ಗೌರಿಬಿದನೂರು : ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಭಾರತರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಸಂವಿಧಾನದ ಪೀಠಿಕೆ ಓದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ಡಾ.ಕೆ.ವಿ.ಪ್ರಕಾಶ್ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಅದರ ಮೌಲ್ಯಗಳು ಹಾಗೂ ತತ್ವಗಳನ್ನು ಎತ್ತಿ ಹಿಡಿ ಯಲು ಪ್ರತಿವರ್ಷ ಸಪ್ಟೆಂಬರ್ ೧೫ರಂದು ಪ್ರಪಂಚಾದ್ಯಂತ ಈ ದಿನವನ್ನು ಆಚರಿಸುತ್ತಾರೆ. ಪ್ರಜಾಪ್ರಭುತ್ವ ಸರ್ಕಾರದ ಪ್ರಧಾನವಾದ ರೂಪವಾಗಿದ್ದು, ವಿಶ್ವಸಂಸ್ಥೆಯ ಪ್ರಕಾರ, ಈ ದಿನವೂ ವಿಶ್ವದಲ್ಲಿನ ಪ್ರಜಾಪ್ರಭುತ್ವದ ಸ್ಥಿತಿಯನ್ನು ತಿಳಿಯಲು ಅವಕಾಶವನ್ನು ಒದಗಿಸಿದೆ. ಪ್ರಜಾಪ್ರಭುತ್ವದ ಆದರ್ಶವನ್ನು ಎಲ್ಲರೂ,ಎಲ್ಲೆಡೆ ಪಾಲಿಸುವ ದಿನವಾಗಿದೆ. ೧೯೯೭ ಸೆಪ್ಟೆಂಬರ್ ೧೫ರಂದು ಇದನ್ನು ಅಂಗೀಕರಿಸಲಾಗಿದೆ.
ಇದು ಕ್ರಿಯಾತ್ಮಕ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಅಂಗೀಕರಿಸುವ ದಿನವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತಕ್ಕೆ ಈ ದಿನವೂ ಆಡಳಿತ ಮಾದರಿಯ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯಲು ಮಹತ್ವದ ದಿನವಾಗಿದೆ.ಈ ದಿನದ ಬೆಂಬಲಕ್ಕಾಗಿ ಸಮಾನತೆ ಮತ್ತು ಏಕತೆಯ ಪ್ರತೀಕವಾಗಿ ಮಾನವ ಸರಪಳಿ ಯನ್ನು ರಚಿಸಲಾಗುವುದು. ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ವಿಶ್ವದ ಮಹತ್ವದ ದಿನವಾಗಿದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಎಂ.ಶೋಭಾ ಮಾತನಾಡಿ, ಭಾರತ ರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ೧೯೬೮ ರಿಂದ ಪ್ರತಿವರ್ಷ ಸೆಪ್ಟೆಂಬರ್ ೧೫ನೇ ತಾರೀಕನ್ನು ಭಾರತದಲ್ಲಿ ಅಭಿಯಂತರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಈ ಮೂಲಕ ವಿಶ್ವೇಶ್ವರಯ್ಯನವರ ಜೀವನ ಮತ್ತು ಅವರ ಅಮೋಘ ಸಾಧನೆಯನ್ನು ಸ್ಮರಿಸಿಕೊಳ್ಳುವ ಮಹತ್ವದ ದಿನವಾಗಿದೆ.
ಇದನ್ನೂ ಓದಿ: Vishweshwar Bhat Column: ‘ಶಿನ್ರಿನ್ ಯೋಕು’ ಅಂದ್ರೆ ಏನು?
ಇವರು ಮಹಾನ್ ಮೇಧಾವಿ, ಖ್ಯಾತ ತಂತ್ರಜ್ಞ, ಅಮರ ವಾಸ್ತುಶಿಲ್ಪಿಯಾಗಿ, ಅಪ್ಪಟ ದೇಶಪ್ರೇಮಿಯಾಗಿ,ವಿಶ್ವ ವಿಖ್ಯಾತ ಶ್ರೇಷ್ಠ ಇಂಜಿನಿಯರ್ ಆಗಿದ್ದರು ಮತ್ತು ಕರುನಾಡಿನ ಜನತೆಗೆ ಜೀವ ಜಲ ಕಾವೇರಿಯನ್ನು ನೀಡಿದ ಕರ್ನಾಟಕದ ಭಗೀರಥ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಭಾರ್ಗವಿ, ಸಂಧ್ಯಾ,ಸಾಯಿ ಪ್ರಿಯ ಮತ್ತು ಚಂದ್ರಮ್ಮ ಉಪಸ್ಥಿತರಿದ್ದರು. ಪುಟಾಣಿಗಳು ಬಾಬಾ ಸಾಹೇಬರಿಗೆ ಮತ್ತು ಸರ್ ಎಂ.ವಿ ರವರಿಗೆ ಪುಷ್ಪ ನಮನ ಮಾಡಿದರು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಮಾನವ ಸರಪಳಿಯನ್ನು ರಚಿಸಿದ್ದರು.