Monday, 6th January 2025

ಸೀಬರ್ಡ್ ಮೇಲೆ ವಿದ್ರೋಹಿಗಳ ಕಣ್ಣು

ಹಣದಾಸೆಗೆ ಕಾರವಾರದ ಸೀಬರ್ಡ್ ನೌಕಾನೆಲೆ ಫೋಟೋಗಳು ಮತ್ತು ಇತರ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಮೂವರು ಸ್ಥಳೀಯ ರನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿದೆ. ಬಂಧಿತ ಸುನೀಲ್ ನಾಯ್ಕ, ವೇತನ್ ತಾಂಡೇಲ ಮತ್ತು ಹಳವಳ್ಳಿಯ ಅಕ್ಷಯ್ ರವಿ ನಾಯ್ಕ್ ಈ ಮೂವರೂ ಹೊರಗುತ್ತಿಗೆ ಆಧಾರದಲ್ಲಿ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದವರು. ೨೦೨೩ರಲ್ಲಿ ಹೈದರಾಬಾದ್‌ನಲ್ಲಿ ವಿದೇಶಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ ಆರೋಪದಲ್ಲಿ ದೀಪಕ್ ಮತ್ತು ಇತರ ಕೆಲವರನ್ನು ಬಂಧಿಸಲಾಗಿತ್ತು.

ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಕಾರವಾರದ ಸೀಬರ್ಡ್‌ನಲ್ಲಿ ನಡೆಯುತ್ತಿದ್ದ ದೇಶದ್ರೋಹದ ಕೃತ್ಯ ಬಯಲಿಗೆ ಬಂದಿತ್ತು. ಪಾಕಿಸ್ತಾನ ಐಎಸ್‌ಐ ಮತ್ತು ಚೀನಾದ ಗುಪ್ತಚರ ಸಂಸ್ಥೆಗಳು ದೇಶದಲ್ಲಿ ನಿರಂತರ ಗುಪ್ತಚರ ಚಟುವಟಿಕೆಯನ್ನು ನಡೆಸುತ್ತಲೇ ಇವೆ. ಆದರೆ ದಕ್ಷಿಣ ದಲ್ಲಿ ಭಾರತದ ಅತ್ಯಂತ ಸುರಕ್ಷಿತ ನೌಕಾನೆಲೆ ಎನಿಸಿಕೊಂಡ ಸೀಬರ್ಡ್ ನೌಕಾ ನೆಲೆಯಲ್ಲೂ ಗುಪ್ತಚರ ಮಾಹಿತಿ ಸಂಗ್ರಹಿಸಲು ಮುಂದಾಗಿರುವುದು ಆತಂಕದ ವಿಚಾರ. ಈ ಮೂವರೂ ಹನಿಟ್ಯ್ರಾಪ್ ಬಲೆಗೆ ಬಿದ್ದು ಮಾಹಿತಿ ಯನ್ನು ದೀಪಕ್ ಮತ್ತು ಇತರರಿಗೆ ರವಾನಿಸಿರುವ ಆರೋಪವಿದೆ.

ಈ ಮೂವರ ಖಾತೆಗಳಿಗೆ ಹಣ ಜಮೆಯಾಗಿರುವ ಸಾಕ್ಷ್ಯಗಳು ದೊರಕಿವೆ ಎನ್ನಲಾಗಿದೆ. ವಿಚಾರಣೆ ಬಳಿಕವಷ್ಟೇ ಸೋರಿಕೆಯಾದ ಗೌಪ್ಯಮಾಹಿತಿ ವಿವರ
ತಿಳಿಯಬೇಕಾಗಿದೆ. ೧೯೭೧ರ ಭಾರತ -ಪಾಕಿಸ್ತಾನ ಯುದ್ಧದ ವೇಳೆ ವಾಣಿಜ್ಯ ಹಡಗು ಮತ್ತು ಮೀನುಗಾರಿಕಾ ಬೋಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿರುವ
ಮುಂಬೈ ಬಂದರಿನಿಂದ ಕಾರ‍್ಯಾಚರಣೆ ನಡೆಸುವುದು ನಮ್ಮ ಪಡೆಗಳಿಗೆ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ೨೦೦೫ರಲ್ಲಿ ಲೋಕಾರ್ಪಣೆಗೊಂಡ ಕಾರವಾರ ನೌಕಾನೆಲೆ ದೇಶದ ರಕ್ಷಣೆಗೆ ಹೆಚ್ಚಿನ ಬಲ ತುಂಬಿತ್ತು. ಇದು ೫೦ಕ್ಕೂ ಹೆಚ್ಚು ಹಡಗುಗಳಿಗೆ ನೆಲೆ ಒದಗಿಸುವ ಸಾಮರ್ಥ್ಯ ಹೊಂದಿದೆ. ಇಲ್ಲಿರುವ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ, ಐಎಎ ನ್‌ಎಸ್ ಕದಂಬ, ಆಧುನಿಕ ಕ್ಷಿಪಣಿ ಹಾಗೂ ಆಯುಧ ನೆಲೆಯಾಗಿರುವ ಐಎನ್‌ಎಸ್ ವಜ್ರಕೋಶ ನಮ್ಮ ನೌಕಾಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಶತ್ರುರಾಷ್ಟ್ರಗಳ ಯುದ್ಧ ವಿಮಾನಗಳ ದಾಳಿಯ ವ್ಯಾಪ್ತಿಯಿಂದ ಈ ಭಾಗ ಹೊರಗಿದೆ. ಆದರೆ ಈ ನೆಲೆಯ ಮೇಲೂ ದೇಶದ್ರೋಹಿ ಶಕ್ತಿಗಳ ಕಣ್ಣು ಬಿದ್ದಿದೆ. ನಮ್ಮ ಅಧಿಕಾರಿಗಳು  ಸಕಾಲದಲ್ಲಿ ಇದನ್ನು ಪತ್ತೆ ಹಚ್ಚಿ ಶಂಕಿತರನ್ನು ಬಂಧಿಸಿರುವುದು ಸ್ವಾಗತಾರ್ಹ.

Leave a Reply

Your email address will not be published. Required fields are marked *