Thursday, 19th September 2024

ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಗೆ ಜಿಯೋ ಪ್ರಾಯೋಜಕತ್ವ

ದುಬೈ: ಶಾರ್ಜಾದಲ್ಲಿ ನವೆಂಬರ್‌ ನಾಲ್ಕರಿಂದ ಒಂಬತ್ತರ ವರೆಗೆ ನಡೆಯಲಿರುವ ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಯನ್ನು ಜಿಯೊ ಪ್ರಾಯೋಜಿಸಲಿದೆ.

‘ಮಹಿಳೆಯರ ಐ‍ಪಿಎಲ್ ಎಂದೇ ಹೇಳಲಾಗುವ ಟಿ20 ಚಾಲೆಂಜ್ ಕ್ರಿಕೆಟ್‌ ಮತ್ತು ಒಟ್ಟಾರೆ ಕ್ರೀಡೆಯ ಬಗ್ಗೆ ಹೆಣ್ಣುಮಕ್ಕಳು ಆಸಕ್ತಿ ತಾಳಲು ನೆರವಾಗಲಿದೆ ಎಂಬ ನಿರೀಕ್ಷೆ ಇದೆ. ಕ್ರಿಕೆಟ್‌ನಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂಬುದು ಪಾಲಕರಿಗೆ ಮನದಟ್ಟಾಗುವುದಕ್ಕೂ ಈ ಟೂರ್ನಿ ನೆರವಾಗಲಿದೆ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟರು.

ವೆಲೋಸಿಟಿ, ಸೂಪರ್‌ನೋವಾ ಮತ್ತು ಟ್ರೇಲ್‌ಬ್ಲೇಜರ್ಸ್ ತಂಡಗಳು ಚಾಲೆಂಜ್‌ನಲ್ಲಿ ಸೆಣಸಲಿದ್ದು ಒಂದೊಂದು ಬಾರಿ ಮುಖಾ ಮುಖಿಯಾಗಲಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸುವ ಎರಡು ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ಆಸ್ಟ್ರೇಲಿ ಯಾದ ಆಟಗಾರ್ತಿಯರು ಮಹಿಳಾ ಚಾಲೆಂಜ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ.

ಇಂಗ್ಲೆಂಡ್‌, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಥಾಯ್ಲೆಂಡ್‌ನ ಆಟಗಾರ್ತಿಯರು ಆಡಲು ಸಜ್ಜಾಗಿದ್ದಾರೆ. ಮಾರ್ಚ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ನಂತರ ಭಾರತದ ಮಹಿಳೆಯರು ಇದೇ ಮೊದಲ ಬಾರಿ ಕಣಕ್ಕೆ ಇಳಿಯಲಿದ್ದಾರೆ.

ರಿಲಯನ್ಸ್ ಫೌಂಡೇಷನ್‌ನ ಮುಖ್ಯಸ್ಥೆ ನೀತಾ ಅಂಬಾನಿ ‘ಹೆಣ್ಣುಮಕ್ಕಳ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿ ಉತ್ತಮ ಸೌಲಭ್ಯ, ತರಬೇತಿ ಮತ್ತು ಪುನರ್ವಸತಿ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕನಸು’ ಎಂದರು.

‘ಅಂಜುಮ್ ಚೋಪ್ರಾ, ಮಿಥಾಲಿ ರಾಜ್, ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ ಮತ್ತು ಪೂನಂ ಯಾದವ್ ಅವರಂಥ ಆಟಗಾರ್ತಿಯರು ಭಾರತ ಮಹಿಳಾ ಕ್ರಿಕೆಟ್‌ನ ಮಾದರಿ. ಎಲ್ಲ ಆಟಗಾರ್ತಿಯರ ಭವಿಷ್ಯದ ಹಾದಿ ಸುಗಮವಾಗಲಿ’ ಎಂದು ಹಾರೈಸಿ ದರು.

Leave a Reply

Your email address will not be published. Required fields are marked *