Monday, 25th November 2024

Vinayaka M Bhatta, Amblihonda Column: ಹೊಸಚಿಗುರು ಎನ್ನುವುದು ಹಳೆಬೇರಿನ ವ್ಯಾಖ್ಯಾನ ಮಾತ್ರ..

ವಿದ್ಯಮಾನ

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ

ವಾಲ್ಮೀಕಿ-ವ್ಯಾಸರು ಬಂದು ಸಾವಿರಾರು ವರ್ಷಗಳಾದರೂ ಅವರಷ್ಟು ‘ಕ್ಯಾಲಿಬರ್’ ಇರುವ ಮತ್ತೊಬ್ಬರು ಯಾಕೆ ಹುಟ್ಟಲಿಲ್ಲ? ರಾಮಾಯಣ ಮಹಾಭಾರತದಂಥ ಕೃತಿಗಳು ಯಾಕೆ ಮತ್ತೆ ಬರುತ್ತಿಲ್ಲ? ಬಿಡಿ, ವಾಲ್ಮೀಕಿ- ವ್ಯಾಸರಿಗೆ ಅತಿಮಾನುಷ ಶಕ್ತಿಯಿತ್ತು ಎಂದುಕೊಳ್ಳೋಣ; ಆದರೆ, ಪಂಪ-ರನ್ನರಂಥವರು, ಬೇಂದ್ರೆ-ಮಾಸ್ತಿಯಂಥವರಾದರೂ ಯಾಕೆ ಬರುತ್ತಿಲ್ಲ?

ಸಾಹಿತ್ಯವು ಆಯಾ ಕಾಲಘಟ್ಟದ ಜನರ ಜೀವಿತಾಶಯಕ್ಕೆ ಕೈಗನ್ನಡಿಯಾಗಿರುತ್ತದೆ ಮತ್ತು ಅವರ ಜೀವಿತಾಶಯವೇ ಸಾಹಿತ್ಯಕ್ಕೆ ಮೂಲ ಮತ್ತು ಪ್ರೇರಕ ಸಾಮಗ್ರಿಯಾಗಿರುತ್ತದೆ. ಒಂದು ಕಾಲಘಟ್ಟದ ಜನರ ಮನಸ್ಸೇ ಆ ಕಾಲದ ಸಾಹಿತ್ಯವಾಗಿ ದಾಖಲಾಗಿರುತ್ತದೆ ಎನ್ನುವುದು ಹಿರಿಯರು ಕಂಡುಕೊಂಡ ಸತ್ಯ. ಹಾಗಾಗಿ, ಒಂದು ಪ್ರದೇಶದ ಸಮಕಾಲೀನ ಸಂಸ್ಕೃತಿ ಯನ್ನು ಅರಿಯಬೇಕಾದರೆ ಆ ಕಾಲದ ಸಾಹಿತ್ಯವನ್ನು ಓದಿದರೆ ಸಾಕಾಗುತ್ತದೆ. ಈ ತತ್ವದ ಬೆಳಕಿನಲ್ಲಿ ಭಾರತೀಯ ಸಾಹಿತ್ಯ ಪರಂಪರೆ ಹೇಗೆ ದರ್ಶನೀಯವಾಗುತ್ತದೆ ಮತ್ತು ಇಂದು ಆ ಸಾಹಿತ್ಯ ಪರಂಪರೆ ಎತ್ತ ಸಾಗುತ್ತಿದೆ ಎನ್ನುವುದನ್ನು ಸಾರಸಂಗ್ರಹವಾಗಿ ಅವಲೋಕಿಸೋಣ.

ಇದನ್ನೂ ಓದಿ: Prof C Shivaraju Column: ಸಾರ್ಥಕ ಬದುಕಿಗೆ ಬೇಕು ಸಕಾರಾತ್ಮಕತೆ, ಯಶಸ್ವಿ ಜೀವನಕ್ಕೆ ಅದೇ ಕೀಲಿ ಕೈ

ಭಾರತೀಯ ಸಾಹಿತ್ಯವು, ದೇಶ ಪ್ರತಿನಿಧಿಸುವ ನಾಗರಿಕತೆಯಷ್ಟೇ ವೈವಿಧ್ಯಮಯವಾಗಿದೆಯಾದರೂ, ಏಕಸೂತ್ರ
ದಿಂದ ಬಂಧಿತವಾಗಿದೆ. ಪ್ರಾಚೀನ ಕಾಲದಿಂದಲೂ, ಭಾರತೀಯರು ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ
ಸಾಹಿತ್ಯವನ್ನು ಸೃಜಿಸುತ್ತಾ ಬಂದ್ದಾರೆ. ವೈದಿಕ ಸಾಹಿತ್ಯ (ಚತುರ್ವೇದಗಳು), ಮಹಾಕಾವ್ಯಗಳು, ಶಾಸ್ತ್ರೀಯ ಸಂಸ್ಕೃತ ಸಾಹಿತ್ಯ ಮತ್ತು ಪಾಲಿ ಸಾಹಿತ್ಯಗಳನ್ನು ಪ್ರಾಚೀನ ಸಾಹಿತ್ಯವೆಂದು ಉದಾಹರಿಸಬಹುದಾಗಿದೆ. ವೇದವ್ಯಾಸರ
ಸಮಗ್ರ ಸಾಹಿತ್ಯವೊಂ ದನ್ನೇ ಓದಿ ಮುಗಿಸಲು ಮನುಷ್ಯನಿಗೆ ಒಂದು ಜನ್ಮ ಸಾಕಾಗಲಿಕ್ಕಿಲ್ಲ; ಇನ್ನು ಅದನ್ನು
ಅರ್ಥೈಸಿ ಅನುಭವಿಸಲು ಅನೇಕ ಜನ್ಮಗಳೇ ಬೇಕಾದೀತು.

ಅಷ್ಟು ಪರಿಮಾಣದ ಮತ್ತು ಮೌಲಿಕವಾದ ಸಾಹಿತ್ಯವನ್ನು ರಚಿಸಿಬಿಟ್ಟಿದ್ದಾರೆ ಅವರು. ಇನ್ನು, ವ್ಯಾಸರಿಗಿಂತಲೂ
ಮೊದಲಿನವರಾದ, ೨೪,೦೦೦ ಶ್ಲೋಕಗಳ ‘ಶ್ರೀಮದ್ರಾಮಾಯಣ’ ದಂಥ ಕಾಲಾತೀತ ಮಹಾಕಾವ್ಯವನ್ನು ಲೋಕ
ಕ್ಕಿತ್ತು ಆದಿಕವಿ ಎಂದು ಕರೆಸಿಕೊಂಡ ವಾಲ್ಮೀಕಿಗಳ ಮಹತ್ತು ಬೇರೆಯದ್ದೇ ರಸಮಟ್ಟದ್ದಾಗಿದೆ.

ಶ್ರೀಮದ್ರಾಮಾಯಣ ಕಾವ್ಯವು ವಾಲ್ಮೀಕಿ ಗಳು ರಚಿಸಿದ ಏಕೈಕ ಸಾಹಿತ್ಯ, ಅವರು ಬೇರೇನನ್ನೂ ರಚಿಸಿರುವುದು ನಮಗಂತೂ ಕಂಡುಬರುವುದಿಲ್ಲ. ಆದರೆ, ಈ ಮಹಾಕಾವ್ಯದ ಆಧಾರದ ಮೇಲೆ ‘ತುಳಸಿ ರಾಮಾಯಣ’ದಿಂದ ಹಿಡಿದು ಮೊನ್ನೆ ಮೊನ್ನೆಯ ‘ರಾಮಾಯಣ ದರ್ಶನಂ’ವರೆಗೆ ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಬಂದ ಅಥವಾ ಅದ್ಯಾಪಿ ಬರುತ್ತಿರುವ ಸಾಹಿತ್ಯಗಳಿವೆಯಲ್ಲಾ, ಅವಕ್ಕೆ ಮಿತಿಯೇ ಇಲ್ಲ.

ಹಳೆಗನ್ನಡದ ಕವಿಯೊಬ್ಬ, ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ, ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದಿದ್ದಾನೆ. ಅಂದರೆ, ಭೂಮಿಯನ್ನು ಹೊತ್ತ ಆದಿ ಶೇಷನು, ಭೂಮಿಯ ಮೇಲಿರುವ ರಾಮಾಯಣಗಳ ಭಾರವನ್ನು ತಡೆಯಲಾರದೇ ತಿಣುಕಾಡಿಬಿಟ್ಟನಂತೆ ಮತ್ತು ರಾಮಾಯಣಕ್ಕೆ ಇನ್ನೇನಾದರೂ ಹೊಸ ವ್ಯಾಖ್ಯಾನ ನೀಡೋಣವೆಂದರೆ ಜಾಗವೇ ಇಲ್ಲದಷ್ಟು ವ್ಯಾಖ್ಯಾನಗಳು ಈಗಾಗಲೇ ಇವೆ ಎಂದರ್ಥ.

ವಾಲ್ಮೀಕಿಗಳು ರಚಿಸಿದ ಏಕೈಕ ಕೃತಿ, ಎಷ್ಟು ಹೊಸ ಕೃತಿಗಳಿಗೆ ಸಾಧ್ಯತೆಯನ್ನು ಒದಗಿಸಿತು, ಎಷ್ಟು ಹೊಸ ಚಿಂತನೆ ಗಳಿಗೆ ಅವಕಾಶ ಮಾಡಿಕೊಟ್ಟಿತು ಎನ್ನುವುದನ್ನು ನೋಡಿದರೆ, ಈ ಕೃತಿಯ ರಸಾವಿಷ್ಟತೆ ಎಷ್ಟಿರಬೇಕು ಎಂಬುದು ಅರಿವಾಗುತ್ತದೆ. ಒಬ್ಬ ವ್ಯಕ್ತಿ, ಯಾವುದೇ ಆಧುನಿಕ ಬರವಣಿಗೆಯ ಸಾಧನ-ಸೌಲಭ್ಯಗಳು ಇಲ್ಲದಿರುವ ಕಾಲದಲ್ಲಿ, ಹರಿದು ಹಂಚಿಹೋಗಿದ್ದ ವೇದ ವ್ಮಾಯವನ್ನು ಒಂದು ಸೂತ್ರದಲ್ಲಿ ವ್ಯವಸ್ಥಿತಗೊಳಿಸಿ (ವೇದ ಸಾಹಿತ್ಯದ ರಾಶಿ ಯನ್ನು ವಿಂಗಡಿಸಿ ವ್ಯವಸ್ಥಿತಗೊಳಿಸಿದ್ದಕ್ಕಾಗಿ ಬಾದರಾಯಣರಿಗೆ ವೇದವ್ಯಾಸ ಎನ್ನುವ ಹೆಸರು ಬಂತು), ನಂತರ ೧೮ ಪುರಾಣಗಳು, 18 ಉಪಪುರಾಣಗಳು ಮತ್ತೆ 18 ಔಪಪುರಾಣಗಳನ್ನು (ಒಟ್ಟು 54 ಪುರಾಣಗಳನ್ನು) ರಚಿಸಿ, ಆಮೇಲೆ ಮಹಾಭಾರತದಂಥ ಸಾರ್ವಕಾಲಿಕ ಮಹಾಕೃತಿಗಳನ್ನು ತಮ್ಮ ಜೀವಿತಾವಧಿಯಲ್ಲಿ ಸೃಜಿಸಲಿಕ್ಕೆ ಸಾಧ್ಯ ವಾಗುವು ದಾದರೆ, ವಿಚಾರಮಾಡಿ!

ನಮ್ಮ ಭಾವನೆಗಳನ್ನು ಲೇಖನಿಯ ಸಹಾಯವೇ ಇಲ್ಲದೆ ನೇರವಾಗಿ ಕಂಪ್ಯೂಟರ್ ಪರದೆಯ ಮೇಲೆ ಮೂಡಿಸಿ ಬಿಡಬಹುದಾದ ಹಾಗೂ ನಾವು ಮಾತಾಡುತ್ತಿದ್ದರೆ ಆ ಮಾತು ಪರದೆಯ ಮೇಲೆ ಲಿಪಿಯಾಗಿ ಪರಿವರ್ತಿತವಾಗಿ ಬಿಡುವ ಇಂದಿನ ಕಾಲಘಟ್ಟದಲ್ಲಿ ಗ್ರಂಥಾಭಿವೃದ್ಧಿ ಎಷ್ಟಾಗಬೇಕಾಗಿತ್ತು? ಹಾಗೊಮ್ಮೆ ಹೊಸ ಗ್ರಂಥಗಳು ಬರುತ್ತಿವೆ ಎನ್ನುವುದನ್ನು ಒಪ್ಪಿಕೊಂಡರೂ ಅವು ಬಹಳಕಾಲ ಬಾಳದೇ ಅಲ್ಪಾಯುಷಿಗಳಾಗುತ್ತಿರುವುದೇಕೆ? ಆಧುನಿಕ ಬರಹಗಳಿಗೆ ರಾಮಾಯಣ-ಭಾರತ, ಭಾಗವತಗಳಂತೆ ಕಾಲಾತೀತತ್ವ ಯಾಕೆ ಒದಗಿ ಬರುವುದಿಲ್ಲ ಎನ್ನುವ ಪ್ರಶ್ನೆ ಮೂಡಿದರೆ ತಪ್ಪಲ್ಲ ತಾನೆ? ಹಾಗೆ ನೋಡಿದರೆ ನಾವು ಕೇಳಿಕೊಳ್ಳಲೇಬೇಕಾದ ಪ್ರಶ್ನೆಯಿದು (ಇಂದಿನ ಸಾಹಿತ್ಯ ಮತ್ತು ಸಾಹಿತಿಗಳಿಬ್ಬರಿಗೂ ಇಂತಿಷ್ಟು ಅಂತ Shelf life ಇರುತ್ತದೆ ಎಂದು ಇನೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಯವರು ಇತ್ತೀಚೆಗೆ ಹೇಳಿದ್ದನ್ನು ನಾವು ಸ್ಮರಿಸಬಹುದು).

ವ್ಯಾಸ-ವಾಲ್ಮೀಕಿಗಳನ್ನು ದಾಟಿ ಮುಂದೆ ಬರುವ ಸಂಸ್ಕೃತದ ಕವಿಗಳ ಬಗ್ಗೆ ಹೇಳಹೊರಟರೆ ಅನೇಜ ರಸಜ್ಞರನ್ನು ಹೆಸರಿಸಬಹುದು. ‘ಉಪಮಾ ಕಾಳಿದಾಸಸ್ಯ ಭಾರವೀರರ್ಥಗೌರವಂ, ದಂಡಿನಃ ತು ಪದ ಲಾಲಿತ್ಯಂ ಮಾಘೇ ಸಂತಿಸಯೋ ಗುಣಾಃ’- ಸಾಹಿತ್ಯ ಸೃಷ್ಟಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ವಿಶೇಷತೆ. ಉತ್ತಮ ಉಪಮೆಗಳಿ ಗಾದರೆ ಕಾಳಿದಾಸನ ಸಾಹಿತ್ಯವನ್ನು, ಅರ್ಥಗೌರವಕ್ಕೆ ಭಾರವಿಯ ಸಾಹಿತ್ಯವನ್ನು ಓದಬೇಕು. ಪದಗಳ ಲಾಲಿತ್ಯ ದಂಡಿಯ ಹೆಚ್ಚುಗಾರಿಕೆಯಾದರೆ ಮಾಘ ಎನ್ನುವ ಕವಿಯಲ್ಲಿ ಈ ಮೂರೂ ಕವಿತ್ವದ ಗುಣಗಳನ್ನು ಕಾಣಬಹು ದಾಗಿತ್ತು ಎನ್ನುವ ಉಕ್ತಿಯಿದೆ.

ಹಿಂದೆ ‘ನಳಚರಿತೆ’ ಎನ್ನುವ ಕಾವ್ಯವನ್ನು ರಚಿಸಿದ್ದ ಶ್ರೀಹರ್ಷ ಎನ್ನುವ ಸಂಸ್ಕೃತ ಕವಿ ಕಾವ್ಯವೊಂದನ್ನು ರಚಿಸಿ
ಪ್ರಕಟಣೆ ಮಾಡಿದ್ದನಂತೆ. ಆದರೆ ಅದು ಭಾಷೆಯ ಮತ್ತು ವಿಷಯದ ಕಾಠಿಣ್ಯದಿಂದಾಗಿ ಜನರಿಗೆ ಅರ್ಥವಾಗದೇ
ತಿರಸ್ಕೃತಗೊಂಡಿತು. ಇದನ್ನರಿತ ಶ್ರೀಹರ್ಷ, ಒಂದು ದಿನ ಮನೆಯಲ್ಲಿ ಕುಳಿತು ಉದ್ದಿನ ಬೇಳೆಯನ್ನು ಬೇಯಿಸಿ ಕೊಂಡು ತಿನ್ನುತ್ತಿದ್ದನಂತೆ. ಅಲ್ಲಿಗೆ ಬಂದ ಅವನ ಸ್ನೇಹಿತನೊಬ್ಬ, ‘ಶ್ರೀಹರ್ಷಾ ಕಿಂ ಕರೋಷಿ?’ (ಶ್ರೀಹರ್ಷಾ
ಏನು ಮಾಡುತ್ತಿದ್ದೀಯಾ?) ಎಂದ. ಅದಕ್ಕೆ ಶ್ರೀಹರ್ಷ, ಕವಿಯಲ್ಲದ ನನ್ನ ಸ್ನೇಹಿತನೇ ಒಂದು ವಾಕ್ಯದಲ್ಲಿ ೨ ಬಾರಿ
‘ಷ’ ಕಾರವನ್ನು ಪ್ರಾಸದ ರೀತಿಯಲ್ಲಿ ಬಳಸಿದ್ದಾನ ಎಂದು ಚಿಂತಿಸಿ, ಕವಿಯಾದ ತಾನು ಕಡಿಮೆಯೇ? ಎನ್ನುತ್ತಾ ‘ಅಶೇಷ ಶೇಮುಷೀ ಮಾಷ ಮುಷಮಷ್ನಾಮಿ’ ಎಂದು ವಾಕ್ಯದಲ್ಲಿ ೫ ಬಾರಿ ‘ಷ’ ಕಾರವನ್ನು ಬಳಸಿ ಉತ್ತರಿಸುತ್ತಾನೆ.

ಅದರರ್ಥ ‘ನನ್ನ ಬುದ್ಧಿಮತ್ತೆಯ ಹೆಚ್ಚುಗಾರಿಕೆಯಿಂದ ನನ್ನ ರಚನೆಯ ಕಾವ್ಯಗಳು ಜನರನ್ನು ತಲುಪುತ್ತಿಲ್ಲ, ಹಾಗಾಗಿ ಉದ್ದಿನ ಕಾಳನ್ನು ಬೇಯಿಸಿ ತಿಂದು ನನ್ನ ಬುದ್ಧಿಮತ್ತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾನೆ (ಉದ್ದು, ಬುದ್ಧಿಯನ್ನು ಮಂದ ಮಾಡುತ್ತದೆ ಎಂಬ ಗ್ರಹಿಕೆಯಿದೆ). ಆಮೇಲೆ ಸುಲಭದ ಭಾಷೆ ಬಳಸಿ ಜನರನ್ನು ತಲುಪುವ ದೃಷ್ಟಿಯಿಂದ ಅದೇ ಕೃತಿಯನ್ನು ಮತ್ತೆ ಬರೆದಿದ್ದನಂತೆ. ಪ್ರಾಚೀನ ಕವಿಗಳ ಬುದ್ಧಿಮತ್ತೆ ಹೇಗಿರುತ್ತಿತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ.

ಸಾಯಣಾಚಾರ್ಯರು ಭೂಮಿಗೂ ಸೂರ್ಯನಿಗೂ ಇರುವ ದೂರವನ್ನು ಮತ್ತು ಚಲನೆಯ ಅವಧಿಯನ್ನು
ತಮ್ಮ ಶ್ಲೋಕವೊಂದರಲ್ಲಿ ನಿಖರವಾಗಿ ಹೇಳಿದ್ದರು. ಅದನ್ನು ಇಂದಿನ ವಿಜ್ಞಾನಿಗಳು ಪುಷ್ಟೀಕರಿಸಿದ್ದಾರೆ ಕೂಡ.
ಇವರೆಲ್ಲ ಜಗತ್ತಿನಲ್ಲಿಯೇ ಸಾಟಿಯಿಲ್ಲದ ಬೌದ್ಧಿಕ ಸಾಹಿತ್ಯವನ್ನು ರಚಿಸಿರುವ ಭಾರತದ ಹೆಮ್ಮೆಯ ಕವೀಶ್ವರರುಗಳು. ಇವರ ಸಾಹಿತ್ಯವನ್ನು ಭಾಷಾಂತರಿಸಿಕೊಂಡು ಅನೇಕ ದೇಶಗಳ ಸಾಹಿತ್ಯಾಸಕ್ತರು ಅದರೊಳಗೆ ಅಡಗಿರುವ
ವೈಜ್ಞಾನಿಕತೆಯನ್ನು ಅರಿಯಲು ಇಂದಿಗೂ ಅಧ್ಯಯನ ಮಾಡುತ್ತಿದ್ದಾರೆ.

ಅಷ್ಟು ಯೋಗ್ಯತೆಯಿರುವ ಸಂಪಾದಿತ ಸಾಹಿತ್ಯಗಳು ಅವು. ನಾವು ಮಾತ್ರ ಈ ಸಾಹಿತ್ಯಗಳು ಸಂಸ್ಕೃತದಲ್ಲಿವೆ ಎನ್ನುವ ಕಾರಣಕ್ಕೆ ಅಸ್ಪೃಶ್ಯ ಭಾವದಿಂದ ನೋಡುತ್ತಾ ಪ್ರಯೋಜನ ವಿಹೀನರಾಗುತ್ತಿದ್ದೇವೆ. ಇನ್ನು, ಆಚಾರ್ಯ ತ್ರಯರ (ಶಂಕರ-ರಾಮಾನುಜ-ಮಧ್ವ) ಅದ್ಭುತ ಕೃತಿಗಳನ್ನು ಅವಲೋಕಿಸಿದರೆ ಮತ್ತೊಂದು ಶ್ರೇಷ್ಠ ಸಾಹಿತ್ಯ ಸರಣಿ ಸಿಗುತ್ತದೆ. ಅದರಲ್ಲೂ, ಶಂಕರಾಚಾರ್ಯರ ಕವಿತ್ವವನ್ನು ನೋಡಿದರೆ ಇದು ಮನುಷ್ಯಮಾತ್ರರಿಗೆ ಸಾಧ್ಯವಾ ಎಂದು ಅಚ್ಚರಿ ಯಾಗುತ್ತದೆ. ಕೇವಲ 32ವರ್ಷಗಳ ಜೀವಿತಾವಧಿಯಲ್ಲಿ ಭಾಷ್ಯತ್ರಯಗಳನ್ನು, ಅಮೋಘ-ಅರ್ಥಪೂರ್ಣ- ಅಪರಿಮಿತ ಸ್ತೋತ್ರಸಾಹಿತ್ಯ ರಾಶಿಯನ್ನು ಅವರು ಸೃಜಿಸಿ ಸಮಾಜಕ್ಕೆ ಉಪಕರಿಸಿದ್ದಾರೆ. ಇನ್ನು, ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿ ಹೇಳುವುದಾದರೆ, ಕ್ರಿ.ಶ. 850-1000ದ ಅವಧಿಯನ್ನು ‘ಸ್ವರ್ಣಯುಗ’ ಎನ್ನಬಹುದು. ಇದು ಚಂಪೂ ಕೃತಿಗಳು ಮೈದಳೆದು ಬೆಳಗಿದ ಕಾಲ. ಮಹಾಕವಿ ಪಂಪ ಈ ಕಾಲಘಟ್ಟದವ. ಮುಂದೆ ಕುಮಾರವ್ಯಾಸ, ರನ್ನ, ಲಕ್ಷ್ಮೀಶ ಮುಂತಾಗಿ ನೂರಾರು ಕವಿಗಳನ್ನು ಹೆಸರಿಸಬಹುದು. ಉತ್ತರ ಭಾರತದ ಭಾರತೀಯ ಭಾಷೆಗಳು ಇನ್ನೂ ವಿಕಸನ ಹೊಂದಿರದಿzಗಲೇ ದಕ್ಷಿಣದ ಕನ್ನಡ ನೆಲದಲ್ಲಿ ಸಾಹಿತ್ಯ ವೈಭವ ಮೆರೆದಿತ್ತು.

ವಾಲ್ಮೀಕಿ-ವ್ಯಾಸರು ಬಂದು ಸಾವಿರಾರು ವರ್ಷಗಳು ಸಂದಿವೆಯಲ್ಲ, ಇಷ್ಟು ದೀರ್ಘಕಾಲದಲ್ಲಿ ವಾಲ್ಮೀಕಿ-
ವ್ಯಾಸರಷ್ಟು ‘ಕ್ಯಾಲಿಬರ್’ ಇರುವ ಮತ್ತೊಬ್ಬರು ಯಾಕೆ ಹುಟ್ಟಲಿಲ್ಲ? ರಾಮಾಯಣ ಮಹಾಭಾರತದಂಥ ಕೃತಿಗಳು
ಯಾಕೆ ಮತ್ತೆ ಬರುತ್ತಿಲ್ಲ? ಬಿಡಿ, ವಾಲ್ಮೀಕಿ-ವ್ಯಾಸರಿಗೆ ಅತಿಮಾನುಷ ಶಕ್ತಿಯಿತ್ತು ಎಂದುಕೊಳ್ಳೋಣ; ಆದರೆ,
ಪಂಪ-ರನ್ನರಂಥವರು, ಬೇಂದ್ರೆ-ಮಾಸ್ತಿಯಂಥವರಾದರೂ ಹುಟ್ಟಿ ಬರಬಹುದಾಗಿತ್ತಲ್ಲ, ಯಾಕೆ ಬರುತ್ತಿಲ್ಲ?
ಅನಾದಿಕಾಲದಲ್ಲಿ ಅವತರಿಸಿದ ಗಂಗಾ, ಸಿಂಧು ನದಿಗಳು ಮತ್ತು ಹಿಮವತ್ ಪರ್ವತಗಳು ಮತ್ತೆ ಹೇಗೆ ಹುಟ್ಟಲಾ ರವೋ ವ್ಮಾಯದ ವಿಷಯದಲ್ಲೂ ಹಾಗೆಯೇ; ಹಿಂದೆ ಆದ ಸಾರ್ವಕಾಲಿಕ ಮೌಲಿಕ ರಚನೆಗಳು ಮತ್ತೆ
ಬರಬೇಕೆಂದಿಲ್ಲ ಎನ್ನುವುದೇ ಇದಕ್ಕೆ ಉತ್ತರ ಎನ್ನುತ್ತಾರೆ ಡಿವಿಜಿಯವರು.

ವೇದಕಾಲದ ಸಾಹಿತ್ಯ, ರಾಮಾಯಣ, ಮಹಾಭಾರತ ಮತ್ತು ರಘುವಂಶ ಮುಂತಾದ ಮೌಲಿಕ ಕಾವ್ಯಗಳೇ
ಈಗಲೂ ನಮಗೆ ಮೂಲದ್ರವ್ಯವಾಗಿ, ಅವುಗಳಲ್ಲಿರುವ ಕಾಲಾತೀತ ಮಹದ್ದರ್ಶನಗಳೇ ಇಂದಿನ ಪೀಳಿಗೆಗೆ ಮೂಲ ಸ್ಪೂರ್ತಿಯಾಗಬೇಕಾಗಿತ್ತು. ಅಯಾ ಕಾಲದ ಸಾ ಹಿತಿಗಳು ಆ ಮೂಲಸಾಮಗ್ರಿಗಳನ್ನು ಉಳಿಸಿ ಕೈಲಾದಷ್ಟು ಬೆಳೆಸಬೇಕಾಗಿತ್ತು. ಆದರೆ, ಇವತ್ತಿನ ಸಂದರ್ಭ ಹೇಗಿದೆಯೆಂದರೆ, ಮೂಲವನ್ನು ಪೂರ್ವಗ್ರಹ ಪೀಡಿತವಾದದ್ದು, ಹಳೆಯದು ಮತ್ತು ಅದು ಇಂದಿನ ಕಾಲಕ್ಕೆ ಪ್ರಸ್ತುತವಲ್ಲ ಎನ್ನುವ ಕಾರಣಕ್ಕೆ ನಾವು ಅಲ್ಲಗಳೆದು ದೂರವಿಟ್ಟಾಗಿದೆ. ಹಾಗಂತ ಯಾವುದನ್ನು ಅಪ್ಪಿಕೊಳ್ಳಬೇಕು ಎಂದು ಕೇಳಿದರೆ ‘ಹೊಸತಾವುದೂ ಸಿಗುತ್ತಿಲ್ಲ’ ಎನ್ನುವಂತಾಗಿದೆ.

ಪ್ರಾಚೀನ ವೇದಸಾಹಿತ್ಯ, ರಾಮಾಯಣ, ಮಹಾಭಾರತದ ಬಗ್ಗೆ ಇಂದು ಬರೆದರೆ, ಅದು ವೈದಿಕ ಸಾಹಿತ್ಯವಾಗಿ ಬಿಡುತ್ತದೆ. ಅಂಥವನು ಜಾತಿವಾದಿಯಾಗಿಬಿಡುತ್ತಾನೆ ಮತ್ತು ಅವನು ಯಾವುದೇ ಪ್ರಶಸ್ತಿಯನ್ನು ನಿರೀಕ್ಷಿಸುವಂತಿಲ್ಲ ನೋಡಿ! ಇನ್ನು ನಮಗಿದ್ದ ಸಾಂಪ್ರದಾಯಿಕ ವಿದ್ವತ್ತನ್ನು ನವ್ಯ, ಬಂಡಾಯ, ಆಸ್ತಿಕತೆ, ನಾಸ್ತಿಕತೆ, ಜಾತಿ, ಧರ್ಮ ಇವುಗಳ ನಡುವಿನ ಹೊಡೆದಾಟದಲ್ಲಿ ಉದ್ದೇಶಪೂರ್ವಕವಾಗಿ ಕೊಲೆಮಾಡಿ ಬಹಳ ಕಾಲವಾಯಿತು. ಡಿ.ವಿ.ಗುಂಡಪ್ಪನವರು, ಬೇಂದ್ರೆ, ಮಾಸ್ತಿ ಮತ್ತು ಕುವೆಂಪು ಮುಂತಾದ ರಸಋಷಿಗಳಿಗೆ ಪ್ರಾಚೀನ ಸಂಸ್ಕೃತದ ಸಾಹಿತ್ಯದ ಜತೆಗೆ ಇಂಗ್ಲಿಷ್ ಕೂಡ ಸೇರಿ ಅನೇಕ ಭಾಷೆಗಳ ಸಮಕಾಲೀನ ಸಾಹಿತ್ಯದ ತಲಸ್ಪರ್ಶಿ ಅಧ್ಯಯನವಿತ್ತು ಎಂಬುದು ತಿಳಿದುಬರುತ್ತದೆ. ಆದರೆ, ಸಂಸ್ಕೃತ ಅಥವಾ ಹಳೆಗನ್ನಡದ ಸಮಗ್ರ ಅಧ್ಯಯನವಿರುವ ಸಾಹಿತಿಗಳೆನಿಸಿ ಕೊಂಡವರು ಎಷ್ಟು ಜನ ನಮಗಿಂದು ಸಿಗುತ್ತಾರೆ?

ಇತ್ತೀಚೆಗೆ ಪುತ್ತಿಗೆ ಶ್ರೀಗಳು ‘ಸಂಸ್ಕೃತ ಓದದಿದ್ದವರು ಯಾರೂ ಸ್ವರ್ಗಕ್ಕೆ ಹೋಗಲಾಗದು’ ಎಂದಿದ್ದರು ಮತ್ತು
ಅದನ್ನು ವಿವಾದ ಎನ್ನುವಂತೆ ಸಾಮಾಜಿಕ ಜಾಲತಾಣಗಳು ಬಿಂಬಿಸಿದ್ದವು. ಸಂಸ್ಕೃತ ತಿಳಿಯದವರಿಗೆ ಸ್ವರ್ಗಕ್ಕೆ ಎಂಟ್ರಿ ಸಿಗುತ್ತೋ ಇಲ್ಲವೋ ದೇವರೇ ಹೇಳಬೇಕು. ಆದರೆ, ಪ್ರಾಚೀನ ಸಾಹಿತ್ಯದ ತಾಯಿಬೇರಾದ ಸಂಸ್ಕೃತ ಭಾಷೆ ಯನ್ನು ನಿರ್ಲಕ್ಷಿಸಿದರೆ ಅಥವಾ ಸಂಸ್ಕೃತ ಸಾಹಿತ್ಯವನ್ನು ಉಪೇಕ್ಷಿಸಿದರೆ ಅರ್ವಾಚೀನ ಸಾಹಿತ್ಯ ಪ್ರಪಂಚಕ್ಕೆ ಜೀವನವಂತೂ ಸಿಗಲಾರದು ಎಂದು ಖಂಡಿತವಾಗಿ ಹೇಳಬಹುದು.

ಹೊಸ ಚಿಗುರುಗಳು ಹಳೇಬೇರಿನ ವ್ಯಾಖ್ಯಾನವಾಗಲು ಮಾತ್ರ ಸಾಧ್ಯ, ಮೂಲಕ್ಕೆ ಬೇರಿನತ್ತಲೇ ಮರಳಬೇಕಾಗುತ್ತದೆ.
ಬೇರಿನ ಪರಿರಕ್ಷಣೆಯಿಲ್ಲದೆ ಚಿಗುರು ಬಹಳ ಕಾಲ ಬದುಕಿರುವುದು ಅಸಾಧ್ಯ ಕೂಡ. ಬೇರಿಗೆ ಪೆಟ್ಟು ಬಿದ್ದರೆ, ಅದರ ನೋವಿನ ಅನುಭವ ಬೇರಿಗಿಂತ ಚಿಗುರಿಗೇ ಹೆಚ್ಚು ಎನ್ನುವುದನ್ನು ಅರ್ಥಮಾಡಿಕೊಂಡು, ಶ್ರೀಮಂತವಾದ ಮೂಲ ಬೇರಿಗೆ (ಪ್ರಾಚೀನ ಸಾಹಿತ್ಯ ಪರಂಪರೆಗೆ) ಪೆಟ್ಟು ಬಿದ್ದು ಘಾಸಿಯಾಗದಂತೆ ನಾವು ನೋಡಿಕೊಳ್ಳಬೇಕಿದೆ. ಮುಂದಿನ ಪೀಳಿಗೆಗೆ ಭಾರತೀಯ ಸಾಹಿತ್ಯಕ ಇತಿಹಾಸದ ಕುರಿತು ಪ್ರೀತಿ ತುಂಬುವ ಜವಾಬ್ದಾರಿಯನ್ನು ಈ ಕಾಲದ ಸಾಹಿತಿಗಳು ತೆಗೆದುಕೊಳ್ಳಬೇಕಾಗಿದೆ ಮತ್ತು ಭಾರತೀಯ ಸಾಹಿತ್ಯ ಪರಂಪರೆಯ ಕುರಿತು ಯುವಪೀಳಿಗೆಯಲ್ಲಿ ಹೆಮ್ಮೆ ಮೂಡು ವಂತೆ ಮಾಡಿ, ಪ್ರಾಚೀನರು ನಮಗಿತ್ತು ಹೋದ ಈ ಅಮೂಲ್ಯ ಪರಂಪರೆಯು ಮುಂದಿನ ಪೀಳಿಗೆಗೆ ಯಥಾವತ್ತಾಗಿ ವರ್ಗಾವಣೆಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಆಗ ಮಾತ್ರವೇ ನಮ್ಮ ಪೂರ್ವಿಕರ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸಿದಂತಾಗುತ್ತದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)