Saturday, 23rd November 2024

Shishir Hegde Column: ಇಲ್ಲ, ಬೇಡ, No ಎಂದು ಹೇಳಲು ಹಿಂಜರಿಯಬಾರದು !

ಶಿಶಿರಕಾಲ

ಶಿಶಿರ್‌ ಹೆಗಡೆ

ಆಂಗ್ಲರು ನಮ್ಮನ್ನಾಳುತ್ತಿದ್ದ ಸಮಯದಲ್ಲಿ ಇಲ್ಲಿದ್ದ ಬ್ರಿಟಿಷ್ ಅಧಿಕಾರಿಗಳಲ್ಲಿ ಹಲವು ಸಾಹಿತಿಗಳು, ಬರಹಗಾರರು ಕೂಡ ಇದ್ದರು. ಅವರು ಬರೆದದ್ದೆಲ್ಲ ಪುಸ್ತಕಗಳಾಗಿಲ್ಲ. ಅಲ್ಲಲ್ಲಿ, ಚಿಕ್ಕ ಲೇಖನಗಳನ್ನು, ಪ್ರಬಂಧಗಳನ್ನು, ವಿವರಣೆ ಗಳನ್ನು ಅಸಂಖ್ಯ ಬ್ರಿಟಿಷರು ಬರೆದುಕೊಂಡಿದ್ದಾರೆ.

ಅವರು ಬರೆದ ಇತಿಹಾಸ ಸುಳ್ಳೇ ಇದ್ದರೂ ಈ ರೀತಿ ಬರೆದ ಹಲವು ಪ್ರಬಂಧಗಳು ಪ್ರತ್ಯೇಕವಾಗಿ ನಿಲ್ಲುತ್ತವೆ. ಅಂದು ಆ ಅಧಿಕಾರಿಗಳಿಗಿದ್ದ ಅನಿವಾರ್ಯತೆ, ಸಮಸ್ಯೆಗಳು, ಮಾನಸಿಕ ಸ್ಥಿತಿ, ನಿರಂತರ ಭಯ ಇವುಗಳ ಬಗ್ಗೆ ಅಲ್ಲಲ್ಲಿ
ಬೆಳಕು ಚೆಲ್ಲುತ್ತವೆ. ಅಂತಹುದೇ ಪ್ರಬಂಧವೊಂದರ ವಿವರಣೆಯನ್ನು ಇತ್ತೀಚೆಗೆ ರೇಡಿಯೋ ಕಾರ್ಯಕ್ರಮವೊಂದ ರಲ್ಲಿ ಕೇಳುತ್ತಿದ್ದೆ.

1920ರ ಸಮಯ. ಬ್ರಿಟಿಷ್ ಪೊಲೀಸ್ ಅಧಿಕಾರಿಯೊಬ್ಬನ ಅನುಭವದ ಕಥೆ. ಆತ ಊರೊಂದರಲ್ಲಿ ಅಂದಿನ ಇಂಡಿಯನ್ ಇಂಪೀರಿಯಲ್ ಪೊಲೀಸ್ ಫೋರ್ಸ್ ಅಧಿಕಾರಿಯಾಗಿದ್ದ. ಯಾವ ಭಾರತೀಯರಿಗೂ ಬ್ರಿಟಿಷ್ ಪೊಲೀಸ್ ಅಧಿಕಾರಿಗಳನ್ನು ಕಂಡರಾಗುತ್ತಿರಲಿಲ್ಲ. ಅವರು ಅದೆಷ್ಟು ಶೋಷಿಸುತ್ತಿದ್ದರೆಂದರೆ ಅವರನ್ನು, ಕುಟುಂಬ ವರನ್ನು ಕಂಡರೆ ಊರಿನಲ್ಲಿರುವವರಿಗೆಲ್ಲ ದ್ವೇಷವಿತ್ತು.

ಅಂತೆಯೇ ಆ ಬ್ರಿಟಿಷ್ ಅಧಿಕಾರಿಯನ್ನು ಕೂಡ ಊರಿನವರೆಲ್ಲ ದ್ವೇಷಿಸುತ್ತಿದ್ದರು. ಆತನ ಹೆಂಡತಿ, ಮಕ್ಕಳು ಸಂತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಜನರು ಶಿಳ್ಳೆ ಹೊಡೆಯುತ್ತಿದ್ದರು, ಚುಡಾಯಿಸುತ್ತಿದ್ದರು. ಮಕ್ಕಳು ಕಲ್ಲುತೂರುತ್ತಿದ್ದರು. ಒಬೊಬ್ಬರೇ ನಡೆದು ಹೋಗುವಾಗ ಗುಂಪಿನಿಂದ ಬಂದು ಬ್ರಿಟಿಷ್ ಹೆಂಗಸರ ಬಿಳಿಯ ಬಟ್ಟೆಯ ಎಲೆ ಅಡಿಕೆ ಉಗುಳಿ ಹೋಗುತ್ತಿದ್ದರು.

ಹೀಗಿರುವಾಗ ಒಂದು ದಿನ ಆ ಊರಿನ ಸಂತೆಯೊಳಕ್ಕೆ ಕಾಡಾನೆಯೊಂದು ನುಗ್ಗಿಬಿಟ್ಟಿತು. ತಕ್ಷಣ ಆ ಸಂತೆಯ
ಇನ್ನೊಂದು ತುದಿಯಲ್ಲಿದ್ದ ಪೊಲೀಸ್ ಸ್ಟೇಷನ್ನಿಗೆ, ಅಲ್ಲಿನ ಅಧಿಕಾರಿಯಾದ ಈ ಬ್ರಿಟಿಷ್ ಯುವಕನಿಗೆ ಆ ಸುದ್ದಿ ಹೋಗಿ ಮುಟ್ಟಿತು. ಅಂಥ ಸಮಯದಲ್ಲಿ ಸಾರ್ವಜನಿಕರ ರಕ್ಷಣೆ ಮಾಡಬೇಕಲ್ಲ, ಪೊಲೀಸ್ ಅಧಿಕಾರಿ ನೋಡೋಣ ಎಂದು ಅತ್ತ ದೌಡಾಯಿಸಿದ. ಅಧಿಕಾರಿಗೂ ಈ ಜನರನ್ನು ಕಂಡರಾಗುತ್ತಿರಲಿಲ್ಲ. ದ್ವೇಷ ಎರಡೂ ಕಡೆಯಿಂದಿತ್ತು. ಆದರೆ ಆ ಕ್ಷಣಕ್ಕೆ ಎಲ್ಲರೂ ಆ ಅಧಿಕಾರಿಯನ್ನು ನೋಡುತ್ತಾ, ಕೇಕೆ ಹಾಕುತ್ತ, ಇವನೇನು ಮಾಡಿಯಾನು ಎಂಬಂತೆ ಉಡಾಫೆ ಮಾಡಿದರು.

ತಕ್ಷಣ ಅಧಿಕಾರಿ ಕೈಯಲ್ಲಿದ್ದ ಪಿಸ್ತೂಲನ್ನು ಆನೆಯತ್ತ ಗುರಿ ಮಾಡಿದ. ಆ ಕ್ಷಣಕ್ಕೆ ಅಲ್ಲಿ ನೆರೆದಿದ್ದ ಸುಮಾರು
ಎರಡು ಸಾವಿರ ಮಂದಿ ‘ಹೋ’ ಎಂದು ಕೂಗಿದರು. ಆತನ ಮೇಲೆ ಎಲ್ಲಿಲ್ಲದ ಮಾನಸಿಕ ಒತ್ತಡ ನಿರ್ಮಾಣ ವಾಯಿತು. ಆತ -ರ್ ಮಾಡಿದ, ಬೃಹದಾಕಾರದ ಆನೆ ನೆಲಕ್ಕೆ ಕುಸಿದು ಬಿತ್ತು. ಆ ಬ್ರಿಟಿಷ್ ಅಧಿಕಾರಿ ಆ ಸಮಯ ದಲ್ಲಿನ ತನ್ನ ಮಾನಸಿಕತೆಯನ್ನು ಪ್ರಬಂಧದಲ್ಲಿ ವಿವರಿಸುತ್ತಾನೆ. ಅಸಲಿಗೆ ಆ ಅಧಿಕಾರಿಗೆ ಈ ಸಂತೆಯಲ್ಲಿರುವ ಜನರನ್ನು ರಕ್ಷಿಸುವ ಯಾವುದೇ ಮನಸ್ಸಿರುವುದಿಲ್ಲ. ಅವರಲ್ಲಿ ಒಂದಿಷ್ಟು ಮಂದಿ ಸತ್ತರೆ ಸಾಯಲಿ ಎಂದೇ ಇರುತ್ತದೆ. ಅದಲ್ಲದೆ ಅವನಿಗೆ ಆನೆ, ಕಾಡುಪ್ರಾಣಿಗಳ ಬಗ್ಗೆ ಮಮತೆಯಿರುತ್ತದೆ. ಆತ ಪ್ರಾಣಿಪ್ರಿಯ! ಆದರೆ ಆ ಕ್ಷಣದ ಒತ್ತಡ ಆನೆಯತ್ತ ಗುಂಡು ಹರಿಸಲು, ಕೊಲ್ಲಲು ಮುಂದಾಗುವಂತೆ ಪ್ರೇರೇಪಿಸಿರುತ್ತದೆ.

ಒಂದು ವೇಳೆ ಕೊಲ್ಲದಿದ್ದರೆ, ಹೇಡಿ, ನಾಮರ್ದ ಎಂದಾಗುತ್ತೇನೆ ಎನ್ನುವ ಒತ್ತಡ. ಜನರು ತನ್ನನ್ನು ಇನ್ನಷ್ಟು ತಿರಸ್ಕರಿಸುವ ಹೆದರಿಕೆ. ಒಟ್ಟಾರೆ ಆನೆಯನ್ನು ಕೊಲ್ಲಲು ಮನಸ್ಸೇ ಇಲ್ಲದ ಅಧಿಕಾರಿ ಆ ದಿನ ಆನೆಯ ತಲೆಗೆ ಗುಂಡಿಟ್ಟು ಶೂಟ್ ಮಾಡಿಬಿಡುತ್ತಾನೆ. ಅಲ್ಲಿಂದ ಮುಂದೆ ಆ ಪ್ರಬಂಧ ಆ ಬ್ರಿಟಿಷ್ ಅಧಿಕಾರಿಯ ಅಂತರ್ಯದತ್ತ ತಿರುಗಿಕೊಳ್ಳುತ್ತದೆ. ಒಂದು ಕ್ಷಣ ಇದೆಲ್ಲ ಘಟನೆಯನ್ನು ಕಣ್ಣ ಮುಂದೆ ತಂದು ಕಲ್ಪಿಸಿಕೊಳ್ಳಿ. ಇಲ್ಲಿ ಬ್ರಿಟಿಷ್ ಅಽಕಾರಿಯ ಕ್ರೌರ್ಯ, ಉದ್ದೇಶ ಅಥವಾ ಯುರೋಪಿಯನ್ನರೆಡೆಗಿನ ಭಾರತೀಯರ ದ್ವೇಷ, ಅಂದಿನ ಶೋಷಣೆ ಇವೆಲ್ಲವನ್ನೂ ಪಕ್ಕದಲ್ಲಿಡೋಣ. ಆ ಅಧಿಕಾರಿಯ ಆ ಕ್ಷಣದ ಮಾನಸಿಕ ಸ್ಥಿತಿಯನ್ನಷ್ಟೇ ಇಲ್ಲಿ ವಿವೇಚಿಸೋಣ.
ಎದುರಾಗುವ, ನಿರ್ಮಾಣವಾಗುವ ಪರಿಸ್ಥಿತಿಗಳು ನಮ್ಮಿಂದ ಅದೆಷ್ಟೋ ಬೇಡದ, ಮನಸ್ಸೇ ಇಲ್ಲದ ಕೆಲಸವನ್ನು ಮಾಡಿಸುತ್ತವೆ. ಆತನಿಗೆ ಆ ಜನರನ್ನು ಕಂಡರಾಗದು.

ಅಷ್ಟಕ್ಕೂ ಆ ಆನೆ ಸಂತೆಯಲ್ಲಿ ಯಾರನ್ನೂ ಕೊಂದಿಲ್ಲ, ಗಾಯಗೊಳಿಸಿಲ್ಲ. ಅದು ನಡೆಯುವಾಗ ಅಲ್ಲಿರುವ ಬಿದಿರಿನ ಅಂಗಡಿಯೊಂದು ಮುರಿದದ್ದು ಬಿಟ್ಟರೆ ಆ ಆನೆಯೇ ಅಲ್ಲಿನ ಜನರಿಗಿಂತ ಹೆಚ್ಚಿಗೆ ಗಾಬರಿಯಾಗಿತ್ತು. ಪ್ರಾಣಿ ಮುಗ್ಧವೆಂಬ ಭಾವ ಅವನೊಳಗಿದ್ದರೂ ಅದೆಲ್ಲವನ್ನೂ ಮೀರಿ ಅವನು ವರ್ತಿಸುವಂಥ ಸ್ಥಿತಿ ಅಂದು ನಿರ್ಮಾಣ ವಾಗಿತ್ತು. ತನ್ನ ಮನಸ್ಸು ಬಯಸಿದ್ದಕ್ಕೆ ತದ್ವಿರುದ್ಧವಾಗಿ ಆತ ನಡೆದುಕೊಂಡಿದ್ದ. ಸುತ್ತಲೂ ಇದ್ದವರು ತನಗಾಗ ದವರೇ ಆಗಿದ್ದರೂ, ಆನೆಯನ್ನು ಕೊಲ್ಲಬೇಕೆಂಬ ಅವರೆಲ್ಲರ ಕೋರಿಕೆಗೆ ‘ನೋ, ನಾನು ಶೂಟ್ ಮಾಡುವುದಿಲ್ಲ’ ಎನ್ನಲಾರದಾದ.

ಜನರು, ಸಮಾಜ, ಕುಟುಂಬ ವ್ಯವಸ್ಥೆಯ ನಡುವೆ ಬದುಕುವಾಗ, ಮಕ್ಕಳನ್ನು ಬೆಳೆಸುವಾಗ, ಸ್ನೇಹವನ್ನು ಸಾಕುವಾಗ, ವೃತ್ತಿಯಲ್ಲಿ ಹೀಗೆ ನಮ್ಮೆಲ್ಲರ ಬದುಕಿನ ಬೇರೆ ಬೇರೆ ಛದ್ಮವೇಷದ ಪಾತ್ರಗಳಲ್ಲಿ, ಏಕಪಾತ್ರಾಭಿನಯ ಸ್ಥಿತಿಗಳಲ್ಲಿ ಹಲವು ರೀತಿಯ ಕೋರಿಕೆಗಳು, ಆಹ್ವಾನಗಳು, ಆದೇಶಗಳು- ಅವುಗಳಿಂದ ಒತ್ತಡಗಳು ಎದುರಾಗುತ್ತಲೇ ಇರುತ್ತವೆ.
ಮಗಳು, ಮಗ ಕೇಳುವ ಚಿಕ್ಕ ಆಟಿಕೆ ಸಾಮಾನಿನಷ್ಟು ಮುಗ್ಧವಾದ ಬೇಡಿಕೆಯಿಂದ ಹಿಡಿದು, ಅಸಾಧ್ಯವೆನ್ನುವುದನ್ನು
ಮಾಡಬೇಕೆನ್ನುವ ಬಾಸ್, ಸಾಲ ಕೇಳುವ, ಶೂರಿಟಿ ಕೊಡು ಎನ್ನುವ ಸ್ನೇಹಿತ, ಗಣಪತಿ ಪೆಂಡಾಲಿಗೆ ಕೇಳಿ ಬರುವ ಚಂದಾವರೆಗೆ ಏನೇನೋ ಕೋರಿಕೆ, ಬೇಡಿಕೆಗಳು. ಅವೆಲ್ಲ ಸಾಮಾಜಿಕ ಒತ್ತಡದ ಭಾಗವಾಗಿ ಎದುರಾದಾಗ ಇಲ್ಲ, ಸಾಧ್ಯವಿಲ್ಲ, ಆಗೋಲ್ಲ, ಬೇಡ, ನೋ ಇತ್ಯಾದಿ ಹೇಳಿ ತಿರಸ್ಕರಿಸಬೇಕೆಂದರೂ ಸಾಧ್ಯವಾಗುವುದಿಲ್ಲ.

ನನ್ನ ಐದನೇ ಕ್ಲಾಸಿನ ಮಗಳು ಒಂದು ದಿನ ಶಾಲೆಯಿಂದ ಬರುವಾಗ ಬಹಳ ಹಸಿದಿದ್ದಳು. ಸಾಮಾನ್ಯವಾಗಿ ಮನೆಗೆ
ಬಂದಾಕ್ಷಣ ತಿನ್ನಲು ಏನೂ ಬೇಡವೆಂದು ಹೇಳುವವಳು. ಮನೆಯಿಂದ ಬುತ್ತಿ ಒಯ್ಯುವವಳು ಪೂರ್ತಿ ತಿಂದು ಬಂದ
ದ್ದು ಅಪರೂಪ. ಆದರೆ ಆ ದಿನ ಬುತ್ತಿ ಕೂಡ ಖಾಲಿಯಾಗಿತ್ತು. ಕೇಳಿದಾಗ ಶಾಲೆಯಬ್ಬಳು ಹೊಸತಾಗಿ ಸ್ನೇಹಿತೆ ಯಾಗಿದ್ದಾಳೆ.

ಅವಳಿಗೆ ಭಾರತೀಯ ಆಹಾರ ಎಂದರೆ ಎಲ್ಲಿಲ್ಲದ ಪ್ರೀತಿ. ಆಕೆ ಬಂದು ಕೇಳಿದಳು. ಹಾಗಾಗಿ ನನ್ನ ಎಲ್ಲ ತಿಂಡಿ ಅವಳಿಗೆ ಕೊಟ್ಟದ್ದರಿಂದ ಈಗ ಹಸಿವೆಯಾಗಿದೆ. ನನಗೆ ಕೊಡಲು ಸಾಧ್ಯವಿರಲಿಲ್ಲ, ಅಷ್ಟು ಹಸಿವೆಯಾಗಿತ್ತು. ಆದರೆ It
is an Acquaintance Trap . ಹಾಗಾಗಿ ಕೊಟ್ಟೆ ಎಂದಳು. ಮಕ್ಕಳ ಬಾಯಲ್ಲಿ ಅವರ ವಯಸ್ಸಿಗೆ ಮೀರಿದ ಶಬ್ದಗಳನ್ನು ಕೇಳಿದಾಗ ಆಶ್ಚರ್ಯವಾಗುವುದು ನಿಜ.

ಅಮೆರಿಕದ ಮಕ್ಕಳಿಗೆ ಎದುರಾಗುವ ಒತ್ತಡಗಳ ಬಗ್ಗೆ ಪಾಠಮಾಡಲೆಂದೇ ಒಂದು ಕ್ಲಾಸಿರುತ್ತದೆ. ಈ ಕ್ಲಾಸಿನಲ್ಲಿ ಬೇರೆ
ಬೇರೆ ರೀತಿಯ ಒತ್ತಡಗಳು, ಅವುಗಳ ಹೆಸರುಗಳನ್ನು ಪರಿಚಯಿಸಲಾಗುತ್ತದೆ. ನಮಗೆಲ್ಲರಿಗೂ ಇಂಥ Acquaintance Trap ಸ್ಥಿತಿ ಸಾಮಾನ್ಯ ಅನುಭವ. ಯಾರೋ ಹೊಸತಾಗಿ ಪರಿಚಯವಾದವರು, ಅಥವಾ ಅಷ್ಟೊಂದು ಆಪ್ತರಲ್ಲ ದವರು ಏನೋ ಒಂದನ್ನು, ಹಿಂದೆ ಮುಂದಿಲ್ಲದೆ ಬಂದು ಕೇಳಿದರೆ ಆ ಕ್ಷಣಕ್ಕೆ ಇಲ್ಲವೆನ್ನಲಾಗುವುದಿಲ್ಲ. ಬೇಡವೆಂದು ಹೇಳಬೇಕೆಂದರೂ ‘ಆಯ್ತು, ಓಕೆ’ ಎಂದುಬಿಡುತ್ತೇವೆ.

ನಮಗೆ ತೊಂದರೆಯಾದರೂ ಸರಿ, ಹೊಸ ಸ್ನೇಹಿತನಿಗೆ, ದೂರದ ಸಂಬಂಧಿಗೆ ‘ಬೇಡ, ಇಲ್ಲ, ಸಾಧ್ಯವಿಲ್ಲ’ ಎಂದು ಹೇಳಲು ಸಾಧ್ಯವಾಗದೇ ನಾವೇ ಹಿಂಸೆ ಅನುಭವಿಸುತ್ತೇವೆ. ‘ಇಲ್ಲ’ ಎಂದುಬಿಟ್ಟರೆ ಸಂಬಂಧ ಹಾಳಾಗಿ ಬಿಡಬಹುದು, ವೈಮನಸ್ಸು ಬೆಳೆಯಬಹುದು! ನಮ್ಮೊಳಗೆ ಎಲ್ಲರೂ ನಮ್ಮನ್ನು ಪ್ರೀತಿಸಬೇಕೆಂಬ, ಮೆಚ್ಚಬೇಕೆಂಬ ಬಯಕೆ
ಅದೆಷ್ಟೋ ಬಾರಿ ನಮ್ಮಿಂದ ಅನವಶ್ಯ ‘ಓಕೆ’ ಅನ್ನಿಸಿಬಿಡುತ್ತದೆ. ಸಾಮಾನ್ಯವಾಗಿ ‘ನೋ’ ಅನ್ನುವಾಗ ನಮ್ಮಂದು ತಪ್ಪಿತಸ್ಥ ಭಾವ ಅನಾಮತ್ತಾಗಿ ಅದೆಲ್ಲಿಂದಲೋ ಬಂದು ವಕ್ಕರಿಸಿಕೊಳ್ಳುತ್ತದೆ. ಆ ಭಾವ ನಮ್ಮನ್ನು ಒತ್ತಾಯ ಕ್ಕೊಳಪಡಿಸುತ್ತದೆ. ಕೆಲವೊಮ್ಮೆ ‘ಇಲ್ಲ, ಬೇಡ’ ಎಂದುಬಿಟ್ಟರೆ ಏನೋ ನಾನು ಗುಂಪಿನಲ್ಲಿ ಸೇರದಿರುವವನಾಗಿ ಬಿಡುತ್ತೇನೆ ಎಂಬ ಭಯದಿಂದ ಒಪ್ಪಿಗೆ ಸೂಚಿಸುವ ಅನಿವಾರ್ಯಕ್ಕೆ ಸಿಕ್ಕಿಹಾಕಿಕೊಳ್ಳುತ್ತೇವೆ.

ಗೆಳೆಯರ ಗುಂಪಿನಲ್ಲಿ ಹೊಸತಾಗಿ ಸೇರಿಕೊಂಡವನೊಬ್ಬ ಕುಡಿಯುವುದಿಲ್ಲವಾದಲ್ಲಿ ಉಳಿದ ಗೆಳೆಯರು ಒತ್ತಾಯ ಮಾಡುವುದು ಗುಂಡುಪ್ರಿಯರ ಸೌಜನ್ಯ. ಸಾಮಾನ್ಯವಾಗಿ ಇಂಥ ಸಂದರ್ಭ ಎದುರಾದಾಗ ಅದನ್ನು ಕುಡಿಯದ ವ್ಯಕ್ತಿ ಎದುರಿಸುವ ಎರಡು ಬೇರೆ ಬೇರೆ ರೀತಿಯನ್ನು ಗಮನಿಸಿದ್ದೇನೆ. ಮೊದಲನೆಯವನು ‘ಇವತ್ತು ಬೇಡ, ಸಂಕಷ್ಟಿ’ ಎಂಬ ರೀತಿಯ ಒಂದು ಹುಸಿಕಾರಣ ಕೊಟ್ಟು ತಪ್ಪಿಸಿಕೊಳ್ಳುವವನು.

ಅವನು ಎಂದೂ ಕುಡಿದವನೇ ಅಲ್ಲ ಮತ್ತು ಅವನಿಗೆ ಕುಡಿಯುವುದು ಬೇಕಾಗಿಯೂ ಇಲ್ಲ. ಆದರೆ ಆ ಕ್ಷಣಕ್ಕೆ, ಆ
ಪಾರ್ಟಿಯಲ್ಲಿ ತಪ್ಪಿಸಿಕೊಂಡರೆ ಮುಂದೆ ನೋಡಿದರಾಯಿತು. ಅಂಥವರು ಒಂದಿಂದು ದಿನ ಒತ್ತಾಯಕ್ಕೆ ಕುಡಿ ಯಲೇಬೇಕಾದ ಸ್ಥಿತಿ ಎದುರಾಗುತ್ತದೆ. ಏಕೆಂದರೆ ಅವರು ಸಮಸ್ಯೆಯನ್ನು, ನಕಾರವನ್ನು ಆ ಕ್ಷಣವಷ್ಟೇ ಮುಂದೆ ಹಾಕಿರುತ್ತಾರೆ. ಇನ್ನೊಂದು ವರ್ಗದ ಕುಡಿಯದವರಿದ್ದಾರೆ.

ಅವರನ್ನು ಯಾವುದೇ ಸನ್ನಿವೇಶದಲ್ಲಿಯೇ ಕೇಳಿ, ‘ನನ್ನದು ಕುಡಿಯುವ ವ್ಯಕ್ತಿತ್ವವೇ ಅಲ್ಲ’ ಎಂದು ಹೇಳಿಬಿಡುತ್ತಾರೆ. ಸ್ಪಷ್ಟ, ನೇರ. ಯಾವುದೇ ‘ಇಲ್ಲ, ಸಾಧ್ಯವಿಲ್ಲ, ನೋ’ ವ್ಯಕ್ತಿತ್ವದ ಜತೆಯಲ್ಲಿ ಸೇರಿಕೊಂಡಾಗ ಅದು ಬಹಳ ಗಟ್ಟಿಯೆ ನಿಸುತ್ತದೆ. ನಾನು ಅಂಥ ಕೆಲಸವನ್ನು ಮಾಡುವವನೇ ಅಲ್ಲ, ಅದು ನನ್ನ ಪ್ಸಿನ್ಸಿಪಲ್ ಅಲ್ಲ ಎನ್ನುವ ಸ್ಪಷ್ಟತೆಯಲ್ಲಿ ಇಲ್ಲವೆಂದಾಗ ಅದನ್ನು ಯಾರೂ ಪ್ರಶ್ನಿಸಲು ಮುಂದಾಗುವುದಿಲ್ಲ. ಸಾಮಾನ್ಯವಾಗಿ ‘ಇಲ್ಲ’ ಎನ್ನುವಾಗ ಬಹಳಷ್ಟು ಕಾರಣಗಳನ್ನು ಕೊಟ್ಟರೆ, ಸಬೂಬು ಹೇಳಿದರೆ ಅದು ಗಟ್ಟಿ ನಿಲ್ಲುವುದಿಲ್ಲ. ಆದರೆ ಆ ವ್ಯಕ್ತಿತ್ವವೇ ನನ್ನದಲ್ಲ ಎಂದು ಹೇಳಿದಾಗ ವ್ಯಕ್ತಿತ್ವವನ್ನು ಯಾರು ಕೂಡ ಪ್ರಶ್ನಿಸುವುದಿಲ್ಲ.

ನಾವು ಸಾಮಾಜಿಕ ಜೀವಿಗಳು. ಇಲ್ಲಿ ಒತ್ತಡಗಳು ನಾನಾರೀತಿಯವು ಮತ್ತು ನಿರಂತರ. ಈ ಒತ್ತಡ ಮನುಷ್ಯನನ್ನು
ಯಾವ ಹಂತಕ್ಕೂ ಒಯ್ಯಬಹುದು. ಕೆಲವೊಮ್ಮೆ ಜೀವ ಕಳೆಯುವುದಕ್ಕೂ ಹಿಂದೆ ಮುಂದೆ ನೋಡದ ಹಂತಕ್ಕೆ.
ಎರಡನೇ ವಿಶ್ವಯುದ್ಧದ ಸಮಯದಲ್ಲಿ ಜಪಾನಿಗರಲ್ಲಿ ಅವರ ಮದ್ದುಗುಂಡುಗಳೆಲ್ಲ ಖಾಲಿಯಾಗಿ ಹೋಗಿದ್ದವಂತೆ. ಜಪಾನಿ ಸೈನಿಕರಿಗೂ ಅದಾಗಲೇ ಸುಸ್ತಾಗಿ ಹೋಗಿದ್ದ ಸಮಯ. ಯಾರಿಗೂ ದೇಶಕ್ಕಾಗಿ ಪ್ರಾಣ ಬಿಡುವಷ್ಟು ದೇಶಪ್ರೇಮ ಉಳಿದಿರಲಿಲ್ಲ. ಅಂಥ ಸಮಯದಲ್ಲಿ ಅಲ್ಲಿನ ಏರ್ ಫೋರ್ಸ್ ತನ್ನಲ್ಲಿದ್ದ ವಿಮಾನವನ್ನೇ ಆತ್ಮಾಹುತಿ ಯಾಗಿ ಬಳಸಿ ಶತ್ರುಗಳ ಮೇಲೆ ದಾಳಿ ಮಾಡಲು ಮುಂದಾಗಬೇಕೆಂದು ನಿರ್ಧರಿಸಿತು.

ಆ ಸುದ್ದಿ ಬ್ಯಾರಕ್‌ಗಳಲ್ಲಿ ಹಬ್ಬಿ ಪ್ರತಿಯೊಬ್ಬ ಪೈಲಟ್, ತಾನು ಮಾತ್ರ ಈ ಆತ್ಮಾಹುತಿಯ ವಿಮಾನದ ಚಾಲಕನಾಗಿ
ಹೋಗುವುದಿಲ್ಲ ಎಂದು ಗಲಾಟೆಯೆಬ್ಬಿಸಿದ. ಆಗ ಅಲ್ಲಿನ ಮುಖ್ಯಸ್ಥ ಎಲ್ಲರನ್ನೂ ಜತೆಯಲ್ಲಿ ಸಾಲಿನಲ್ಲಿ ನಿಲ್ಲಿಸಿ, ಯಾರು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧರಿಲ್ಲವೋ ಅವರು ಮುಂದೆ ಬರಬಹುದು, ಅವರನ್ನು ಹೇಡಿಯೆಂದು ಕರೆದು, ಮಿಲಿಟರಿಯಿಂದ ಬಿಡುಗಡೆಗೊಳಿಸಲಾಗುವುದು ಎಂದ. ಅಷ್ಟು ಕಾಲ ಪ್ರತಿರೋಧಿಸುತ್ತಿದ್ದ ಸೈನಿಕರಲ್ಲಿ ಒಬ್ಬರೂ ತಾವು ಆತ್ಮಾಹುತಿ ದಾಳಿಗೆ ಹೋಗುವುದಿಲ್ಲ ಎಂದು ಮುಂದೆ ಬಂದು ಬರಲೇ ಇಲ್ಲ.

ಹೀಗೆ ಮಾಡಿದರೆ ಗುಂಪಿನಲ್ಲಿ ಸಲ್ಲದವನಾಗುತ್ತೇನೆ ಎಂಬ ಭಯ ಆ ಪೈಲಟ್‌ಗಳನ್ನು ಆತ್ಮಾಹುತಿ ಮಾಡಿ ಕೊಳ್ಳು ವಂತೆ- ಸಾಯುವಂತೆ ಮಾಡಿತು. ಅದೆಂಥದ್ದೇ ಸ್ಥಿತಿಯಿರಲಿ, ಇಲ್ಲವೆಂದು ಹೇಳುವುದು ಸಿದ್ಧಿಸಿಕೊಳ್ಳ ಬಹುದಾದ ಕಲೆ. ಅದು ನಮ್ಮ ಶ್ರೇಯೋಭಿವೃದ್ಧಿಗೆ ಅತ್ಯವಶ್ಯ. ಸರಿಯಾದ ಸಮಯದಲ್ಲಿ ‘ಇಲ್ಲ’ ಎಂದು ಹೇಳುವ ಕಲೆ ಹೊಂದಿದರೆ ಜೀವನದ ಅರ್ಧಕ್ಕರ್ಧ ವಿಘ್ನ, ರಗಳೆಗಳನ್ನು ತಪ್ಪಿಸಿಕೊಂಡಂತೆ. ಆದರೆ ‘ಇಲ್ಲ, ನೋ’ ಎಂದು
ಹೇಳುವುದು ಸುಲಭವಲ್ಲ. ಏಕೆಂದರೆ ಅದನ್ನು ಸ್ವೀಕರಿಸುವ ಇನ್ನೊಬ್ಬ ವ್ಯಕ್ತಿ ಅದನ್ನು ಹೇಗೆ ಬೇಕಾದರೂ ವ್ಯವಹರಿಸಬಹುದು. ಏಕೆಂದರೆ ಆತ ಇಲ್ಲಿ ನಷ್ಟದಲ್ಲಿದ್ದಾನೆ.

ಪ್ರೀತಿ ಕೇಳಿದ ಹುಚ್ಚನೊಬ್ಬನಿಗೆ ಇಲ್ಲವೆಂದರೆ ಆಸಿಡ್ ದಾಳಿ ಮಾಡಬಹುದು. ಆಸ್ತಿ ಇಲ್ಲವೆಂದಿದ್ದಕ್ಕೆ ತಂದೆಯನ್ನೇ ಮಗ ಕೊಲ್ಲಬಹುದು. ಇವೆಲ್ಲ ಅತಿರೇಕಗಳು. ಸಾಮಾನ್ಯವಾಗಿ ನಿತ್ಯ ಜೀವನದಲ್ಲಿ ‘ನೋ’ ಎಂದಾಗ ಅದನ್ನು ಹಲವರು ಸಮಚಿತ್ತದಿಂದ ಸ್ವೀಕರಿಸುವುದಿಲ್ಲ. ಕೆಲವೊಮ್ಮೆ ನೀವು ಅದೆಷ್ಟೋ ಸಹಾಯ ಮಾಡಿದ ಸ್ನೇಹಿತನಿರ ಬಹುದು, ಆತ ಇನ್ನೊಂದು ಸಹಾಯ ಕೇಳಿದಲ್ಲಿ, ಅದೊಂದಕ್ಕೆ ನೀವು ‘ಇಲ್ಲ’ ಎಂದಲ್ಲಿ ಆತ ಹಿಂದೆ ಮಾಡಿದ ಉಪಕಾರವನ್ನೆಲ್ಲ ಮರೆತು ಇದೊಂದೇ ಕಾರಣಕ್ಕೆ ದ್ವೇಷಿಸಲು ಶುರುಮಾಡಬಹುದು.

ಸಂಬಂಧ ತುಂಡಾಗಿಹೋಗಬಹುದು. ಆ ಅಸಮ್ಮತಿಯನ್ನು ಹಲವರ ಎದುರಿಗೆ ಹೇಳಿದಲ್ಲಿ ಅದನ್ನು ಅವಮಾನ ವೆಂದು ಆ ಎರಡನೇ ವ್ಯಕ್ತಿ ಗ್ರಹಿಸಬಹುದು. ಒಂದು ಚಿಕ್ಕ ‘ನೋ’ ಮತ್ಸರ, ಸೇಡು, ಪ್ರತೀಕಾರಕ್ಕೆ ಎಡೆಮಾಡಿಕೊಡ ಬಹುದು. ನೋ ಅನ್ನುವುದೊಂದು ನಾಜೂಕಿನ ಕೆಲಸ. ಸಾಧ್ಯವಿಲ್ಲ ಎಂದು ಬೇಸರವಾಗದಂತೆ ಹೇಳುವುದು ಸಾಧ್ಯ.

‘ನೋ, ಇಲ್ಲ’ ಎನ್ನುವ ಸನ್ನಿವೇಶ ಎದುರಾದಾಗ ‘ಯಸ್, ಓಕೆ’ ಎನ್ನುವ ಬಳಗ ಆಫೀಸುಗಳಲ್ಲಿ, ಕಾರ್ಪೊರೇಟ್‌ಗಳಲ್ಲಿ
ಸಾಮಾನ್ಯ. ಬಾಸ್ ಅನ್ನು ಮೆಚ್ಚಿಸಬೇಕೆಂದು ಏನು ಹೇಳಿದರೂ, ಕೆಲಸ ಕೊಟ್ಟರೂ ‘ಸರಿ’ ಎನ್ನುವವರು ಕ್ರಮೇಣ
ತಾವೇ ನೂರೆಂಟು ಸಮಸ್ಯೆಗಳಿಗೆ ಸಿಲುಕಿಹಾಕಿಕೊಳ್ಳುತ್ತಾರೆ. ಐಟಿ ಕೆಲಸಗಳಲ್ಲಿ ಹಗಲು ರಾತ್ರಿ ಕೆಲಸ ಮಾಡುವ ಟೆಕ್ಕಿಗಳಲ್ಲಿ ಬಹುತೇಕರದ್ದು ಇದೇ ಸಮಸ್ಯೆ. ಅವರಿಗೆ ‘ನೋ’ ಎಂದು ಹೇಳಲು ಬರುವುದಿಲ್ಲ. ಕೆಲಸ, ಸಂಬಂಧ, ಆತ್ಮೀಯತೆ, ಸಲಿಗೆ, ಸ್ನೇಹ ಇವೆಲ್ಲದರ ಮಿತಿಯನ್ನು ನಿರ್ಧರಿಸಲು ಸಮರ್ಥವಾದ ಏಕೈಕ ಶಬ್ದವೆಂದರೆ ‘ನೋ’. ಸರಿಯಾದ ಸಮಯದಲ್ಲಿ ‘ಬೇಡ, ಸಾಕು’ ಎಂದು ಹೇಳದಿದ್ದರೆ ನಂತರದಲ್ಲಿ ಅವು ಸಮಸ್ಯಾರೂಪವನ್ನು ಪಡೆದು ಹತೋಟಿ ತಪ್ಪಿಬಿಡುತ್ತವೆ.

ನಕಾರಾತ್ಮಕ ಪ್ರತ್ಯುತ್ತರವನ್ನು ಸಮಾಜ ಅಷ್ಟು ಸುಲಭದಲ್ಲಿ ಸ್ವೀಕರಿಸುವುದಿಲ್ಲ. ಮನೆಯಲ್ಲಿಯೇ ಒಬ್ಬರ ನಕಾರ
ಇನ್ನೊಬ್ಬರಲ್ಲಿ ವಿಕಾರ ಹುಟ್ಟಿಸುತ್ತದೆ. ಹಾಗಾಗಿ ‘ಇಲ್ಲ’ ಎಂದು ಹೇಳುವ ಸನ್ನಿವೇಶ ಎದುರಾದಾಗ ಒಂದು ಕ್ಷಣ ಯೋಚಿಸಿ ವ್ಯವಹರಿಸುವುದು ಉತ್ತಮ. ಅದೆಷ್ಟೋ ಬಾರಿ ಐದು ಸೆಕೆಂಡಿನ ಮೌನವೇ ಅಸಮ್ಮತಿಯ ಮುಕ್ಕಾಲು ಭಾಗವನ್ನು ಪ್ರದರ್ಶಿಸಿಬಿಡುತ್ತದೆ. ಸುಮ್ಮನೆ, ಮೌನವಾಗಿ ಕೆಲವು ಕ್ಷಣ ಉತ್ತರಿಸದಿದ್ದರೂ ಸಾಕು. ಅಂಥ ಸಮಯ ದಲ್ಲಿ ಎದುರಿಗಿನವರಿಗೆ ನಮ್ಮ ಆದ್ಯತೆಯನ್ನು ಸ್ಪಷ್ಟಪಡಿಸುವುದು ಉತ್ತಮ. ಅದೆಷ್ಟೋ ಬಾರಿ ಸ್ಪಷ್ಟ ಮಾತು, ನೇರ ನಡೆ, ನುಡಿ ಅದೆಷ್ಟೋ ಇಂಥ ಬೇಡದ ಕೋರಿಕೆಗಳು ನಮ್ಮ ಹತ್ತಿರ ಬಾರದಂತೆ ನೋಡಿಕೊಳ್ಳುತ್ತವೆ.

‘ಇಲ್ಲ, ಬೇಡ, ಸಾಧ್ಯವಿಲ್ಲ, ನೋ’ ಎಂದು ಹೇಳಲೇಬೇಕಿರುವಾಗ, ಅವಶ್ಯವಿರುವಾಗ ಹೇಳುವ ಕ್ರಿಯೆ ನಮ್ಮಂದು ಶಕ್ತಿಯನ್ನು ತುಂಬುತ್ತದೆ. ಇಲ್ಲವೆಂದು ಹೇಳುವಲ್ಲಿ ‘ಆಯ್ತು’ ಎಂದು ಹೇಳಿಬರುವಾಗ ನಾವು ಬೇಸರದಿಂದ ಕುಗ್ಗು ತ್ತೇವೆ. ನಮಗೆ ನಾವೇ ಶಪಿಸಿಕೊಳ್ಳುತ್ತೇವೆ. ಆದರೆ ಇದೆಲ್ಲದರಿಂದ ಸುಲಭಕ್ಕೆ ಪಾಠ ಕಲಿಯುವುದಿಲ್ಲ. ಇನ್ನೆ ಒಮ್ಮೆ ಬೇಡದ್ದಕ್ಕೆ ಒಪ್ಪಿಕೊಂಡು ಮತ್ತೆ ಮರುಗುತ್ತೇವೆ.

ಕೋರಿಕೆಗಳು ಹೊತ್ತು ತರುವ ಒತ್ತಡಗಳನ್ನು ನಿಭಾಯಿಸುವುದು ಕಷ್ಟ ಹೌದು. ಸರಿಯಾದ ಸಮಯದಲ್ಲಿ ‘ನೋ’
ಎಂದು ಹೇಳಲು ಬಾರದಿರುವವರು ಬದುಕಿನಲ್ಲಿ ಬಹಳಷ್ಟು ಕಷ್ಟಗಳನ್ನು ಅನವಶ್ಯ ಅನುಭವಿಸಬೇಕಾಗುತ್ತದೆ. ಎಲ್ಲರೂ ಸರಿಯಾದ ಸಮಯದಲ್ಲಿ, ರೀತಿಯಲ್ಲಿ ‘ಇಲ್ಲ’, ‘ಬೇಡ’ ಎಂದರೆ ಪ್ರಪಂಚದ ಅರ್ಧದಷ್ಟು ಬೇಸರಗಳು, ವೈಮನಸ್ಸುಗಳು, ಹಾನಿ, ಶೋಷಣೆ ಇರುತ್ತಿರಲಿಲ್ಲವಂತೆ. ‘ಇಲ್ಲ’ ಎನ್ನುವುದಕ್ಕೆ ‘ಆಮೇಲೆ ನೋಡೋಣ’, ‘ಮತ್ತೆ ಹೇಳುತ್ತೇನೆ’, ‘ಈಗ ಬೇಡ’, ‘ಇನ್ನೊಮ್ಮೆ’, ‘ಓಕೆ ಬಟ್’ ಇವೆಲ್ಲ ಪರ್ಯಾಯಗಳಲ್ಲ.

ಅಂತೆಯೇ ‘ಇಲ್ಲ’ವೆಂದು ಹೇಳುವಾಗ ಆ ಕ್ಷಣದ ಎಚ್ಚರಿಕೆ, ಎದುರಿನವನ ಸ್ವೀಕಾರ ಸಾಧ್ಯತೆ, ಪ್ರತಿಕ್ರಿಯೆ ಇವೆಲ್ಲವನ್ನೂ ಗ್ರಹಿಸಿ ವ್ಯವಹರಿಸುವುದು ತೀರಾ ಅವಶ್ಯಕ. ಏನಂತೀರಿ?

ಇದನ್ನೂ ಓದಿ: Prof R G Hegde Column: ಸಂವಹನ: ಆಡುಭಾಷೆ- ದೇಹಭಾಷೆಗಳ ರಸಪಾಕ