Friday, 29th November 2024

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಪಲ್ಲಿ ಡಾ.ಎಸ್.ರಾಧಾಕೃಷ್ಣನ್ ಜಯಂತಿ ಆಚರಣೆ

ಗೌರಿಬಿದನೂರು: ಪಟ್ಟಣದ ಕೆಇಬಿ ಶಾಲೆಯಲ್ಲಿ ಭಾರತರತ್ನ ಎರಡನೆಯ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಜನ್ಮದಿನವನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದ ವಿಜಯ್ ಕುಮಾರ್ ೧೯೬೨ ರಲ್ಲಿ ರಾಧಾಕೃಷ್ಣನ್ ರವರು ರಾಷ್ಟ್ರ ಪತಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರ ವಿದ್ಯಾರ್ಥಿಗಳು ಸೆ.೫ ಅನ್ನು ವಿಶೇಷ ದಿನವನ್ನಾಗಿ ಆಚರಿಸಲೆಂದು ಅವರ ಅನುಮತಿಯನ್ನು ಕೇಳಿದರು. ಸಮಾಜಕ್ಕೆ ಶಿಕ್ಷಕರ ಮೌಲಿಕ ಕೊಡುಗೆಯನ್ನು ಗುರುತಿಸಲು ಆ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿ ಎಂದು ತಮ್ಮ ಶಿಷ್ಯ ಬಳಗಕ್ಕೆ ಡಾ.ರಾಧಾಕೃಷ್ಣನ್ ಸೂಚಿಸಿದರು. ಅಂದಿನಿಂದ ಪ್ರತಿವರ್ಷ ಸೆ.5ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಇವರು ವಿಶ್ವದ ಪ್ರತಿಭಾಶಾಲಿ ವಿದ್ವಾಂಸರಾಗಿದ್ದು,ಭಾರತೀಯ ಸ್ವಾತಂತ್ರ‍್ಯ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಶಿಕ್ಷಣದ ಬಗೆಗೆ ಅತ್ಯಂತ ಗೌರವ, ಪ್ರೀತಿ ಮತ್ತು ನಿಷ್ಠೆ ಹೊಂದಿದ್ದರು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ನಿರ್ವಹಿಸಿದ ಅಧ್ಯಾಪಕ ಅಪರಂಜಿಯಾಗಿದ್ದರು. ಇದಲ್ಲದೆ, ತತ್ವಶಾಸ್ತ್ರಕ್ಕೆ ಅನುಪಮವಾದ ಕೊಡುಗೆ ನೀಡಿದ್ದಾರೆಂದು ಅಭಿಪ್ರಾಯ ಪಟ್ಟರು.

ಮುಖ್ಯೋಪಾಧ್ಯಾಯ ಶ್ರೀನಿವಾಸ್ ಮೂರ್ತಿ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಆಧ್ಯಾಪಕ ಬಳಗದ ಅನರ್ಘ್ಯ ರತ್ನರಾಗಿದ್ದು, ಇವರ ತತ್ವ ಆದರ್ಶಗಳನ್ನು ಶಿಕ್ಷಕರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿ ಗಳು ಗುರುತಿಸುವ ಆದರ್ಶ ವ್ಯಕ್ತಿಗಳಾಗಬೇಕು. ಪುಸ್ತಕಗಳನ್ನು ಓದಿ ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ನೀಡ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ರಾಧಾ, ಚಂದ್ರಕಲಾ, ರುಕ್ಮಿಣಿ ಉಪಸ್ಥಿತರಿದ್ದರು. ಇದೇ ವೇಳೆ, ಉಪಸ್ಥಿತರಿದ್ದ ಪೋಷಕರು ಶಿಕ್ಷಕರಿಗೆ ಶುಭಾಶಯ ಕೋರಿದರು.