Friday, 22nd November 2024

Viral Video: ಕಿಡ್ನ್ಯಾಪರ್‌ನನ್ನೇ ತಬ್ಬಿಕೊಂಡು ವಾಪಾಸ್‌ ಹೋಗಲ್ಲ ಎಂದು ಜೋರಾಗಿ ಅತ್ತ ಪುಟ್ಟ ಕಂದಮ್ಮ-ವಿಡಿಯೋ ಇದೆ

ಜೈಪುರ: 14 ತಿಂಗಳ ಹಿಂದೆ ಅಪಹರಣಕ್ಕೀಡಾದ ಮಗುವಿಗಾಗಿ ಪೋಷಕರರು, ಪೊಲೀಸರು ಹಗಲಿರುಳು ಹುಡುಕಾಟ ನಡೆಸಿ ಕೊನೆಗೆ ಪತ್ತೆ ಮಾಡಿದರೆ, ಇತ್ತ ಕಿಡ್ನ್ಯಾಪರ್‌ನನ್ನು ಬಿಟ್ಟ ಬರಲ್ಲ ಅಂತ ಮಗು ರಚ್ಚೆ ಹಿಡಿದಿದೆ. ಇಂತಹ ಸಿನಿಮೀಯ ರೀತಿಯ ಘಟನೆ ನಡೆದಿರುವುದು ರಾಜಸ್ಥಾನದ ಜೈಪುರದಲ್ಲಿ. 14 ತಿಂಗಳ ಹಿಂದೆ ಅಪಹರಣಕ್ಕೀಡಾದ ಮಗುವನ್ನು ಪತ್ತೆ ಮಾಡಿದ ನಂತರ ಪೊಲೀಸರು ಮಗುವನ್ನು ಪೋಷಕರಿಗೆ ಒಪ್ಪಿಸಲು ಮುಂದಾದಾಗ ಮಗು ತನ್ನ ಕಿಡ್ನ್ಯಾಪ್ ಮಾಡಿದ ವ್ಯಕ್ತಿಯನ್ನು ಬಿಟ್ಟು ಬರಲು ಒಪ್ಪದೇ ಜೋರಾಗಿ ಅಳಲು ಶುರು ಮಾಡಿದೆ. ಮಗುವಿನ ಅಳುವನ್ನು ಕಂಡು ಅಪಹರಿಸಿದ ವ್ಯಕ್ತಿ ಕೂಡ ಕಣ್ಣೀರಿಟ್ಟಂತಹ ಅಪರೂಪದ ಘಟನೆ ವರದಿಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಏನಿದು ಘಟನೆ?

ಜೈಪುರದ ಸಂಗನೇರ್‌ ಸದರ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಈ ಘಟನೆ ನಡೆದಿದ್ದು, 14 ತಿಂಗಳ ಹಿಂದೆ ಆರೋಪಿ ತನುಜ್ ಚಹರ್‌ ಎಂಬಾತ 11 ತಿಂಗಳ ಮಗು ಪೃಥ್ವಿಯನ್ನು ಅಪಹರಿಸಿದ್ದ. ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದರು. ಈ ಹಿಂದೆ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ಕಾರ್ಯನಿರ್ವಹಿಸಿದ್ದ ಆನುಭವ ಹೊಂದಿದ್ದ ತನುಜ್‌ ಚಹರ್‌ ಬಹಳ ಚಾಲಾಕಿನಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ತನುಜ್ ಚಹರ್‌ ವೃಂದಾವನದ ಪರಿಕ್ರಮ ಪಥದ ಬಳಿ ಯಮುನಾ ನದಿಯ ಸಮೀಪ ಬರುವ ಖದರ್‌ ಎಂಬ ಪ್ರದೇಶದಲ್ಲಿ ಗುಡಿಸಲೊಂದನ್ನು ನಿರ್ಮಿಸಿಕೊಂಡು ಸನ್ಯಾಸಿಯಂತೆ ವಾಸ ಮಾಡುತ್ತಿದ್ದ. ತನ್ನ ಗುರುತನ್ನು ಮುಚ್ಚಿಡಲು ಆತ ಗಡ್ಡ ಹಾಗೂ ಕೂದಲನ್ನು ಕತ್ತರಿಸದೇ ಉದ್ದವಾಗಿ ಬಿಟ್ಟಿದ್ದ. ಅಲ್ಲದೇ ಬಿಳಿ ಗಡ್ಡಕ್ಕೆ ಕಲರಿಂಗ್ ಮಾಡಿಕೊಳ್ಳುತ್ತಿದ್ದ. ಉತ್ತರ ಪ್ರದೇಶದ ಅಗ್ರಾ ನಿವಾಸಿಯಾದ ಆರೋಪಿ ತನುಜ್ ಈ ಮೊದಲು ಅಲಿಗಢದ ಮೀಸಲು ಪೊಲೀಸ್ ಪಡೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಉತ್ತರ ಪ್ರದೇಶದ ವಿಶೇಷ ಪೊಲೀಸ್ ತಂಡ ಹಾಗೂ ಕಣ್ಗಾವಲು ತಂಡದಲ್ಲಿಯೂ ಆರೋಪಿ ತನುಜ್ ಕೆಲಸ ಮಾಡಿದ್ದ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://x.com/ChaudharyParvez/status/1829378893876441122

ಇನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ಚಹರ್‌ ಆಗಾಗ ಸ್ಥಳ ಬದಲಾವಣೆ ಮಾಡುತ್ತಿದ್ದ. ಅಲ್ಲದೇ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಆದರೆ ಮಗುವನ್ನು ಮಾತ್ರ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇತ್ತ ಸುಮಾರು 14 ತಿಂಗಳ ಕಾಲ ಹುಡುಕಾಟ ನಡೆಸಿದ ಜೈಪುರ ಪೊಲೀಸರು ಕೊನೆಗೂ ಚಹರ್‌ನನ್ನು ಅರೆಸ್ಟ್‌ ಮಾಡಿದ್ದಾರೆ. ಈ ವೇಳೆ ಮಗುವನ್ನು ಅದರ ತಾಯಿಗೆ ಒಪ್ಪಿಸಲು ಮುಂದಾದಾಗ ಮಗು ವಾಪಾಸ್‌ ಹೋಗಲು ಹಿಂದೇಟು ಹಾಕಿದೆ. ಅಲ್ಲದೇ ಕಿಡ್ನ್ಯಾಪರ್‌ನನ್ನೇ ತಬ್ಬಿಕೊಂಡು ಹೋಗಲ್ಲ ಎಂದು ಜೋರಾಗಿ ಅತ್ತಿದೆ. ಅತ್ತ ಮಗುವನ್ನು ನೋಡಿ ತನುಜ್‌ ಚಹರ್‌ ಕೂಡ ಕಣ್ಣೀರಿಟ್ಟಿದ್ದಾನೆ.

ಆರೋಪಿಯೂ ಮಗುವಿನ ತಾಯಿಗೆ ಸಂಬಂಧಿಯೂ ಆಗಿದ್ದ ಎನ್ನಲಾಗಿದೆ. ಆರೋಪಿ ತನುಜ್ ಜೈನ್ ಮಗುವಿನ ತಾಯಿ ಹಾಗೂ ದೂರುದಾರೆ ಫೂನಂ ಚೌಧರಿ ಹಾಗೂ ಮಗು ಪೃಥ್ವಿ ತನ್ನ ಜೊತೆಗೆ ಇರಬೇಕೆಂದು ಬಯಸಿದ್ದ. ಆದರೆ ಪೂನಂ ಚೌಧರಿಗೆ ಆತನ ಜೊತೆ ಹೋಗುವುದಕ್ಕೆ ಇಷ್ಟವಿರಲಿಲ್ಲ. ಹೀಗಾಗಿ ತನುಜ್ ತನ್ನ ಸಹಚರರ ಜೊತೆ ಸೇರಿಕೊಂಡು ಮನೆಯ ಹೊರಗಿದ್ದ 11 ವರ್ಷದ ಕಂದನನ್ನು ಕಿಡ್ನಾಪ್ ಮಾಡಿದ್ದ ಎಂದುನ ಪೊಲೀಸರು ಹೇಳಿದ್ದಾರೆ.