Thursday, 19th September 2024

Ishan Kishan: ಬಾಂಗ್ಲಾ ಟೆಸ್ಟ್‌ ಸರಣಿಗೂ ಮುನ್ನ ರಹಸ್ಯ ಪೋಸ್ಟ್ ಮಾಡಿದ ಇಶಾನ್‌ ಕಿಶನ್‌

Ishan Kishan

ಮುಂಬಯಿ: ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್(Ishan Kishan) ದೇಶೀಯ ಕ್ರಿಕೆಟ್ ಟೂರ್ನಿಗೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ದುಲೀಪ್ ಟ್ರೋಫಿ(Duleep Trophy) ಎರಡನೇ ಸುತ್ತಿನ ಪಂದ್ಯದಲ್ಲಿ ಇಶಾನ್ ಕಿಶನ್ (111 ರನ್, 126 ಎಸೆತ, 14 ಬೌಂಡರಿ, 3 ಸಿಕ್ಸರ್) ಶತಕ ಬಾರಿಸಿ ಮಿಂಚಿದ್ದರು. ಸದ್ಯ ಭಾರತ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿರುವ ಇಶಾನ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ರಹಸ್ಯ ಸಂದೇಶದ ಪೋಸ್ಟ್(Ishan Kishan posts) ಮಾಡಿದ್ದಾರೆ. ಅವರ ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಕೂಡ ಅಂತಿಮ ಹಂತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ಇಶಾನ್​ಗೆ ಅಂದಿನ ಕೋಚ್​ ದ್ರಾವಿಡ್​ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್​ ಕಡೆಗಣಿಸಿದ್ದರು. ಇದು ಬಿಸಿಸಿಐ(BCCI) ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡಲಿಲ್ಲ. ಜತೆಗೆ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.

ಇದನ್ನೂ ಓದಿ Virat Kohli: ದ್ರಾವಿಡ್‌ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್‌ ಕೊಹ್ಲಿ

ಇದೀಗ ದೇಶೀಯ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಮತ್ತೆ ಭಾರತ ತಂಡ ಸೇರಲು ಪ್ರಯತ್ನ ನಡೆಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯಕ್ಕೆ ಮಾತ್ರ ಬಿಸಿಸಿಐ ತಂಡ ಪ್ರಕಟಿಸಿದೆ. ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ಇನ್ನಷ್ಟೇ ತಂಡ ಪ್ರಕಟಗೊಳ್ಳಬೇಕಿದೆ. ಈ ಪಂದ್ಯದಲ್ಲಿ ಇಶಾನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನವೇ ಇಶಾನ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದುಲೀಪ್‌ ಟ್ರೋಫಿಯಲ್ಲಿ ಶತಕ ಬಾರಿಸಿದ ಮತ್ತು ಕೆಲವು ಬ್ಯಾಟಿಂಗ್‌ ನಡೆಸುವ ಫೋಟೊವನ್ನು ಹಂಚಿಕೊಂಡು ʼಅನ್‌ ಫಿನೀಶಿಂಗ್‌ ಬಿಸಿನೆಸ್ʼ (ಅಪೂರ್ಣ ವ್ಯಾಪಾರ) ಎಂದು ಬರೆದುಕೊಂಡಿದ್ದಾರೆ. ಯಾವ ಕಾರಣಕ್ಕೆ ಈ ರೀತಿ ಬರೆದುಕೊಂಡಿದ್ದಾರೆ ಎಂದು ನಿರ್ದಿಷ್ಟವಾಗಿ ತಿಳಿದು ಬಂದಿಲ್ಲ.

ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದ ಇಶಾನ್‌

ಕೆಲ ತಿಂಗಳ ಹಿಂದೆ ಇಶಾನ್‌ ಕಿಶನ್‌ ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದರು. ಇಂಡಿಯನ್ ಎಕ್ಸ್ ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಇಶಾನ್‌, “ನಾನು ಬ್ರೇಕ್ ಪಡೆದಿದ್ದೆ, ನನ್ನ ಪ್ರಕಾರ ಇದು ಸಾಮಾನ್ಯ. ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕಾದರೆ ದೇಶೀಯ ಕ್ರಿಕೆಟ್​ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ ಎನ್ನುವುದು ನನಗೆ ತಿಳಿದಿದೆ. ಆದರೆ, ಅಂದು ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದೆ. ಉತ್ತಮ ಫಾರ್ಮ್​ನಲ್ಲಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್​ ಬಿಟ್ಟು ದೇಶೀಯ ಕ್ರಿಕೆಟ್​ನಲ್ಲಿ ಆಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಕಾಕಿದ್ದರು.

Leave a Reply

Your email address will not be published. Required fields are marked *