Monday, 25th November 2024

ಸಾಧನೆಗೆ ಮನವೇ ಮೂಲ

ಮಲ್ಲಪ್ಪ.ಸಿ.ಖೊದ್ನಾಪೂರ (ತಿಕೋಟಾ)

ಖ್ಯಾತ ವಿಮರ್ಶಕ ಜಾನ್ ರಸ್ಕಿನ್ ರವರು ‘ಮಕ್ಕಳಿಗೆ ಅವರು ಅರಿಯದ ವಿಷಯಗಳನ್ನು ಕಲಿಸುವುದು ಶಿಕ್ಷಣವಲ್ಲ. ಅವರು ವರ್ತಿಸದಿರುವ ರೀತಿಯನ್ನು ವರ್ತಿಸುವಂತೆ ತಿದ್ದುವುದೇ ನಿಜವಾದ ಶಿಕ್ಷಣ’ ಎಂದು ಹೇಳಿದ್ದಾರೆ. ಆದ್ದರಿಂದ ಶಿಕ್ಷಣ ಕೇವಲ
ಪಠ್ಯ-ವಿಷಯ ಜ್ಞಾನ, ಅಂಕ, ಪದವಿ ಪಡೆಯುವ ಸಾಧನವಾಗಬಾರದು.

ಪ್ರತಿಯಾಗಿ ಮಕ್ಕಳಲ್ಲಿ ಕಲಿಕೆ, ಆಲೋಚನೆ, ವಿವೇಚನೆ, ಚಿಂತನೆ, ಧೋರಣೆ, ವರ್ತನೆ, ಕಲೆ-ಕೌಶಲ್ಯ, ಪ್ರತಿಭೆ, ಶಕ್ತಿ-ಸಾಮರ್ಥ್ಯ ಹಾಗೂ ಅಪೇಕ್ಷಿತ ಸಕಾರಾತ್ಮಕ ಬದಲಾವಣೆಯನ್ನು ತರುವದೇ ಶಿಕ್ಷಣದ ಪ್ರಮುಖ ಉದ್ಧೇಶವಾಗಬೇಕು. ಹೀಗೆ ಪಡೆದ ಶಿಕ್ಷಣ ದಿಂದ ವಿದ್ಯಾರ್ಥಿ-ಮಕ್ಕಳು ಸ್ವಂತ ವ್ಯಕ್ತಿತ್ವ ಸಮಗ್ರವಾಗಿ ಬೆಳೆಯುವಂತಾಗಬೇಕು ಹಾಗೂ ಅವರು ಜೀವನೋಪಾಯಕ್ಕೊಂದು ಉದ್ಯೋಗ ಅಥವಾ ಸ್ವಾವಲಂಬಿ ಜೀವನವನ್ನು ನಡೆಸುವಂತಾಗಬೇಕು. ಆಗ ಮಾತ್ರ ಶಿಕ್ಷಣದ ನಿರ್ದಿಷ್ಟ ಗುರಿ ತಲುಪಿದಂತೆ.

ಪಾಲಕರು ಮತ್ತು ಶಿಕ್ಷಕರು ಮಕ್ಕಳ ಆಸಕ್ತಿ, ಅಭಿರುಚಿ, ಹವ್ಯಾಸ, ಪ್ರತಿಭೆ, ಕಲಿಕಾ ಮಟ್ಟ ಮತ್ತು ಗ್ರಹಿಕಾ ಸಾಮರ್ಥ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವದು ಅಗತ್ಯ. ಆದರೆ ಇಂದಿನ ಸ್ಪರ್ಧಾತ್ಮಕ ಪೈಪೋಟಿಯುತ್ತ ಮತ್ತು ಉದ್ಯೋಗವೇ ಮರೀಚಿಕೆಯಾಗು ತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಹೆಚ್ಚಿನ ಅಂಕ ಗಳಿಸಲು ಹಾಗೂ ನೆರೆಹೊರೆಯ ಅಥವಾ ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಎಲ್ಲರಿಗಿಂತ ಓದಿನಲ್ಲಿ ನನ್ನ ಮಗ ಅಥವಾ ಮಗಳು ಮುಂದಿರಬೇಕೆಂಬ ಆಶಾಭಾವನೆ ಹಾಗೂ ಮಾನಸಿಕ ಒತ್ತಡವು ಮಕ್ಕಳ ಮನಸ್ಸಿನ ಮೇಲೆ ತೀವ್ರ ಒತ್ತಡ, ಅನುಚಿತ ಪ್ರಭಾವ ಹೇರುತ್ತಿದ್ದಾರೆ.

ಇದರಿಂದ ಮಕ್ಕಳು ಪರೀಕ್ಷೆ ಎಂದಾಕ್ಷಣ ಆತಂಕ, ಮನಸ್ಸಿನಲ್ಲಿ ದುಗುಡ, ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ.
ಒಂದು ವೇಳೆ ಪರೀಕ್ಷೆಯಲ್ಲಿ ಫೇಲಾದರೆ, ನಿರೀಕ್ಷೆಗಿಂತಲೂ ಕಡಿಮೆ ಅಂಕ ಬಂದರೆ ಮುಂದೆ ಬಾಳಿ ಬದುಕಬೇಕಾದ ಕುಡಿಗಳಾದ ಮಕ್ಕಳು ತಂದೆ-ತಾಯಿ, ಪೋಷಕರ ಆಸೆಯನ್ನು ಸಫಲಗೊಳಿಸಲು ಸಾಧ್ಯವಾಗದಿದ್ದರೆ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಿರುವದು ತೀರ ಕಳವಳಕಾರಿ ಸಂಗತಿ.

ಡಿ.ವಿ.ಜಿ ಯವರು ಹೇಳುವಂತೆ, ‘ಓದುವದನ್ನು ಬರೆಯುವದನ್ನು ಕಲಿಸುವುದು ವಿದ್ಯಾಭ್ಯಾಸವಲ್ಲ. ಮಕ್ಕಳಲ್ಲಿ ವಿನಯ, ವಿವೇಕ ಮತ್ತು ಆತ್ಮಸ್ಥೈರ್ಯವನ್ನು ಒಡಮೂಡಿಸುವದೇ ನಿಜವಾದ ಶಿಕ್ಷಣ’ ಎಂದು ಹೇಳಿದ್ದಾರೆ. ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ಪರೀಕ್ಷೆಯ ಬಗ್ಗೆೆ ಮಕ್ಕಳಲ್ಲಿರುವ ಭಯ, ಅಂಜಿಕೆ ಮತ್ತು ಹಿಂಜರಿಕೆ ಮನೋಭಾವನೆಯನ್ನು ಹೋಗಲಾಡಿಸಲು ಹಾಗೂ ಅವರನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು.

ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಕೂಡಿ-ಕಲೆತು, ಬೆರೆತು ಅವರ ಸಮಸ್ಯೆಗಳನ್ನು ಗುರುತಿಸಿ ಅವು ಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ಮೂಡಿಸಬೇಕಾಗಿರುವ ಇಂದಿನ ಅವಶ್ಯಕತೆಯಾಗಿದೆ.