ಎಲ್.ಪಿ.ಕುಲಕರ್ಣಿ ಬಾದಾಮಿ
ಇವರ ವೃತ್ತಿ ರೋಗಿಗಳಿಗೆ ಸೇವೆ ಮಾಡುವುದು. ಜತೆಯಲ್ಲೇ ಇವರ ಪ್ರವೃತ್ತಿ ಸಾಹಿತ್ಯ ರಚನೆ. ಮೂರು ದಶಕಗಳ ಸೇವೆ. ತಮ್ಮ ಜೀವನದಲ್ಲಿ ಕಂಡ ವಿಚಾರಗಳನ್ನು ಡಾ.ಕರವೀರ ಪ್ರಭು ಕ್ಯಾಲಕೊಂಡ ಅವರ ಮಾತಿನಲ್ಲೇ ಕೇಳುವ ಅನುಭವ ವಿಶಿಷ್ಟ.
‘ಮೂರು ದಶಕದ ಹಿಂದಿನ ಮಾತು. ನಾನಾವಾಗ ಬಾದಾಮಿಯಲ್ಲಿ ಡಾಕ್ಟರ್ಕಿ ಪ್ರ್ಯಾಕ್ಟೀಸ್ ಮಾಡಾಕ ಬಂದಿದ್ದೆ. ಆಗ ಇಲ್ಲಿ ಬೆರಳೆಣಿಕಿಯಷ್ಟು ಡಾಕ್ಟ್ರಿದ್ರು. ಅದರಲ್ಲಿ ಹೆಸರುವಾಸಿಯಾದ ಈ ಐದು ಜನ ವೈದ್ಯರನ್ನು ಭೇಟಿಯಾದೆ. ಅದರಲ್ಲಿ ಇಬ್ಬರು ಎಮ್ ಬಿ ಬಿ ಎಸ್ ಮುಗಿಸಿದವರು. ಇನ್ನಿಬ್ಬರು ಆಯುರ್ವೇದ ವೈದ್ಯರು. ಆದರೆ ಆ ಐದನೇ ಡಾಕ್ಟ್ರು ಏನು ಮುಗಿಸಿದ್ದ ಅನ್ನುದು
ನನಗಿನ್ನೂ ತನಕ ಗೊತ್ತೇ ಆಗಿಲ್ಲ!
ಒಬ್ಬ ಎಮ್ ಬಿ ಬಿ ಎಸ್ ವೈದ್ಯ, ಆತ ಬಹಳ ಸ್ಟ್ರಿಕ್ಟ್. ರೋಗಿಗಳು ಏನಾದರೂ ಪದೆ ಪದೆ ಕೇಳಿದರೆ ಬೈದೇ ಬಿಡುತ್ತಿದ್ದರು. ಇನ್ನೊಬ್ಬ ಎ ಮ್ ಬಿ ಬಿ ಎಸ್ ವೈದ್ಯನ ವೃತ್ತಿ ಸುಮಾರಾಗಿ ನಡೆದಿತ್ತು. ಇನ್ನುಳಿದ ಆಯುರ್ವೇದ ವೈದ್ಯರದೂ ಸ್ವಲ್ಪ ಚೆನ್ನಾಗೇ ನಡೆದಿತ್ತು. ಆದರೆ ಆ ಐದನೇ ವ್ಯಕ್ತಿಯ ವೃತ್ತಿ ಸಹ ಚೆನ್ನಾಗೇ ನಡೆದಿತ್ತು ಅನ್ನೊದರಲ್ಲಿ ಎರಡು ಮಾತಿಲ್ಲ. ಅಂದು ಆ ಐದನೇ ವೈದ್ಯನ ಭೇಟಿ ಗೆಂದು ಆತನ ಕ್ಲಿನಿಕ್‌ಗೆ ಹೋದೆ. ರೋಗಿಗಳು ಆಗಲೇ ತೋರಿಸಿಕೊಳ್ಳಾಕ ಪಾಳಿ ಹಚ್ಚಿದ್ದರು.
ಒಳಗೆ ಹೋಗಿ ನೋಡ್ತಿನಿ ನನಗೊಂದು ಆಶ್ಚರ್ಯ ಕಾದಿತ್ತು. ನಾನು ಹತ್ತನೇ ತರಗತಿ ಬೋರ್ಡ್ ಎಕ್ಸಾಮ್ ಬರಿಯಾಕ
ಬಾದಾಮಿಗೆ ಬಂದಾಗ ಕುದುರಿಯ ಟಾಂಗಾ ಮೇಲೆ ನನ್ನನ್ನು ಎಕ್ಸಾಮ್ ಸೆಂಟರ್ ವರೆಗೂ ಬಿಟ್ಟುಬಂದ ಆ ಟಾಂಗಾವಾಲಾನೇ ಈಗ ಇಲ್ಲಿ ವೈದ್ಯನಾಗಿಬಿಟ್ಟಿದ್ದ!
ಹಂಗೂಹಿಂಗೂ ಮಾತನಾಡಿಸಿ ಹೊರಗ ಬಂದೆ. ಕೆಲವು ತಿಂಗಳು ಒಬ್ಬ ವೈದ್ಯನ ಹತ್ತಿರ ಕಂಪೌಂಡರ್ಕಿ ಮಾಡಿದ ಈ ಟಾಂಗಾ ವಾಲಾ ಈಗ ವೈದ್ಯನಾಗಿಬಿಟ್ಟಿದ್ದ. ಇಂಗ್ಲೀಷ್ ಅಷ್ಟೊಂದು ಓದೋಕೆ ಬಾರದ ಈತ, ಎಮ್. ಆರ್(ಮೆಡಿಕಲ್ ರಿಪ್ರೆೆಸೆಂಟೆಟಿವ್ ) ಗಳು ಬಂದಾಗ ಅವರಿಂದ, ಕೆಮ್ಮು, ನೆಗಡಿ, ಜ್ವರ, ತಲೆನೋವು, ಮೈಕೈ ನೋವಿಗೆ ಇರುವ ಸ್ಟ್ರಾಂಗ್ ಗುಳಿಗಿಗಳನ್ನು ( ಮಾತ್ರೆಗಳು)
ಬರೆಸಿಕೊಂಡು ಅವನ್ನೆ ತನ್ನ ರೋಗಿಗಳಿಗೆ ಪ್ರಿಸ್ಕ್ರೈಬ್ ಮಾಡುತ್ತಿದ್ದ. ಮತ್ತೆಷ್ಟೋ ದಿನಗಳವರೆಗೆ, ಅಂದರೆ ಇನ್ನೊಮ್ಮೆ ಆ ಎಮ್.ಆರ್. ಇವನಲ್ಲಿಗೆ ಬರುವವರೆಗೆ ಅವೇ ಮಾತ್ರೆ ಕೊಡುತ್ತಿದ್ದ. ಹೀಗೆ ನಡೆದಿತ್ತು ಆ ಟಾಂಗಾವಾಲಿಯ ಡಾಕ್ಟರ್‌ಕಿ. ಆ ಟಾಂಗಾ ವಾಲಾ ಡಾಕ್ಟರ್, ಕಣ್ಣಿನ ಆಪರೇಷನ್ ಕೂಡ ಮಾಡ್ತಿದ್ನಂತೆ!
ಅದ್ಹೇಗೆ ಅಂತಿರಾ! ಈ ಕಣ್ಣಿನ ಪೊರೆ ಬಂದವರಿಗೆ ಬ್ಲೇಡ್ ಬಳಸಿ ಅವರ ಪೊರೆಯನ್ನು ಕತ್ತರಿಸುತ್ತಿದ್ದನಂತೆ, ಅದು ಸಕ್ಸಸ್
ಆದ್ರೆ ಸಕ್ಸಸ್ ಇಲ್ಲಾಂದ್ರೆ ಕಣ್ಣೇ ಕಳ್ಕೊಳ್ಳೋ ಫಜೀತಿ! ನಾ ನೋಡಿದ ಮತ್ತೊಬ್ಬ ವೈದ್ಯನಂತೂ ಎಲ್ಲ ಪ್ರಕಾರದ ರೋಗಗಳಿಗೂ ಪೆನ್ಸಿಲಿನ್ ಇಂಜೆಕ್ಷನ್ ಮಾಡ್ತಿದ್ದ. ಅದಕ್ಕೆಂದೇ ಅಲ್ಲಿ ಒಬ್ಬ ಹುಡುಗನಿದ್ದ. ಆತ ಬೆಳಗಾದರೆ ಸಾಕು, ಒಂದು ಟೇಬಲ್ ಮೇಲೆ ಹತ್ತಿಪ್ಪತ್ತು ಸಿರಿಂಜ್‌ಗಳಲ್ಲಿ ಪೆನ್ಸಿಲಿನ್ ತುಂಬಿಸಿ ಇಟ್ಟಿರುತ್ತಿದ್ದ. ಬಂದ ರೋಗಿಗಳಿಗೆ ಸೂಜಿ ಚುಚ್ಚಿದ್ದೇ ಚುಚ್ಚಿದ್ದು.’ ಬರಹವೇ ಇವರ ಹವ್ಯಾಸ ಹೀಗೆ ತಮ್ಮ ವೈದ್ಯಕೀಯ ವೃತ್ತಿಯಲ್ಲಿನ ವಿಭಿನ್ನ ಅನುಭವಗಳನ್ನು ಬಿಚ್ಚಿಡುತ್ತಾ ಸಾಗಿದ ಬಾದಾಮಿಯ
ಡಾ.ಕರವೀರಪ್ರಭು ಕ್ಯಾಲಕೊಂಡ, ಉತ್ತಮ ಸರ್ಜನ್ ಮತ್ತು ಮಕ್ಕಳ ತಜ್ಞರು.
ಜತೆಗೆ ಅವರಲ್ಲೊಬ್ಬ ಸಾಹಿತಿಯೂ ಅಡಕವಾಗಿದ್ದಾನೆ. ನಾಡಿನ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ವಿಜಯ ವಾಣಿ, ವಿಜಯಕರ್ನಾಟಕ, ಕನ್ನಡ ಪ್ರಭ, ವಿಶ್ವವಾಣಿ, ಹೊಸ ದಿಗಂತ, ಕರ್ಮವೀರ, ಸುಧಾ… ಇವುಗಳಲ್ಲಿ ಕಥೆ, ಕವನ, ಲೇಖನ ಗಳು, ಪ್ರವಾಸಿ ಲೇಖನಗಳು, ವೈದ್ಯಕೀಯ ಲೇಖನಗಳನ್ನು ಬರೆದಿದ್ದಾರೆ. ಇಂದಿಗೂ ಬರೆಯುತ್ತಲೇ ಇದ್ದಾರೆ. ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಬೆಂಗಳೂರಿನ ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ನವೆಂಬರ್ 5ರಂದು ವಿವಿಯ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಯೋಜನೆಗೊಂಡಿದೆ. ‘ನಲವತ್ತರ ಅಂಚಿನಲ್ಲಿ’, ದೃಢ ಸಂಕಲ್ಪ, ಆರೋಗ್ಯಕ್ಕೆ ಕಾಯಕಲ್ಪ, ಹಾಡು ಹೇಳುವೆ ಕೇಳೆ ಗುಬ್ಬಚ್ಚಿ- ಹೀಗೆ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಡಾ. ಕ್ಯಾಲಕೊಂಡ ಅವರು ಕನ್ನಡ ಸಾರಸ್ವತ ಲೋಕದ ಒಬ್ಬ ಪ್ರತಿಭಾನ್ವಿತ ವೈದ್ಯ, ಸಾಹಿತಿ, ಕವಿ.ಡಾ.ಕ್ಯಾಲಕೊಂಡರ ಒಂದು ಕೃತಿ ‘ನಲವತ್ತರ ಅಂಚಿನಲ್ಲಿ ’ ಪುಸ್ತಕಕ್ಕೆ ಮುನ್ನುಡಿ ಬರೆದ, ಡಾ.ಸ.ಜ.ನಾಗಲೋಟ ಮಠರು – ಡಾ.ಕರವೀರಪ್ರಭು ಕ್ಯಾಲಕೊಂಡರ ವೈದ್ಯ ಸಾಹಿತ್ಯ ದ ವೈಶಿಷ್ಟ್ಯಗಳ ಒಂದು ಪಟ್ಟಿಯನ್ನೇ ಮಾಡಿದ್ದು, ಅವರ ಸಾಧನೆಯ ಪರಿಚಯ ಮಾಡಿಸಿದ್ದಾರೆ.
ಡಾ.ಕ್ಯಾಲಗೊಂಡರ ಬರಹಗಳ ಸರಳ ವಾಕ್ಯಗಳ ರಚನೆಯ ಕೌಶಲ್ಯ ಅದ್ಭುತವಾದುದು. ಪತ್ರಿಕಾ ವರದಿಯಂತೆ ಮೇಲ್ನೋಟಕ್ಕೆ ಕಂಡರೂ ಎಲ್ಲ ವಿಷಯಗಳ ಹರವು ಸರಳ ವಾಕ್ಯಗಳಲ್ಲಿ ಹಿಡಿದಿಡಲ್ಪಟ್ಟಿದೆ.
ಗೌರವಗಳು
1984 ರ ಜನವರಿಯಲ್ಲಿ ಸರಕಾರಿ ವೈದ್ಯಾಧಿಕಾರಿಯಾಗಿ ಸೇವೆ ಆರಂಭಿಸಿದ ಡಾ.ಕ್ಯಾಲಕೊಂಡರು ಅಲ್ಲಿಂದ ಸತತ 5 ವರ್ಷಗಳ ಕಾಲ ಬೆಸ್ಟ್ ಐ ಸಿ ಡಿ ಎಸ್ ಮೆಡಿಕಲ್ ಆಫಿಸರ್ ಆಫ್ ದಿ ಸ್ಟೇಟ್ ಪ್ರಶಸ್ತಿ ಪಡೆದಿದ್ದಾರೆ. 1988 ರಲ್ಲಿ ‘ಕ್ಯಾಲಕೊಂಡ ಸಿಸ್ಟಮ್ ಆಫ್
ಸ್ಕೋರಿಂಗ್ ಫಾರ್ ಪ್ರಿಡಿಕ್ಷನ್ ಆಫ್ ಪೊಲಿಯೋಮೈಲೈಟಿಸ್’ ಸಂಶೋಧನಾ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ವೈದ್ಯಕೀಯ ಮಹಾ ಮಂಡಳಿಯ ಪ್ರಶಸ್ತಿ, ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘ ಕೊಡಮಾಡುವ ವೈದ್ಯಶ್ರೀ, ವೈದ್ಯ ಭೂಷಣ ಪ್ರಶಸ್ತಿಗಳು ಸಂದಿವೆ.
ಗ್ರಾಮೀಣ ಸೇವೆಗಾಗಿ ಡಾ.ಬಿ.ಸಿ.ರಾಯ್ ಪ್ರತಿಷ್ಠಿತ ಪ್ರಶಸ್ತಿ, ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿ – ಕರ್ನಾಟಕ ರಾಜ್ಯ ವೈದ್ಯ ಸಾಹಿತ್ಯ
ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನ, ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಸಮಗ್ರ ಸಾಹಿತ್ಯ ಕ್ಕಾಗಿ ಅಗ್ನಿವೇಷ ಸಾಹಿತ್ಯ ಪ್ರಶಸ್ತಿ, ಹೀಗೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.
ನಿವೃತ್ತ ಜೀವನ
2016 ರಲ್ಲಿ ಸರಕಾರಿ ವೃತ್ತಿಯಿಂದ ನಿವೃತ್ತರಾದ ಡಾಕ್ಯಾಲಕೊಂಡರು ಸ್ವಂತದ್ದೊಂದು ಆಸ್ಪತ್ರೆ ತೆಗೆದು ಬಾದಾಮಿಯಲ್ಲಿ ನೆಲೆಸಿ ದ್ದಾರೆ. ಇವರ ಧರ್ಮಪತ್ನಿ ಡಾ.ಶೋಭಾ ಅವರೂ ವೃತ್ತಿಯಲ್ಲಿ ವೈದ್ಯರು. ಅಲ್ಲದೇ ಮಕ್ಕಳಾದ ಡಾ.ಹರ್ಷಾ ಹಾಗೂ ಡಾ.ಕೀರ್ತಿ ಅವರೂ ಕೂಡ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ಡಾ.ಕರವೀರಪ್ರಭು ಕ್ಯಾಲಕೊಂಡರದು ವೈದ್ಯರ ಕುಟುಂಬ. ಡಾ.ಕ್ಯಾಲ ಕೊಂಡರ ವೈದ್ಯಕೀಯ ಸೇವೆ ಮತ್ತು ಸಾಹಿತ್ಯ ಸೇವೆ ಇನ್ನೂ ಮುಂದುವರಿಯಲಿ ಎಂದು ಆಶಿಸೋಣ.