Monday, 25th November 2024

ಎದೆಯ ದನಿಗೆ ಮಿಗಿಲಾದ ಶಾಸ್ತ್ರವಿಹುದೇ ?

ನಮ್ಮ ಜೀವನ ಸುಗಮವಾಗಿ ಸಾಗಲು, ಅಧ್ಯಾತ್ಮ ಸಾಧನೆ ಮಾಡಲು ಕೆಲವು ಸಾರ್ವಕಾಲಿಕ ನಿಯಮ ಗಳಿವೆ. ಆದರೆ, ಆ ನಿಯಮಗಳು ಏಕತಾನವೆನಿಸುವುದೂ ಉಂಟು. ಆಗ ಎದೆಯ ದನಿಯೇ ಪ್ರಧಾನ ಎನಿಸಬೇಕು, ಅದೇ ಮಾರ್ಗ ದರ್ಶನ ನೀಡಬೇಕು.

ಮಹಾದೇವ ಬಸರಕೋಡ, ಅಮೀನಗಡ

ನಮ್ಮ ಬದುಕಿನ ಬಹುತೇಕ ಸಂದರ್ಭಗಳಲ್ಲಿ ಸಮಾಜ ಇಲ್ಲವೇ ಧರ್ಮಗಳು ಅಂಗೀಕರಿಸಿದ ಸಮಾಜಮುಖಿ ನಿಲುವಿನ ಬಹು ವಾಗಿ ಒಪ್ಪಿತ ವಿಚಾರಗಳನ್ನು ನಮ್ಮ ಆದರ್ಶಗಳಾಗಿ ಪರಿಗಣಿಸುತ್ತೇವೆ. ಸಮಾಜದ ಸ್ವಾಸ್ಥ್ಯಕ್ಕಾಗಿ ವ್ಯಾಪಕವಾಗಿ ಅಂಗೀ ಕರಿಸಿದ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸದಿರುವುದು, ಇನ್ನೊಬ್ಬರಿಗಾಗಿ ಒಂದಷ್ಟು ತ್ಯಾಗ ಮಾಡುವುದು, ಸತ್ಯವನ್ನೇ ನುಡಿಯುವುದು ಇವೇ ಮೊದಲಾದ ಹತ್ತು ಹಲವು ಉನ್ನತ ಮೌಲ್ಯಗಳನ್ನು ಅನುಸರಿಸುತ್ತೇವೆ. ಇವುಗಳ ಪಾಲನೆಯಿಂದ ಮನಸ್ಸಿನ ತಹತಹಕ್ಕೆ ಒಂದಷ್ಟು ತೃಪ್ತಿಯನ್ನು ತಂದುಕೊಳ್ಳುತ್ತೇವೆ. ಇತರರಿಂದ ಗೌರವಕ್ಕೆ ಪಾತ್ರರಾಗುತ್ತೇವೆ. ಅದು ಸರ್ವಸಮ್ಮತವೂ ಕೂಡ. ಆದರೆ
ಇದಕ್ಕೆ ಪೂರಕವಾಗಿ ಇಂತಹ ಉದಾತ್ತ ಮೌಲ್ಯಗಳು ದೈನಂದಿನ ಅಂತರ್ಗತವಾಗಿಸಿಕೊಂಡ ನಾವು ಅವುಗಳ ಲಕ್ಷ್ಮಣರೇಖೆಯಲ್ಲಿ ಬಂಧಿತರಾಗಿ ನಮ್ಮತನವನ್ನು, ಕಳೆದುಕೊಳ್ಳುತ್ತೇವೆ.

ಅದರ ಭ್ರಾಮಕತೆಗೆ ಒಳಗಾದವರಂತೆ ವರ್ತಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಇದು ನಾವು ವಿವೇಚನೆಗೆ ಒಳಪಡಿಸಬೇಕಾದ ಸಂಗತಿಯಾಗಿದೆ. ಬುದ್ಧನ ಶಿಷ್ಯ ಆನಂದ, ಒಂದು ಬಾರಿ ಕೋಸಲ ಮಹಾರಾಜನ ಆಸ್ಥಾನದಲ್ಲಿ ಪ್ರವಚನ ಮಾಡಿದ. ಅವನ ಪ್ರವಚನ ಕೇಳಿ ಸಂತೃಪ್ತಗೊಂಡ ರಾಣಿಯರು ತಮ್ಮ ಬಳಿ ಇದ್ದ ಅತ್ಯುತ್ತಮ ವಸ್ತ್ರಗಳನ್ನೆಲ್ಲ ಆನಂದನಿಗೆ ದಾನವಾಗಿ ನೀಡಿದರು. ನೂರಕ್ಕೂ ಹೆಚ್ಚು ವಸ್ತ್ರಗಳನ್ನು ಆನಂದ ದಾನವಾಗಿ ಸ್ವೀಕರಿಸಿದ್ದು ರಾಣಿಯರಿಗೆ ಕ್ಷಣ ಕಾಲ  ಅಚ್ಚರಿ ಯೆನಿಸಿದರೂ, ಅವರು ಆನಂದನ ಅಪರಿಮಿತ ಜ್ಞಾನ ಮತ್ತು ಅವನ ಮೇಲಿನ ಗೌರವದಿಂದಾಗಿ ಸಂತೋಷದಿಂದಲೇ ಬೀಳ್ಕೊಟ್ಟರು. ಕೆಲವು ದಿನಗಳ ನಂತರ ರಾಣಿಯರ ಅಂತಃಪುರಕ್ಕೆ ರಾಣಿಯರ ಹತ್ತಿರ ಹೋದಾಗ ತಾನು ಕಾಣಿಕೆಯಾಗಿ ಪ್ರೀತಿ ಯಿಂದ ನೀಡಿದ ಅಪರೂಪದ ವಸ್ತ್ರಗಳು ಕಾಣದೇ ಹೋದಾಗ ಅಚ್ಚರಿಗೊಂಡ ರಾಜ ತಾನು ಪ್ರೀತಿಯಿಂದ ನೀಡಿದ ವಸ್ತ್ರಗಳು ಎಲ್ಲಿ? ಎಂದು ಕೇಳಿದ.

ರಾಣಿಯರು ತಮ್ಮಲ್ಲಿದ್ದ ನೂರಕ್ಕೂ ಹೆಚ್ಚು ವಸ್ತ್ರಗಳನ್ನು ಆನಂದನಿಗೆ ದಾನವಾಗಿ ನೀಡಿದ ವಿಷಯ ತಿಳಿಸಿದರು. ರಾಜನೂ ಕೂಡ ಅಚ್ಚರಿಗೊಂಡ. ಆನಂದನ ನಡತೆಯ ಕುರಿತು ಕಸಿವಿಸಿಗೊಂಡ. ಬುದ್ಧನ ಪರಮಾಪ್ತ ಶಿಷ್ಯನಾದ ಆನಂದನಿಗೆ ಇಂತಹ ವ್ಯಾಮೋಹವೇ? ಎಂಬ ಅಸಮಾಧಾನ ಅವನನ್ನು ಕಾಡತೊಡಗಿತು.

ಬಿಕ್ಕುವಿಗೇಕೆ ವಸ್ತ್ರರಾಶಿ?
ಆನಂದನನ್ನು ಭೇಟಿಯಾಗಲು ಅವನ ಕುಟೀರಕ್ಕೆ ಹೋದ ರಾಜನನ್ನು ಆನಂದ ಗೌರವದಿಂದ ಬರಮಾಡಿ ಕೊಂಡ. ರಾಜ ಕೊಂಚ ಸಿಟ್ಟಿನಿಂದಲೇ ‘ಯಾವ ಭಿಕ್ಕುವೂ ಮೂರಕ್ಕಿಂತ ಹೆಚ್ಚು ವಸ್ತ್ರಗಳನ್ನು ಹೊಂದಿರಬಾರ ದೆಂಬ ಬುದ್ಧನ ವಾಣಿಯನ್ನು ಅರಿತ ನೀನು, ನೂರಕ್ಕೂ ಹೆಚ್ಚು ವಸ್ತ್ರಗಳನ್ನು ದಾನವಾಗಿ ಸ್ವೀಕರಿಸದ್ದು ಸರ್ವತಾ ಸಲ್ಲದು. ನಿನಗೆ ವ್ಯಾಮೋಹದಿಂದ ಇನ್ನೂ ಹೊರ ಬರಲು ಸಾಧ್ಯವಾಗಿಲ್ಲ!’ ಎಂದು ರೇಗಾಡಿದ.

ಅತ್ಯಂತ ಶಾಂತಚಿತ್ತನಾಗಿ ದೊರೆಯ ಮಾತುಗಳನ್ನು ಆಲಿಸಿದ ನಂತರ ಆನಂದ ‘ಮಹಾರಾಜರೇ, ತಾವು ಹೇಳಿದ್ದೆಲ್ಲವೂ ಸರಿಯಾಗಿಯೇ ಇದೆ. ನಮ್ಮ ಹಲವಾರು ಭಿಕ್ಕುಗಳ ವಸ್ತ್ರಗಳು ಹರಿದು ಹೋಗಿರುವುದು ನನಗೆ ನೆನಪಿಗೆ ಬಂದಾಗ ನನ್ನ ಗುರು ಬುದ್ಧನ  ಉಪದೇಶಕ್ಕಿಂತ, ನಮ್ಮ ಭಿಕ್ಕುಗಳಿಗಾಗಿ ನಾನು ರಾಣಿಯರು ಕೊಟ್ಟ ವಸ್ತ್ರಗಳನ್ನೆಲ್ಲ ದಾನವಾಗಿ ಸ್ವೀಕರಿಸುವುದು ಶ್ರೇಷ್ಠವೆನಿಸಿತು. ಅದಕ್ಕಾಗಿ ಧರ್ಮದ ನಿಯಮವನ್ನು, ಗುರುವಿನ ಮಾತನ್ನು ನಾನು ಮೀರಬೇಕಾಯಿತು’ ಎಂದ.

ಬಿಕ್ಕುಗಳ ಬಳಿ ವಸ್ತ್ರಗಳು ಇಲ್ಲದಂತಹ ಸಂದರ್ಭದಲ್ಲಿ, ರಾಣಿಯರು ಕೊಟ್ಟ ವಸ್ತ್ರಗಳನ್ನು ನಯವಾಗಿ ನಿರಾ ಕರಿಸಿ ನನ್ನ  ಗೌರವ ವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮನಸ್ಸು ಒಪ್ಪಲಿಲ್ಲ ಎಂದು ತಿಳಿಸಿದ. ತಾನು ದಾನವಾಗಿ ಸ್ವೀಕರಿಸಿದ ವಸ್ತುಗಳೆಲ್ಲ ಅಗತ್ಯವಿರು ವವರಿಗೆ ಹೇಗೆಲ್ಲ ಉಪಯೋಗವಾಗುತ್ತವೆ ಎಂಬುದನ್ನು ರಾಜನಿಗೆ ಮನಗಾಣಿಸಿದ. ರಾಜನು ಬಿಕ್ಕುಗಳ ಪರಿಸ್ಥಿತಿಯನ್ನು ನೋಡಿದ. ಅವರೆಲ್ಲರೂ ಆ ವಸ್ತ್ರಗಳನ್ನು ಹೊದ್ದು, ಚಳಿಯಿಂದ ರಕ್ಷಣೆ ಪಡೆದ ವಸ್ತು ಸ್ಥಿತಿ ಅರಿವಿಗೆ ಬಂದಿತು. ರಾಜನು ತನ್ನ ತಪ್ಪನ್ನು, ಕೋಪವನ್ನು ಅರಿತು, ವಿಚಾರ ತಿಳಿದು ಆನಂದನಲ್ಲಿ ರಾಜ ಕ್ಷಮೆ ಕೋರಿದ.

ಕೆಲವು ಅಗತ್ಯ ಸಂದರ್ಭಗಳಲ್ಲಿ ನಾವು ನಂಬಿಕೆಕೊಂಡು ಬಂದ ಸದ್‌ವಿಚಾರಗಳ, ಉತ್ತಮವೆಂದು ಪರಿಗಣಿ ಸಿದ ಮೌಲ್ಯಗಳ, ಮಾತ್ರವಲ್ಲದೇ ಧರ್ಮಗಳ ಒಂದಷ್ಟು ಎಲ್ಲೆಯನ್ನು ಮೀರುವುದು ಅನಿವಾರ್ಯವಾಗುತ್ತದೆ. ನಮ್ಮ ಗ್ರಹಿಕೆಗಳು ಜೀವವಿರೋಧಿ ಯಾಗುವಂತಿದ್ದರೆ ಅವುಗಳನ್ನು ನಮ್ಮ ವಿವೇಚನೆಯ ಮೂಸೆಯಲ್ಲಿ ಪುಟಕಿಕ್ಕಿ, ಜೀವ ಪ್ರೀತಿಯ ಮೆರಗು ನೀಡಬೇಕು. ಜೀವನದ ನೈಜ ಅರ್ಥವನ್ನು ನಾವು ಪರಿಶೋಧಿಸಬೇಕು. ಮನುಷ್ಯ ಮಾತ್ರವಲ್ಲದೇ, ಇತರ ಜೀವಿಗಳ ಹಿತಕ್ಕಾಗಿ ನಾವು ಯೋಚಿಸಿ, ಕಾರ್ಯ ಪ್ರವೃತ್ತರಾದಾಗ, ಕುವೆಂಪು ಅವರ ಮಾತಿನಂತೆ ‘ನಮ್ಮೆದೆಯ ದನಿಗೆ ಕಿವಿಯಾದಾಗ’, ಬದುಕು ಇನ್ನಷ್ಟು ಕಳೆಗಟ್ಟುತ್ತದೆ.