70 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ (Ayushmann Bharath) ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಯಡಿಯಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ. ಆಸ್ಪತ್ರೆ ವೆಚ್ಚ ದುಬಾರಿಯಾಗಿರುವ ಹೊತ್ತಿನಲ್ಲಿ ಯಾವುದೇ ಆದಾಯದ ಮೂಲ ವಿಲ್ಲದ ಹಿರಿಯ ನಾಗರಿಕರಿಗೆ ಈ ಯೋಜನೆ ವರವಾಗಲಿದೆ. ಇನ್ನು ಮುಂದೆ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ ಆಯುಷ್ಮಾನ್ ಯೋಜನೆಯ ಪ್ರಯೋಜನ ಗಳನ್ನು ಪಡೆಯಬಹುದು.
ಈಗಾಗಲೇ ಖಾಸಗಿ ಆರೋಗ್ಯ ವಿಮಾ ಪಾಲಿಸಿ ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವ ಹಿರಿಯ ನಾಗರಿಕರಿಗೂ ಈ ಯೋಜನೆಯಡಿ ಪ್ರಯೋಜನ ಪಡೆಯಲು ಅವಕಾಶ ನೀಡಲಾಗಿದೆ. ಈ ಯೋಜನೆ 4.5 ಕೋಟಿ ಕುಟುಂಬ ಗಳು ಮತ್ತು ೬ ಕೋಟಿ ಹಿರಿಯ ನಾಗರಿಕರಿಗೆ ವಿಮಾ ಭದ್ರತೆ ನೀಡಲಿದೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ಜನ್-ಧನ್ ಯೋಜನೆಗೆ ಏಳು ವರ್ಷ ಪೂರ್ಣ: 43.04 ಕೋಟಿ ಫಲಾನುಭವಿಗಳು
ವರ್ಷಕ್ಕೆ ೫ ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆಯಲ್ಲದೆ ೨೫ ಲಕ್ಷ ರು. ವರೆಗೆ ಹೆಚ್ಚುವರಿ ಟಾಪ್-ಅಪ್ ಸೌಲಭ್ಯ ನೀಡಿರುವುದು ಯೋಜನೆಯ ವಿಶೇಷ. 2018ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಈ ಯೋಜನೆ ಕಳೆದ 6 ವರ್ಷ ಗಳಲ್ಲಿ ಲಕ್ಷಾಂತರ ಕುಟುಂಬಗಳ ಕೈಹಿಡಿದಿದೆ. ಆದರೆ ಇದು ವರೆಗೆ ಬಿಪಿಎಲ್ ಕಾರ್ಡ್(BPL Card) ಹೊಂದಿದವ ರಿಗಷ್ಟೇ ಈ ಯೋಜನೆಯಡಿ ವರ್ಷಕ್ಕೆ 5 ಲಕ್ಷ ರು.ಗಳವರೆಗೆ ಉಚಿತ ಚಿಕಿತ್ಸೆ ಲಭ್ಯವಿತ್ತು.
ಎಪಿಎಲ್ ಕಾರ್ಡುದಾರರು(APL Card Holder) ಮತ್ತು ಕಾರ್ಡ್ ಹೊಂದಿಲ್ಲದವರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.30ರಷ್ಟು ವಿನಾಯಿತಿ ಯಿತ್ತು. 70 ವರ್ಷ ಮೇಲ್ಪಟ್ಟ ನಾಗರಿಕರಿಗೆ ನೀಡಲಾದ ಈ ಸೌಲಭ್ಯವನ್ನು 60 ವರ್ಷ ಮೇಲ್ಪಟ್ಟ, ಇತರೆ ಯಾವುದೇ ವಿಮಾರಕ್ಷಣೆ ಇಲ್ಲದ ನಾಗರಿಕರಿಗೆ ನೀಡಿದ್ದರೆ ಅನುಕೂಲವಾಗುತ್ತಿತ್ತು.
ಈ ಸೌಲಭ್ಯವನ್ನು ರೇಷನ್ ಕಾರ್ಡ್(Ration Card) ಗೆ ಲಿಂಕ್ ಮಾಡಿರುವ ಕಾರಣ ಆರ್ಥಿಕವಾಗಿ ದುರ್ಬಲರಾದ ಅನೇಕರು ವಿಮೆ ರಕ್ಷಣೆಯಿಂದ ವಂಚಿತರಾಗಿದ್ದಾರೆ. ಇದೇ ವೇಳೆ ಖಾಸಗಿ ವಿಮೆ (Private Insurance) ಮೇಲಿನ ಶೇ.18ರ ಜಿಎಸ್‌ಟಿ(GST) ಯನ್ನೂ ಕೇಂದ್ರ ರದ್ದು ಮಾಡಬೇಕಿದೆ. ಆರೋಗ್ಯದ ಹಕ್ಕು ನಮ್ಮ ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ನಾಗರಿಕನಿಗೆ ಖಾತರಿ ಪಡಿಸಿದ ಮೂಲಭೂತ ಹಕ್ಕು. ಎಲ್ಲರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕಾಗಿರುವುದು ಸರಕಾರದ ಕೆಲಸ.