Sunday, 15th December 2024

Vishwavani Editorial: ಮಾತೇ ಮುತ್ತು, ಮಾತೇ ಮೃತ್ಯು !

ದುಃಖ, ಆಕ್ರೋಶ, ಅಸಹನೆ, ಅಸಹಾಯಕತೆ ಮೊದಲಾದವು ಮನುಷ್ಯ ಸಹಜ ಭಾವಗಳು. ವ್ಯಕ್ತಿಯೊಬ್ಬ ತಾನು ಹಾದು ಹೋಗುತ್ತಿರುವ ಪರಿಸ್ಥಿತಿಗೆ ತಕ್ಕಂತೆ ಇಂಥ ಭಾವಗಳಲ್ಲಿ ಬಂದಿಯಾಗುವುದಿದೆ. ಅಂಥ ಪರಿಸ್ಥಿತಿಗೆ ಕಾರಣ ರಾದವರಿಗೆ ಅಥವಾ ಆ ಕ್ಷಣದಲ್ಲಿ ಎದುರಲ್ಲಿ ಇದ್ದವರಿಗೆ ಆಯಾ ಭಾವದ ಫಲಶ್ರುತಿಯನ್ನು ಆತ ಉಣಿಸುವುದಿದೆ.

ಆದರೆ ಇದು ಹಿತಮಿತವಾಗಿದ್ದರೆ ಸಾಮಾನ್ಯವಾಗಿ ಪ್ರಮಾದವಾಗದು, ಆದರೆ ಅದು ಅತಿರೇಕದ ಮಟ್ಟದಲ್ಲಿದ್ದರೆ ಸರ್ವಥಾ ಸ್ವೀಕಾರಾರ್ಹವಲ್ಲ. ಅದರಲ್ಲೂ ನಿರ್ದಿಷ್ಟವಾಗಿ, ಸಾರ್ವಜನಿಕ ಜೀವನದಲ್ಲಿರುವವರು ಇಂಥ ಭಾವಾ ವೇಶದ ಕೈಗೆ ಬುದ್ಧಿಯನ್ನು ಕೊಟ್ಟರೆ, ಅದರ ಫಲಶ್ರುತಿ ಅಸಹನೀಯವಾಗೇ ಇರುತ್ತದೆ. ಮಹಾರಾಷ್ಟ್ರದ ಶಿವಸೇನೆ ಯ ಶಾಸಕ ಸಂಜಯ್ ಗಾಯಕ್ವಾಡ್ ಆಡಿರುವ ಒಂದು ಮಾತಿನ ವಿಷಯದಲ್ಲಿ ಇಷ್ಟೆಲ್ಲಾ ಪೀಠಿಕೆ ನೀಡಬೇಕಾ ಯಿತು.

‘ಮೀಸಲಾತಿ ವಿಚಾರದಲ್ಲಿ ನಕಾರಾತ್ಮಕ ಪ್ರತಿಕ್ರಿಯೆ ನೀಡಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಾಲಗೆ ಕತ್ತರಿಸಿ ದವರಿಗೆ 11 ಲಕ್ಷ ರುಪಾಯಿ ನೀಡಲಾಗುವುದು’ ಎಂಬ ಆಣಿಮುತ್ತುಗಳನ್ನು ಉದುರಿಸಿದ್ದಾರೆ ಸಂಜಯ್ ಗಾಯಕ್ವಾಡ್. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯಭೇದ ಸಹಜ; ವ್ಯಕ್ತಿಯೊಬ್ಬನ ಗ್ರಹಿಕೆ ಅಥವಾ ಧೋರಣೆ ವ್ಯವಸ್ಥೆಗೆ ಸರಿಹೊಂದುವುದಿಲ್ಲ, ಅದು ಸ್ವೀಕಾರಾರ್ಹವಲ್ಲ ಎನಿಸಿದರೆ, ಆ ಕುರಿತಾಗಿ ಆಕ್ಷೇಪ ವ್ಯಕ್ತಪಡಿ ಸಲು ಸೂಕ್ತ ವೇದಿಕೆಗಳಿವೆ ಮತ್ತು ರೀತಿನೀತಿಗಳಿವೆ. ಆದರೆ ‘ಅಂಥವರ ನಾಲಿಗೆ ಕತ್ತರಿಸಿ’ ಎಂದು ಫರ್ಮಾನು ಹೊರಡಿಸುವುದು ಸಭ್ಯತೆಯ ಲಕ್ಷಣವೂ ಅಲ್ಲ, ಸಂಸ್ಕೃತಿಯ ಕುರುಹೂ ಅಲ್ಲ.

ಸಮಾಜದ ಯಾವುದೋ ವರ್ಗವನ್ನೋ ಅಥವಾ ಪಕ್ಷದ ವರಿಷ್ಠರನ್ನೋ ಮೆಚ್ಚಿಸಲು ಅಥವಾ ಮಾಧ್ಯಮಗಳಲ್ಲಿ ‘ಮೈಲೇಜ್’ ಗಿಟ್ಟಿಸಿಕೊಳ್ಳಲು ನಮ್ಮ ತಥಾಕಥಿತ ಜನನಾಯಕರು ಆಗಾಗ ಹೀಗೆ ತುಟಿಮೀರಿದ ಮಾತಾಡುವುದಿದೆ; ಆದರೆ ಇದು ‘ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳುವ’ ಪರಿಪಾಠಕ್ಕೆ ಮೇಲ್ಪಂಕ್ತಿಯಾಗುತ್ತದೆ ಎಂಬುದು ಇಂಥ ನಾಯಕರಿಗೆ ಅರಿವಾಗುವುದೇ ಇಲ್ಲ. ಇದು ವಿಷಾದನೀಯ. ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ
ಮಾಣಿಕ್ಯದ ದೀಪ್ತಿಯಂತಿರಬೇಕು’ ಎಂಬ ಬಸವಣ್ಣನವರ ವಚನದ ಸಾಲಿನ ಸಾರವನ್ನು ಇಂಥವರು ಗ್ರಹಿಸಿ ದಕ್ಕಿಸಿಕೊಳ್ಳುವುದು ಯಾವಾಗ ?

ಇದನ್ನೂ ಓದಿ: Doctor Murder Case: ಸಂದೀಪ್‌ ಘೋಷ್‌ ಮೇಲೆ‌ ಕೋರ್ಟ್‌ ಆವರಣದಲ್ಲೇ ಉದ್ರಿಕ್ತ ಗುಂಪಿನಿಂದ ಹಲ್ಲೆಗೆ ಯತ್ನ