ಕರಾಚಿ: ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ(Babar Azam) ಮತ್ತು ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ(Virat Kohli) ಮಧ್ಯೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳು ಆಗಾಗ ನಡೆಯುತ್ತಿರುತ್ತದೆ. ಕೆಲ ಪಾಕಿಸ್ತಾನಿ ಅಭಿಮಾನಿಗಳು ಬಾಬರ್ ಅವರನ್ನು ಕೊಹ್ಲಿ ಜತೆ ಹೋಲಿಕೆ ಮಾಡುತ್ತಾರೆ. ಇದೀಗ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಯೂನಿಸ್ ಖಾನ್(Younis Khan) ಈ ವಿಚಾರದಲ್ಲಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
“ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಗೆ ಸರಿಸಮನಾದ ಆಟಗಾರ ಎಂದು ಕರೆಸಿಕೊಳ್ಳುತ್ತಿದ್ದ ಬಾಬರ್, ಇದೀಗ ಘೋರ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿದ್ದಾರೆ. ತಂಡದಿಂದಲೂ ಹೊರಬೀಳುವ ಆತಂಕದಲ್ಲಿದ್ದಾರೆ. ಕೇವಲ ಕೊಹ್ಲಿ ಜತೆಗೆ ಹೋಲಿಯನ್ನು ತಲೆಯಲ್ಲಿಟ್ಟುಕೊಂಡರೆ ಸಾಲದು ಆತನಂತೆ ಆಡಬೇಕು” ಎಂದು ಬಾಬರ್‌ಗೆ ಖಡಕ್ ಆದ ಸಲಹೆ ನೀಡಿದ್ದಾರೆ. ಜತೆಗೆ ಪಾಕಿಸ್ತಾನ ಆಟಗಾರರ ಕಳಪೆ ಪ್ರದರ್ಶನದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡದ ಆಟಗಾರರದ್ದು ಆಡಕ್ಕಿಂತ ಮಾತು ಜಾಸ್ತಿ. ಹೀಗಾಗಿ ತಂಡ ಇಂದು ಈ ಸ್ಥಿತಿಗೆ ಬಂದಿದೆ. ಇನ್ನಾದರೂ ಮಾತು ಕಡಿಮೆ ಮಾಡಿ ಆಟದ ಕಡೆ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧವೂ ಸೋಲಿನ ಅಪಮಾನ ಎದುರಿಸಿತ್ತು. ಲೀಗ್ ಹಂತದಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
ಕಳೆದ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಬಾಬರ್ ಅವರು ಕೊಹ್ಲಿ ಜತೆಗಿನ ಹೋಲಿಕೆ ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡುತ್ತದೆ ಎಂದು ಹೇಳಿದ್ದರು. ಕೊಹ್ಲಿ ಮತ್ತು ಬಾಬರ್ ಉತ್ತಮ ಸ್ನೇಹಿತರಾಗಿದ್ದಾರೆ.
ಇದನ್ನೂ ಓದಿ Virat Kohli: ದ್ರಾವಿಡ್ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್ ಕೊಹ್ಲಿ
ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್ ವಿರುದ್ಧ ಪಾಕ್ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಅಫ್ರೀದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮತ್ತೆ ಬಾಬರ್‌ಗೆ ನಾಯಕತ್ವದ ಪಟ್ಟ ನೀಡಲಾಗಿತ್ತು.