿವೆ.

ಕರ್ನಾಟಕದಲ್ಲಿ, ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಗಳಲ್ಲಿ ಈ ಬೆಳೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದ್ದು, ಮೇಘಾಲಯ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಇದರ ಬಳಕೆ ಹೆಚ್ಚು ಎನ್ನಬಹುದು. ನಮ್ಮ ಮಲೆನಾಡಿನ ಅಡಕೆಯ ಗುಣಮಟ್ಟವು ವಿಶ್ವ ಅಡಕೆ
ಮಾರುಕಟ್ಟೆಯ ಉನ್ನತವಾದುದಾಗಿದೆ. ವಿಟ್ಲ ಲೋಕಲ್ ತಳಿ, ರತ್ನಗಿರಿ ತಳಿ, ಸಿರ್ಸಿ ತಳಿ, ಶಿವಮೊಗ್ಗ-ಸಾಗರ ತಳಿ, ಕೊಪ್ಪ ತಳಿ ಎಂದೆಲ್ಲ ಗುರುತಿಸಿ ಕೊಂಡು ವ್ಯಾಪಕವಾಗಿರುವ ನಮ್ಮ ಅಡಕೆಯ ಜತೆಗೆ ೧೯೭೯ರ ನಂತರ, ಚೀನಾ ಮೂಲದ ‘ಮಂಗಳ’ ಎಂಬ ಅಡಕೆ ತಳಿಯನ್ನು ಬರಮಾಡಿಕೊಳ್ಳ ಲಾಯಿತು.

ಇಂಡೋನೇಷಿಯಾದಿಂದ ‘ಸುಮಂಗಲ’, ಸಿಂಗಾಪುರದಿಂದ ‘ಶ್ರೀಮಂಗಲ’ ಬಂದವು. ಇಷ್ಟಾದರೂ ಸ್ಥಳೀಯ ಅಡಕೆಯ ಗುಣಮಟ್ಟ ಮತ್ತು ಬೇಡಿಕೆ ಯಾವತ್ತೂ ಕಡಿಮೆಯಾಗಿಲ್ಲ. ಇದರ ಹೊರತಾಗಿಯೂ, ದೇಶದಲ್ಲಿನ ಅಕ್ರಮ ಗುಟ್ಕಾ ಉದ್ಯಮವನ್ನು ಪೋಷಿಸಲು ಕಳಪೆ ಗುಣಮಟ್ಟದ ಅರೆಕಾ
ಅಡಕೆಗಳನ್ನು ಕಳ್ಳಸಾಗಣೆ ಮೂಲಕ ದೊಡ್ಡಮಟ್ಟದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬುದು, ಹತ್ತು ದಿನಗಳ ಹಿಂದೆ SIIB (ಆಮದು) JNCH, Nhava Sheva ದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆ ಮೂಲಕ ಬಯಲಾಗಿದೆ.

೧೧೨.೧೪ ಮೆಟ್ರಿಕ್ ಟನ್ ಅರೆಕಾ ಅಡಕೆ ಬೀಜಗಳನ್ನು ಹತ್ತಾರು ಕಂಟೇನರ್‌ಗಳ ಮೂಲಕ ಬಿಟುಮಿನ್ ಹೆಸರಿನಲ್ಲಿ ಕಳ್ಳಸಾಗಣೆ ಮಾಡಲು ಯತ್ನಿಸು ತ್ತಿದ್ದ ಸಮಯದಲ್ಲಿ, ವಿಶೇಷ ಗುಪ್ತಚರ ಮತ್ತು ತನಿಖಾ ಶಾಖೆಯ ಅಧಿಕಾರಿಗಳು ಜವಾಹರಲಾಲ್ ನೆಹರು ಕಸ್ಟಮ್ ಹೌಸ್, ನವಾ ಶೇವಾದಲ್ಲಿ ವಶಪಡಿಸಿ ಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ ಸುಮಾರು ೫.೭ ಕೋಟಿ ರು. ಗಳಾಗಿದೆ ಮತ್ತು ವಂಚಿಸಲು ಯತ್ನಿಸಿದ ಸುಂಕದ ಅಂದಾಜು ಮೊತ್ತ ೬.೨೭ ಕೋಟಿ ರು.ಗಳಷ್ಟು ಎಂದರೆ, ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬಹುದೊಡ್ಡ ಜಾಲವಿರುವುದು ಕಂಡುಬರುತ್ತದೆ.

ಅಡಕೆಯನ್ನು ಸಿಟಿಎಚ್ ೦೮೦೨೮೦೯೦ ಅಡಿಯಲ್ಲಿ ವರ್ಗೀಕರಿಸಲಾಗಿದ್ದು, ಭಾರತೀಯ ರೈತರ ರಕ್ಷಣೆಗಾಗಿ, ಸರಕು ಮತ್ತು ಸೇವಾ ತೆರಿಗೆ ಮೂಲಕ ಶೇ.೧೧೦ರಷ್ಟು ಆಮದು ಸುಂಕವನ್ನು ಭಾರತ ಸರಕಾರ ವಿಧಿಸಿದೆ. ಇದನ್ನು ತಪ್ಪಿಸುವ ಸಲುವಾಗಿ, ಕಳ್ಳಸಾಗಣೆದಾರರು ಕಳಪೆ ಅರೆಕಾ ಬೀಜಗಳನ್ನು
ಭಾರತಕ್ಕೆ ಕಳ್ಳಸಾಗಣೆ ಮಾಡಲು ವಿವಿಧ ವಿಧಾನಗಳನ್ನು ಆಶ್ರಯಿಸುತ್ತಿzರೆ. ಸಾಮಾನ್ಯವಾಗಿ, ಅರೆಕಾ ಬೀಜಗಳನ್ನು ಚೀಲಗಳಲ್ಲಿ ಮತ್ತು ಬಿಟುಮೆನ್ ಅನ್ನು ಲೋಹದ ಡ್ರಮ್ ಗಳಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ, ಅರೇಕಾ ಬೀಜಗಳನ್ನು ಬಿಟುಮೆನ್ ಡ್ರಮ್ ಗಳಲ್ಲಿ ಮರೆಮಾಚುವ ತಂತ್ರವನ್ನು ಅಳವಡಿಸಿಕೊಂಡು ಅರೆಕಾ ಬೀಜಗಳನ್ನು ಕಂಟೇನರ್‌ನ ಒಳಭಾಗದಲ್ಲಿ ಇರಿಸಿ, ಕಂಟೇನರ್‌ನ ಮುಂಭಾಗದ ಭಾಗದಲ್ಲಿ ನಿಜವಾದ ಬಿಟುಮೆನ್ ಡ್ರಮ್‌ಗಳನ್ನು ಲೋಡ್ ಮಾಡಲಾಗಿತ್ತು.

ಸಂಘಟಿತ ಅಂತಾರಾಷ್ಟ್ರೀಯ ಕಳ್ಳಸಾಗಣೆ ಸಿಂಡಿಕೇಟ್ ಹೊಂದಿರುವ ಬಹುದೊಡ್ಡ ಕಳ್ಳಜಾಲವನ್ನು ಖಚಿತ ಗುಪ್ತಚರ ಮಾಹಿತಿಯ ಮೇರೆಗೆ ನಮ್ಮ ಕಸ್ಟಮ್ಸ ಅಧಿಕಾರಿಗಳು ಭೇದಿಸಿದ್ದಾರೆ. ಈ ಕುರಿತಂತೆ, ರಾಜ್ಯಸಭೆಯಲ್ಲಿ ಡಿ.ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ್, ‘ಕಸ್ಟಮ್ಸ ಕ್ಷೇತ್ರ ರಚನೆಗಳು ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ೬೪೩ ಪ್ರಕರಣಗಳಲ್ಲಿ
೧೨,೮೮೧.೮೨ ಟನ್ ಅಡಕೆಯನ್ನು ವಶಪಡಿಸಿಕೊಂಡಿದೆ’ ಎಂದು ಹೇಳಿದರು.

೨೦೨೧-೨೨ರಲ್ಲಿ ೨೬೦ ಪ್ರಕರಣಗಳಲ್ಲಿ ೩,೩೩೮.೪೦ ಟನ್‌ಗಳಷ್ಟಿದ್ದರೆ, ೨೦೨೨-೨೩ರಲ್ಲಿ ೪೫೪ ಪ್ರಕರಣಗಳಲ್ಲಿ ೩,೪೦೦.೩೦ ಟನ್‌ಗಳು ಮತ್ತು ೨೦೨೪-೨೫ರ ಮೊದಲ ಮೂರು ತಿಂಗಳಲ್ಲಿ ಕೇಂದ್ರವು ೮೪ ಪ್ರಕರಣಗಳಲ್ಲಿ ೩,೦೦೯.೦೪ ಟನ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಸಚಿವರು ಹೇಳಿದರು. ಅಂತಾರಾಷ್ಟ್ರೀಯ ಮಟ್ಟದ ಕಳ್ಳಸಾಗಾಣಿಕೆಯ ಬಹುದೊಡ್ಡ ಬೆಂಬಲ ಪಡೆದಿರುವ ಈ ಕಳ್ಳ ಆಮದುದಾರರು ವಾಯು, ಸಮುದ್ರ ಮತ್ತು ಭೂ ಬಂದರುಗಳ ಮೂಲಕ ದೇಶಕ್ಕೆ ಅಕ್ರಮವಾಗಿ ಅಡಕೆ ಸೇರಿದಂತೆ ಇತರೆ ವಸ್ತುಗಳನ್ನು ಯಾವುದೇ ಹೆದರಿಕೆ ಇಲ್ಲದೆ ಆಮದು ಮಾಡಿಕೊಳ್ಳು ತ್ತಿರುವುದು ಮಾತ್ರ ದೇಶದ ಸುರಕ್ಷತೆ, ಕೃಷಿ ಲೋಕ ಮತ್ತು ರೈತಾಪಿ ಜನರ ಆತಂಕಕ್ಕೆ ಕಾರಣವಾಗಿದೆ.

ಇದಕ್ಕೆ ಸಾಕ್ಷಿ ಎಂಬಂತೆ, ವಿಮಾನ ನಿಲ್ದಾಣ ಗಳು ಮತ್ತು ಏರ್ ಕಾರ್ಗೋ ಮೂಲಕ ೨೦೨೪-೨೫ರ ಜೂನ್ ವರೆಗೆ ೩ ಪ್ರಕರಣಗಳಲ್ಲಿ ೦.೪೭ ಕೋಟಿ ರು. ಮೌಲ್ಯದ ೧೦ ಸಾವಿರ ಕೆ.ಜಿ. ಅಡಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐನ ದಾಳಿಗಳ ನಡುವೆಯೂ ಕಳ್ಳ ಮಾರ್ಗದ ಮೂಲಕ ನಿರಂತರವಾಗಿ ಕಳಪೆ ವಿದೇಶಿ ಅಡಕೆ ಆಮದಾಗುತ್ತಲೇ ಇದೆ. ಕಳೆದ ಶನಿವಾರ ಗಡಿ ಭದ್ರತಾ ಪಡೆ ಮೇಘಾಲಯ ದಲ್ಲಿ ೧೧,೦೦೦ ಕೆ.ಜಿ. ಒಣ ಅಡಕೆಯನ್ನು ವಶಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಕಳೆದ ಶುಕ್ರವಾರ ಅಸ್ಸಾಂನಲ್ಲಿ ಮ್ಯಾನ್ಮಾರ್‌ನಿಂದ ಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ತಂದಿದ್ದ ೨ ಸಾವಿರ ಕೆ.ಜಿ. ಅಡಕೆಯನ್ನು ವಶಪಡಿಸಿಕೊಂಡ ಸ್ಥಳೀಯ ಪೊಲೀಸರು ಒಬ್ಬಾತನನ್ನು ಬಂಧಿಸಿದ್ದರು. ಇದರ ಬೆನ್ನ ಮೇಘಾಲಯದಲ್ಲಿ ೩ ಲಾರಿಗಳಲ್ಲಿ ತರಲಾಗುತ್ತಿದ್ದ ೧೧,೦೦೦ ಕೆ.ಜಿ. ಒಣ
ಅಡಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ಹೇಳಿದೆ. ಹೀಗೆ ಪ್ರತಿನಿತ್ಯ ಈಶಾನ್ಯ ರಾಜ್ಯಗಳ ಒಂದ ಒಂದು ಕಡೆ ವಿದೇಶಿ ಅಡಕೆಯನ್ನು ಅಕ್ರಮವಾಗಿ ತರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ‘ಹೊಂದಾಣಿಕೆ’ ಮಾಡಿಕೊಂಡು ಸಾವಿರಾರು ಟನ್ ಅಡಕೆ ಆಮದಾಗುತ್ತಿರುವುದೇ ಸಿಕ್ಕಿ ಬೀಳದಿರಲು ಮೂಲಕಾರಣ ಎಂದು ಹೇಳಲಾಗುತ್ತಿದೆ.

ಭಾರತದ ಒಳಗೆ ಅಕ್ರಮ ಆಮದು ಬೇಡಿಕೆ ಇರುವವರು ಮತ್ತು ಕೊಳ್ಳುವವರು ನಿರ್ಧಾರವಾದ ಮೇಲೆ ತಾನೆ ಹೊರಗಡೆಯಿಂದ ಸಾಗಾಣಿಕೆ ಆರಂಭ ವಾಗುವುದು. ಹಾಗಾಗಿ, ಬಹು ದೊಡ್ಡ ಮತ್ತು ಬಲಿಷ್ಠ ತಂಡಗಳು ಇದರ ಹಿಂದೆ ಇರುವುದು ಖಚಿತವಾದಂತಾಗುತ್ತದೆ. ಇದರ ನಡುವೆ, ಕರ್ನಾಟಕದ ಖಾಸಗಿ ವರ್ತಕರ ಬರೋಬ್ಬರಿ ೭೭ ಲೋಡ್ ಅಡಕೆ ಬೀಜಗಳನ್ನು ಕಳಪೆ ಎಂದು ತಿರಸ್ಕರಿಸಿದ ವಿಚಾರವು ರಾಜ್ಯಾದ್ಯಂತ ಸಂಚಲನವನ್ನೇ ಸೃಷ್ಟಿಸಿತು. ಇವರು ೫೫ ಸಾವಿರಕ್ಕೆ ಖರೀದಿಸಿ, ೪೦ ಸಾವಿರಕ್ಕೆ ಮಾರಿದ್ದಾದ್ದಾರೆ ಎಂಬ ಸುದ್ದಿಯೂ ಹರಡಿತು. ಇದಾದ ಬಳಿಕ ಈ ಲೋಡ್ ಎಪಿಎಂಸಿ ಒಳಗಿನ ವ್ಯಾಪಾರಸ್ಥರದ್ದಲ್ಲ ಎಂದು ಶಿವಮೊಗ್ಗದ ಕೆಲ ಅಡಕೆ ವರ್ತಕರಿಂದ ಸ್ಪಷ್ಟನೆಯೂ ಹೊರಬಂದಿತು.

ಸ್ಥಳೀಯವಾಗಿ ಬೆಳೆದ ಬೆಳೆಗಳಿಗೆ ಹೀಗೆ ಕಳಪೆ ಲೇಬಲ್ ಹಚ್ಚಿ, ಅವುಗಳ ಪೂರೈಕೆಯಲ್ಲಿ ವ್ಯತ್ಯಾಸವಾಗುವಂತೆ ಮಾಡಿ, ಕೊಳ್ಳುವವರು ಕೇಳಿದ ಬೆಲೆಗೆ ಕೊಟ್ಟುಹೋಗುವಂತೆ ಮಾಡುವ ಹುನ್ನಾರದ ಹಿಂದೆ ಆಂತರಿಕ ಅಕ್ರಮಗಾರರ ಕೈವಾಡವಿರುವ ಶಂಕೆಯನ್ನು ವರ್ತಕರು, ರೈತರು ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ, ಎಪಿಎಂಸಿಯಿಂದ ೧೦-೧೫ ಲೋಡ್ ಹೋದರೆ, ಎಪಿಎಂಸಿ ಹೊರಗಡೆಯಿಂದ ೧೨೦ಕ್ಕೂ ಅಧಿಕ ಲೋಡ್ ಉತ್ತರ ಭಾರತದ ಕಂಪನಿಗಳಿಗೆ ಹೋಗುತ್ತದೆ.

೨೫ ಸಾವಿರ ಕೆ.ಜಿಯಷ್ಟಿರುವ ಒಂದು ಲೋಡ್ ಅಡಕೆಯು ಸುಮಾರು ಒಂದು ಕೋಟಿಗೂ ಹೆಚ್ಚು ಬಾಳುತ್ತದೆ. ಇದರ ಸಾಗಣೆ ವೆಚ್ಚವೇ ೨ ಲಕ್ಷದಷ್ಟಾ ಗುವುದರಿಂದ ದಿಲ್ಲಿ, ಅಹಮದಾಬಾದ್‌ಗೆ ಕಳಿಸಿದ ಮಾಲನ್ನು ರೇಟು ಕಡಿಮೆಯಾದರೂ ಮಾರಲೇಬೇಕಾದ ಅನಿವಾರ್ಯತೆ ಇರುತ್ತದೆ. ಪಾನ್
ಮಸಾಲಾ ಕಂಪನಿಗಳೂ ಮುಂಗಡ ಕೊಟ್ಟು ಲೋಡ್ ತರಿಸಿಕೊಳ್ಳುವುದಿಲ್ಲವಾದ್ದರಿಂದ ಅಲ್ಲಿ ಕುದುರಿದ ಬೆಲೆಗೆ ಕೊಟ್ಟು, ಬಂದ ಲಾಭ ಇಟ್ಟುಕೊಂಡು ಬರುವ ಸ್ಥಿತಿ ಇಂದಿನ ಅಡಕೆ ಬೆಳೆಗಾರರಿಗೆ ಇದೆ. ಇದರ ನಡುವೆ ಸ್ಥಳೀಯವಾಗಿ ಬೆಳೆದ ಬೆಳೆಗಳನ್ನು ಕಳಪೆ ಎಂದು ಪ್ರಚಾರ ಮಾಡಿದರೆ, ಶೇ.೧೦೦ರಷ್ಟು ಆಮದು ತೆರಿಗೆಯನ್ನು ವಂಚಿಸಿ ತರಿಸಿಕೊಂಡ ಅಕ್ರಮ ಅಡಕೆ ಮಾಲನ್ನು ಅತ್ಯಧಿಕ ಲಾಭದಲ್ಲಿ ಮಾರಲು ಸುಲಭವಾಗುತ್ತದೆ ಎಂಬುದು ಕೆಲ ‘ಕಳ್ಳ’ರ ಲೆಕ್ಕಾಚಾರ.

ಇಷ್ಟೆಲ್ಲ ಹಿನ್ನೆಲೆ ಇರುವಂಥ ‘ಅಕ್ರಮ ಅಡಕೆ ಸಾಗಾಣಿಕೆ’ ರಾಜಕೀಯವಾಗಿಯೂ ಪ್ರಬಲವಾಗಿದೆ. ಇದರ ನಿಯಂತ್ರಣಕ್ಕೆ ಮುಂದಾಗುವ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿಸಲಾಗುತ್ತದೆ. ಈಶಾನ್ಯ ರಾಜ್ಯಗಳ ಸರಕಾರದ ಮಟ್ಟದಲ್ಲಿ ಈ ಗುಂಪು ಕೆಲಸ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ಕೇವಲ ಒಂದೆರಡು ಪ್ರಕರಣಗಳಲ್ಲಿ ಮಾತ್ರ ವಶಪಡಿಸಿಕೊಳ್ಳುವ ನಾಟಕ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ ಎಂದು ಅಕ್ರಮವಾಗಿ ಅಡಕೆ ಆಮದು ಮಾಡಿಕೊಳ್ಳುವುದರ ವಿರುದ್ಧ ದಾಖಲೆಗಳೊಂದಿಗೆ ನ್ಯಾಯಾಲಯದ ಮೆಟ್ಟಿಲೇರಿರುವ ನಾಗಪುರದ
ಹೋಮಿಯೋಅಪತಿ ವೈದ್ಯ ಡಾ. ಮೆಹಬೂಬ್ ಚಿಮ್ತನವಾಲಾ ನೀಡಿರುವ ಹೇಳಿಕೆ ಈ ವಿಷಯವನ್ನು ಮತ್ತಷ್ಟು ಆಳಕ್ಕೆ ತೆಗೆದುಕೊಂಡು ಹೋಗುತ್ತದೆ.

ಹೀಗೆ ಅಕ್ರಮವಾಗಿ ಈಶಾನ್ಯ ರಾಜ್ಯಗಳ ಗಡಿಯುದ್ದಕ್ಕೂ ವಿದೇಶದಿಂದ ಆಮದಾಗುತ್ತಲೇ ಇರುವ ಅಡಕೆ ಮುಂತಾದವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ ದೇಶೀಯ ಮಾರುಕಟ್ಟೆಗೆ ದೊಡ್ಡ ಹೊಡೆತ ಬೀಳಲಿದೆ. ಇದರ ನಡುವೆ, ದೇಶದಲ್ಲಿ ಒಟ್ಟಾರೆ ಉತ್ಪಾದನೆಯಾಗುತ್ತಿರುವ ಅಡಕೆಗೆ ಹೋಲಿಸಿದರೆ ಶೇ.೨ರಷ್ಟು ಅಡಕೆ ಮಾತ್ರ ವಿದೇಶದಿಂದ ಆಮದಾಗುತ್ತಿದೆ. ಹೀಗಾಗಿ ಇದು ದೇಶೀಯ ಅಡಕೆ ಮಾರುಕಟ್ಟೆಯ ಧಾರಣೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಸುದ್ದಿಗಳು ಸುಳ್ಳು ಎಂದು ಕೇಂದ್ರ ವಿವರಣೆ ನೀಡಿದೆ. ಆದರೆ, ಅಕ್ರಮವಾಗಿ ಆಮದಾಗುತ್ತಿರುವ ಅಡಕೆಯ ಪ್ರಮಾಣ ಮತ್ತು ಮೂಲದ ಕುರಿತು ಸರಕಾರದ ಬಳಿ ಸಮರ್ಪಕ ಉತ್ತರ ಇದ್ದಂತಿಲ್ಲ!

ಇತ್ತ ಸ್ಥಳೀಯವಾಗಿ, ರೈತರ ದೃಷ್ಟಿಕೋನದಿಂದ ವಿವೇಚಿಸಿ ದಾಗ, ಟೆಂಡರ್ ಮಾರುಕಟ್ಟೆಯಲ್ಲಿ ಎರಡು ಪ್ರಮುಖ ಕಾರಣಗಳಿಂದ ಅಡಕೆ ದರ ಇಳಿಮುಖ ವಾಗಿದೆ. ತಿಂಗಳ ಹಿಂದೆ ಅಲ್ಪಸ್ವಲ್ಪ ಏರಿಳಿತವಾಗುತ್ತಿದ್ದ ಅಡಕೆ ದರ ಈ ವಾರ ಪ್ರತಿ ಕ್ವಿಂಟಾಲ್‌ಗೆ ಎರಡು ಸಾವಿರ ರು.ಗಳಷ್ಟು ದಿಢೀರನೇ ಕುಸಿತ ಕಂಡಿದ್ದು, ಅನ್ಯ ದೇಶಗಳಿಂದ ದೇಶಕ್ಕೆ ಅಡಕೆ ದೊಡ್ಡ ಪ್ರಮಾಣದಲ್ಲಿ ಆಮದಾಗುತ್ತಿರುವುದೇ ಕಾರಣವೆಂದು ಬೆಳೆಗಾರರು ಆತಂಕದಿಂದ ಸರಕಾರದತ್ತ ಬೊಟ್ಟುಮಾಡಿ ಹೇಳುವಂತಾಗಿದೆ ಎಂದು ಪತ್ರಿಕಾವರದಿಗಳು ಹೇಳುತ್ತಿವೆ.

ಎಪಿಎಂಸಿ ಒಳಗಿನ ಕೆಲ ಗುಂಪುಗಾರಿಕೆ, ಕೆಲವರ ಮಾರುಕಟ್ಟೆ ಹಿಡಿತ, ಅಧಿಕಾರಿಗಳ ತಾರತಮ್ಯ, ಪಾನ್ ಮಸಾಲಾ ಕಂಪನಿಗಳ ದೌರ್ಜನ್ಯಗಳ ಜತೆಗೆ ಹೊರ ದೇಶಗಳಿಂದ ಅಕ್ರಮವಾಗಿ ಬರುತ್ತಿರುವ ಅಡಕೆ ಬೀಜಗಳಿಂದ ಸ್ಥಳೀಯ ಮಾರುಕಟ್ಟೆಯನ್ನು ಕೊಲ್ಲುವ ದುರುದ್ದೇಶ ಹೊಂದಿರುವ ಗುಂಪು ಗಳಿಂದ ಮುಕ್ತವಾಗಿಸುವ ಮತ್ತು ರೈತರ ಬದುಕಿಗೆ, ಬೆಳೆಗೆ ಸೂಕ್ತ ಬೆಂಬಲ ಕೊಡುವ ಕಾರ್ಯ ಆಳುವ ಸರಕಾರಗಳಿಂದ ಆಗಬೇಕಿದೆ.