Thursday, 19th September 2024

ಮುಸುಕು ಹಾಕಿಕೊಳ್ಳಿ ಎಂದರೆ ಮುಸಿಮುಸಿ ನಗುವುದೇಕೆ ?

ನಾಡಿಮಿಡಿತ

ವಸಂತ ನಾಡಿಗೇರ

ಇಡೀ ವಿಶ್ವವನ್ನು ಕರೋನಾ ಇನ್ನಿಲ್ಲದಂತೆ ಕಾಡುತ್ತಿದೆ. ಭಾರತದಲ್ಲೂ ಕಳೆದ ಆರೇಳು ತಿಂಗಳಿನಿಂದ ಜನಜೀವನವನ್ನು ನರಕ ಸದೃಶ ಮಾಡಿರುವುದು ನಮಗೆಲ್ಲರಿಗೂ ಗೊತ್ತು. ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಘೋಷಿಸಿದಾಗ ಅನಿವಾರ್ಯವಾಗಿ ಯಾದರೂ ಅದನ್ನು ಎಲ್ಲರೂ ಬೆಂಬಲಿಸಿದರು.

ಆದರೆ ಲಾಕ್ ಡೌನ್ ಮುಂದುವರಿದಂತೆ ಸಂಕಷ್ಟಗಳು ಹೆಚ್ಚಿದವು. ಎಲ್ಲವೂ ಬಂದ್ ಆದ ಕಾರಣ ಬದುಕು ಕೂಡ ದುಸ್ತರ ವಾಗತೊಡಗಿತು. ಈ ಸಂದರ್ಭದಲ್ಲಿ ಲಾಕ್‌ಡೌನ್ ತೆರವಿಗೆ ಬೇಡಿಕೆ, ಒತ್ತಡ ಹೆಚ್ಚಾಗ ತೊಡಗಿತು. ಇದನ್ನು ಗಮನಿಸಿದ ಸರಕಾರ
ಅನಿವಾರ್ಯವಾಗಿಯೋ, ಅಸಹಾಯಕತೆಯಿಂದಲೋ ಒಂದೊಂದೇ ಚಟುವಟಿಕೆಗಳನ್ನು ಮುಕ್ತ ಮಾಡತೊಡಗಿತು. ಹಾಗೆಂದು ಇದು ನಮ್ಮ ದೇಶದ ಕಥೆ ಮಾತ್ರವಲ್ಲ. ಅನೇಕ ದೇಶಗಳ ಪರಿಸ್ಥಿತಿಯೂ ಇದೇ ಆಗಿದೆ. ಆರೋಗ್ಯಕ್ಕಿಂತ ಆರ್ಥಿಕತೆಯ ತಕ್ಕಡಿ ಹೆಚ್ಚು ತೂಗಿದಾಗ ಆಗುವ ಅಪಸವ್ಯವಿದು.

ಹೀಗಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಸಾಕಷ್ಟು ಹತೋಟಿಯಲ್ಲಿದ್ದ ಕರೋನಾ ಸೋಂಕಿನ ಪ್ರಮಾಣ ಮತ್ತೆ ಏರುಗತಿಯಲ್ಲಿ ಸಾಗತೊಡಗಿತು. ಇದನ್ನು ಗಮನಿಸಿ ಅನೇಕ ದೇಶಗಳು ಮತ್ತೆ ಹೊಸದಾಗಿ ನಿರ್ಬಂಧಗಳನ್ನು ವಿಧಿಸತೊಡಗಿವೆ. ಆದರೆ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಈ ಅಂಶವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಜನರೂ ಕೂಡ ಮನೆಯಲ್ಲಿರಲು ಮನಸ್ಸು ಮಾಡುತ್ತಿಲ್ಲ.

ಕರೋನಾ ಬಗ್ಗೆ ಹೆದರಿಕೆಯೇ ಇಲ್ಲವೋ ಅಥವಾ ಬಂದರೆ ಬರಲಿ ಎಂಬ ಹುಂಬ ಧೈರ್ಯವೋ ಅಥವಾ ಮತ್ತಿನ್ನೇನೋ ಗೊತ್ತಿಲ್ಲ. ಅಂತೂ ಏನೂ ಆಗಿಯೇ ಇಲ್ಲ ಎಂಬಂತೆ ಜನಜೀವನ ಸಾಗತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಮೊನ್ನೆಯಷ್ಟೇ
ದೇಶವನ್ನು ಉದ್ದೇಶಿಸಿ ಮಾತನಾಡಿದರು. ಲಾಕ್‌ಡೌನ್ ಜಾರಿಗೆ ಬಂದ ಬಳಿಕ ಇದು ಅವರ ಎಂಟನೇ ಭಾಷಣ. ಪ್ರತಿಬಾರಿ ಕೆಲವು ಬೇರೆ ಬೇರೆ ಅಂಶಗಳನ್ನು ಹೇಳಿದ್ದರೂ ಮೂರು ಸಂಗತಿಗಳನ್ನು ಪ್ರತಿ ಭಾಷಣದಲ್ಲೂ ಅವಶ್ಯವಾಗಿ ಪ್ರಸ್ತಾಪಿಸಿದ್ದಾರೆ.

ಅವು: ಮಾಸ್ಕ್ ಧರಿಸುವುದು; ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಸುವುದು. ಈ ಬಾರಿಯಂತೂ ಹಬ್ಬದ
ಹಂಗಾಮು ಇರುವುದರಿಂದ ಬೇಕಾಬಿಟ್ಟಿಯಾಗಿ ಓಡಾಡದಿರಿ ಎಂದು ಕೂಡ ಮನವಿ ಮಾಡಿದರು. ಆದರೆ ಅದಕ್ಕೆ ‘ಭಾಷಣ ಸಾಕು, ವ್ಯಾಕ್ಸೀನ್ ಬೇಕು’ ಎಂಬ, ಒಂದು ರೀತಿಯ ವ್ಯಂಗ್ಯಭರಿತ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಧಾನಿಯಾದವರೊಬ್ಬರು ಏನನ್ನು
ಹೇಳುತ್ತಿದ್ದಾರೆ, ಯಾಕೆ ಹೇಳುತ್ತಿದ್ದಾರೆ ಎಂಬುದನ್ನು ಗ್ರಹಿಸಿಕೊಳ್ಳುವುದು ಬೇಡವೆ ? ಹೋಗಲಿ ರಾಜ್ಯದಲ್ಲೂ ಕರೋನಾ ಸೋಂಕು ಹೆಚ್ಚುತ್ತಿರುವುದನ್ನು ಮನಗಂಡ ಸರಕಾರ ಮತ್ತೆ ಒಂದಷ್ಟು ಕಠಿಣ ಕ್ರಮಕ್ಕೆ ಮುಂದಾಯಿತು. ಆ ಪೈಕಿ ಮುಖ್ಯವಾ ದುದು ಮಾಸ್ಕ್ ಕಡ್ಡಾಯ. ಹಾಗೆಂದು ಇದು ಮೊದಲಿನಿಂದಲೂ ಕಡ್ಡಾಯವೇ ಇದೆ. ಆದರೆ ಈ ಬಾರಿ ಅದಕ್ಕೆ ದಂಡದ ಅಂಶವನ್ನು ಸೇರಿಸಲಾಯಿತು. ಇದಕ್ಕೆ ಯಥಾಪ್ರಕಾರ ಸಿನಿಕತನದ, ಗೇಲಿಮಾಡುವಂಥ ಪ್ರತಿಕ್ರಿಯೆಯ ಸ್ವಾಗತ ದೊರೆಯಿತು. ೧೦೦೦ ರು. ದಂಡ ಹಗಲು ದರೋಡೆ ಎಂದರು ಕೆಲವರು.

ಕಾರಿನಲ್ಲಿ ಇದ್ದರೆ ಮಾಸ್ಕ್ ಯಾಕೆ ಎಂದು ಕೇಳಿದವರು ಮತ್ತೆ ಕೆಲವರು. ದಂಡ ವಿಧಿಸಲು ಬಂದ ಮಾರ್ಷಲ್‌ಗಳ ಮೇಲೆ ದಾಳಿಗೆ ಮುಂದಾದವರೆಷ್ಟೋ. ಮೆಜೆಸ್ಟಿಕ್ ಬಸ್ ನಿಲ್ದಣದಲ್ಲಿ ಮಾಸ್ಕ್ ಇಲ್ಲದೆ ಓಡಾಡುತ್ತಿದ್ದವನೊಬ್ಬನನ್ನು ಹಿಡಿದು ಅವನಿಗೆ ೧೦೦೦ ರು. ದಂಡ ವಿಧಿಸಲಾಯಿತು. ಅದಕ್ಕೆ ಆತ ಮಾಡಿದ ಘನಂದಾರಿ ಕೆಲಸ ಏನು ಗೊತ್ತಾ? ಇಡೀ ದಿನ ಬಸ್‌ಸ್ಟ್ಯಾಂಡ್‌ನಲ್ಲಿ ಮಾಸ್ಕ್ ಇಲ್ಲದೆ ಅಲೆದಾಡಿದ್ದು. ‘ಭಾರಿ ಮೊತ್ತದ ಫೈನ್ ಕಟ್ಟಿದ್ದೇನೆ. ಆದ್ದರಿಂದ ೨೪ ಗಂಟೆ ಕಾಲ ಮಾಸ್ಕ್ ಇಲ್ಲದೆಯೇ ಓಡಾಡುವ ಹಕ್ಕಿದೆ’ ಎಂಬ ಧಾರ್ಷ್ಟ್ಯ. ಮತ್ತೊಬ್ಬರ‍್ಯಾರೊ ಮಾಸ್ಕ್ ಇಲ್ಲದ್ದಕ್ಕೆ ದಂಡ ವಿಧಿಸಿದ ವಿಚಾರವನ್ನು ಪ್ರಶ್ನಿಸಿ ವಿಡಿಯೊ ಮಾಡಿ ಅದನ್ನು
ಪೋಸ್ಟ್ ಮಾಡಿದ್ದರು. ‘ಸರಕಾರಕ್ಕೆ ನಮ್ಮ ದುಡ್ಡೇ ಬೇಕಾ’? ರಸ್ತೆ ಸರಿ ಇಲ್ಲ, ಟ್ರಾಫಿಕ್ ಜಾಮ್‌ಗೆ ಮುಕ್ತಿ ಸಿಗುತ್ತಿಲ್ಲ. ಅದನ್ನು ಸರಿಪಡಿಸುವುದರ ಬದಲು ಬರಿ ದಂಡ ಹಾಕುವುದರತ್ತ ಇವರ ಆಸಕ್ತಿ’ ಎಂಬಿತ್ಯಾದಿಯಾಗಿ ಮಾತು ಕೇಳಿ ಬಂದವು. ಕೆಲವರು
ಮಾರ್ಷಲ್‌ಗಳ ಮೇಲೆ ಹಲ್ಲೆಗೆ ಮುಂದಾಗಿದ್ದೂ ಉಂಟು. ಈ ರೀತಿಯ ಪ್ರತಿರೋಧವನ್ನು ಕಂಡು ಸ್ವತಃ ಮುಖ್ಯಮಂತ್ರಿಯವರೇ ದಂಡದ ಮೊತ್ತವನ್ನು ೨೫೦ ರುಪಾಯಿಗೆ ಇಳಿಸಿದರು.

ಹಾಗಾದರೆ ಇದರಲ್ಲಿ ಜನರು ಗೆದ್ದರೋ ಇಲ್ಲವೆ ಸರಕಾರ ಸೋತಿತೊ ? ಇಬ್ಬರೂ ಗೆಲ್ಲಲಿಲ್ಲ. ಆದರೆ ಆರೋಗ್ಯ ಸೋತಿತು. ವಿವೇಕ
ಸೋತಿತು. ಅಜ್ಞಾನ, ಉದಾಸೀನ, ಉಡಾಫೆ, ಪ್ರತಿಷ್ಠೆ ಗೆದ್ದಿತು ಎಂದು ಬೇಕಾದರೆ ಹೇಳಬಹುದು. ಈಗ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲೂ ಎರಡು ವಿಧಾನಸಭೆ ಕ್ಷೇತ್ರಗಳು ಹಾಗೂ ಕೆಲವು ವಿಧಾನಪರಿಷತ್ ಸ್ಥಾನಗಳಿಗೆ
ಚುನಾವಣೆ ನಡೆಯುತ್ತಿದೆ. ಚುನಾವಣೆ ಎಂದ ಮೇಲೆ ಪ್ರಚಾರ ಇರಲೇಬೇಕು ಬಿಡಿ. ಆದರೆ ಈ ಕೋವಿಡ್ ಕಾಲದಲ್ಲೂ ಇವರ ಭರಾಟೆ ನೋಡಬೇಕು.

ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈಚೆಗಷ್ಟೇ ಶಿರಾ ವಿಧಾನಸಭಾ ಕ್ಷೇತ್ರದ ಊರೊಂದರಲ್ಲಿ ಪ್ರಚಾರಕ್ಕೆ ಹೋಗಿದ್ದರು. ಅವರು ಮಾಸ್ಕ್ ಧರಿಸಿದ್ದರು. ಫೇಸ್ ಶೀಲ್ಡ್ ಕೂಡ ಹಾಕಿದ್ದರು. ಆದರೆ ಮಾಸ್ಕ್ ತೆಗೆದು ಮಾತನಾಡಿ ಎಂದು ನೆರೆದ
ಜನರಿಂದ ಒಂದೇ ವರಾತ. ಅವರಿಗೆಲ್ಲ ಸಿದ್ದರಾಮಯ್ಯ ಬುದ್ಧಿ ಹೇಳಿದರು. ‘ಇದು ಕೋವಿಡ್ ಕಾಲ. ಹಾಗೆಲ್ಲ ಮಾಸ್ಕ್ ಇಲ್ಲದೆ ಓಡಾಡಬಾರದು. ನಾನು ಈಗಷ್ಟೇ ಕೋವಿಡ್ ಚಿಕಿತ್ಸೆ ಪಡೆದು ಬಂದಿದ್ದೇನೆ. ಅದು ಎಷ್ಟು ಹಿಂಸೆ ಎಂಬುದು ನನಗೆ ಗೊತ್ತಿದೆ’ ಎಂದೆಲ್ಲ ತಿಳಿ ಹೇಳಿದರು.

ಆದರೆ ಇಷ್ಟೆಲ್ಲ ಆದರೂ ನಮಗೆ ಅರ್ಥವಾಗುವುದೇ ಇಲ್ಲ. ಏನೂ ಆಗಿಯೇ ಇಲ್ಲ ಎಂಬಂತೆ ನಾವು ಎಲ್ಲೆಂದರ ಹೋಗುತ್ತೇವೆ. ದಂಡ ಹಾಕುವವರು ಬಂದಾಗ ಮಾತ್ರ ಮಾಸ್ಕ್ ಅನ್ನು ಮೂಗಿಗೆ ಏರಿಸಿಕೊಳ್ಳುತ್ತೇವೆ. ಇದು ಅವರಿಗೆ ಮಾಡುವ ವಂಚನೆಯಲ್ಲ. ಅವರನ್ನು ಯಾಮಾರಸಿದೆವು ಎಂದು ಬೀಗುವ ಸಂಗತಿಯಲ್ಲ. ಇದು ನಮಗೆ ನಾವೇ ಮಾಡಿಕೊಳ್ಳುವ ವಂಚನೆ. ಪರಮ ಆತ್ಮ ವಂಚನೆ. ಸದ್ಯಕ್ಕಂತೂ ಕೋವಿಡ್‌ಗೆ ಲಸಿಕೆ ಇಲ್ಲ. ಆದ್ದರಿಂದ ನಮಗೆ ಇರುವುದೊಂದೇ ದಾರಿ, ಅದೇ ಮಾಸ್ಕ್  ಹಾಕಿಕೊಳ್ಳುವುದು ಎಂದು ಎಷ್ಟು ಬಾರಿ, ಎಷ್ಟು ಥರ, ಎಷ್ಟು ಜನರು ಹೇಳಿಲ್ಲ. ಆದರೆ ಇದು ಯಾಕೋ ನಮಗೆ ನಾಟುವುದೇ ಇಲ್ಲ. ನಮಗೇನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸವಿದ್ದೀತು. ಅಥವಾ ಬಂದಾಗ ನೋಡಿಕೊಳ್ಳೋಣ ಎಂಬ ಉದಾಸೀನವೂ ಇದ್ದೀತು.
ಆದರೆ ಬಂದ ಮೇಲೆ ಏನು ಮಾಡಲೂ ಆಗುವುದಿಲ್ಲ.

ಚಿಕಿತ್ಸೆ ಪಡೆದು ಗುಣಮುಖರಾದವರೂ ಇದ್ದಾರೆ. ಆದರೆ ಯಾರು ಗುಣಮುಖರಾಗುತ್ತಾರೆ, ಯಾರು ಬಲಿಯಾಗುತ್ತಾರೆ ಎಂಬುದು ಯಾರಿಗೆ ಗೊತ್ತು. ಗೊತ್ತಿದ್ದೂ ಗೊತ್ತಿದ್ದೂ ಹುಲಿಯ ಬಾಯಲ್ಲಿ ಕೈ ಇಡುವಂಥ ಹರಕತ್ತು ಇದು ಅಷ್ಟೇ. ಏಕೆಂದರೆ ಕರೋನಾ ವೈರಸ್ ಒಬ್ಬರಲ್ಲಿ ಒಂದೊಂದು ವಿಧವಾಗಿ ವರ್ತಿಸುತ್ತದೆ. ಕೆಲವು ಪ್ರಮುಖರು ಒಳ್ಳೆಯ ಚಿಕಿತ್ಸೆಯ ದೆಸೆಯಿಂದಲೋ ಅಥವಾ ಅವರ ರೋಗನಿರೋಧಕ ಶಕ್ತಿಯ ಬಲದಿಂದಲೋ ಗುಣಮುಖರಾಗಿರಬಹುದು. ಆದರೆ ಸಚಿವ ಸುರೇಶ್ ಅಂಗಡಿ, ಎಸ್.ಪಿ.
ಬಾಲಸುಬ್ರಹ್ಮಣ್ಯಂ ಮೊದಲಾದವರ ಸಾವು ನಮ್ಮ ಕಣ್ಣೆದುರಿಗೇ ಇದೆ. ಅಷ್ಟೆ ಏಕೆ ಹಲವಾರು ಜನರ ಬಂಧು ಬಾಂಧವರು, ಗೆಳೆಯರು, ಸಹೋದ್ಯೋಗಿಗಳು, ಪರಿಚಿತರು ಇಂದಿದ್ದವರು ನಾಳಿಲ್ಲ ಎಂಬಂತೆ ಅಗಲಿದ್ದಾರೆ. ಅವರ ಕುಟುಂಬದವರನ್ನು,
ಬಂಧುಗಳನ್ನು ಕೇಳಿದರೆ, ಅವರು ಹೇಳುವ ಕಥೆ ಕೇಳಿದರೆ ಸಾವು ಎಷ್ಟು ಕ್ರೂರ ಎಂಬುದು ಗೊತ್ತಾಗುತ್ತದೆ. ಅದು ಯಾರನ್ನೂ ನೋಡುವುದಿಲ್ಲ.

ಸತ್ತಮೇಲೆ ಶವಸಂಸ್ಕಾರಕ್ಕೂ ಆಸ್ಪದವಿಲ್ಲದಂಥ ಸಾವು ಅದು. ಇಂಥವರನ್ನು ನೋಡಿಯಾದರೂ ನಮಗೆ ಎಚ್ಚರ ಆಗಬೇಡವೇ? ಆದರೂ ಇದೆಲ್ಲ ನಮಗೆ ಸ್ಮಶಾನ ವೈರಾಗ್ಯ ಎನಿಸಿಬಿಟ್ಟಿದೆ. ಅಯ್ಯೋ ಪಾಪ ಎನ್ನುತ್ತೇವೆ. ಮರುದಿನ ಮತ್ತೆ ಅದೇ ಓಡಾಟ, ಅದೇ ಹೊಡೆದಾಟ. ಈಗ ಹಬ್ಬದ ಸಾಲು. ನವರಾತ್ರಿ ಇದೆ. ಮುಂದೆ ದೀಪಾವಳಿ ಬರುತ್ತದೆ. ಸಾಮಾನ್ಯವಾಗಿ ಈ ಹಬ್ಬಗಲಲ್ಲಿ ಸಡಗರ, ಸಂಭ್ರಮ, ಉತ್ಸಾಹಕ್ಕೆ ಎಣೆ ಇರುವುದಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಹಬ್ಬ ಎಂದು ನಾವು ಬಿಂದಾಸ್ ಆಗಿ ಓಡಾಡತೊಡಗಿದರೆ ಕರೋನಾ ಸೋಂಕು ಹಬ್ಬದೆ ಏನು ಮಾಡುತ್ತದೆ.

ಕೇರಳದಲ್ಲಿ ಕೋವಿಡ್ ಅನ್ನು ಚೆನ್ನಾಗಿ ನಿಯಂತ್ರಿಸಲಾಗಿದೆ ಎಂದು ಶ್ಲಾಘಿಸಲಾಗಿತ್ತು. ಕರೋನಾ ನಿಯಂತ್ರಣದಲ್ಲಿ ಕೇರಳ ಮಾದರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಓಣಂ ಹಬ್ಬದ ಸಮಯದಲ್ಲಿ ಜನರು ಹಾಗೂ ಸರಕಾರ ಮೈಮರೆತ ಕಾರಣ ಅಲ್ಲಿ
ಕರೋನಾ ಸೋಂಕು ವಿಪರೀತ ಹೆಚ್ಚಳವಾಗಿದೆ. ಇದು ನಮಗೆ ಮಾದರಿಯಾಗಬೇಕು. ಆದರೆ ಸರಳ ದಸರಾ ಯಾಕೆ ಎಂದು ನಮ್ಮಲ್ಲಿ ಕೆಲವರು ತಗಾದೆ ತೆಗೆದು ಕುಳಿತಿದ್ದಾರೆ. ನಾಡಹಬ್ಬದ ಸಂದರ್ಭದಲ್ಲಿ ವ್ಯಾಪಾರ ವಹಿವಾಟು, ಪ್ರವಾಸೋದ್ಯಮಕ್ಕೆ ಅವಕಾಶ ಕೊಡಿ ಎಂದು ಎಲ್ಲರೂ ದುಂಬಾಲು ಬಿದ್ದರು. ಮುಖ್ಯಮಂತ್ರಿಯವರು ಯತಾಪ್ರಕಾರ ಜನಾಗ್ರಹಕ್ಕೆ ಮಣಿದು
ಎಲ್ಲವೂ ಮುಕ್ತ ಮುಕ್ತ ಎಂದರು. ಹೀಗಾಗಿ ಓಣಂನಂತೆಯೇ ನಮ್ಮಲ್ಲೂ ಕರೋನಾ ವಿಚಾರದಲ್ಲಿ ದಸರಾ ಆತಂಕ ಹೆಚ್ಚಾಗಿದೆ. ಆದರೆ ನಾವು ಯಾಕೋ ಈ ವಿಷಯವನ್ನು ಮನಸ್ಸಿಗೆ ತೆಗೆದುಕೊಳ್ಳುವುದೇ ಇಲ್ಲ.

ಮತ್ತೂ ಒಂದು ಸ್ಥಿತಿಯನ್ನು ನೋಡೋಣ. ನಾವು ಗಟ್ಟಿಮುಟ್ಟಿಯಾಗಿಯೇ ಇದ್ದೇವೆ ಎಂದುಕೊಳ್ಳೋಣ. ಕರೋನಾ ನಮಗೆ ಏನೂ ಮಾಡುವುದಿಲ್ಲ ಎಂದೇ ಭಾವಿಸಿದರೂ ನಮ್ಮಿಂದ ಇತರರಿಗೆ ಆಗಬಹುದಾದ ಸಮಸ್ಯೆ, ತೊಂದರೆ, ಅಪಾಯದ ಬಗೆಗಾ ದರೂ ಯೋಚಿಸಬೇಕಲ್ಲವೆ? ಈಗಂತೂ ಎಷ್ಟೋ ಜನರಿಗೆ ರೋಗಲಕ್ಷಣಗಳಿಲ್ಲದೆಯೇ ಸೋಂಕು ತಗುಲಿರುತ್ತದೆ. ಅವರಿಗೆ ಏನೂ ಆಗುವುದಿಲ್ಲ. ರೋಗಲಕ್ಷಣಗಳೂ ಇರುವುದಿಲ್ಲ. ಪರೀಕ್ಷೆಯನ್ನೂ ಮಾಡಿಸಿರುವುದಿಲ್ಲ. ಆದರೆ ಅವರು ಕರೋನಾ ಪಾಸಿಟಿವ್ ಆಗಿರುತ್ತಾರೆ. ಆದರೆ ಇದಾವುದರ ಪರಿವೆಯೇ ಇಲ್ಲದೆ ಎಷ್ಟು ಜನರಿಗೆ ಸೋಂಕು ಹರಡಿಸಿರುತ್ತಾರೋ ಯಾರು ಬಲ್ಲರು. ಈ
ನಿಟ್ಟಿನಲ್ಲಾದರೂ ಯೋಚಿಸಬೇಕು. ಏಕೆಂದರೆ ನಮ್ಮ ಉಡಾಫೆಯಿಂದ ಇತರರಿಗೆ ರಿಸ್ಕ್ ಆಗುತ್ತದೆ.

ಹಾಗೆಂದು ನಮಗೆಲ್ಲರಿಗೂ ಕರೋನಾ ಅಪಾಯದ ಅರಿವು ಇಲ್ಲದೇ ಏನಿಲ್ಲ. ಬಹುಶಃ ಈ ಸೋಂಕಿನ ಒಳಹೊರಗುಗಳೆಲ್ಲ ನಮಗೆ ಗೊತ್ತು. ಏನು ಮಾಡಬೇಕು ಏನು ಮಾಡಬಾರದು ಎಂಬುದರ ಅರಿವೂ ಚೆನ್ನಾಗಿದೆ. ಆದರೆ ಸೋಂಕು ಬಾರದಂತೆ, ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಮಾತ್ರ ಬಹುತೇಕರು ಎಚ್ಚರ ತಪ್ಪುತ್ತಿದ್ದೇವೆ. ಹೀಗಿರುವಾಗ ದಂಡ, ಶಿಕ್ಷೆಯೇ ಆಗಬೇಕಾದುದು ಅನಿವಾರ್ಯ. ಈ ಕಾರಣಕ್ಕಾಗಿ ಸರಕಾರಗಳೂ ಕೂಡ ಈ ವಿಚಾರದಲ್ಲಿ ಕಠಿಣವಾಗಿ ವರ್ತಿಸಬೇಕಾ ಗುತ್ತದೆ. ಇಂಗ್ಲೆಂಡ್‌ನಲ್ಲಿ, ಆಸ್ಟ್ರೇಲಿಯದಲ್ಲಿ, ಸಿಂಗಾಪುರದಲ್ಲಿ ನಮ್ಮ ಬಂಧುಗಳಿದ್ದಾರೆ. ಅಲ್ಲಿನ ಸ್ಥಿತಿಗತಿ ಹೇಗೆ ಎಂಬುದನ್ನು
ನಾನು ಕೇಳಿ ತಿಳಿದುಕೊಂಡಿದ್ದೇನೆ. ಅಲ್ಲಿನ ಕೋವಿಡ್ ನಿಯಮಗಳು ಕಠಿಣವಾಗಿವೆ. ಹಾಗೆ ನೋಡಿದರೆ ಸಾಮಾನ್ಯವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನರೂ ಕೂಡ ವಿವೇಕದಿಂದ ವರ್ತಿಸುತ್ತಾರೆ.

ಕಾನೂನನ್ನು ಪಾಲಿಸುತ್ತಾರೆ. ಆದರೆ ಅಲ್ಲಿಯೂ ಕೆಲವು ಜಗಮೊಂಡರು ಇರುತ್ತಾರಲ್ಲ. ಅಂಥವರಿಗಾಗಿ ಕಠಿಣ ಶಿಕ್ಷೆ, ದೊಡ್ಡಪ್ರಮಾಣದ ದಂಡ ಇದೆ. ಸಿಂಗಾಪುರದಲ್ಲಿ ಕರೋನಾ ನಿಯಮ ಉಲ್ಲಂಸಿ ಸಿಕ್ಕಿಬಿದ್ದ ಭಾರತೀಯರ‍್ನು ಗಡಿಪಾರು ಮಾಡಲಾಗಿದೆ. ಇನ್ನು ಅವರು ಅಲ್ಲಿಗೆ ಮತ್ತೆ ಕಾಲಿಡುವಂತಿಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯದಲ್ಲಿ ದಂಡದ ಮೊತ್ತಕ್ಕೆ ಹೆದರಿಯಾದರೂ ಕಾನೂನು ಪಾಲಿಸುವ ಪರಿಸ್ಥಿತಿ ಇದೆ. ಅದೇ ಕ್ರಮ ನಮ್ಮಲ್ಲೂ ಜಾರಿಗೆ ಬರಬೇಕು. ಮಾಸ್ಕ್ ಧರಿಸದೆ
ಓಡಾಡುವುವರಿಗೆ ಮುಲಾಜಿಲ್ಲದೆ ಫೈನ್ ಹಾಕಬೇಕು. ಜನರೂ ಅಷ್ಟೆ. ಎಲ್ಲವನ್ನು ಸರಕಾರವೇ ಹೇರಬೇಕು ಎಂದು ಬಯಸದೆ, ಅದಕ್ಕಾಗಿ ಕಾಯದೆ ಜವಾಬ್ದಾರಿಯನ್ನು ಅರಿತುಕೊಂಡು ವಿವೇಚನೆಯಿಂದ ವರ್ತಿಸಬೇಕು. ಹಬ್ಬ ಮಾಡೋಣ. ಆದರೆ ಹಬ್ಬ
ಮಾಡುವ ಅವಕಾಶವನ್ನು ಕರೋನಾಗೆ ಬಿಟ್ಟುಕೊಡದಿರೋಣ. ಜೀವ ಇದ್ದರೆ ತಾನೆ ಜೀವನ ಎಂಬುದು ನೂರಕ್ಕೆ ನೂರು ಸತ್ಯ. ಇದು ನೆನಪಿರಲಿ ನಿತ್ಯ.

ನಾಡಿಶಾಸ್ತ್ರ
ಎಲ್ಲೆಲ್ಲೂ ಕರೋನಾ, ಹುಷಾರು ಎಂದರೆ
ನಮಗಿನ್ನೂ ಬಂದಿಲ್ಲಬಿಡಿ ಎನ್ನುವರಿದ್ದಾರೆ
ಎಗ್ಗಿಲ್ಲದೆ ಮಾಡಿದರೆ ಮಹಾನವಮಿ ಹಬ್ಬ
ಮುಂದೆ ನಮಗೆಲ್ಲ ಇದ್ದೀತು ಮಾರಿಹಬ್ಬ

Leave a Reply

Your email address will not be published. Required fields are marked *