Thursday, 19th September 2024

Donald Trump: ಗುಂಡಿನ ದಾಳಿ ಬೆನ್ನಲ್ಲೇ ಟ್ರಂಪ್‌ ಹತ್ಯೆಗೆ ಭಾರೀ ಸಂಚು; ರ‍್ಯಾಲಿ ಸ್ಥಳದಲ್ಲಿ ಸ್ಫೋಟಕಗಳು ಪತ್ತೆ

Donald Trump

ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಮೇಲೆ ಎರಡನೇ ಬಾರಿ ಗುಂಡಿನ ದಾಳಿ ನಡೆದಿರುವ ಬೆನ್ನಲ್ಲೇ ಮತ್ತೊಂದು ಅಟ್ಯಾಕ್‌ಗೆ ರೂಪಿಸಲಾಗಿದ್ದ ಸಂಚು ಬಯಲಾಗಿದೆ. ಬುಧವಾರ ಸಂಜೆ ಲಾಂಗ್ ಐಲ್ಯಾಂಡ್‌ನಲ್ಲಿನಿಗದಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ರ್ಯಾಲಿಯ ಸ್ಥಳದ ಸಮೀಪ ವಾಹನವೊಂದರಲ್ಲಿ ಭಾರೀ ಸ್ಫೋಟಕಗಳು ಪತ್ತೆಯಾಗಿವೆ.

ಡೈಲಿ ಮೇಲ್‌ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಯುಎಸ್ ಪೊಲೀಸರು ಭದ್ರತಾ ತಪಾಸಣೆ ವೇಳೆ ಸ್ಫೋಟಕ ತುಂಬಿದ್ದ ಕಾರೊಂದನ್ನು ಪತ್ತೆ ಮಾಡಿದ್ದಾರೆ. ಕಾರಿನ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ ಎಂದು ಹೇಳಿದೆ.

ಭಾನುವಾರವಷ್ಟೇ ಟ್ರಂಪ್‌ ಮೇಲೆ ಅನಾಮಧೇಯ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದರು. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಅವರಿಗೆ ಎದುರಾದ ಎರಡನೇ ಅಪಾಯವಾಗಿದೆ. ಅಧ್ಯಕ್ಷೀಯ ಚುನಾವಣಾ ಪ್ರಚಾರ ಮುಗಿಯಲು ಒಂದು ದಿನ ಬಾಕಿ ಇರುವಾಗ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕೋರ್ಸ್‌ನಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಗುಂಡು ಹಾರಿಸಿದವರು ಯಾರು ಎಂಬುದು ಸ್ಪಷ್ಟವಾಗಿಲ್ಲ ಮತ್ತು ಟ್ರಂಪ್ ಅವರನ್ನು ಗುರಿಯಾಗಿಸಲಾಗಿದೆ ಎಂಬುದರ ಬಗ್ಗೆ ತಕ್ಷಣದ ಸೂಚನೆಗಳಿಲ್ಲ. ಕೋರ್ಸ್ ಬಳಿಯ ಇಬ್ಬರು ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ರ್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದಾಗ ಮಾಜಿ ಅಧ್ಯಕ್ಷರ ಕಿವಿಗೆ ಗಾಯವಾದ ಎರಡು ತಿಂಗಳ ನಂತರ ಈ ಘಟನೆ ಸಂಭವಿಸಿತ್ತು.

ಈ ಸುದ್ದಿಯನ್ನೂ ಓದಿ: 2024ರ ಅಮೆರಿಕ ಅಧ್ಯಕ್ಷ ಚುನಾವಣೆ: ಸಮೀಕ್ಷೆಯಲ್ಲಿ ಟ್ರಂಪ್‌ ಮುನ್ನಡೆ