Friday, 20th September 2024

Child Sex Trafficking: ಸಿನಿಮೀಯ ರೀತಿಯಲ್ಲಿ ಪಾದ್ರಿ ಅರೆಸ್ಟ್‌- 2000 ಪೊಲೀಸರು, ಹೆಲಿಕಾಪ್ಟರ್‌.. ಎರಡು ವಾರ ನಡೆದ ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

‘Child Sex Trafficking

ಫಿಲಿಪೈನ್ಸ್‌: ನಕಲಿ ಬಾಬಾಗಳ ಹಾವಳಿ ಭಾರತಕ್ಕಿಂತ ಹೆಚ್ಚು ವಿದೇಶದಲ್ಲಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಫಿಲಿಪೈನ್ಸ್‌ನಲ್ಲಿ ತನ್ನನ್ನು ತಾನು “ವಿಶ್ವದ ಮಾಲೀಕ” ಮತ್ತು “ದೇವರ ನೇಮಕಗೊಂಡ ಮಗ” ಎಂದು ಹೇಳಿಕೊಳ್ಳುತ್ತಿದ್ದ ಸ್ವಯಂಘೋಷಿತ ದೇವಮಾನವ, ಚರ್ಚ್‌ನ ಪ್ರಭಾವಿ ಪಾದ್ರಿಯೊಬ್ಬನ ಮಕ್ಕಳ ಲೈಂಗಿಕ ಕಳ್ಳಸಾಗಣೆ ದಂಧೆ(Child Sex Trafficking)ಯೊಂದು ಬೆಳಕಿಗೆ ಬಂದಿದೆ. ಈ ಪ್ರಭಾವಿ ಪಾಸ್ಟ್‌ ವಿರುದ್ಧ ಮಕ್ಕಳ ಕಳ್ಳಸಾಗಣೆ ಅರೋಪ ಕೇಳಿಬರುತ್ತಿದ್ದಂತೆ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈ ಕಾರ್ಯಾಚರಣೆಯೇ ಬಲು ರೋಚಕವಾಗಿದೆ.

ಬಂಧಿತ ಆರೋಪಿಯನ್ನು ಪಾಸ್ಟರ್‌ ಅಪೊಲೊ ಕ್ವಿಬೊಲೊಯ್ ಎಂದು ಗುರುತಿಸಲಾಗಿದ್ದು, ಅವರನ್ನು ಮಕ್ಕಳ ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ಭಾನುವಾರ ಫಿಲಿಪೈನ್ಸ್‌ನಲ್ಲಿ ಬಂಧಿಸಲಾಗಿದೆ. ತನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಬಂಧನ ಭೀತಿ ಎದುರಿಸುತ್ತಿದ್ದ ಕ್ವಿಬೊಲೊಯ್ ಯಾರಿಗೂ ಸಿಗದಂತೆ ನಿಗೂಢವಾಗಿ ನಾಪತ್ತೆಯಾಗಿದ್ದ. ಹೀಗಾಗಿ ಈತನ ಹುಡುಕಾಟಕ್ಕಿಳಿದ ಪೊಲೀಸರು, ಆತನ ಒಡೆತನದ ಕಿಂಗ್‌ಡಮ್ ಆಫ್ ಜೀಸಸ್ ಕ್ರೈಸ್ಟ್ (ಕೆಒಜೆಸಿ) ಚರ್ಚ್‌ನಲ್ಲಿ ಹುಡುಕಾಟ ಶುರು ಮಾಡಿದ್ದರು. ಸುಮಾರು 75 ಎಕರೆ ವಿಸ್ತೀರ್ಣದಲ್ಲಿರುವ ಈ ಚರ್ಚ್‌ನಲ್ಲಿರುವ ಬಂಕರ್‌ವೊಂದರಲ್ಲಿ ಆತ ಅಡಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಸುಮಾರು 2000ಪೊಲೀಸರು ಬರೋಬ್ಬರಿ ಎರಡು ವಾರಗಳ ಕಾಲ ಆತನ ಪತ್ತೆ ಕಾರ್ಯಾಚರಣೆ ನಡೆಸಿದ್ದರು.

ಪೊಲೀಸರ ಕಾರ್ಯಾಚರಣೆಗೆ ಕ್ವಿಬೋಲೋಯ್‌ನ ಅನುಯಾಯಿಗಳು ಅಡ್ಡಿ ಮಾಡಿದ್ದರು. ಆ ಪ್ರದೇಶದ ಒಳಗೆ ಪ್ರವೇಶಿಸಲು ನಿರ್ಬಂಧಿಸಿದರು. ಕ್ಯಾಥೆಡ್ರಲ್, ಕಾಲೇಜು ಮತ್ತು 75,000 ಆಸನಗಳ ಕ್ರೀಡಾಂಗಣ ಸೇರಿದಂತೆ ಪ್ರಮುಖ ಸ್ಥಳಗಳನ್ನು ಹೊಂದಿದ್ದ ಆ ಚರ್ಚ್‌ನ ಮೇಲೆ ಹಾರಾಟ ನಡೆಸಲು ಪೊಲೀಸರು ಹೆಲಿಕಾಪ್ಟರ್‌ಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಅದಾಗ್ಯೂ ಕ್ವಿಬೋಲೋಯ್‌ ಪತ್ತೆ ಪೊಲೀಸರಿಗೆ ಬಹುದೊಡ್ಡ ಸವಾಲಾಗಿತ್ತು. ಈ ಚರ್ಚ್‌ನ ಆವರಣದಲ್ಲಿ ಪ್ರಾರ್ಥನಾ ಮಂದಿರ ಸೇರಿದಂತೆ ಬರೋಬ್ಬರಿ 40 ಕಟ್ಟಡಗಳಿವೆ.

ರಡಾರ್‌ ತಂತ್ರಜ್ಞಾನ ಬಳಕೆ

ಕ್ವಿಬೊಲೊಯ್ ಬಂಧನಕ್ಕೆ, ಥರ್ಮಲ್ ಇಮೇಜಿಂಗ್ ಮತ್ತು ರಾಡಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಮಾನವ ದೇಹದ ಶಾಖ ಮತ್ತು ಹೃದಯ ಬಡಿತವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದಾದ ಬಳಿಕ ಆತ ಇರುವ ಜಾಗವನ್ನು ಪತ್ತೆ ಮಾಡಿ ಅರೆಸ್ಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸನ್ ನ್ಯೂಸ್ ಪ್ರಕಾರ, ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ನಿಕೋಲಸ್ ಟೊರ್ರೆ ಬಂಧನವನ್ನು ಖಚಿತಪಡಿಸಿದ್ದಾರೆ. ಇದು ಎಲ್ಲರ ಸಂಘಟಿತ ಪ್ರಯತ್ನವಾಗಿದೆ ಎಂದು ಹೇಳಿದರು.

ಕ್ವಿಬೊಲೊಯ್ ವಿರುದ್ಧ ಆರೋಪಗಳೇನು?

ಕ್ವಿಬೋಲೋಯ್ ಅವರು ಮಕ್ಕಳ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಆರೋಪಗಳನ್ನು ಎದುರಿಸುತ್ತಿದ್ದಾರೆ
ಫಿಲಿಪೈನ್ಸ್‌ನ ಮಾಜಿ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟೆ ಅವರ ನಿಕಟ ಸಹವರ್ತಿಯೂ ಆಗಿರುವ ಕ್ವಿಬೊಲೋಯ್, ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಮಾನವ ಕಳ್ಳಸಾಗಣೆ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಲೈಂಗಿಕ ಕಳ್ಳಸಾಗಣೆಗಾಗಿ FBI ಯ “ಮೋಸ್ಟ್ ವಾಂಟೆಡ್” ಪಟ್ಟಿಯಲ್ಲಿ ಸೇರಿಸಲಾಗಿತ್ತು.

12 ರಿಂದ 25 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರನ್ನು ಒಳಗೊಂಡ ಲೈಂಗಿಕ ಕಳ್ಳಸಾಗಣೆ, ಮಾದಕ ವಸ್ತು ಮಾರಾಟ, ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆ ಸೇರಿದಂತೆ ಅನೇಕ ಆರೋಪಗಳು ಕ್ವಿಬೊಲೊಯ್ ಮೇಲಿದೆ. ರೋಡ್ರಿಗೋ ಡ್ಯುಟರ್ಟೆ ಅಧಿಕಾರದಿಂದ ಕೆಳಗಳಿದ ಬಳಿಕ ಕ್ವಿಬೊಲೊಯ್ ಗೆ ಭಾರೀ ತೊಂದರೆ ಎದುರಾಗಿದೆ.

ಈ ಸುದ್ದಿಯನ್ನೂ ಓದಿ: Senator Controversy: ನೌಕರನನ್ನು ಲೈಂಗಿಕ ಜೀತದಾಳಾಗಿ ಬಳಸಿಕೊಂಡ ಆರೋಪ; ಕ್ಯಾಲಿಫೋರ್ನಿಯಾ ಸೆನೆಟರ್‌ ವಿರುದ್ಧ ಭುಗಿಲೆದ್ದ ವಿವಾದ