ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ (Actor darshan) ಇದೀಗ ಅವರ ಬೇಡಿಕೆಯಂತೆ ಟಿವಿ ಒದಗಿಸಲು ಕಾರಾಗೃಹ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕಳೆದ ವಾರ ರೇಣುಕಾಸ್ವಾಮಿ ಕೊಲೆ (RenukaSwamy Murder) ಆರೋಪಿ ದರ್ಶನ್‌ನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಜೈಲಿಗೆ ವರ್ಗಾಯಿಸಲಾಗಿತ್ತು. ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ರಾಜಾತಿಥ್ಯ ಅನುಭವಿಸುತ್ತಿದ್ದ ದರ್ಶನ್ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದ್ದು, ಬಳ್ಳಾರಿಗೆ ಆರೋಪಿಯನ್ನು ಸ್ಥಳಾಂತರಿಸಿತ್ತು.
ಆ ಬಳಿಕ ದರ್ಶನ್, ತಮಗೆ ಜೈಲಿನಲ್ಲಿ ಟಿವಿ ಒದಗಿಸುವಂತೆ ಮನವಿ ಮಾಡಿದ್ದರು. ಬಳ್ಳಾರಿಯಲ್ಲಿರುವ ತನ್ನನ್ನು ಬೆಂಗಳೂರಿನಂತೆ ಯಾರೂ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೊರಜಗತ್ತಿನ ಮಾಹಿತಿ ದೊರೆಯುತ್ತಿಲ್ಲ. ಹೀಗಾಗಿ ತನಗೆ ಟಿವಿ ಒದಗಿಸುವಂತೆ ಅವರು ಕೋರಿದ್ದರು. ಈ ಕೋರಿಕೆಯನ್ನು ಮಾನ್ಯ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಅವರಿಗೆ ಟಿವಿ ದೊರೆಯಲಿದೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ, ಕಾರಾಗೃಹ ಆವರಣದಲ್ಲಿ ಇನ್ನೂ ಹತ್ತು ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶನ್ ವಿರುದ್ಧ ಇನ್ನೊಂದು ಮಹತ್ವದ ಸಾಕ್ಷಿ
ನಟ ದರ್ಶನ್ (Actor Darshan) ಮತ್ತು ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಕೊಲೆ (renukaswamy murder) ಪ್ರಕರಣದಲ್ಲಿ, ಆರೋಪಿ ದರ್ಶನ್ ವಿರುದ್ಧ ಮತ್ತೊಂದು ಮಹತ್ವದ ಸಾಕ್ಷಿ ಲಭ್ಯವಾಗಿದೆ. ಇದು ನಟನಿಗೆ ಕಂಟಕವಾಗಿ ಪರಿಣಮಿಸಲಿದೆ.
ರೇಣುಕಾ ಸ್ವಾಮಿ ಮೇಲೆ ನಡೆಸಲಾದ ಚಿತ್ರಹಿಂಸೆಯಲ್ಲಿ (crime) ದರ್ಶನ್ ಪಾತ್ರವೂ ಇದೆಯೆಂದು ಹೇಳಲಾಗಿತ್ತು. ಆದರೆ ಅದಕ್ಕೆ ಪೂರಕ ಸಾಕ್ಷಿಗಳು ಸಿಕ್ಕಿರಲಿಲ್ಲ. ಇದೀಗ ಎವಿಡೆನ್ಸ್‌ಗಳ ಮೇಲೆ ನಡೆಸಲಾದ ಲೂಮಿನಲ್ ಟೆಸ್ಟ್‌ನಲ್ಲಿ ಪೂರಕ ಸಾಕ್ಷಿ ದೊರೆತಿದೆ. ದರ್ಶನ್ ಧರಿಸಿದ್ದ ಶೂಗಳೇ ಇದೀಗ ಪ್ರಮುಖ ಸಾಕ್ಷಿ ಆಗಲಿವೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ದರ್ಶನ್ ಶೂಗಳನ್ನು ಲೂಮಿನಲ್ ಟೆಸ್ಟ್‌ಗೆ ಕಾಮಾಕ್ಷಿಪಾಳ್ಯ ಪೊಲೀಸರು ಕಳಿಸಿದ್ದರು. ಲೂಮಿನಲ್ ಟೆಸ್ಟ್ ವೇಳೆ ದರ್ಶನ್ ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬುದಕ್ಕೆ ಇದು ಮೂರನೇ ಮುಖ್ಯ ಎವಿಡೆನ್ಸ್ ಆಗಿ ದೊರೆತಿದೆ.
ಈ ಹಿಂದೆ ದರ್ಶನ್ ಟಿ ಶರ್ಟ್ ಮೇಲೂ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ ಆಗಿದ್ದವು. ಇದನ್ನು ಹಲ್ಲೆಯ ಸಂದರ್ಭದಲ್ಲಿ ದರ್ಶನ್ ಧರಿಸಿದ್ದರು. ಇದೀಗ ದರ್ಶನ್ ಧರಿಸಿದ್ದ ಟೀಶರ್ಟ್, ಪ್ಯಾಂಟ್, ಬೆಲ್ಟ್ ಜೊತೆಗೆ ಶೂ ಕೂಡ ಪ್ರಮುಖ ಸಾಕ್ಷ್ಯಗಳಾಗಿವೆ. ಬೆಲ್ಟ್‌ನಿಂದ ರೇಣುಕಾಸ್ವಾಮಿ ಮೇಲೆ ಹೊಡೆದಿದ್ದ, ಶೂಗಳಿಂದ ಒದ್ದಿದ್ದ ಬಗೆ ದೂರಲಾಗಿತ್ತು. ಹೀಗಾಗಿ ಅದೂ ಸಾಕ್ಷಿಯಾಗಿದೆ.
ಚಾರ್ಜ್ ಶೀಟ್‌ನಲ್ಲಿ ಈ ಮೂರು ವಸ್ತುಗಳ ಬಗ್ಗೆ ಪೊಲೀಸರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಜ್ಜಾಗಿದ್ದಾರೆ. ಚಾರ್ಜ್‌ಶೀಟ್ ಪುಟಗಳ ಸಂಖ್ಯೆ 4800ಕ್ಕೂ ಮೀರಿದೆ ಎಂದು ತಿಳಿದುಬಂದಿದೆ. ಎಸ್ಪಿಪಿ ಪ್ರಸನ್ನಕುಮಾರ್ ಮುಖಾಂತರ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.
ಈ ಸುದ್ದಿ ಓದಿ: Darshan: ಆರೋಪಿ ದರ್ಶನ್‌ಗೆ ಸರ್ಜಿಕಲ್ ಚೇರ್