Tuesday, 26th November 2024

Nanjegowda Nanjunda Column: ಈ ಧೀಮಂತ, ಮಾತೃಹೃದಯದ ಸಂತ

ಸಂಸ್ಮರಣೆ

ನಂಜೇಗೌಡ ನಂಜುಂಡ

ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 50ನೇ ವರ್ಷದ ಪಟ್ಟಾಭಿಷೇಕದ ಸಂಭ್ರಮಾಚರಣೆಯು ಸೆಪ್ಟೆಂಬರ್ 22ರಂದು ನಡೆಯಲಿದೆ. ಶ್ರೀಗಳನ್ನು ಪ್ರಾರ್ಥಿಸಲು, ಆರಾಽಸಲು ಇದು ಪರ್ವಕಾಲವಾಗಲಿ.

ನಾಥ ಸಂಪ್ರದಾಯದ ಮೂಲಕ ಸನಾತನ ಸಂಸ್ಕೃತಿಯನ್ನು ಪ್ರಕಾಶಮಾನಗೊಳಿಸಿದ ಶತಮಾನದ ಸಂತ ಶ್ರೀ ಬಾಲಗಂಗಾಧರ ನಾಥ ಮಹಾಸ್ವಾಮೀಜಿಯವರು ಅನ್ನ, ಅಕ್ಷರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಸೇವೆಯನ್ನು ತಮ್ಮ ಮೂಲಮಂತ್ರವಾಗಿಸಿಕೊಂಡು, ರೈತರಿಗೆ, ದೀನ-ದಲಿತರಿಗೆ ನೀಡಿದ ಸೇವೆ ಅವಿಸ್ಮರಣೀಯ. ಕುವೆಂಪು ಅವರಂತೆ ‘ವಿಶ್ವಮಾನವ’ ಪರಿಕಲ್ಪನೆಯನ್ನು, ಬಸವಣ್ಣನವರಂತೆ ‘ಸರ್ವರಿಗೂ ಸಮಬಾಳು’ ಎಂಬ ಆಶಯವನ್ನು ಹಾಗೂ ಮದರ್ ಥೆರೆಸಾ ಅವರಂತೆ ‘ಮಾತೃಹೃದಯದ ಸೇವೆ’ಯ ಸಂಕಲ್ಪವನ್ನು ಸಾಕಾರ ಗೊಳಿಸಿ, ಸರ್ವರಿಗೂ ಸೇವೆ ಸಲ್ಲಿಸಿದ ಧೀಮಂತ ಸಾಧಕರು ಜಗದ್ಗುರುಗಳಾದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷರಾಗಿದ್ದ ಶ್ರೀಗಳು ನಿಷ್ಕಾಮ ಕರ್ಮಯೋಗಿಗಳು.
ಅವರು ಶ್ರೀಮಠದ ಸಿದ್ಧ ಸಿಂಹಾಸನವನ್ನೇರಿದ ಆ ಅಮೃತ ಗಳಿಗೆಯು ಹೊಸ ಮನ್ವಂತರಕ್ಕೆ ನಾಂದಿಯಾಯಿತು. ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಶ್ರೀಕ್ಷೇತ್ರವನ್ನು ಕೇವಲ ಮೂರೂವರೆ ದಶಕಗಳಲ್ಲಿ ಮಹಾ ಕ್ಷೇತ್ರವನ್ನಾ ಗಿಸಿದ್ದು ಶ್ರೀಗಳ ಸಂಕಲ್ಪಶಕ್ತಿಗೆ ಹಿಡಿದ ಕೈಗನ್ನಡಿ. ಜನಮಾನಸದಲ್ಲಿ ‘ತ್ರಿವಿಧ ದಾಸೋಹಿ’ ಎಂದೇ ಚಿರಸ್ಥಾಯಿ ಯಾಗಿರುವ ಶ್ರೀಗಳು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳು ಸೇರಿದಂತೆ ಹತ್ತು ಹಲವು ವಲಯಗಳಲ್ಲಿ ಅವಿಸ್ಮರಣೀಯ ಸೇವೆಗೈದಿದ್ದಾರೆ.

ಬರಿಗಾಲಲ್ಲಿ ನಡೆದೇ ಭಕ್ತ ಜನರನ್ನು ಭೇಟಿ ಮಾಡುವ ಮೂಲಕ ಹಾಗೂ ಭಿಕ್ಷಾಟನೆಗೈಯುವ ಮೂಲಕ ದವಸ-ಧಾನ್ಯಗಳು ಸೇರಿದಂತೆ ಆದಿಚುಂಚನಗಿರಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಅದ ನ್ನೊಂದು ಪುಣ್ಯಕ್ಷೇತ್ರವನ್ನಾಗಿ ರೂಪಿಸಿದ್ದು ಶ್ರೀಗಳ ಹೆಗ್ಗಳಿಕೆ.

ಅಪ್ರತಿಮ ಶಿಕ್ಷಣಪ್ರೇಮಿ
Education is the most powerful weapon, which you can use to change the world ಎಂಬ ಮಾತನ್ನು ಸಮರ್ಥ ವಾಗಿ ಗ್ರಹಿಸಿದ್ದ ಶ್ರೀಗಳು ಪ್ರಾರಂಭದ ದಿನಗಳಲ್ಲಿ ಎಲ್ಲೂ ದೇವಾಲಯಗಳನ್ನು ಕಟ್ಟಲಿಲ್ಲ. ಜ್ಞಾನಪ್ರಸಾರದಿಂದ ಮಾತ್ರವೇ ಸಮಾಜದ ಉನ್ನತಿ ಸಾಧ್ಯ ಎಂಬುದನ್ನು ಮನಗಂಡು ಶಿಕ್ಷಣವನ್ನು ಆದ್ಯತಾ ಕ್ಷೇತ್ರವನ್ನಾಗಿ ಆರಿಸಿ ಕೊಂಡರು. ಗ್ರಾಮೀಣ ಜನರ ಉದ್ಧಾರ ಆಗಬೇಕೆಂದರೆ, ಮೊದಲಿಗೆ ಅಂಥ ಪ್ರದೇಶಗಳ ಬಡಮಕ್ಕಳು ವಿದ್ಯಾವಂತ ರಾಗಬೇಕು ಎಂಬ ದೃಷ್ಟಿಯಿಟ್ಟು ಕೊಂಡು ಹಳ್ಳಿ ಹಳ್ಳಿಗಳಲ್ಲೂ ವಿದ್ಯಾಸಂಸ್ಥೆಗಳನ್ನು ತೆರೆದರು.

ನಾಡಿನಾದ್ಯಂತ 550ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಮತ್ತು ವಿದ್ಯಾರ್ಥಿ ನಿಲಯಗಳು ಸ್ಥಾಪನೆಗೊಂಡಿದ್ದು ಅವರ ಈ ಸಂಕಲ್ಪ ಶಕ್ತಿಯ ಕಾರಣದಿಂದಲೇ. ಪ್ರಸ್ತುತ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ಅನೇಕರು ಇಂದು ಉನ್ನತ ಸ್ಥಾನಗಳಲ್ಲಿ ದ್ದಾರೆ. ಮಮತಾಮಯಿ ಹಾಗೂ ಪರಿಸರ ಪ್ರೇಮಿ ರೈತಾಪಿ ವರ್ಗದವರ ನೋವನ್ನು ಹತ್ತಿರದಿಂದ ಕಂಡಿದ್ದ ಶ್ರೀಗಳು, ಬರಪೀಡಿತ ಪ್ರದೇಶಗಳಿಂದ ಜಾನುವಾರುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸಲು ಮಂಡ್ಯ, ಬೆಂಗಳೂರು ಮತ್ತು ಚಿತ್ರದುರ್ಗದಂಥ ಊರುಗಳಲ್ಲಿ ಅತ್ಯಾಧುನಿಕ ಗೋಶಾಲೆಗಳನ್ನು ತೆರೆದರು.

ಶ್ರೀಗಳು ತಮ್ಮ ಜೀವನದಲ್ಲಿ ಕಂಡ ನೋವು, ಹಸಿವು, ಅವಮಾನಗಳು ಮುಂದೆ ಅವರು ಅಂಧಮಕ್ಕಳ ವಸತಿಶಾಲೆ, ಅನಾಥಾಲಯ, ವೃದ್ಧಾಶ್ರಮ, ಮಹಿಳಾ ಸೇವಾಶ್ರಮಗಳನ್ನು ಸ್ಥಾಪಿಸಲು ಕಾರಣವಾದವು. ಪರಿಸರ ಸಂರಕ್ಷಣೆಗಾಗಿ ಹತ್ತು ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡ ಶ್ರೀಗಳು, ನಾಡಿನ ವಿವಿಧ ಮಠಾಧಿಪತಿಗಳು ಹಾಗೂ ಧರ್ಮ ಗುರುಗಳನ್ನು ಒಳಗೊಂಡ ‘ಕರ್ನಾಟಕ ವನಸಂವರ್ಧನ ಟ್ರಸ್ಟ್’ ಅನ್ನು ತಮ್ಮ ಅಧ್ಯಕ್ಷತೆಯಲ್ಲಿ ರಚಿಸಿ, ಐದು ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ವನಸಂವರ್ಧನೆಗೆ ನೀಡಿದ ಕೊಡುಗೆ ಅನುಪಮವಾದುದು.

ನಿಜಾರ್ಥದ ಧರ್ಮಗುರು
ಚಿತ್ರದುರ್ಗದ ಶ್ರೀ ಕಬೀರಾನಂದ ಆಶ್ರಮ, ಹಿರಿಯೂರಿನ ಆದಿಜಾಂಬವ ಮಠ, ಪಟ್ಟನಾಯಕನ ಹಳ್ಳಿಯ ಶ್ರೀ
ಗುರುಗುಂಡ ಬ್ರಹ್ಮಾಂಡೇಶ್ವರ ಮಠ, ಮಳವಳ್ಳಿಯ ಶ್ರೀ ರಾಮಾರೂಢ ಮಠ, ಬೆಂಗಳೂರಿನ ಶ್ರೀ ಗೋಸಾಯಿ ಮಠ
ಮುಂತಾದ ಹಿಂದುಳಿದ ವರ್ಗಗಳ ಮಠಗಳ ಸ್ಥಾಪನೆಯಲ್ಲಿ ಹಾಗೂ ಆ ಮಠಗಳಿಗೆ ಗುರುಗಳನ್ನು ನೇಮಿಸುವಲ್ಲಿ ಶ್ರೀ
ಬಾಲಗಂಗಾಧರನಾಥ ಮಹಾಸ್ವಾಮಿಗಳು ನೀಡಿದ ಸಹಕಾರ, ಪ್ರೋತ್ಸಾಹಗಳು ಸ್ಮರಣೆಗೆ ಅರ್ಹವಾಗಿವೆ. ತಮಿಳು ನಾಡಿನಲ್ಲಿ ಸುನಾಮಿ ಬಂದಾಗ, ಕಲಬುರ್ಗಿ ಮುಂತಾದೆಡೆ ನೆರೆಹಾವಳಿ ಸಂಭವಿಸಿದಾಗ, ಶಿವಮೊಗ್ಗದಲ್ಲಿ
ಉಂಟಾದ ಕಾಡ್ಗಿಚ್ಚಿನಿಂದಾಗಿ ಜನರು ತೊಂದರೆಗೆ ಸಿಲುಕಿದಾಗ, ಉತ್ತರ ಕರ್ನಾಟಕದ ಜನರು ನೆರೆಹಾವಳಿಯಿಂದ
ತತ್ತರಿಸಿ ನೆಲೆ ಕಳೆದುಕೊಂಡಾಗ- ಹೀಗೆ ವಿವಿಧ ತೆರನಾದ ಸಂಕಷ್ಟಗಳ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಕ್ಷಿಪ್ರವಾಗಿ ಸ್ಪಂದಿಸಿದ ಶ್ರೀಗಳು, ಸಂಕಷ್ಟಕ್ಕೀಡಾದವರನ್ನು ಸ್ವತಃ ಭೇಟಿಮಾಡಿ ನೆರವು ನೀಡುವ ಮೂಲಕ ಮಾನವೀಯತೆಯನ್ನು ಮೆರೆದರು.

ತನ್ಮೂಲಕ, ಸಕಲ ಮಾನವ ಕುಲಕ್ಕೆ ಲೇಸನ್ನೇ ಬಯಸಿದ ಮಹಾನ್ ಮಾನವತಾವಾದಿ ಎನಿಸಿಕೊಂಡರು.
ಹಿಂದುಳಿದ ವರ್ಗದ ಜನರೊಂದಿಗೆ ನಿಂತು ನ್ಯಾಯಕ್ಕಾಗಿ ಹೋರಾಡಿರುವ ಶ್ರೀಗಳು, ರೈತರ ಕಲ್ಯಾಣಕ್ಕಾಗಿ ತಮ್ಮ ಇಡೀ ಜೀವನವನ್ನೇ ತೇಯ್ದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಹಸಿವಿನ ಸಂಕಟವನ್ನು ಅರಿತಿದ್ದ ಶ್ರೀಗಳು ಬಡಮಕ್ಕಳಿಗೆ, ಅನಾಥರಿಗೆ ಜಾತಿ-ಧರ್ಮದ ಭೇದವಿಲ್ಲದೆ ಉಚಿತ ಹಾಸ್ಟೆಲ್ ಗಳನ್ನು ಪ್ರಾರಂಭಿಸಿದರು. ಇಂದಿಗೂ ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತು ಭಕ್ತರಿಗೆ ಉಚಿತ ಅನ್ನಪ್ರಸಾದ ವನ್ನು ನೀಡಲಾಗುತ್ತಿದೆ.

ನಾಥ ಸಂಪ್ರದಾಯದ ಪರಿಪಾಲನೆಯ ಜತೆಜತೆಗೆ ಸನಾತನ ಧರ್ಮದ ಸಂಸ್ಕಾರಗಳನ್ನು ಜನರಿಗೆ ತಿಳಿಸಲು ಕಟಿಬದ್ಧರಾದ ಶ್ರೀಗಳು, ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಇಂದಿನ ಯುವಜನಾಂಗಕ್ಕೆ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಗಳನ್ನು ತಿಳಿಸಿದ್ದಾರೆ, ಧರ್ಮದ ಪ್ರವರ್ತನೆಗಾಗಿ ಹಲವಾರು ಉಪಶಾಖೆಗಳನ್ನು ತೆರೆದಿದ್ದಾರೆ.

ಶ್ರೀಗಳ ಮಾನವೀಯ ಮೌಲ್ಯದ ಸೇವೆಗಳನ್ನು ಗುರುತಿಸಿದ ಕೇಂದ್ರ ಸರಕಾರವು ‘ಪದ್ಮಭೂಷಣ’ ಪುರಸ್ಕಾರವನ್ನು
ಅವರಿಗೆ ಸಮರ್ಪಿಸಿ ಗೌರವಿಸಿದೆ. ಮಾತ್ರವಲ್ಲದೆ, ಶಿಕಾಗೋ ಧರ್ಮಸಂಸತ್ತಿನಿಂದ ‘ಅಭಿನವ ವಿವೇಕಾನಂದ’, ಕರ್ನಾಟಕ ಸರಕಾರದಿಂದ ‘ಪರಿಸರ ರತ್ನ’, ಜೈನ ಸಮಾಜದಿಂದ ‘ವಿದ್ಯಾರತ್ನ’ ಹಾಗೂ ನಿವಾರಣ ಸಂಸ್ಥೆಯಿಂದ ‘ಸೇವಾರತ್ನ’ ಪ್ರಶಸ್ತಿಗಳಿಗೆ ಶ್ರೀಗಳು ಪಾತ್ರರಾಗಿದ್ದಾರೆ.

(ಲೇಖಕರು ಒಕ್ಕಲಿಗ ಯುವ
ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷರು)

ಇದನ್ನೂ ಓದಿ: Shankaracharya Swami: ಮುಸ್ಲಿಮರು ಭಾರತದಲ್ಲಿ ಇರಲೇಬಾರದು; ಕಾಂಗ್ರೆಸ್‌ನ ನೆಚ್ಚಿನ ಶಂಕರಾಚಾರ್ಯ ಸ್ವಾಮೀಜಿಯ ಹೊಸ ಹೇಳಿಕೆ!