Thursday, 21st November 2024

Roopa_Gururaj_Column: ಮುಂದಿಟ್ಟ ಹಾಲನ್ನು ತಿರಸ್ಕರಿಸಿದ ರಾಮಕೃಷ್ಣನ ಬೆಕ್ಕು

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಮ್ಮೆ ಕೃಷ್ಣದೇವರಾಯ ಹತ್ತಾರು ಜನರಿಗೆ ಸಣ್ಣ‌ ಬೆಕ್ಕಿನ ಮರಿಗಳನ್ನು ಕೊಟ್ಟು, ಅವನನ್ನು ಸಾಕಲು ಅನುಕೂಲ ವಾಗುವಂತೆ ಒಂದೊಂದು ಹಸುವನ್ನು ಕೊಟ್ಟ.

“ಮಹಾಪ್ರಭೂ ನನಗೂ ಒಂದು ಬೆಕ್ಕಿನ ಮರಿ ಕೊಡಿ” ಎಂದ ತೆನಾಲಿ ರಾಮಕೃಷ್ಣ. ಅರಸ ಅವನಿಗೂ ಒಂದು ಮರಿ ಮತ್ತು ಹಸುವನ್ನು ಕೊಟ್ಟು “ನಿಮ್ಮಲ್ಲಿ ಬೆಕ್ಕನ್ನು ಯಾರು ಚೆನ್ನಾಗಿ ಬೆಳೆಸುತ್ತೀರೋ ಅವರಿಗೆ ಬಹುಮಾನ ಕೋಡ್ತಿನಿ ಎಂದ. ಮೂರು ತಿಂಗಳ ಬಳಿಕ ರಾಜನ ಆಜ್ಞೆಯಂತೆ ಎಲ್ಲರೂ ಬೆಕ್ಕುಗಳನ್ನು ಕರೆತಂದರು. ಬೆಕ್ಕುಗಳಿಗೆಂದು ರಾಣಿ ವಾಸದವರು ಒಂದೊಂದು ಬಟ್ಟಲು ಹಾಲನ್ನಿಟ್ಟರು.

ಇದನ್ನೂ ಓದಿ: Roopa Gururaj Column: ಮೂಷಕ ವಾಹನ ಗಜಾನನ

ಬೇರೆಲ್ಲ ಬೆಕ್ಕುಗಳು ಹಾಲನ್ನು ಕುಡಿಯಲಾರಂಭಿಸಿದಾಗ ರಾಮಕೃಷ್ಣನ ಬೆಕ್ಕು ಮಾತ್ರ ಸಿರ್ ಎಂದು ಮುಖ ತಿರುಗಿ ಸಿತು. ಅದನ್ನು ಕಂಡ ಅರಸ ಕೇಳಿದ “ರಾಮಕೃಷ್ಣ, ನಿನ್ನ ಬೆಕ್ಕೇಕೆ ಹಾಲು ಕುಡಿಯುತ್ತಿಲ್ಲ?” “ಮಹಾಪ್ರಭೂ, ಬೆಕ್ಕು ಗಳಿಗೆ ಕಣ್ಣು ಮುಚ್ಚಿ ಹಾಲು ಕುಡಿಯೋದೊಂದು ದುರಭ್ಯಾಸ. ನನ್ನ ಬೆಕ್ಕು ಹಾಗೆ ಮಾಡಬಾರದೂಂತ ಮೊದಲ ದಿನ ಬಿಸಿ ಹಾಲನ್ನ ಕೊಟ್ಟೆ. ಕುಡಿದಾಗ ಅದರ ಮೀಸೆ ಸುಟ್ಟಿತು.

ಮತ್ತೆ ಪ್ರತಿದಿನವೂ ಹಾಗೆ ಮಾಡಿದೆ. ಈಗ ಬೆಕ್ಕು ಹಾಲನ್ನೇ ಕುಡಿಯೊದಿಲ್ಲ” ಎಂದ ರಾಮಕೃಷ್ಣ. “ಆದರೆ ನಿನ್ನ ಬೆಕ್ಕು ಬೇರೆಲ್ಲ ಬೆಕ್ಕುಗಳಿಗಿಂತ ದಪ್ಪವಾಗಿದೆಯಲ್ಲಾ. ಅದು ಹೇಗೆ?” ಎಂದು ಪ್ರಶ್ನಿಸಿದ ಅರಸ.

“ಮಹಾಸ್ವಾಮೀ, ಪ್ರಾಣಿಗಳು ತಮ್ಮ ಆಹಾರಕ್ಕೆ ಇನ್ನೊಬ್ಬರನ್ನು ಅವಲಂಬಿಸೊಲ್ಲ. ಹಾಲಿಲ್ಲದಿದ್ದರೇನಂತೆ? ನನ್ನ ಬೆಕ್ಕು ಪ್ರತಿದಿನವೂ ಬೇಕಾದಷ್ಟು ಇಲಿ ಮತ್ತು ಪಾರಿವಾಳಗಳನ್ನು ತಿನ್ನುತ್ತಿತ್ತು. ಅದಕ್ಕೇ ಅದು ದಪ್ಪವಾಗಿದೆ” ಎಂದ ರಾಮಕೃಷ್ಣ. ರಾಜ ಸುಪ್ರಿತನಾಗಿ “ಈ ಬೆಕ್ಕು ನಮಲ್ಲೇ ಇರಲಿ” ಎಂದ.

“ಬೆಕ್ಕಿನ ಹಿಂದೆ ಬಂದ ಹಸು? ಎಂದು ಕೇಳಿದ ರಾಮಕೃಷ್ಣ. “ಅದು ಗೋದಾನ. ಹಸು ನಿನಗೆ ಇರಲಿ” ಎಂದು ನಕ್ಕು ನಡೆದ ಅರಸ. ತೆನಾಲಿರಾಮಕೃಷ್ಣನ ಈ ಕಥೆ ನಾವು ಅನೇಕ ಬಾರಿ ಮಕ್ಕಳಿಗೆ ಹೇಳಿದ್ದೇವೆ ಅವನ ಜಾಣತನಕ್ಕೆ ತೀಕ್ಷ್ಣ ಬುದ್ಧಿಗೆ ಮೆಚ್ಚಿಗೆ ಕೂಡ ಸೂಚಿಸಿದ್ದೇವೆ. ಆದರೆ ರಾಮಕೃಷ್ಣ ಬೆಕ್ಕನ್ನು ಸಾಕಿದ ರೀತಿ ಒಂದು ಒಳಾರ್ಥವನ್ನು ನಮಗೆ ತಿಳಿಸಿಕೊಡುತ್ತದೆ ಅನಿಸುವುದಿಲ್ಲವೇ? ಎಲ್ಲರಂತೆ ಅವನು ಬೆಕ್ಕಿಗೆ ನಿತ್ಯವೂ ಹಾಲನ್ನು ಕೊಟ್ಟು ಮನೆಯಲ್ಲೇ ಅದು ಬೆಳೆಯಲು ಅವಕಾಶ ಮಾಡಿಕೊಡದೆ, ಪ್ರಾಣಿ ಧರ್ಮದಂತೆ ನಿತ್ಯವೂ ಅದು ಬೇಟೆಯಾಡಿ ಬದುಕು ವುದನ್ನು ಅದಕ್ಕೆ ಕಲಿಸಿಕೊಟ್ಟ. ಅದರಿಂದಾಗಿ ಆ ಬೆಕ್ಕು ಆಹಾರಕ್ಕಾಗಿ ಅವನ ಮೇಲೆ ಅವಲಂಬಿತವಾಗಿದೆ ತನ್ನ ಆಹಾರವನ್ನು ತಾನೇ ಬೇಟೆಯಾಡಿ ತಿನ್ನುವುದನ್ನು ರೂಢಿಸಿಕೊಂಡಿತು.

ನಮ್ಮ ಮಕ್ಕಳಿಗೂ ಕೂಡ ನಾವು ಇಂಥದ್ದೇ ಒಂದು ಜೀವನ ಕಲೆಯನ್ನು ಕಲಿಸಬೇಕು ಅಲ್ಲವೇ? ನಾವು ಎಷ್ಟೇ ಐಶ್ವರ್ಯವಂತ ರಾಗಿದ್ದರೂ, ಅನುಕೂಲಸ್ಥರಾಗಿದ್ದರೂ ಕೂಡ ನಾಳೆ ನಮ್ಮ ಮಕ್ಕಳು ಅವರ ಅನ್ನವನ್ನು ಅವರೇ ಸಂಪಾದಿಸಿಕೊಳ್ಳಲು ಶಕ್ತರಾಗಿರ ಬೇಕು. ಕೂತು ತಿಂದವನಿಗೆ ಕುಡಿಕೆ ಹಣ ಸಾಲದು ಎನ್ನುವ ಗಾದೆಯಂತೆ ತಂದೆ- ತಾಯಿಗಳ ಐಶ್ವರ್ಯವನ್ನು ಅನುಭವಿಸಿ ಮೋಜು ಮಾಡುವ ಮಕ್ಕಳಿಗೆ ಯಾವುದು ಹೆಚ್ಚು ದಿನ ಉಳಿಯುವುದಿಲ್ಲ.

ಮಕ್ಕಳಿಗೆ ನಾವು ಒಳ್ಳೆಯ ವಿದ್ಯೆ-ಬುದ್ಧಿ ದುಡಿಯುವ ಕಲೆಯನ್ನು ಹೇಳಿಕೊಟ್ಟಾಗ ನಾಳಿನ ದಿನ ಅವರು ಕೂಡ ಸಮಾಜಕ್ಕೆ ಬೇಕಾದವರಾಗಿ, ನಾಲ್ಕು ಜನಕ್ಕೆ ಪ್ರತ್ಯುಪಕಾರ ಮಾಡುವಂತೆ ಬೆಳೆಯುತ್ತಾರೆ. ಆದ್ದರಿಂದಲೇ ಮಕ್ಕಳ
ಮೇಲೆ ಮಮಕಾರವೇ ಎಷ್ಟೇ ಇರಲಿ ಅವರನ್ನು ಆರಾಮದಾಯಕ ಬದುಕಿಗೆ ಒಗ್ಗಿಸಬೇಡಿ, ಕಷ್ಟ- ಸುಖ ಗೊತ್ತಾಗು ವಂತೆ ಅವರನ್ನು ಬೆಳೆಸಿ. ಬದುಕಿನ ನಾನಾ ಕಷ್ಟಗಳ ಬಗ್ಗೆ ಗೊತ್ತಾದಾಗ ಅದಕ್ಕೆ ಹೇಗೆ ನಿಭಾಯಿಸಬೇಕು ಎನ್ನುವು ದನ್ನು ಕೂಡ ಅವರು ತಿಳಿದುಕೊಳ್ಳುತ್ತಾರೆ. ಆದ್ದರಿಂದಲೇ ಮಕ್ಕಳಿಗೆ ಬದುಕುವ ಕಲೆಯನ್ನು ಹೇಳಿಕೊಡಿ, ಜೀವನ ಜ್ಞಾನವನ್ನು ತುಂಬಿ ಮುಂದೆ ಅವರ ಬದುಕನ್ನು ಅವರೇ ಆರಿಸಿಕೊಳ್ಳುತ್ತಾರೆ.