Saturday, 21st September 2024

Roopa_Gururaj_Column: ಸಕಲ ಜೀವರಾಶಿಗಳಲ್ಲೂ ಭಗವಂತನ ಇರುವಿಕೆ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ರವೀಂದ್ರನಾಥ್ ಟ್ಯಾಗೋರರ ಮನೆಗೆ ಆಗಾಗ ವಯಸ್ಸಾದ ವೃದ್ಧರೊಬ್ಬರು ಬರುತ್ತಿದ್ದರಂತೆ. ಆ ತಾತ ಇವರ ಬಳಿ ಪದೇ ಪದೇ ಬಂದು ಇವರಿಗೆ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳುತ್ತಿದ್ದರಂತೆ. ಆಗ ಇವರಿಗೆ ಬಹಳ ಮುಜುಗರ
ಆಗುತ್ತಿತ್ತಂತೆ.

ಈ ತಾತ ರವೀಂದ್ರನಾಥರಿಗೆ ನೀನೊಬ್ಬ ಪ್ರಸಿದ್ಧ ಕವಿ, ನೊಬೆಲ್ ಪ್ರಶಸ್ತಿ ವಿಜೇತನಾದರೂ ನಿನಗೇನೂ ತಿಳಿದಿಲ್ಲ. ಭಗವಂತನ ಬಗ್ಗೆ ಅನೇಕ ಕವಿತೆಗಳನ್ನೇನೊ ಬರೆದಿರುವೆ, ಆದರೆ ನೀನು ಅವನನ್ನು ಕಂಡಿರುವೆಯೇನು? ಅದನ್ನು ಅನುಭವಿ ಸಿದ್ದೀಯಾ? ಎಂದು ಪ್ರಶ್ನಿಸುತ್ತಲೇ ಇದ್ದರು. ಇವರಿಗೆ ಏನೋ ಒಂದು ಉತ್ತರ ಹೇಳಿ, ಅವರನ್ನು ಮರಳು ಗೊಳಿಸುವುದು ಸಾಧ್ಯವಿರಲಿಲ್ಲ. ಅವರ ಕಣ್ಣುಗಳು ಅಪಾರವಾದ, ತೇಜಸ್ಸಿನಿಂದ ಕೂಡಿತ್ತು.

ಒಂದು ಹುಣ್ಣಿಮೆಯ ರಾತ್ರಿ ರವೀಂದ್ರರು, ಸುಮ್ಮನೆ ಸಮುದ್ರದ ತಟಕ್ಕೆ ಹೋಗಿದ್ದರು. ಅಂದು ಅವರು ಸಮುದ್ರದ ನೀರಿನಲ್ಲಿ ಚಂದ್ರನ ಬಿಂಬವನ್ನು ನೋಡಿದರು. ನಿಜವಾದ ಚಂದ್ರನಿಗಿಂತಲೂ ಸಾಗರದಲ್ಲಿಯ ಚಂದ್ರನ ಬಿಂಬ
ಅತ್ಯಂತ ಸುಂದರವಾಗಿ ಕಾಣುತ್ತಿತ್ತು. ಕೆಲವೊಮ್ಮೆ ಹೀಗಾಗುತ್ತದೆ, ನಮ್ಮ ಚಿತ್ರವೇ, ನಾವು ಇರುವುದಕ್ಕಿಂತಲೂ ಸುಂದರವಾಗಿ ಕಾಣುತ್ತದೆ. ರವೀಂದ್ರನಾಥರು, ಸಾಗರದಲ್ಲಿ ಚಂದ್ರನ ಬಿಂಬವನ್ನು ನೋಡಿ, ಆನಂದದಿಂದ
ಬರು‌ತ್ತಿರುವಾಗ, ರಸ್ತೆ ಬದಿಯಲ್ಲಿದ್ದ ಚಿಕ್ಕ ಚಿಕ್ಕ ಹಳ್ಳವನ್ನು ನೋಡುತ್ತಾ ಬಂದರು.

ಅಂದು ಬೆಳಗ್ಗೆ ಮಳೆ ಬಂದಿತ್ತು. ಚಿಕ್ಕ ಚಿಕ್ಕ ಗುಂಡಿಗಳಲ್ಲಿ ನೀರು ನಿಂತಿತ್ತು. ನೀರು ನಿಂತಿರುವೆಡೆಯೆಲ್ಲ, ಚಂದ್ರನ
ಬಿಂಬ ಕಾಣುತ್ತಿತ್ತು. ನೀರು ಕೊಳಕಾಗಿದ್ದರೂ ಸಾಗರದಲ್ಲಿ ಹೇಗೆ ಸುಂದರವಾದ ಚಂದ್ರನ ಬಿಂಬವನ್ನು ಕಂಡರೊ, ಅದೇ ರೀತಿ ಹಳ್ಳಗಳಲ್ಲಿ ಕೂಡಾ ಚಂದ್ರನ ಸುಂದರ ಬಿಂಬವನ್ನು ಕಂಡರು. ಆಗ ಅವರಿಗೆ ಹೊಸದೊಂದು ಸತ್ಯದ
ಅರಿವಾಯಿತು. ನಮ್ಮ ಕನ್ನಡಿ ಹೇಗೇ ಇರಲಿ, ಚಂದ್ರ ಮಾತ್ರ ಚಂದ್ರನೇ, ನಾವೆ ನೋಡಲಿ, ಚಂದ್ರನ ರೂಪ ಮಾತ್ರ ಚಂದವಾಗೇ ಇರುವುದು. ಅದು ಬದಲಾಗಲು ಸಾಧ್ಯವಿಲ್ಲ.

ಮೊದಲ ಸಲ ಇವರಿಗೆ ಆ ತಾತನ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿ, ರವೀಂದ್ರರು ನಿರಾಳರಾದರು. ಅವರು ತಮ್ಮ ಮನೆಗೆ ಹೋಗುವ ಬದಲು, ಸೀದಾ ಆ ತಾತನ ಮನೆಗೆ ಹೋದರು. ಅವರ ಕಣ್ಣುಗಳಲ್ಲಿ ಚಂದ್ರನ ಸಾಗರದ, ಹಳ್ಳಗಳ, ಸೌಂದರ್ಯ ತುಂಬಿ ತುಳುಕಾಡುತ್ತಿತ್ತು. ಆಗವರು ಆ ಮುದುಕರಿಗೆ ಇಂದು ನಾನು ಪರಮಾತ್ಮನನ್ನು ಕಂಡೆ
ಎಂದರು.

ಆಗ ಆ ಮುದುಕರು, ಇವರನ್ನು ತಬ್ಬಿಕೊಂಡು ಹೇಳಿದರು, ನನಗೆ ಗೊತ್ತು, ನಿನ್ನ ಮುಖದಲ್ಲಿ, ಕಣ್ಣುಗಳಲ್ಲಿ, ನೀನು ಭಗವಂತನನ್ನು ಕಂಡಿರುವುದನ್ನು ನಾನು ಸ್ಪಷ್ಟವಾಗಿ ಕಾಣುತ್ತಿರುವೆ. ಇನ್ನು ನಾನು ನಿನಗೆ ಹೆಚ್ಚಿಗೆ ಪ್ರಶ್ನೆಯನ್ನು ಕೇಳಿ ನಿನ್ನನ್ನು ಕಾಡುವುದಿಲ್ಲ, ನಿನ್ನ ಬಳಿಗೆ ಬರುವುದೂ ಇಲ್ಲ, ಇಷ್ಟು ದಿನ ನಾನು ನಿನ್ನನ್ನು ಮತ್ತೆ ಮತ್ತೆ ಕಾಡಿದ್ದೇ ಕೆಂದರೆ ನೀನು ಇದನ್ನು ಸಾಧಿಸುವೆ ಎಂಬ ಅರಿವು ನನಗಿತ್ತು. ಪರಮಾತ್ಮ ಹೇಗೆ ಕಂಡ ವಿವರಿಸು ಎಂದರು.

ಆಗ ರವೀಂದ್ರರು, ಚಂದ್ರನ ಬಿಂಬವನ್ನು ಸಾಗರದಲ್ಲಿ ನೋಡಿದಾಗಲೂ ಮತ್ತದೇ ಬಿಂಬಗಳನ್ನು ಅನೇಕ ಚಿಕ್ಕ ಚಿಕ್ಕ ಹಳ್ಳ, ಕಲುಷಿತಗೊಂಡ ನೀರಿನಲ್ಲೂ ನೋಡಿದರೂ, ಚಂದ್ರನ ಪ್ರತಿಬಿಂಬದಲ್ಲಿ ಮಾತ್ರ ಯಾವ ವ್ಯತ್ಯಾಸವೂ ಇರಲಿಲ್ಲ. ಆ ಕ್ಷಣದಲ್ಲಿ ನನಗೆ ನಿಮ್ಮ ನೆನಪಾಯಿತು. ಏಕೆಂದರೆ, ನೀವು ಬಂದಾಗಲೆಲ್ಲ ನನಗೆ ಕಸಿವಿಸಿ, ಕೋಪ ಬರುತ್ತಿತ್ತು. ಆಗ ನಾನು ಕಣ್ಣಿದ್ದೂ ಕುರುಡನಾಗಿದ್ದೆ, ಪರಮಾತ್ಮನನ್ನು ನಿಮ್ಮಲ್ಲಿ ನನ್ನಿಂದ ಕಾಣಲು ಸಾಧ್ಯವಾಗು ತ್ತಿರಲಿಲ್ಲ.

ನನಗೆ ಸುಂದರ ಪುಷ್ಪಗಳಲ್ಲಿ, ಸುಂದರ ಮನುಷ್ಯರಲ್ಲಿ, ಸುಂದರವಾದ ಆಕೃತಿ ವಸ್ತುಗಳಲ್ಲಿ ಮಾತ್ರ ಪರಮಾತ್ಮ ನಿದ್ದಾನೆಂದುಕೊಂಡಿದ್ದೆ. ಆದರೆ ಈಗ ನನಗೆ ತಿಳಿಯಿತು, ಪರಮಾತ್ಮ ಎಡೆಯೂ ಇದ್ದಾನೆ ಎಂದು. ನೀವು ಯಾರೇ ಆಗಿರಲಿ ನೀವೂ ಸಹ ಪರಮಾತ್ಮನ ಪ್ರತಿಬಿಂಬವೇ ಎಂದು. ನನ್ನನ್ನು ತಿದ್ದಿದ ನಿಮಗೆ ಅನಂತಾನಂತ ಧನ್ಯವಾದ ಗಳು ಎಂದರು.

ಭಗವಂತನ ಉಪಸ್ಥಿತಿ ಎಲ್ಲರಲ್ಲೂ ಕಂಡು ನಾವು ಅವರನ್ನು ಗೌರವಿಸಿದಾಗ ಮಾತ್ರ ನಮ್ಮ ಮನುಷ್ಯ ಜನ್ಮ ಸಾರ್ಥಕ.