Monday, 25th November 2024

ಆಹಾರದಿಂದ ಆರೋಗ್ಯ ಜೀವಹಿತ

ಮೈಥಿಲೀ ರಾಘವನ್

ಆಹಾರವು ಜೀವಿಗಳ ದೇಹಪೋಷಣೆ-ರಕ್ಷಣೆಗಳಿಗೆ ಅತ್ಯಗತ್ಯವೆನ್ನುವುದು ಸಾಮಾನ್ಯ ಜ್ಞಾನ. ಅದು ಶಕ್ತಿರೂಪವಾಗಿ ಪರಿವರ್ತನೆ ಗೊಂಡು ಜೀವಕಣಗಳನ್ನೂ, ಅಂಗಾಂಗಗಳನ್ನೂ ರಕ್ಷಿಸುವ ಬಗೆಯನ್ನು ಶಾಲಾಮಕ್ಕಳು ಸಹ ತಿಳಿದಿರುತ್ತಾರೆ.

ಪ್ರತಿಯೊಂದು ಆಹಾರ ಪದಾರ್ಥವೂ ದೇಹದ ಯಾವ ಭಾಗಕ್ಕೆ ಯಾವ ಪೌಷ್ಟಿಕಾಂಶವನ್ನು ನೀಡಿ ಪುಷ್ಟಿಗೊಳಿಸುತ್ತದೆ, ವಯೋ ಮಾನಕ್ಕೆ ಅನುಗುಣವಾಗಿ ಯಾರಿಗೆ ಯಾವ ಪೌಷ್ಟಿಕಾಂಶಗಳು ಎಷ್ಟು ಪ್ರಮಾಣದಲ್ಲಿರಬೇಕು ಮುಂತಾದ ವಿವರಗಳು ಇಂದು ಲಭ್ಯವಿದೆ. ಹೊಸ ಹೊಸ ಆಹಾರ ಪದಾರ್ಥಗಳೂ, ತಯಾರಿಕೆಯ ಕ್ರಮಗಳೂ ಹುಟ್ಟಿಕೊಳ್ಳುತ್ತಿದ್ದಂತೆ ಆ ಬಗೆಗಿನ ಸಂಶೋಧನೆ ಗಳೂ ಮುಂದುವರಿಯುತ್ತಿವೆ. ಈ ಸಂಶೋಧನೆಗಳು ಆಹಾರಕ್ಕೂ ಭೌತಿಕ ಶರೀರಕ್ಕೂ ಇರುವ ಸಂಬಂಧವನ್ನು ಸಮಗ್ರವಾಗಿ ಅಳೆಯಬಲ್ಲವು. ಇಷ್ಟಾದರೂ ಭಾರತೀಯ ಮಹರ್ಷಿಗಳ ದೃಷ್ಟಿಯಲ್ಲಿ ಇವೆಲ್ಲವೂ ಆಹಾರದ ಪ್ರಯೋಜನ, ಪರಿಣಾಮಗಳ ಅಳತೆಯ ಏಕದೇಶಮಾತ್ರವಾಗುವುದು.

ಮಹರ್ಷಿ ದೃಷ್ಟಿ

ಭಾರತೀಯ ಮಹರ್ಷಿಗಳು ತಮ್ಮ ತಪಸ್ಯೆಯಿಂದ ಸ್ಥೂಲವಾದ, ಅಳಿದು ಹೋಗುವ ದೇಹದೊಳಗೆ ಅಳಿಯದೆ, ಅಮರವಾಗಿರುವ ಬದುಕಾದ ಪರಂಜ್ಯೋತಿಯನ್ನು ಕಂಡವರು. ಅದರ ವಿಭೂತಿಗಳಾದ ಅನೇಕಾನೇಕ ದಿವ್ಯಶಕ್ತಿಗಳನ್ನೂ(ದೇವತೆಗಳನ್ನೂ) ಕಂಡರು. ದೇಹದೊಳಗಿನ ದೇವತಾ ಸ್ಥಾನಗಳನ್ನು ದೇವತಾ ಕೇಂದ್ರ ಗಳೆಂಬುದಾಗಿ ಹೆಸರಿಸಿದರು. ದೇಹವನ್ನು ಮೂಳೆ-ಮಾಂಸ ಗಳ ತಣಿಕೆಯಾಗಿ ಮಾತ್ರವೇ ನೋಡದೆ ದೇವಾಲಯವಾಗಿಯೇ ಕಂಡರು. ಅವರ ವೈಜ್ಞಾನಿಕ ಮತಿಯು ಆಹಾರ ಪದಾರ್ಥಗಳ ಪೌಷ್ಟಿಕಾಂಶಗಳನ್ನು ಗುರುತಿಸುವುದರ ಜೊತೆಗೆ ಅವು ದೇಹದಲ್ಲಿನ ದೈವಿಕ-ಆಧ್ಯಾತ್ಮಿಕ (ಪರಂಜ್ಯೋತಿಯನ್ನು ತಲುಪುವ ಮಾರ್ಗ) ಕೇಂದ್ರಗಳ ಮೇಲೆ ಮಾಡುವ ಪರಿಣಾಮವನ್ನೂ  ಸಹ ನಿಖರವಾಗಿ ಅಳೆದು ವ್ಯಕ್ತಪಡಿಸಿತು.

ದೇವತಾ ಸಂಬಂಧ
ದೇಹದೊಳಗೆ ದೇವತಾ ಸಾನ್ನಿಧ್ಯವನ್ನನುಭವಿಸಿದ ಮಹರ್ಷಿಗಳು ಆಹಾರಗಳಿಗೂ ದೇವತೆಗಳಿಗೂ ಇರುವ ಸಂಬಂಧವನ್ನೂ ಕಂಡುಕೊಂಡರು. ಯಾವ ಪದಾರ್ಥವು ಯಾವ ದೇವತಾ ಕೇಂದ್ರವನ್ನು ತೆರೆಯಿಸುತ್ತದೆನ್ನುವುದರ ಆಧಾರದ ಮೇಲೆ ದೇವತಾ
ನೈವೇದ್ಯಕ್ಕೆ ಆಹಾರ ಪದಾರ್ಥಗಳ ಆಯ್ಕೆ ಮಾಡಿದರು. ಉದಾಹರಣೆಗೆ ಮೂಲಾಧಾರ ಸ್ಥಾನದಲ್ಲಿ ಬೆಳಗುವ ಗಣೇಶನ ದರ್ಶನಕ್ಕೆ ಕಾಯಿತುರಿ, ಬೆಲ್ಲದಿಂದ ತಯಾರಿಸುವ ಕಡುಬು ಸಹಾಯಕವಾಗುತ್ತದೆಂಬುದನ್ನರಿತರು. ಆದ್ದರಿಂದ ಆತನಿಗೆ ಅದನ್ನು ನೈವೇದ್ಯ ಮಾಡಿ ಪ್ರಸಾದವಾಗಿ ಸ್ವೀಕರಿಸುವ ಯೋಜನೆಯನ್ನು ಅಳವಡಿಸಿದರು. ಅದನ್ನೇ ಗಣೇಶನಿಗೆ ಪ್ರಿಯವೆಂಬ ಭಾಷೆಯಿಂದ ಪೂಜಾ ಪದ್ಧತಿಯಲ್ಲಿ ಗುರುತಿಸಿದ್ದಾರೆ.

ಅಂತೆಯೇ ಇನ್ನಿತರ ದೇವತೆಗಳ ವಿಷಯದಲ್ಲೂ ಇದೇ ರೀತಿಯ ಶಾಸ್ತ್ರ ಪದ್ಧತಿಗಳನ್ನು ವಿಧಿಸಿರುವುದನ್ನು ಕಾಣಬಹುದಾಗಿದೆ.
ಅಂತಹ ವಿಧಿ ವಿಧಾನಗಳ ಗುರಿಯು ದೇವತಾ ಸಂಬಂಧವೆಂಬುದನ್ನು ನಾವು ಅರಿತಾಗ, ಮಹರ್ಷಿಗಳ ಜ್ಞಾನದ ಆಳ ಮತ್ತು ವ್ಯಾಪ್ತಿಯ ಅರಿವಾಗುತ್ತದೆ.