Sunday, 24th November 2024

Money Tips: PPF ಖಾತೆ ಹೊಂದಿದ್ದೀರಾ? ಬದಲಾದ ಈ ಹೊಸ ನಿಯಮ ತಿಳಿದಿರಲಿ

Money Tips

ಬೆಂಗಳೂರು: ಇಂದಿನ ಉಳಿತಾಯವೇ ನಾಳೆಯ ಆದಾಯ ಎನ್ನುವ ಮಾತಿದೆ. ಅಂದರೆ ನಾವೀಗ ಎಷ್ಟು ಉಳಿತಾಯ ಮಾಡುತ್ತೇವೆಯೋ ಭವಿಷ್ಯದಲ್ಲಿ ಅಷ್ಟರ ಮಟ್ಟಿಗೆ ಆರ್ಥಿಕವಾಗಿ ನಿಶ್ಚಿಂತೆಯಿಂದ ಇರಬಹುದು. ಇದರಿಂದ ನಿವೃತ್ತರಾದಾಗ ಅಥವಾ ನಿಯಮಿತ ಆದಾಯವಿಲ್ಲದಾಗ ಹಣಕ್ಕಾಗಿ ಇತರರ ಮುಂದೆ ಕೈಚಾಚಬೇಕಾದ ಅಗತ್ಯ ಕಂಡು ಬರುವುದಿಲ್ಲ. ಇದಕ್ಕಾಗಿಯೇ ಸರ್ಕಾರವೂ ಜನರಲ್ಲಿ ಉಳಿತಾಯ ಮನೋಭಾವ ಬೆಳೆಸಲು ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಿದೆ. ಅಂತಹ ಉಳಿತಾಯ ಯೋಜನೆಗಳಲ್ಲಿ ಪ್ರಮುಖವಾದುದು ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF). ಪಿಪಿಎಫ್‌ ಸರ್ಕಾರ ನಿರ್ವಹಿಸುವ ಉಳಿತಾಯ ಯೋಜನೆಯಾಗಿರುವುದರಿಂದ ಇದರಲ್ಲಿ ಅಪಾಯ ಕಡಿಮೆ. ಜತೆಗೆ ತೆರಿಗೆ ಪ್ರಯೋಜವೂ ಲಭ್ಯ. ಇದೇ ಕಾರಣದಿಂದ ಪಿಪಿಎಫ್‌ ಭಾರತದಲ್ಲಿ ಜನಪ್ರಿಯವಾಗಿದೆ. ಜತೆಗೆ ಇದರಲ್ಲಿ ಆನಿವಾಸಿ ಭಾರತೀಯರೂ (Non-Resident Indian-NRI) ಹೂಡಿಕೆ ಮಾಡಬಹುದು ಎನ್ನುವುದು ವಿಶೇಷ. ಇದೀಗ ಕೇಂದ್ರ ಸರ್ಕಾರ ಪಿಪಿಎಫ್‌ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿದೆ. ಅದೇನು ಎನ್ನುವ ವಿವರ ಇಲ್ಲಿದೆ (Money Tips).

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಇತ್ತೀಚೆಗೆ ಅಪ್ರಾಪ್ತ ವಯಸ್ಕರು, ಬಹು ಪಿಪಿಎಫ್ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳು ಮತ್ತು ರಾಷ್ಟ್ರೀಯ ಸಣ್ಣ ಉಳಿತಾಯ (National Small Savings-NSS) ಯೋಜನೆಗಳ ಅಡಿಯಲ್ಲಿ ಅಂಚೆ ಕಚೇರಿಗಳ ಮೂಲಕ ತಮ್ಮ ಪಿಪಿಎಫ್ ಖಾತೆಗಳನ್ನು ವಿಸ್ತರಿಸುವ ಎನ್ಆರ್‌ಐಗಳಿಗೆ ಸಂಬಂಧಿಸಿ ನವೀಕರಿಸಿದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಕ್ಟೋಬರ್‌ 1ರಿಂದಲೇ ಈ ನಿಯಮ ಜಾರಿಗೆ ಬರಲಿದೆ.

ಬದಲಾವಣೆಗಳು ಏನೆಲ್ಲ?

ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಖಾತೆ ಇದ್ದರೆ: ಅಪ್ರಾಪ್ತರ ಹೆಸರಿನಲ್ಲಿ ತೆರೆಯಲಾದ ಉಳಿತಾಯ ಖಾತೆಗೆ ಮೊದಲಿಗೆ ಪೋಸ್ಟ್ ಆಫೀಸ್ ಉಳಿತಾಯ ಖಾತೆ ದರ (Post Office Savings Accounts)ದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ. ಖಾತರದಾರರಿಗೆ 18 ವರ್ಷ ಆದ ಬಳಿ, ಈ ಖಾತೆಯು ಪಿಪಿಎಫ್‌ ಖಾತೆಯಷ್ಟೇ ಬಡ್ಡಿದರವನ್ನು ಗಳಿಸುತ್ತದೆ. ಈ ಖಾತೆಯನ್ನು ಮುಚ್ಚುವ ದಿನಾಂಕವನ್ನು ಖಾತೆದಾರರಿಗೆ 18 ವರ್ಷ ತುಂಬಿದ ದಿನದಿಂದ ಲೆಕ್ಕ ಹಾಕಲಾಗುತ್ತದೆ.

ಒಂದೇ ಹೆಸರಿನಲ್ಲಿ ಬೇರೆ ಬೇರೆ ಖಾತೆ ಇದ್ದರೆ: ಠೇವಣಿಯು ಅನ್ವಯವಾಗುವ ವಾರ್ಷಿಕ ಮಿತಿಯೊಳಗೆ ಬರುವವರೆಗೆ ಯೋಜನೆಯ ಬಡ್ಡಿದರವನ್ನು ಪ್ರಾಥಮಿಕ ಖಾತೆಗೆ ಪಾವತಿಸಲಾಗುತ್ತದೆ. ಎರಡನೇ ಖಾತೆಯಲ್ಲಿನ ಬ್ಯಾಲೆನ್ಸ್ ಅನ್ನು ಮೊದಲ ಖಾತೆಯೊಂದಿಗೆ ವಿಲೀನಗೊಳಿಸಲಾಗುತ್ತದೆ. ಪ್ರಾಥಮಿಕ ಖಾತೆಯು ಪ್ರತಿ ವರ್ಷ ಅನ್ವಯವಾಗುವ ಹೂಡಿಕೆಯ ಸೀಲಿಂಗ್ ಅಡಿಯಲ್ಲಿ ಉಳಿಯುತ್ತದೆ. ಪ್ರಾಥಮಿಕ ಖಾತೆಯು ಪ್ರತಿ ವರ್ಷ ಅನ್ವಯವಾಗುವ ಹೂಡಿಕೆ ಮಿತಿಗಿಂತ ಕಡಿಮೆಯಿದ್ದರೆ, ಎರಡನೇ ಖಾತೆಯಲ್ಲಿನ ಬಾಕಿಯನ್ನು ಮೊದಲನೆಯದರೊಂದಿಗೆ ಸಂಯೋಜಿಸಲಾಗುತ್ತದೆ. ಪ್ರಾಥಮಿಕ ಮತ್ತು ದ್ವಿತೀಯ ಖಾತೆಗಳನ್ನು ಹೊರತುಪಡಿಸಿ ಇತರ ಯಾವ ಖಾತೆಗಳು ತೆರೆದ ದಿನದಿಂದ ಬಡ್ಡಿಯನ್ನು ಗಳಿಸುವುದಿಲ್ಲ.

ಎನ್‌ಆರ್‌ಐ ಖಾತೆ ವಿಸ್ತರಣೆ: ಆನಿವಾಸಿ ಭಾರತೀಯರು ಸಕ್ರಿಯ ಸಾರ್ವಜನಿಕ ಭವಿಷ್ಯ ನಿಧಿ ಖಾತೆಯನ್ನು ಹೊಂದಿದ್ದರೆ ಮತ್ತು ಫಾರ್ಮ್ ಎಚ್ ಬಳಸಿ ರೆಸಿಡೆನ್ಸಿ ಸ್ಥಾನಮಾನದಲ್ಲಿ ಬದಲಾವಣೆಯನ್ನು ಕೋರದಿದ್ದರೆ ಸೆಪ್ಟೆಂಬರ್ 30, 2024ರವರೆಗೆ ತಮ್ಮ ಖಾತೆಗೆ ಪೋಸಾ (POSA) ಬಡ್ಡಿದರವನ್ನು ಗಳಿಸುತ್ತಾರೆ. ಈ ದಿನಾಂಕದ ನಂತರ, ಖಾತೆಯು ಬಡ್ಡಿ ಪಾವತಿಸಲಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: Money Tips: CIBIL Score Vs CIBIL Report; ಸಾಲ ಪಡೆಯಲು ಯಾವುದು ಮುಖ್ಯ?

ಪಿಪಿಎಫ್‌ ಖಾತೆ ತೆರೆಯುವುದು ಹೇಗೆ?

ಪಿಪಿಎಫ್ ಖಾತೆಗಳನ್ನು ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಯಾವುದೇ ಶಾಖೆಯಲ್ಲಿ ತೆರೆಯಬಹುದು. ಪಿಪಿಎಫ್ ಖಾತೆಯನ್ನು ತೆರೆಯಲು ನಿರ್ಧಿಷ್ಟ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಒಮ್ಮೆ ಪಿಪಿಎಫ್ ಖಾತೆಯನ್ನು ತೆರೆದ ನಂತರ ಯಾವುದೇ ಸಮಯದಲ್ಲಿ ಡೆಪಾಸಿಟ್‌ ಮಾಡಬಹುದು. ಆನ್‌ಲೈನ್‌ ಅಥವಾ ನಗದು ರೂಪದಲ್ಲಿ ಪಾವತಿಸುವ ಅವಕಾಶವಿದೆ.