Saturday, 9th November 2024

Saleema Imtiaz: ಅಂತಾರಾಷ್ಟ್ರೀಯ ಮಹಿಳಾ ಅಂಪೈರ್ ಆಗಿ ನಾಮನಿರ್ದೇಶನಗೊಂಡ ಪಾಕ್‌ನ ಸಲೀಮಾ

Saleema Imtiaz

ದುಬೈ: ಈಗಾಗಲೇ ಪುರುಷರ ಕ್ರಿಕೆಟ್‌ನಲ್ಲಿಯೂ ಮಹಿಳಾ ಅಂಪೈರ್‌ಗಳು ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ. ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳೆ ಎಂಬ ಕೀರ್ತಿ ಕಿಮ್ ಕಾಟನ್‌ಗೆ ಸಲ್ಲುತ್ತದೆ. ಇದೀಗ ಪಾಕಿಸ್ತಾನದ ಸಲೀಮಾ ಇಮ್ತಿಯಾಜ್(Saleema Imtiaz) ಅವರು ಐಸಿಸಿ ಅಂತಾರಾಷ್ಟ್ರೀಯ ಅಭಿವೃದ್ಧಿ ಅಂಪೈರ್‌ಗಳ ಸಮಿತಿಗೆ ನಾಮನಿರ್ದೇಶನಗೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಐಸಿಸಿ ಮಹಿಳಾ ಈವೆಂಟ್‌ಗಳಲ್ಲಿ ಅಂಪೈರಿಂಗ್ ಕ್ಷೇತ್ರಕ್ಕೆ ಆಯ್ಕೆಯಾದ ಮೊದಲ ಪಾಕಿಸ್ತಾನಿ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸಲೀಮಾ(umpire Saleema Imtiaz) ಅಂಪೈರ್‌ಗಳ ಸಮಿತಿಗೆ ನಾಮನಿರ್ದೇಶನಗೊಂಡ ವಿಚಾರವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ತನ್ನ ಅಧಿಕೃತ ಪ್ರಕಟನೆಯಲ್ಲಿ ಪ್ರಕಟಿಸಿದೆ. “ಇಮ್ತಿಯಾಜ್ ಅವರ ಸಾಧನೆಯು ಪಾಕಿಸ್ತಾನದ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಲಿದೆ” ಎಂದು ಪಿಸಿಬಿ ತಿಳಿಸಿದೆ.

ಅಂಪೈರ್‌ಗಳ ಸಮಿತಿಗೆ ನಾಮನಿರ್ದೇಶನಗೊಂಡ ಬಳಿಕ ಪ್ರತಿಕ್ರಿಯೆ ನೀಡಿದ ಸಲೀಮಾ,”ಇದು ಕೇವಲ ನನ್ನ ಗೆಲುವಲ್ಲ, ಇದು ಪಾಕಿಸ್ತಾನದ ಪ್ರತಿಯೊಬ್ಬ ಮಹಿಳಾ ಕ್ರಿಕೆಟಿಗರು ಮತ್ತು ಅಂಪೈರ್‌ಗಳ ಗೆಲುವು. ನನ್ನ ಯಶಸ್ಸು ಕ್ರೀಡೆಯಲ್ಲಿ ತಮ್ಮ ಛಾಪು ಮೂಡಿಸುವ ಕನಸು ಕಾಣುವ ಅಸಂಖ್ಯಾತ ಮಹಿಳೆಯರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ Pakistan Super League : ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌

ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ನನ್ನ ಸ್ವಂತ ಕನಸಾಗಿತ್ತು. ನಾನು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನೊಂದಿಗೆ ಅವಕಾಶಗಳನ್ನು ಹೊಂದಿದ್ದೇನೆ. ಆದರೆ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಣೆ ಮಾಡುವುದು ಯಾವಾಗಲೂ ಅಂತಿಮ ಗುರಿಯಾಗಿದೆ ಎಂದು ಸಲೀಮಾ ಹೇಳಿದ್ದಾರೆ.

ಸೋಮವಾರದಿಂದ ಮುಲ್ತಾನ್‌ನಲ್ಲಿ ಆರಂಭವಾಗಲಿರುವ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸಲಿಮಾ ಇಮ್ತಿಯಾಜ್‌ ಕಾರ್ಯನಿರ್ವಹಿಸಲಿದ್ದಾರೆ. ಇದು ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಅಂಪಾಯರಿಂಗ್‌ ಆಗಿದೆ.

ಸಲಿಮಾ ಅವರ ಅಂಪೈರಿಂಗ್‌ ಜರ್ನಿ ಆರಂಭವಾದದ್ದು 2008 ರಲ್ಲಿ. ಪಾಕಿಸ್ತಾನದ ಹಲವು ದೇಶೀಯ ಕ್ರಿಕೆಟ್‌ ಟೂರ್ನಿಯಲ್ಲಿ ಅವರು ಅಂಪೈರಿಂಗ್‌ ಮಾಡಿದ ಅನುಭವ ಹೊಂದಿದ್ದಾರೆ. ಸಲಿಮಾ ಅವರ ಮಗಳು ಕೈನಾತ್ ಪಾಕಿಸ್ತಾಮ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯಾಗಿದ್ದಾರೆ. ಕೈನಾತ್ ಪಾಕಿಸ್ತಾನ ಪರ 19 ಏಕದಿನ ಮತ್ತು 21 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕೈನಾತ್‌ ಆಲ್‌ರೌಂಡರ್‌ ಆಗಿದ್ದಾರೆ.