ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಂದೂರಲ್ಲಿ ಒಬ್ಬ ಅಜ್ಜಿ ಇದ್ದಳು. ಅಜ್ಜಿಗೆ ಒಬ್ಬ ಮೊಮ್ಮಗ ಇದ್ದ. ಅವನ ಹೆಸರು ಪುಟ್ಟ. ಅಜ್ಜಿಗೆ ಪುಟ್ಟನನ್ನು ಕಂಡರೆ ಬಹಳ ಅಕ್ಕರೆ, ಪುಟ್ಟ, ಪಾಪು ಇದ್ದಾಗಿನಿಂದಲೂ ಮುದ್ದಾಗಿ ಬೆಳೆಸಿದ್ದಳು.
ವಯಸ್ಸಿಗೆ ಬಂದಾಗ ಸುತ್ನಾಲಕ್ಕು ಹಳ್ಳಿಲೆ ಹುಡುಕಿ ಚಂದದ ಹುಡುಗಿ ತಂದು ಮದುವೆ ಮಾಡಿದಳು. ಮನೆ ತುಂಬಿಸಿ ಕೊಂಡ ಸೊಸೆಯನ್ನು, ಮೊಮ್ಮಗನನ್ನು ನೋಡಿಕೊಂಡಷ್ಟೆ ಚೆನ್ನಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳು ತ್ತಿದ್ದಳು. ಹೀಗಾಗಿ ಸೊಸೆಗೆ ಅಜ್ಜಿಯನ್ನು ಕಂಡರೆ ತುಂಬಾ ಅಂದರೆ ತುಂಬಾ ಇಷ್ಟ. ಇವರ ಸಂಸಾರ ಕಂಡು ಊರೇ ಸಂತೋಷ ಪಟ್ಟಿತು.
ಎರಡು ಮೂರು ವರ್ಷ ಕಳೆಯಿತು. ಸೊಸೆ ಬಸುರಿಯಾದಳು. ಅಜ್ಜಿ ಹಿಗ್ಗಿ ಹೀರೇಕಾಯಿ ಯಾದಳು ಅವಳಿಗೆ ದಿನ ಕೊಂದು ಅಡಿಗೆ ಮಾಡಿ ಪಡಿಸಿ ಉಪಚಾರ ಮಾಡಿದಳು. ಮುದ್ದು ಸೊಸೆ, ಒಂದು ದಿನ ಅಜ್ಜಿ ನನಗೆ ಮೀನಿನ ಪಲ್ಯ ಬೇಕು ಎಂದಳು. ಅಜ್ಜಿಗೆ ಜಂಘಾಬಲವೇ ಉಡುಗಿ ಹೋಯಿತು. ಅಜ್ಜಿ ನಿಧಾನವಾಗಿ ಅದೆಲ್ಲ ಇಲ್ಲಿ ಸಿಗುವುದಿಲ್ಲ. ನಿನಗೆ ಬದನೆಕಾಯಿ, ಹಲಸಿನಕಾಯಿ ಪಲ್ಯ ಮಾಡಿಕೊಡುವೆ ಎಂದರೆ, ಅದೆ ನನಗೆ ಬೇಡ, ಪುಟ್ಟ ಪುಟ್ಟ ಮೀನಿನ ಪಲ್ಯ ತಿನ್ನುವ ಆಸೆ ಯಾಗಿದೆ. ಅಜ್ಜಿಗೆ ಉತ್ತರ ಕೊಡಲಾಗದೆ, ಆಯ್ತು ಸಿಕ್ಕರೆ ಮಾಡುತ್ತೇನೆ ಎಂದು ಹೇಳಿದ್ದಾಯಿತು.
ಏನು ಮಾಡುವುದೆಂದು ಅಜ್ಜಿ ಯೋಚಿಸುತ್ತಾ, ಹಿತ್ತಲಲ್ಲಿ ನೋಡಿದರೆ ದುಂಡು ಮಲ್ಲಿಗೆ, ಮೈಸೂರು ಮಲ್ಲಿಗೆ ಹೂವಿನ ಮೊಗ್ಗುಗಳು ಆಗಿದ್ದವು. ಮಲ್ಲಿಗೆ ಬಳ್ಳಿ ಹಬ್ಬಿದ ಹಾಲುವಾಣ ಮರದ ಮೇಲೆ ಹಾಲುವಾಣ ಹೂವಿನ
ಮೊಗ್ಗುಗಳು ಗೊಂಚಲು ಗೊಂಚಲು ಕಂಡವು. ಅಜ್ಜಿ ಗಮನಿಸಿ ನೋಡಿದಾಗ ಅವುಗಳೆಲ್ಲ ಪುಟ್ಟಪುಟ್ಟ ಮೀನಿ ನಂತೆ ಇತ್ತು. ಭಾರೀ ಎತ್ತರದ ಮರವೇನು ಅಲ್ಲ. ಒಂದು ಕ್ಷಣ ಯೋಚಿಸಿ ಅಜ್ಜಿ ಪುಟ್ಟ ಏಣಿಯನ್ನು ಮರಕ್ಕೆ ಒರಗಿಸಿ, ಏಣಿ ಹತ್ತಿ ಹಾಲವಾಣ ಹೂವಿನ ಮೊಗ್ಗುಗಳನ್ನು ಗೊಂಚಲು ಸಮೇತ ಕಿತ್ತುಕೊಂಡಳು. ಕೆಳಗೆ ಇಳಿದು ನೋಡಿದಾಗ ಮೀನಿನ ಮರಿಗಳಂತೆ ಇದ್ದವು. ಖುಷಿಯಾಯಿತು ಅಜ್ಜಿಗೆ.
ಮರುದಿನ ಹಾಲುವಾಣ ಮೊಗ್ಗಿನ ಪಲ್ಯವನ್ನು ಮಾಡಿ ಸೊಸೆಗೆ ಬಡಿಸಿದಳು. ಸೊಸೆ ಅದನ್ನು ಕಣ್ಣರಳಿಸಿ ನೋಡಿ ಮೀನಿನ ಮರಿಗಳಂತೆ ಇದ್ದವು. ಅಜ್ಜಿ ಮೀನಿನ ಪಲ್ಯ ತುಂಬಾ ಚೆನ್ನಾಗಿದೆ ಎಂದು ಊಟಮಾಡಿದಳು. ಅಜ್ಜಿಗೆ ಸೊಸೆಯ ಬಯಕೆ ಪೂರೈಸಿದೆ ಎಂಬ ತೃಪ್ತಿಯಾಯಿತು. ಸೊಸೆಗೆ ಮೀನಿನ ಪಲ್ಯ ತಿಂದ ಸಂತೋಷ.
ಅಜ್ಜಿ ಅಂದುಕೊಂಡಂತೆ, ಸೊಸೆಗೆ ಮೊಗ್ಗಿನ ಜಡೆ ಹಾಕಿ, ಹೊಸ ಸೀರೆ ಉಡಿಸಿ, ಆಭರಣ ಹಾಕಿ, ನೆರೆಹೊರೆ ಯವರನ್ನು ಕರೆದು ಆರತಿ ಮಾಡಿ ಸಿಹಿ ಹಂಚಿದಳು. ಸೊಸೆ ಕೆಲವೇ ದಿನಗಳಲ್ಲಿ ಮುದ್ದಾದ ಗಂಡು ಮಗುವಿನ ತಾಯಿಯಾದಳು, ಬಾಣಂತಿತನ ಮುಗಿಸಿ, ಮಗು ಸ್ವಲ್ಪ ದೊಡ್ಡ ಆದನಂತರ ಸೊಸೆಗೆ, ಹಿಂದಿನಿಂದ ಮನೆಯಲ್ಲಿ
ಆಚರಿಸಿಕೊಂಡು ಬಂದ ಪದ್ಧತಿ, ಸಂಸ್ಕಾರ,ನಡೆ, ನುಡಿ, ಬಂದು ಬಳಗ ,ಹಬ್ಬ-ಹುಣ್ಣಿಮೆ, ಊರಿನವರು, ಅಡಿಗೆ ತಿಂಡಿ ಎಲ್ಲವನ್ನು ಕಲಿಸಿಕೊಟ್ಟಳು. ಮಗುವಿನ ತಾಯಿಯಾದ ಸೊಸೆಗೆ ಎಲ್ಲ ಅರ್ಥವಾಗಿ ಚೆನ್ನಾಗಿ ಕಲಿತು ಕೊಂಡು ಅದೇ ರೀತಿ ನಡೆದುಕೊಂಡಳು.
ಅಜ್ಜಿಯ ಒಳ್ಳೆತನಕ್ಕೆ, ಹೊಸತಾಗಿ ಬಂದ ಸೊಸೆಗೆ ನಿಧಾನವಾಗಿ , ಎಲ್ಲವನ್ನು ಕಲಿಸಿದ ಕ್ರಮ, ಊರಿಗೆ ಮಾದರಿ ಯಾಯಿತು. ಯಾವುದೇ ಹೆಣ್ಣು ಮಗಳು ಮದುವೆಯಾಗಿ ಗಂಡನ ಮನೆಗೆ ಬಂದಾಗ ತವರು ಮನೆಯ ಪದ್ದತಿಗಿಂತ ಅತ್ತೆ ಮನೆಯ ಪದ್ಧತಿಗಳು ಬಹಳ ಭಿನ್ನವಾಗಿರುತ್ತವೆ. ಅವಳು ಬೆಳದ ರೀತಿಯೂ ಕೂಡ ಬೇರೆಯೇ . ಅಂತೆಯೇ ಆ
ಹೆಣ್ಣು ಮಗಳಿಗೆ ಸ್ವಲ್ಪ ಸಮಯಾವಕಾಶ ಕೊಟ್ಟು ನಮ್ಮ ಮನೆಯ ಪದ್ಧತಿಗಳನ್ನು ನಿಧಾನವಾಗಿ ತಿಳಿಸಿ ಮತ್ತೆ ಅವಳ ಮನೆಯ ಒಳ್ಳೆಯ ಪದ್ಧತಿಗಳನ್ನು ನಾವು ಕೂಡ ಅಳವಡಿಸಿಕೊಂಡಾಗ ಅಲ್ಲಿ ಒಂದು ಸೌಹಾರ್ದ ಕುಟುಂಬ ನೆಲೆಗೊಳ್ಳುತ್ತದೆ. ಯಾವುದು ಒಂದು ದಿನ ಒಂದು ವರ್ಷದಲ್ಲಿ ಆಗುವಂಥದ್ದು ಅಲ್ಲ. ಎಲ್ಲಕ್ಕೂ ಸಮಯ ಕೊಡಬೇಕು. ಕಾಲಾಯ ತಸ್ಮೈ ನಮಃ.
ಇದನ್ನೂ ಓದಿ: Roopa Gururaj Column: ಶಿವನ ಡಮರುಗದ ನಾದಕ್ಕೆ ಧಾರಾಕಾರ ಮಳೆ