Thursday, 19th September 2024

Ganesh Chaturthi 2024: ಗೌರಿ-ಗಣೇಶ ಹಬ್ಬ; ಹೇಗಿದೆ ಈ ಬಾರಿಯ ಶಾಪಿಂಗ್‌ ಟ್ರೆಂಡ್?

Ganesh chaturthi 2024

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಎಲ್ಲೆಡೆ ಗೌರಿ-ಗಣೇಶ ಹಬ್ಬದ (Ganesh Chaturthi 2024) ಶಾಪಿಂಗ್‌ ಮೇನಿಯಾ! ಹಬ್ಬದ ಹಿನ್ನೆಲೆಯಲ್ಲಿ, ಈ ಫೆಸ್ಟಿವ್‌ ಸೀಸನ್‌ಗೆ ಪೂರಕವಾಗಿರುವಂತವೆಲ್ಲವೂ ಮಾರುಕಟ್ಟೆ ಹಾಗೂ ಮಾಲ್‌ಗಳಿಗೆ ಲಗ್ಗೆ ಇಟ್ಟಿದ್ದು, ಪರಿಣಾಮ, ಎಲ್ಲೆಡೆ ಹಬ್ಬದ ಭರ್ಜರಿ ಶಾಪಿಂಗ್‌ ಭರಾಟೆ ಹೆಚ್ಚಾಗಿದೆ.

Ganesh Chaturthi 2024

ನವೋಲ್ಲಾಸ ಮೂಡಿಸುವ ಹಬ್ಬದ ಶಾಪಿಂಗ್‌

“ಭಾದ್ರಪದ ಮಾಸದಲ್ಲಿ ಗೌರಿ-ಗಣೇಶ ಹಬ್ಬವು ಆಗಮಿಸುತ್ತದೆ. ಹಬ್ಬಕ್ಕೆ ಅಗತ್ಯವಿರುವಂತಹ ಪೂಜಾ ಸಾಮಗ್ರಿಗಳಿಂದಿಡಿದು, ಗೌರಿ-ಗಣೇಶನ ಮೂರ್ತಿಗಳು, ಡೆಕೋರೇಷನ್‌ ಐಟಂಗಳು ಸೇರಿದಂತೆ, ಧರಿಸುವ ಉಡುಗೆ ತೊಡುಗೆಗಳು ಸೇರಿದಂತೆ ಎಲ್ಲವೂ ಮಾರುಕಟ್ಟೆಗೆ ಪ್ರತಿ ವರ್ಷದಂತೆ ಈ ವರ್ಷವೂ ಲಗ್ಗೆ ಇಟ್ಟಿದೆ. ಇನ್ನು, ಇತ್ತೀಚೆಗೆ ಹಬ್ಬದ ಶಾಪಿಂಗ್‌ ಎಂಬ ಕಾನ್ಸೆಪ್ಟ್ ಎಲ್ಲರಲ್ಲೂ ನವೋಲ್ಲಾಸ ಮೂಡಿಸಲಾರಂಭಿಸಿದೆ” ಎನ್ನುತ್ತಾರೆ ಶಾಪಿಂಗ್‌ ಎಕ್ಸ್ಪರ್ಟ್ ಛಾಯಾ ಹಾಗೂ ಕಾರುಣ್ಯ.

Ganesh Chaturthi 2024

ರಂಗು ರಂಗಾದ ಮಾರುಕಟ್ಟೆಗಳು-ಮಾಲ್‌ಗಳು

ಚಿಕ್ಕ ಪಟ್ಟಣಗಳಿಂದ ಹಿಡಿದು ಮೆಟ್ರೊ ಸಿಟಿಗಳಲ್ಲೂ ಹಬ್ಬದ ರಂಗು ಮೊದಲಿಗಿಂತ ಹೆಚ್ಚಿದೆ. ಕೇವಲ ಮಾರುಕಟ್ಟೆಗಳಲ್ಲಿ ಅಲ್ಲ, ಶಾಪಿಂಗ್‌ ಸೆಂಟರ್‌ಗಳು ಹಾಗೂ ಮಾಲ್‌ಗಳಲ್ಲೂ ಶಾಪಿಂಗ್‌ ಭರಾಟೆ ಮೊದಲಿಗಿಂತ ಹೆಚ್ಚಾಗಿದೆ. ಹಬ್ಬದ ಕಳೆ ಹೆಚ್ಚಿದೆ ಎನ್ನುತ್ತಾರೆ ಶಾಪಿಂಗ್‌ ಸೆಂಟರ್‌ವೊಂದರ ಮ್ಯಾನೇಜರ್‌ ರಾಘವ್‌. ಅವರ ಪ್ರಕಾರ, ಹಬ್ಬದ ಸೀಸನ್‌ಗಳಲ್ಲಿ ಶಾಪಿಂಗ್‌ ಹೆಚ್ಚುವುದರಿಂದ ಉದ್ಯಮ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಲು ಸಾಧ್ಯವಂತೆ.

ಏನೇನೆಲ್ಲ ಲಗ್ಗೆ ಇಟ್ಟಿವೆ?

ಮಾರುಕಟ್ಟೆಗಳಲ್ಲಿ ಈಗಾಗಲೇ ಹಬ್ಬದ ಪೂಜಾ ಸಾಮಗ್ರಿಗಳು ಹಾಗೂ ಡೆಕೋರೇಷನ್‌ ಐಟಂಗಳು ಊಹೆಗೂ ಮೀರಿದ ಸಂಖ್ಯೆಯಲ್ಲಿ ರಾರಾಜಿಸುತ್ತಿವೆ. ಜನರ ಬೇಡಿಕೆ ಪೂರೈಸುವಲ್ಲಿ ಎಲ್ಲಾ ಶಾಪ್‌ಗಳು ನಿರತವಾಗಿವೆ. ಇನ್ನು, ಸಾಕಷ್ಟು ಚಿಕ್ಕ-ಪುಟ್ಟ ಶಾಪ್‌ಗಳು ಕೂಡ ಈ ವರ್ಷ ಆನ್‌ಲೈನ್‌ ಶಾಪಿಂಗ್‌ ವ್ಯವಸ್ಥೆ ಮಾಡಿರುವುದರೊಂದಿಗೆ, ಇಂತಿಷ್ಟು ಶಾಪಿಂಗ್‌ ಮಾಡಿದವರಿಗೆ ಹೋಮ್‌ ಡೆಲಿವರಿ ವ್ಯವಸ್ಥೆ ಕೂಡ ನೀಡಿರುವುದು ಶಾಪಿಂಗ್‌ ಮೊದಲಿಗಿಂತ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಗಾಂಧಿ ಬಜಾರ್‌ ಅಂಗಡಿಯೊಂದರ ಮಾಲೀಕರು.

ಹೆಚ್ಚಿದ ಉಡುಪುಗಳ ಖರೀದಿ

ಹಬ್ಬ ಎಂದಾಕ್ಷಣ, ಎಲ್ಲರೂ ಅತಿ ಹೆಚ್ಚಾಗಿ ಖರೀದಿ ಮಾಡುವುದು ಉಡುಗೆ – ತೊಡುಗೆಗಳನ್ನು ಎನ್ನುತ್ತಾರೆ ಬೋಟಿಕ್‌ ಡಿಸೈನರ್‌ಗಳು. ಮಾಲ್‌ಗಳಲ್ಲಿ ಮಾತ್ರವಲ್ಲ, ಎಲ್ಲಾ ಬಗೆಯ ಚಿಕ್ಕ ಶಾಪ್‌ಗಳಲ್ಲೂ ಹಾಗೂ ಬೋಟಿಕ್‌ಗಳಲ್ಲೂ ಕೂಡ ಫೆಸ್ಟಿವ್‌ ಸೀಸನ್‌ನಲ್ಲಿ ಎಥ್ನಿಕ್‌ವೇರ್‌ಗಳು ತುಂಬಿ ತುಳುಕಾಡುತ್ತಿವೆ. ಇನ್ನು, ಸೀರೆ ಸೆಂಟರ್‌ಗಳಲ್ಲಿ ಮಹಿಳೆಯರ ಸಂಖ್ಯೆ ಅಧಿಕಗೊಂಡಿದೆ ಎನ್ನುತ್ತಾರೆ ಸೀರೆ ಶಾಪ್‌ನ ಸೇಲ್ಸ್ ಮ್ಯಾನ್‌.

 

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Leave a Reply

Your email address will not be published. Required fields are marked *