Wednesday, 27th November 2024

Shishir Hegde Column: ಮ್ಯಾರಥಾನ್‌ ಎಂಬ ದಂಡೆದ್ದು ಓಡುವ ಕ್ರಿಯೆ, ಕ್ರೀಡೆ

ಶಿಶಿರ ಕಾಲ

ಶಿಶಿರ ಹೆಗಡೆ

ಅನ್ಯಗ್ರಹ ಜೀವಿಗಳು (ಏಲಿಯನ್ನುಗಳು) ಮೇಲಿದ್ದುಕೊಂಡೇ ನಮ್ಮ ವ್ಯವಹಾರಗಳನ್ನು ಒಂದೊಮ್ಮೆ ಗುಟ್ಟಾಗಿ ನೋಡುತ್ತಿದ್ದರೆ, ಅತಿರೇಕವೆನಿಸುವ ನಮ್ಮ ಕೆಲವೊಂದು ನಡೆಗಳು ಅವುಗಳಿಗೆ ಸುಲಭದಲ್ಲಿ ಅರ್ಥವಾಗಲಿಕ್ಕಿಲ್ಲ. ಅವುಗಳಿಗೆ ಕ್ಲಿಷ್ಟವೆನಿಸುವ ಕೆಲವೊಂದು ಅರ್ಥವಾಗಿಬಿಡಬಹುದು. ಚುನಾವಣೆಗಳ ಸಮಯದಲ್ಲಿ ನಾವು ಗುಂಪಾಗಿ ಸೇರುವುದನ್ನು, ನಮ್ಮಲ್ಲಿಯೇ ಒಬ್ಬ ಮನುಷ್ಯ ಅಲ್ಲಿ ಬಂದು ಗಟ್ಟಿಯಾಗಿ ಕಿರಿಚುವುದನ್ನು, ನಂತರದಲ್ಲಿ ಅದರಬ್ಬ ಪ್ರತಿನಿಽಯಾಗುವುದನ್ನು ಹೇಗಾದರೂ ಅರ್ಥಮಾಡಿಕೊಂಡಾವು.

ಕ್ರಿಕೆಟ್, ಫುಟ್ಬಾಲ್ ಮೊದಲಾದ ಪಂದ್ಯಾವಳಿಗಳಲ್ಲಿ ಲಕ್ಷೋಪಾದಿ ಜನರು ಒಂದು ಕಡೆ ಸೇರಿ ಬೊಬ್ಬೆ ಹಾಕು ವುದನ್ನು, ಒಂದಿಷ್ಟು ಮಂದಿ ಮಧ್ಯದಲ್ಲಿ ಓಡಾಡುವುದನ್ನು ಕೂಡ ಅದೇನೋ ಸ್ಪರ್ಧೆ ಎಂದು ಅರ್ಥೈಸಿ ಕೊಳ್ಳ ಬಹುದು. ಆದರೆ ಅಪ್ಪಿ ತಪ್ಪಿ ಅವುಗಳೇನಾದರೂ ಮ್ಯಾರಥಾನ್ ಅನ್ನು ನೋಡಿಬಿಟ್ಟರೆ ಗೊಂದಲ ವಾಗುವುದು ಪಕ್ಕಾ. ‘ಈ ಮನುಷ್ಯ ಜೀವಿಗಳು ಅಲ್ಲಲ್ಲಿ ಹೀಗೆ ಏಕೆ ಓಡುತ್ತಾವೋ ಹುಚ್ಚುಮುಂಡೆವು’ ಎಂದು ಏಲಿಯನ್ನುಗಳು ತಲೆ ಕೆದರಿಕೊಳ್ಳಬಹುದು. ನೂರು, ಇನ್ನೂರು ಮೀಟರ್ ಓಡುವುದು, ಸ್ಪರ್ಧೆಯಲ್ಲಿ ಯಾರು ಮೊದಲು ಫಿನಿಷ್‌ ಲೈನ್ ತಲುಪುತ್ತಾರೋ ಅವರೇ ಜಯಶಾಲಿ ಎನ್ನುವುದು ಎಂಬಿತ್ಯಾದಿಯನ್ನು ಕ್ರೀಡೆ, ಸರ್ಧೆ ಎಂದು ಕರೆಯ ಬಹುದು. ಅದರಲ್ಲೊಬ್ಬ ಶ್ರೇಷ್ಠ ಕ್ರೀಡಾಪಟು ಗುರುತಾಗುತ್ತಾನೆ. ಆದರೆ ಮ್ಯಾರಥಾನ್ ಎಂಬುದನ್ನು ಅರ್ಥಮಾಡಿ ಕೊಳ್ಳುವುದು ಹೇಗೆ? ಗುಂಪಿನಲ್ಲಿ ಸಾವಿರಗಟ್ಟಲೆ ಮಂದಿ ಕೈಕಾಲಿಗೆ ಸಿಕ್ಕುವಷ್ಟು ಕಿಕ್ಕಿರಿದು ಓಡುವುದು. ಒಬ್ಬರ ಹಿಂದೆ ಒಬ್ಬರಂತೆ, ಎಳೆಯರು, ಮುದುಕರು ಎಲ್ಲರೂ. ಓಟಕ್ಕೆ ತಯಾರಾಗಿ ನಿಲ್ಲುವಾಗಲೇ ಅದೆಷ್ಟೋ ಹಿಂದೆ ಸರತಿಯಲ್ಲಿ ನಿಲ್ಲಬೇಕು.

ಎಲ್ಲರೂ ಒಟ್ಟಿಗೇ ಆರಂಭಿಸುವುದಿಲ್ಲ. ಪಾಳಿಯಲ್ಲಿ ಗುಂಪಿನಲ್ಲಿ ಓಡಲು ಬಿಡುತ್ತಾರೆ. ಇಲ್ಲಿ ಮೊದಲು ತಲುಪಿ ದವರಿಗೆ ಬಹುಮಾನವೇನೋ ಇದೆ, ಆದರೆ ಭಾಗವಹಿಸುವವರಿಗೆ ಯಾರಿಗೂ ಮೊದಲು ತಲುಪಬೇಕೆಂಬ ಧಾವಂತ ವಿಲ್ಲ. ನೈಜೀರಿಯಾ, ಕೀನ್ಯಾ ಮೊದಲಾದ ಆಫ್ರಿಕನ್ ಓಟಗಾರರಿಗೇ ಮೊದಲ ಸ್ಥಾನಗಳು ಎಂದು ಅದ್ಯಾವತ್ತೋ ನಿಗದಿಯಾಗಿದೆ. ಉಳಿದವರಿಗೆ ಓಡುವುದೇ ಕೆಲಸ, ಉದ್ದೇಶ.

ಯಾವುದೇ ಮ್ಯಾರಥಾನ್‌ನಲ್ಲಿ ಭಾಗವಹಿಸುವುದು ಎಂದರೆ ೪೨ ಕಿಲೋಮೀಟರ್ ಓಡಿ ಮುಗಿಸುವುದೇ ಅಲ್ಲಿನ
ಉದ್ದೇಶ. ಕೆಲವರಿಗೆ ತಾವು ಭಾಗವಹಿಸಿದ ಹಿಂದಿನ ಮ್ಯಾರಥಾನ್‌ಗಿಂತ ಕಡಿಮೆ ಸಮಯದಲ್ಲಿ ಓಡಬೇಕೆಂಬ ಬಯಕೆಯಿದ್ದರೆ ಇನ್ನುಳಿದ ಬಹುತೇಕರಿಗೆ ಅದ್ಯಾವ ಗಡಿಬಿಡಿಯೂ ಇಲ್ಲ. ಕೆಲವರಿಗೆ ತಮಗೆ ತಾವೇ ಪ್ರತಿಸ್ಪರ್ಧಿ ಗಳಾದರೆ ಇನ್ನುಳಿದವರಿಗೆ ಓಡಿ ತಲುಪಿ ಮುಗಿಸುವುದೇ ಕ್ರೀಡೆಯ ಗುರಿ.

ಒಂದು ಕ್ರಿಯೆಯನ್ನು ಸ್ಪರ್ಧೆಗಲ್ಲದೆ, ಕೇವಲ ಮುಗಿಸುವ ಉದ್ದೇಶದಿಂದಲೇ ಮಾಡುವುದಾದರೆ ಅದು ಕ್ರೀಡೆಯೆನಿ
ಸಿಕೊಳ್ಳುವುದು ಹೇಗೆ? ಅದು ಒಂದು ಕ್ರಿಯೆ, ಗುಂಪಿನಲ್ಲಿ ಮಾಡುವುದರಿಂದ ಯಜ್ಞ ಅನಿಸಿಕೊಳ್ಳುತ್ತದೆಯಲ್ಲವೇ?
ಮ್ಯಾರಥಾನ್ ಅದ್ಯಾವುದೂ ಅಲ್ಲ. ಮ್ಯಾರಥಾನ್ ಕ್ರೀಡೆಯೂ ಹೌದು, ನೆಗೆದರಷ್ಟೇ ಕೈಗೆಟಕುವ ಸಾಹಸವೂ ಹೌದು.
ಇದೊಂದು ಧ್ಯಾನ. ಒಬ್ಬ ವ್ಯಕ್ತಿ ತನಗೆ ತಾನೇ ಒಡ್ಡಿಕೊಳ್ಳಬಹುದಾದ ಪರೀಕ್ಷೆ. ಮನಸ್ಸು ಅದೆಷ್ಟು ಪ್ರಮಾಣದಲ್ಲಿ
ದೇಹವನ್ನು ದುಡಿಸಿಕೊಳ್ಳಬಹುದೆಂಬ ಕ್ಷಮತೆಯ ಪರೀಕ್ಷೆ. ಅದೊಂದು ಹಠ. ಶೋಕಿಯಲ್ಲ, ಅದೊಂದು ಧ್ಯಾನ.
ಕೆಲವರು ಗುಂಪಿನಲ್ಲಿ ೫-೧೦ ಕಿಲೋಮೀಟರ್ ರಸ್ತೆಯಲ್ಲಿ ಓಡಿ ಮ್ಯಾರಥಾನ್ ಓಡಿ ಬಂದೆ ಎಂದು ಓಡಾಡಿ ಕೊಂಡಿರುತ್ತಾರೆ.

ಅಸಲಿಗೆ ಅದ್ಯಾವುದೂ ಮ್ಯಾರಥಾನ್ ಅಲ್ಲ. ಒಂದು ಗುಂಪಿನ ಓಟ ಮ್ಯಾರಥಾನ್ ಅನ್ನಿಸಿಕೊಳ್ಳಬೇಕಾದರೆ ಅದು ಕನಿಷ್ಠ ೪೨.೧೯೫ ಕಿ.ಮೀ. ದೂರದ್ದಾಗಿರಬೇಕು. ಮೇಲ್ನೋಟಕ್ಕೆ ಅದು ದೊಡ್ಡದು, ಇದು ಚಿಕ್ಕದು ಎಂದೆನಿಸ ಬಹುದು. ಆದರೆ ಅಸಲಿ ಮ್ಯಾರಥಾನ್‌ಗೂ ಮತ್ತು ಈ ೫ ಕಿ.ಮೀ., ೧೦ ಕಿ.ಮೀ.ಗೂ ಅಜಗಜಾಂತರವಿದೆ. ಏಕೆಂದರೆ ದೇಹ ಮತ್ತು ಮನಸ್ಸಿನ ಅಸಲಿ ಪರೀಕ್ಷೆಯಾಗುವುದೇ ೨೦ ಕಿ. ಮೀ. ಓಡಿ ಕ್ರಮಿಸಿದ ನಂತರ. ಸಾಮಾನ್ಯವಾಗಿ ಒಂದು ನಂಬಿಕೆಯಿದೆ- ಮನುಷ್ಯ ದೈಹಿಕವಾಗಿ ಎಲ್ಲ ರೀತಿಯಲ್ಲಿಯೂ ಅಸಮರ್ಥ, ಮನುಷ್ಯ ವಿಕಸನದಲ್ಲಿ ಬಚಾವಾಗಿ ದ್ದೇಮಿದುಳು ಉದ್ಧಾರವಾದದ್ದರಿಂದ ಎಂದು.

ಆದರೆ ಮನುಷ್ಯನಲ್ಲಿ ಅನನ್ಯ ದೈಹಿಕ ಶಕ್ತಿಯೊಂದಿದೆ. ಅದೇನೆಂದರೆ ನಿರಂತರ ಓಟ. ನಮ್ಮ ಮ್ಯಾರಥಾನ್ ಓಟಗಾರರು ಓಡುವಷ್ಟು ಕಾಲ, ದೀರ್ಘ ಅಷ್ಟು ವೇಗದಲ್ಲಿ ಓಡುವ ತಾಕತ್ತು ಪ್ರಾಣಿ ಜಗತ್ತಿನ ಕೆಲವೇ ಕೆಲವು ಪ್ರಾಣಿಗಳಿಗೆ ಮಾತ್ರ ಇದೆ. ಅತ್ಯಂತ ವೇಗದಲ್ಲಿ ಓಡುವ ಚೀತಾ ಕೂಡ ಅಷ್ಟು ವೇಗದಲ್ಲಿ ಹೆಚ್ಚೆಂದರೆ ಎರಡೂವರೆ ಕಿಲೋಮೀಟರ್ ಓಡಬಹುದು. ಅದಾದ ಮೇಲೆ ಅವಕ್ಕೆ ತ್ರಾಣ ಉಳಿಯುವುದಿಲ್ಲ. ಸಿಂಹ, ಚಿರತೆ, ಹುಲಿ ಇವುಗಳ ಕಥೆಯೂ ಅಷ್ಟೇ. ಆದರೆ ಮ್ಯಾರಥಾನ್ ಓಡುವ ವ್ಯಕ್ತಿ ೪೨ ಕಿಲೋಮೀಟರ್ ನಿಲ್ಲದೇ ನಿರಂತರ ಓಡಬಲ್ಲ.
ನಾಯಿ, ಒಂಟೆ, ಆಸ್ಟ್ರಿಚ್ ಮತ್ತು ಜಿಂಕೆಗೆ ಬಿಟ್ಟರೆ ಉಳಿದ ಬಹುತೇಕ ಪ್ರಾಣಿಗಳಿಗೆ ಇಷ್ಟು ನಿರಂತರ ಓಟ ಸಾಧ್ಯವಿಲ್ಲ.
ಕ್ರಿ.ಪೂ. ೪೯೦ರಲ್ಲಿ ಗ್ರೀಕರು ಪರ್ಷಿಯನ್ನರನ್ನು ಸೋಲಿಸಿದ್ದರಂತೆ. ಆ ಸುದ್ದಿಯನ್ನು ಗ್ರೀಕಿನ ನಗರವಾದ ಮ್ಯಾರ
ಥಾನ್‌ನಿಂದ ಅಥೆಗೆ ಮುಟ್ಟಿಸಲು ದೂತನೊಬ್ಬ ಎಲ್ಲಿಯೂ ನಿಲ್ಲದೆ ೪೨ ಕಿ.ಮೀ. ಓಡಿಯೇ ಹೋಗಿದ್ದನಂತೆ. ಸುದ್ದಿ ಮುಟ್ಟಿಸಿದ ಆತ ಅಲ್ಲಿಯೇ ನೆಲಕ್ಕೆ ಕುಸಿದು ಬಿದ್ದು ಸತ್ತುಹೋದನಂತೆ. ಅದಾದ ನಂತರ ಮ್ಯಾರಥಾನ್ ಅಷ್ಟು ದೂರ ಓಡುವುದು ಇತ್ಯಾದಿಯಾಗಿ ಆರಂಭವಾಯಿತು ಎಂಬುದೊಂದು ಕಥೆ. ಒಟ್ಟಾರೆ ಮನುಷ್ಯನ ದೇಹರಚನೆ ಗ್ರಹಿಸಿದಲ್ಲಿ ನಾವು ದೂರ ಓಡಿ ಕ್ರಮಿಸುವುದನ್ನು ಆನುವಂಶಿಕವಾಗಿಯೇ ಪಡೆದುಕೊಂಡಿದ್ದೇವೆ ಎಂದೆನಿಸುತ್ತದೆ. ನಮ್ಮ ಕಿವಿಯ ರಂಧ್ರ ದೊಡ್ಡದು.

ಇದು ಬಹು ದೀರ್ಘಕಾಲ ದೇಹದ ಸಮತೋಲನಕ್ಕೆ ಸಹಾಯಕ. ತಲೆ ನೇರವಿಟ್ಟುಕೊಳ್ಳಲು ಸಾಧ್ಯ. ಅಷ್ಟೇ ಅಲ್ಲ,
ಮೈಯಲ್ಲಿ ಕೂದಲಿಲ್ಲ. ಹಾಗಾಗಿ ದೇಹದ ಉಷ್ಣತೆ ನಿರಂತರ ಆರಾಮಾಗಿ ಹೊರಹಾಕಬಹುದು. ಚಿಕ್ಕ ಕೈ, ಚಿಕ್ಕ ದಾದ ಕಣಕಾಲು ಹೀಗೆ ಪ್ರತಿಯೊಂದು ಅಂಗವೂ ದೂರದ ಓಟಕ್ಕೆ ಹೇಳಿಮಾಡಿಸಿದ್ದು. ಓಡುವುದು ಎಂಬ ಕ್ರಿಯೆ ಸುಲಭದ್ದಲ್ಲ ಎಂದು ಬಾಯ್ಬಿಟ್ಟು ಹೇಳಬೇಕಿಲ್ಲ. ನಮಗೆಲ್ಲರಿಗೂ ಗೊತ್ತೇ ಇದೆ. ಓಡುವುದೆಂದರೆ ತ್ರಾಸು, ಸುಸ್ತು. ನಾವು ಓಡುವಾಗ ನಮ್ಮ ಒಂದು ಕಾಲಿನ ಮೇಲೆ, ಪಾದದ ಮೇಲೆ ಎಷ್ಟು ತೂಕದ ಒತ್ತಡ ಬೀಳಬಹುದು ಗೊತ್ತೇ? ನಾವು ಎಲ್ಲ ಭಾರ ಹಾಕಿ ದೇಹದ ತೂಕದೊಂದಿಗೆ ಕಾಲನ್ನು ಒತ್ತುವುದರಿಂದ ನಮ್ಮ ದೇಹದ ಆರರಿಂದ ಎಂಟು ಪಟ್ಟು ತೂಕ ಒಂದೊಂದು ಕಾಲಿನ ಮೇಲೆ ಬೀಳುತ್ತದೆ. ಪಾದ ನಮ್ಮ ತೂಕಕ್ಕೆ ತಕ್ಕಂತೆ ಹೆಜ್ಜೆಗೊಮ್ಮೆ ಹಿಗ್ಗಿ ಕುಗ್ಗುತ್ತದೆ. ಅಖಿಲಿಸ್ ಟೆಂಡನ್- ಕಾಲಿನ ಮೀನಖಂಡದಿಂದ ಹಿಂಗಾಲಿನವರೆಗೆ ಚಾಚಿರುವ ಸ್ನಾಯುರಜ್ಜು. ಅದು ನಾವು ಓಡುವಾಗ ಸ್ಪ್ರಿಂಗ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಓಟವೆಂದರೆ ಸ್ನಾಯುಗಳು ಹಿಗ್ಗುವುದು, ಕುಗ್ಗು ವುದು, ಮೂಳೆಗಳ ಮೇಲಿನ ನಿರಂತರ ಒತ್ತಡ, ಹೃದಯಕ್ಕೆ, ಶ್ವಾಸಕೋಶಕ್ಕೆ ಹೀಗೆ ದೇಹದ ಎಲ್ಲ ಭಾಗಕ್ಕೂ ಅಷ್ಟೊಂದು ಒತ್ತಡದ ಕೆಲಸ. ಅತ್ಯಂತ ಸಂಕೀರ್ಣ ಸೃಷ್ಟಿಯಾದ ಮನುಷ್ಯದೇಹ ಹೀಗಿರುವ ಕ್ರಿಯೆಯನ್ನು
ಸುಮಾರು ಮೂರು-ಮೂರುವರೆ ಗಂಟೆಗಳ ಕಾಲ ನಿರಂತರ ಮಾಡುವುದೆಂದರೆ ತಮಾಷೆಯೇ? ಇಷ್ಟು ಹೊತ್ತು ಹೇಳಿದ ಮ್ಯಾರಥಾನ್ ಕೇವಲ ರಸ್ತೆಯ ಮೇಲೆ, ನಗರಗಳ ಮಧ್ಯೆ ಓಡುವವಾದವು.

ಅದು ಬಿಟ್ಟು ಇನ್ನೊಂದಿಷ್ಟು ವೈವಿಧ್ಯಗಳಿವೆ. ಟ್ರೈಲ್ ಮ್ಯಾರಥಾನ್ ಎಂದರೆ ಗುಡ್ಡ, ಬೆಟ್ಟ, ಕಲ್ಲು ಬಂಡೆ ಹೀಗೆ ರಸ್ತೆಯೇ ಇಲ್ಲದಲ್ಲಿ ಓಡುವುದು. ೪೨ ಕಿಲೋಮೀಟರಿಗಿಂತ ಜಾಸ್ತಿ ದೂರ ಓಡುವ ಮ್ಯಾರಥಾನ್‌ಗಳಿವೆ. ಅವು ಅಲ್ಟ್ರಾ ಮ್ಯಾರಥಾನ್. ಇನ್ನು ಮರಳುಗಾಡಿನಲ್ಲಿ ಓಡುವುದು ಡೆಸರ್ಟ್ ಮ್ಯಾರಥಾನ್. ಡೆಸರ್ಟ್ ಮ್ಯಾರಥಾನ್‌ಗಳಲ್ಲಿಯೇ ಹೆಗ್ಗಳಿಕೆಯ ಮ್ಯಾರಥಾನ್ ಎಂದರೆ Marathon des Sables. ಇದು ಪ್ರತಿ ವರ್ಷ ಸಹರಾ ಮರುಭೂಮಿಯಲ್ಲಿ ನಡೆಯುವ ಅಲ್ಟ್ರಾ ಮ್ಯಾರಥಾನ್. ಆರು ದಿನದೊಳಗೆ ೨೫೦ ಕಿಲೋಮೀಟರ್ ಮರುಭೂಮಿಯನ್ನು ಕ್ರಮಿಸಬೇಕು. ಇದರಲ್ಲಿ ಓಡುವವರು ತಮಗೆ ಬೇಕಾಗುವ ನೀರು, ಆಹಾರ, ಮಲಗುವ ವ್ಯವಸ್ಥೆ ಇವೆಲ್ಲವನ್ನೂ ತಾವೇ ಜತೆಯಲ್ಲಿ ಹೊತ್ತೊಯ್ಯಬೇಕು.

ಏಕೆಂದರೆ ಇವರು ಓಡುವ ಮರುಭೂಮಿಯಲ್ಲಿ ಯಾವ ವ್ಯವಸ್ಥೆಯೂ ಇರುವುದಿಲ್ಲ. ಆ ಕಾರಣಕ್ಕಾಗಿ ಇದಕ್ಕೆ ಜಗತ್ತಿನ ಅತ್ಯಂತ ಕಷ್ಟದ ಮ್ಯಾರಥಾನ್ ಎಂಬ ಖ್ಯಾತಿ. ಅಡಿ ಬಿಟ್ಟು ಮಂಗೋಲಿಯಾದ ಗೋಬಿ ಮರುಭೂಮಿ ಯಲ್ಲಿ ನಡೆಯುವ ಇಷ್ಟೇ ದೂರದ ಮ್ಯಾರಥಾನ್ ಕೂಡ ಅಷ್ಟೇ ಕಷ್ಟದ್ದು. ಅಮೆರಿಕದ ‘ಡೆತ್ ವ್ಯಾಲಿ’ ಮರುಭೂಮಿ ಯಲ್ಲಿಯೂ ೫೦ ಡಿಗ್ರಿ ಉಷ್ಣತೆಯಲ್ಲಿ ೨೧೫ ಕಿಲೋಮೀಟರಿನ ಅಲ್ಟ್ರಾ ಮ್ಯಾರಥಾನ್ ನಡೆಯುತ್ತದೆ.

ಮನುಷ್ಯನ ಸಾಮರ್ಥ್ಯದ ಪರಾಕಾಷ್ಠೆಯ ಪರೀಕ್ಷೆಯನ್ನು ಆ ಮ್ಯಾರಥಾನ್‌ಗಳು ಮಾಡಿವೆ. ಇಯಾನಿಸ್ ಕೊರೊಸ್
(Yiannis Kouros) ಎಂಬ ಗ್ರೀಕ್ ಮ್ಯಾರಥಾನ್ ಓಟಗಾರ ೩೬೦ ಕಿಲೋಮೀಟರ್ ದೂರವನ್ನು ಒಮ್ಮೆಯೂ ಕೂರದೇ ಓಡಿದ್ದು ಇಂದಿಗೂ ದಾಖಲೆ. ಆತ ಇಷ್ಟು ಕ್ರಮಿಸಲು ೨೪ ಗಂಟೆಗಿಂತ ಜಾಸ್ತಿ ನಿರಂತರ ಓಡಿದ್ದ. ಅದಲ್ಲದೆ ಆತ ಆಸ್ಟ್ರೇಲಿಯಾದ ಸಾವಿರ ಮೈಲಿಯ ಅಲ್ಟ್ರಾ ಮ್ಯಾರಥಾನ್ ಅನ್ನು ಕೂಡ ಐದು ದಿನದಲ್ಲಿ ಓಡಿ ಪೂರೈಸಿದ್ದಾನೆ. ಅದು ಬಿಟ್ಟು ೧೪ ಗಂಟೆಯಲ್ಲಿ ನೂರು ಮೈಲಿ ಓಡಿದವರು ಇತ್ಯಾದಿ ತರಹೇವಾರಿ ದಾಖಲೆ ಮಾಡಿದವರಿದ್ದಾರೆ. ಟಾಮ್ ಎವಾ ಎನ್ನುವವನಂತೂ ಉತ್ತರ ಧ್ರುವದ ಘನೀಕೃತ, ಕಷ್ಟಕರವಾದ ಮ್ಯಾರಥಾನ್ ಅನ್ನು ಮೂರುವರೆ ತಾಸಿನಲ್ಲಿ ಮುಗಿಸಿದ್ದಾನೆ.

ಇದು ರಸ್ತೆಯ ಮೇಲೆ ಮ್ಯಾರಥಾನ್ ಓಡುವವರ ವೇಗದಷ್ಟೇ ಇದೆ. ಇವೆಲ್ಲ ಮನುಷ್ಯ ಸಾಧ್ಯತೆಯ ಪರಾಕಾಷ್ಠೆಗಳು.
ಮ್ಯಾರಥಾನ್ ಸ್ಪರ್ಧೆಯಷ್ಟೇ ಅಲ್ಲ, ಅದೊಂದು ಮನಸ್ಸು ದೇಹದ ಅಂತರ್ಯುದ್ಧ. ದೇಹ ಒಂದಿಷ್ಟು ಹೊತ್ತು ಓಡಿದ ನಂತರ ಸ್ನಾಯುಗಳು ಸೋತು ಕೇಂದ್ರ ನರಮಂಡಲಕ್ಕೆ ಸುಸ್ತಿನ ಸಂದೇಶ ಕಳುಹಿಸುತ್ತವೆ. ಅದೇ ಸಮಯ ದಲ್ಲಿ ಸ್ನಾಯುಗಳು ತಮ್ಮಲ್ಲಿನ ನೀರನ್ನು ಕಳೆದುಕೊಳ್ಳುತ್ತವೆ. ಅಕಸ್ಮಾತ್ ನೀರಿನ ಪ್ರಮಾಣ ಒಂದು ಹಂತಕ್ಕಿಂತ ಕೆಳಕ್ಕಿಳಿದರೆ ನಮ್ಮ ಸ್ನಾಯುಗಳು ಹಾಗೆಯೇ ಗಟ್ಟಿಯಾಗಿ ನಿಂತುಬಿಡುತ್ತವೆ. ಮಸಲ್ ಕ್ಯಾಚ್ ಎಂದರೆ ಅದು. ಈ ಮ್ಯಾರಥಾನ್ ಓಡುವಾಗ ಸ್ನಾಯುಗಳು ಸೋಲುವುದು ಅದೆಲ್ಲ ಆಯಿತಲ್ಲ.

ಒಂದು ವೇಳೆ ಸರಿಯಾದ ಬಟ್ಟೆ ಧರಿಸಿಲ್ಲ ಎಂದಿಟ್ಟುಕೊಳ್ಳಿ. ಅಂಗಿಯ ಘರ್ಷಣೆಯಿಂದಾಗಿ ಗಂಡಸರ ಮೊಲೆ ತೊಟ್ಟಿನಿಂದ ರಕ್ತ ಸುರಿಯಲು ಶುರುವಾಗಿಬಿಡುತ್ತದೆ. ಮ್ಯಾರಥಾನ್ ಓಡುವವರ ಪ್ರಕಾರ ಮೊದಲ ಇಪ್ಪತ್ತು ಕಿಲೋಮೀಟರ್ ಸುಲಭ. ಅದಾದ ಮೇಲೆ ನಿಧಾನಕ್ಕೆ ದೇಹ ಸೋಲಲು ಶುರುವಾಗುತ್ತದೆ. ಸುಮಾರು ೨೦-೨೫ ಕಿಲೋಮೀಟರ್ ಕ್ರಮಿಸುವಾಗ ಬಹುತೇಕ ಇಡೀ ದೇಹ ಇದನ್ನು ನಿಲ್ಲಿಸುವಂತೆ ಪ್ರತಿರೋಧಕ್ಕೆ ಶುರುಮಾಡಿ ಬಿಡುತ್ತದೆ. ೨೦ರಿಂದ ೩೦ ಕಿಲೋ ಮೀಟರ್ ಅತ್ಯಂತ ಕಷ್ಟಕರವಾದದ್ದು. ಇಲ್ಲಿಯೇ ಮನಸ್ಸು ದೇಹದ ಸಾಮರ್ಥ್ಯವನ್ನು ಮೀರಿ ನಡೆಯುವಂತೆ ಮೇಲುಗೈ ಸಾಧಿಸುವುದು. ೩೦ ಕಿಲೋಮೀಟರ್ ದಾಟಿದ ಮೇಲೆ ದೇಹ ಸಂಪೂರ್ಣ ಮನಸ್ಸಿನ ವಶವಾಗಿರುತ್ತದೆ. ಆ ಸಮಯದಲ್ಲಿ ಮನಸ್ಸು ದೇಹದ ಬಹುತೇಕ ಅರಿವನ್ನು ಶೂನ್ಯ ವಾಗಿಸಿಬಿಡುತ್ತದೆ.

ಮುಂದಿನ ಹತ್ತನ್ನೆರಡು ಕಿಲೋಮೀಟರ್ ಎಂದರೆ ಧ್ಯಾನ. ಮ್ಯಾರಥಾನ್ ಓಟಗಾರ ಪ್ರತಿ ಬಾರಿ ಓಡಿದಾಗಲೂ
ಛಲದ ಮೂಲಕ ದೈಹಿಕ ಮಿತಿಯನ್ನು ಪರೀಕ್ಷಿಸುತ್ತಾನೆ ಎಂದೇ ಅರ್ಥ. ಮ್ಯಾರಥಾನ್ ಅನ್ನು ಸಾಮಾನ್ಯವಾಗಿ ಯಾರೂ ಒಂದೇ ಬಾರಿ ಓಡಿ ಬಿಡುವುದಿಲ್ಲ, ಓಡುತ್ತಲೇ ಇರುತ್ತಾರೆ. ಎಲ್ಲಿ ಮ್ಯಾರಥಾನ್ ಇದೆಯೋ ಅಲ್ಲ ಹೋಗಿ
ಓಡುತ್ತಾರೆ. ಸ್ವದೇಶವಷ್ಟೇ ಅಲ್ಲ, ವಿದೇಶಗಳಿಗೂ ಮ್ಯಾರಥಾನ್ ಓಡಲೆಂದೇ ಹೋಗುವವರಿದ್ದಾರೆ. ಸ್ನೇಹಿತರಾದ ಕೃಷ್ಣರಾವ್ ಅವರು ಮ್ಯಾರಥಾನ್ ಓಡಲೆಂದೇ ಇತ್ತೀಚೆಗೆ ಬೆಂಗಳೂರಿನಿಂದ ಶಿಕಾಗೋಗೆ ಬಂದಿದ್ದರು. ಮ್ಯಾರಥಾನ್ ನಲ್ಲಿ ಫಿನಿಷ್‌ಲೈನ್ ಮುಟ್ಟುವುದೆಂದರೆ ಅದು ಆ ದಿನದ ಶ್ರಮವಷ್ಟೇ ಅಲ್ಲ, ಅದರ ಹಿಂದೆ ತಿಂಗಳಾನುಗಟ್ಟಲೆ ನಡೆಸಿದ ತಾಲೀಮು, ದೇಹಶಿಸ್ತು, ಕಾಳಜಿ, ದೇಹವನ್ನು ಸಲಹಿ ಅಣಿಗೊಳಿಸಿದ ಸಮರ್ಪಣಾ ಭಾವ ಎಲ್ಲವೂ ಇದೆ. ನಾನೂ ಮ್ಯಾರಥಾನ್ ಓಡುತ್ತೇನೆ ಎಂದು ಅಣಿಯಾಗಲು ಒಂದಿಷ್ಟು ಉತ್ಸಾಹ ಸಾಕು. ಆದರೆ ಶಿಸ್ತು, ಜೀವನ ಪ್ರೀತಿ, ಅಸಲಿ ಛಲವುಳ್ಳವರು ಮಾತ್ರ ಮ್ಯಾರಥಾನ್ ಓಡಿ ಮುಗಿಸಲು ಸಾಧ್ಯ. ನಮ್ಮನ್ನು, ನಮ್ಮ ಮಿತಿಯನ್ನು ಪರೀಕ್ಷಿಸಿ ಕೊಳ್ಳುವ ಹುಚ್ಚಿರಬೇಕು.

ನ್ಯೂಯಾರ್ಕ್, ಬಾಸ್ಟನ್, ಲಂಡನ್, ಬರ್ಲಿನ್, ಟೋಕಿಯೋ ಇವೆಲ್ಲ ಪ್ರತಿಷ್ಠಿತ ಮ್ಯಾರಥಾನ್‌ಗಳು. ಇವುಗಳಲ್ಲಿ
ಓಡಲಿಕ್ಕೆ ಅವಕಾಶ ಸಿಗಬೇಕೆಂದರೆ ಬೇರಿನ್ನೊಂದಿಷ್ಟು ಮ್ಯಾರಥಾನ್ ಓಡಿ ಬಂದಿರಬೇಕು. ಇಲ್ಲದಿದ್ದರೆ ‘ನೋ
ಎಂಟ್ರಿ’. ನ್ಯೂಯಾರ್ಕ್ ಮ್ಯಾರಥಾನ್‌ನಲ್ಲಿ ಪ್ರತಿ ವರ್ಷ ೧೫೦ ದೇಶದ ಐವತ್ತು ಸಾವಿರ ಮಂದಿ ಭಾಗವಹಿಸುತ್ತಾರೆ.
ಬಹುತೇಕ ಮ್ಯಾರಥಾನ್‌ಗಳಲ್ಲಿಯೂ ಇತ್ತೀಚೆಗೆ ಇಷ್ಟೊಂದು ಮಂದಿ ಓಡುವುದು ಸಾಮಾನ್ಯ. ಮುಂಬೈ ಮ್ಯಾರ ಥಾನ್ ಕೂಡ ಇತ್ತೀಚೆಗೆ ಬಹಳ ಚಾಲ್ತಿಯಲ್ಲಿದೆ. ಅಲ್ಲಿ ಹಿಂದಿನ ವರ್ಷ ನೂರು ದೇಶದ ೪೦ ಸಾವಿರ ಮಂದಿ ಭಾಗ ವಹಿಸಿದ್ದರು. ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ೧೧ ಲಕ್ಷ ಮಂದಿ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಪೂರ್ಣ ಗೊಳಿಸುತ್ತಾರೆ. ಅದರರ್ಥ ಅಷ್ಟು ಮಂದಿ ತಮ್ಮನ್ನು ತಾವು ಈ ರೀತಿ ಮನೋದೈಹಿಕ ಪರೀಕ್ಷೆ ಗೊಡ್ಡಿಕೊಳ್ಳುತ್ತಾರೆ ಎಂದರ್ಥ.

ಇದೆಲ್ಲ ಹೇಗಿದೆ ನೋಡಿ. ಅದ್ಯಾರೋ Pheidippides ಎಂಬ ಗ್ರೀಕ್ ರಾಜಭಟ ಸುಮಾರು ಎರಡೂವರೆ ಸಾವಿರ ವರ್ಷದ ಹಿಂದೆ ಅಲ್ಲಿಯೋ ೪೨ ಕಿಲೋಮೀಟರ್ ಓಡಿದ, ಓಡಿದ ನಂತರ ಸತ್ತು ಬೇರೆ ಹೋದ. ಆ ಘಟನೆ ಕ್ರಮೇಣ ಮ್ಯಾರಥಾನ್ ಎಂಬ ಸ್ಪರ್ಧೆಯ ರೂಪವನ್ನು ಬದಲಿಸುತ್ತ, ಪೂರೈಸುವುದೇ ಗುರಿ ಎಂದಾದದ್ದು. ಈಗ ಇದೊಂದು ಕ್ರಿಯೆ, ತಯಾರಿ, ಶಿಸ್ತು, ಪರೀಕ್ಷೆ. ಅದನ್ನು ಎದುರಿಸಲು ಲಕ್ಷಾಂತರ ಮಂದಿ, ಜಗತ್ತಿನ ಯಾವ ಯಾವುದೋ ಮೂಲೆ ಯಲ್ಲಿ. ಈಗ ಮ್ಯಾರಥಾನ್ ಎಂದರೆ ಅದೊಂದು ಸಾಮಾಜಿಕ ಅವಶ್ಯಕತೆ. ಜತೆಯಲ್ಲಿ ಪ್ರವಾಸೋದ್ಯಮ, ಆದಾಯ ಇತ್ಯಾದಿ. ಮನುಷ್ಯನ ಇಂಥ ಅವಶ್ಯಕತೆಗಳು ರೂಪುಗೊಂಡು ಬೆಳೆಯುವುದು, ಅನ್ಯೋತ್ತರ ರೂಪ ಪಡೆಯುವುದು ಕೌತುಕದ ವಿಷಯವೇ ಅಲ್ಲವೇ?