Thursday, 21st November 2024

Roopa Gururaj Column: ಶಿವನ ಡಮರುಗದ ನಾದಕ್ಕೆ ಧಾರಾಕಾರ ಮಳೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಂದಾನೊಂದು ಕಾಲದಲ್ಲಿ ದೇವತೆಗಳ ರಾಜನಾದ ಇಂದ್ರನು (Indra)ಯಾವುದೋ ಕಾರಣಕ್ಕೆ ರೈತರ ಮೇಲೆ ಕೋಪ ಗೊಂಡು ಹನ್ನೆರಡು ವರ್ಷಗಳ ಕಾಲ ಮಳೆಯಾಗಬಾರದೆಂದು ನಿರ್ಧರಿಸಿ ರೈತರಿಗೆ ‘ಈಗ ನೀವು ಹನ್ನೆರಡು
ವರ್ಷಗಳವರೆಗೆ ಬೆಳೆ ತೆಗೆಯಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದನು.

ರೈತರೆಲ್ಲರೂ ಚಿಂತಾಕ್ರಾಂತರಾಗಿ ಇಂದ್ರನಿಗೆ ಮಳೆಗಾಗಿ ಪ್ರಾರ್ಥಿಸಿದರು. ಆಗ, ಇಂದ್ರನು ಹೇಳಿದನು ‘ಭಗವಾನ್ ಶಂಕರನು (Lord Shiva)ತನ್ನ ಡಮರು ಬಾರಿಸಿದರೆ, ಮಳೆ ಬರಬಹುದು’ ಎಂದು. ಆದರೆ, ಇಂದ್ರನು ರೈತರಿಗೆ ಈ ಪರಿಹಾರ ವನ್ನೇನೋ ಹೇಳಿದನು ಆದರೆ ರಹಸ್ಯವಾಗಿ ರೈತರ ಪ್ರಾರ್ಥನೆಗೆ ಒಪ್ಪದಿರಲು ಶಿವನನ್ನು ವಿನಂತಿಸಿದ್ದನು.
ರೈತರು ಭಗವಾನ್ ಶಂಕರನಲ್ಲಿಗೆ ತಲುಪಿದಾಗ, ಶಂಕರನು ರೈತರಿಗೆ – ‘ಹನ್ನೆರಡು ವರ್ಷಗಳ ನಂತರ ಮಾತ್ರ ಡಮರು ಮೊಳಗುತ್ತದೆ. ಇದು ನೀವೆಲ್ಲರೂ ಅನುಭವಿಸಲೇಬೇಕಾದ ಕರ್ಮ’ ಎಂದನು.

ಇದನ್ನೂ ಓದಿ: Roopa_Gururaj_Column: ಸಂಬಂಧಗಳಲ್ಲಿ ಲಾಭ-ನಷ್ಟ ಲೆಕ್ಕ ಹಾಕಬೇಡಿ !

ಇದರಿಂದ ನಿರಾಸೆಗೊಂಡ ರೈತರು ಹನ್ನೆರಡು ವರ್ಷಗಳ ಕಾಲ ಕೃಷಿ ಮಾಡದಿರಲು ನಿರ್ಧರಿಸಿದರು. ಅವರಲ್ಲಿ ಒಬ್ಬ
ರೈತ ಮಾತ್ರ ಹೊಲದಲ್ಲಿ ತನ್ನ ಕೆಲಸವನ್ನು ನಿಲ್ಲಿಸಲಿಲ್ಲ. ಉಳುಮೆ, ಕಳೆ ಕೀಳುವ, ಬಿತ್ತುವ ಕೆಲಸವನ್ನು ನಿತ್ಯ
ಮಾಡುತ್ತಿದ್ದ. ಇದನ್ನು ಕಂಡು ಗ್ರಾಮದ ರೈತರು ಗೇಲಿ ಮಾಡತೊಡಗಿದರು. ಕೆಲವು ವರ್ಷಗಳ ನಂತರ ಹಳ್ಳಿಗರು ಈ
ಕಷ್ಟಪಟ್ಟು ದುಡಿಯುವ ರೈತನನ್ನು – ‘ಹನ್ನೆರಡು ವರ್ಷಗಳಿಂದ ಮಳೆಯಿಲ್ಲ ಎಂದು ತಿಳಿದಿರುವಾಗ, ನಿನ್ನ ಸಮಯ ಮತ್ತು ಶಕ್ತಿಯನ್ನು ಏಕೆ ವ್ಯರ್ಥ ಮಾಡುತ್ತಿದ್ದೀ?’ ಎಂದು ಕೇಳಲಾರಂಭಿಸಿದರು

ಅದಕ್ಕೆ ರೈತ – ‘ಹನ್ನೆರಡು ವರ್ಷಗಳವರೆಗೆ ಫಸಲು ಇರುವುದಿಲ್ಲ ಎಂದು ನನಗೂ ತಿಳಿದಿದೆ, ಆದರೆ ನಾನು ನನ್ನ
ಅಭ್ಯಾಸಕ್ಕಾಗಿ ಈ ಕೆಲಸವನ್ನು ಮಾಡುತ್ತಿದ್ದೇನೆ. ಏಕೆಂದರೆ ಹನ್ನೆರಡು ವರ್ಷಗಳ ಕಾಲ ಏನೂ ಮಾಡದೆ, ನಾನು ಕೃಷಿ ಕೆಲಸವನ್ನು ಮರೆತುಬಿಡುತ್ತೇನೆ. ನನ್ನ ದೇಹವು ದುಡಿಮೆಯ ಅಭ್ಯಾಸವನ್ನು ಕಳೆದುಕೊಳ್ಳುತ್ತೇನೆ. ಹಾಗಾಗಿ ಹನ್ನೆರಡು ವರ್ಷಗಳ ನಂತರ ಮಳೆ ಬಂದಾಗ ನನ್ನ ಕೆಲಸ ಮಾಡಲು ಯಾವುದೇ ತೊಂದರೆ ಆಗಬಾರದು ಎಂದು
ನಾನು ನಿತ್ಯ ಈ ಕೆಲಸ ಮಾಡುತ್ತಿದ್ದೇನೆ..’ ಎಂದು ತಾಳ್ಮೆಯಿಂದ ಉತ್ತರಿಸುತ್ತಾನೆ.

ತಾಯಿ ಪಾರ್ವತಿಯೂ ಈ ತಾರ್ಕಿಕ ಚರ್ಚೆಯನ್ನು ಬಹಳ ಕುತೂಹಲದಿಂದ ಕೇಳುತ್ತಿದ್ದಳು. ನಂತರ ಶಿವನಿಗೆ ಹೇಳಿದಳು – ‘ಹನ್ನೆರಡು ವರ್ಷಗಳ ನಂತರ ಡಮರು ನುಡಿಸುವುದನ್ನು ನೀವು ಸಹ ಮರೆಯಬಹುದು.’ ತಾಯಿ ಪಾರ್ವತಿ(Goddess Parvathy)ಯ ಮಾತು ಕೇಳಿ ಭೋಲೆ ಬಾಬಾ ಚಿಂತಿತನಾದ. ಅವನ ಡಮರು ನುಡಿಯು ತ್ತಿದೆಯೋ ಇಲ್ಲವೋ ಎಂದು ನೋಡಲು, ಅದನ್ನು ಎತ್ತಿಕೊಂಡು ಅದನ್ನು ಒಮ್ಮೆ ನುಡಿಸಲು ಪ್ರಯತ್ನಿಸಿದನು. ಅಗೋ ಡಮರು ಬಾರಿಸಲು ತೊಡಗುತ್ತಿದ್ದಂತೆ ಮಳೆ ಶುರುವಾಯಿತು. ಕೂಡಲೇ ನಿತ್ಯ ಕೆಲಸ ಮಾಡುತ್ತಿದ್ದ ರೈತನಿಗೆ ಹೊಲದಲ್ಲಿ ಭರ್ಜರಿ ಫಸಲು ಬಂದಿತ್ತು. ಉಳಿದ ರೈತರು ಪಶ್ಚಾತ್ತಾಪ ಪಡುವುದನ್ನು ಬಿಟ್ಟು ಬೇರೇನೂ ಮಾಡಲಾಗಲಿಲ್ಲ.

ಇಂತಹ ಸನ್ನಿವೇಶಗಳು ನಮ್ಮ ಜೀವನದಲ್ಲೂ ಬರುತ್ತದೆ. ಎಷ್ಟೋ ಬಾರಿ ನಾವು ಕಲಿತ ವಿದ್ಯೆಗೆ ತಕ್ಕ ಕೆಲಸ ನಮಗೆ ತಕ್ಷಣಕ್ಕೆ ಸಿಗದೇ ಹೋಗುತ್ತದೆ. ಆಗ ಕೈ ಚೆಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಅದಕ್ಕೆ ಸಂಬಂಧಿಸಿದ ಮತ್ಯಾವು ದಾದರೂ ಕೋರ್ಸ್ ಅನ್ನು ಮಾಡುತ್ತಾ ಇದ್ದರೆ, ಕೆಲಸ ಸಿಕ್ಕಾಗ ನಾವು ಗಳಿಸಿದ ಹೆಚ್ಚಿನ ಜ್ಞಾನ ನಮಗೆ ಸದಾ ನೆರವಾಗುತ್ತದೆ. ಅಷ್ಟೇ ಅಲ್ಲ ಒಮ್ಮೆ ಕಲಿತಮೇಲೆ ಯಾವುದನ್ನು ಕೂಡ ಬಿಟ್ಟುಬಿಡಬಾರದು. ಆಗಾಗ ಆ ವಿದ್ಯೆ ಬಳಸುತ್ತಾ ಏನಾದರೂ ಮಾಡುತ್ತಿದ್ದರೆ ನಾವು ಆ ವಿಷಯದಲ್ಲಿ ಪರಿಣಿತರಾಗುತ್ತೇವೆ.

ಅದನ್ನು ಬಿಟ್ಟು ಈಗ ಇದರಿಂದ ಏನು ಪ್ರಯೋಜನ ಎಂದು ಕೇವಲ ನಕಾರಾತ್ಮಕ ವಿಷಯಗಳ ಮೇಲೆ ಗಮನ
ಕೇಂದ್ರೀಕರಿಸುವ ಬದಲು, ನಾವು ನಮ್ಮ ಆಸಕ್ತಿಗಳನ್ನು ಅಭ್ಯಾಸ ಮಾಡುತ್ತಿರಬೇಕು. ನಮ್ಮ ಕೆಲಸಕ್ಕೆ ಸಂಬಂಧಿಸಿದ
ನಮ್ಮ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಬೇಕು ಇದು ಮನೆಯೊಳಗಿನ ಗೃಹಿಣಿಗಾದರೂ ಸರಿ ಮನೆ ಹೊರಗೆ ದುಡಿಯು ವ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ.