Tuesday, 26th November 2024

ಕಣ್ಮರೆಯಾದ ಕೊತ್ತಂಬರಿ ಸೊಪ್ಪು

ಡಾ.ಪ್ರಕಾಶ್ ಕೆ.ನಾಡಿಗ್

ನಾನು ಯೂರೊಪ್ ಪ್ರವಾಸ ಹೋದಾಗ ಡೆನ್ಮಾರ್ಕ್‌ನ ಅಲ್ಬರ್ಗನಲ್ಲಿರುವ ನನ್ನ ಸ್ನೇಹಿತ ಮೆಲ್ವಿನ್ ಮನೆಯಲ್ಲಿ ಉಳಿದು ಕೊಂಡು, ಅಲ್ಲಿಂದಲೇ ಸುತ್ತಾಡಲು ಹೋಗಿದ್ದೆ. ಅಲ್ಲಿನ ಪ್ರಸಿದ್ಧ ಓಷನೇರಿಯಂ ನೋಡಲು ಹೋಗುವವರಿದ್ದೆವು.

ಸರಿ, ಮಧ್ಯಾಹ್ನ ಏನು ತಿನ್ನುವುದು? ನನ್ನ ಸ್ನೇಹಿತ ಮೆಲ್ವಿನ್‌ಗೆ ನನ್ನ ಬಗ್ಗೆೆಯೇ ಚಿಂತೆ. ಅವನು ಮಿಶ್ರಾಹಾರಿ. ನಾನೋ ಸಸ್ಯಹಾರಿ.
ಹಾಗಾಗಿ ಅವನು ಹಿರ್ಟ್‌ಶಾಲ್ಸ್ ಪ್ರದೇಶದಲ್ಲಿ ಯಾವುದಾದರೂ ಭಾರತೀಯ ಹೋಟೆಲ್‌ಗಳಿವೆಯೋ ಎಂದು ಗೂಗಲ್‌ನಲ್ಲಿ ಹುಡುಕಿದ. ಯಾವೂದೂ ಇರಲಿಲ್ಲಾ.

ಇನ್ನೇನು ಮಾಡುವುದು? ನಾನು ಭಾರತದಿಂದ ಹೋಗುವಾಗ ಮೆಲ್ವಿನ್‌ಗೆಂದು ಇನ್ಸ್ಟೆಂಟ್ ದೋಸಾ ಮಿಕ್ಸ್‌ ಮಾಡಿಕೊಂಡು ಬಂದಿದ್ದೆ. ಬೆಳಗ್ಗೆೆ ತಿಂಡಿಗೆ ದೋಸೆ ಮಾಡಿಕೊಂಡು ತಿಂದರಾಯಿತು, ಮಧ್ಯಾಹ್ನಕ್ಕೆ ಉಪ್ಪಿಟ್ಟು ಮಾಡಿ ತೆಗೆದುಕೊಂಡು ಹೋಗೊಣವೆಂದು ತೀರ್ಮಾನಿಸಿದೆವು. ರಾತ್ರಿಯೇ ದೋಸೆಹಿಟ್ಟು ಕಲಸಿಟ್ಟಿದ್ದೆೆ. ಬೆಳಗ್ಗೆೆ ಬೇಗನೆ ಎದ್ದು ಉಪ್ಪಿಟ್ಟು ಮಾಡಿ ಡಬ್ಬಿಗೆ ಹಾಕಿ ರೆಡಿ ಮಾಡಿದ್ದೆ. ನನ್ನ ಸ್ನೇಹಿತ ಸ್ವಲ್ಪ ಆಫಿಸ್‌ಗೆ ಹೋಗಿ ಬರುತ್ತೇನೆಂದು ಹೋದ. ಅವನು ಬರುವಷ್ಟರಲ್ಲಿ ನಾನು ದೋಸೆ ಮಾಡಿಕೊಂಡು ತಿಂದು ಅವನಿಗೆ ಮಾಡಿಟ್ಟಿದ್ದೆ. ನಾನು ಉಪ್ಪಿಟ್ಟು ಮಾಡುವಾಗ ನನ್ನ ಗೆಳೆಯ ಕೊತ್ತಂಬರಿ ಸೊಪ್ಪು ಇದೆ ಬೇಕಾದರೆ ಹಾಕು ಎಂದಿದ್ದ. ಅಡುಗೆ ಕಟ್ಟೆೆಯ ಮೇಲೆ, ಒಂದು ಕವರಿನಲ್ಲಿ ಆಗ ತಾನೆ ಕಿತ್ತು ಇಟ್ಟಷ್ಟು ತಾಜಾತನದಿಂದ ಕೂಡಿದ ಕೊತ್ತಂಬರಿ ಸೊಪ್ಪು ಇತ್ತು. ಕೊತ್ತಂಬರಿ ಕಟ್ಟಿನ ಮೇಲಿನ ಭಾಗವನ್ನು ಕತ್ತರಿಸಿ ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ ಉಪ್ಪಿಟ್ಟಿಗೆ ಸ್ವಲ್ಪ ಹಾಕಿ, ಉಳಿದದ್ದನ್ನು ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟೆ.

ಕೊತ್ತಂಬರಿ ಸೊಪ್ಪಿನ ವಾಸನೆಗೆ ಎದ್ದು ಬಂದ ನನ್ನ ಗೆಳೆಯ ‘‘ವಾಹ್ ಚೆನ್ನಾಗಿ ವಾಸನೆ ಬರ್ತಾ ಇದೆ. ಅದು ಸರಿ, ಕೊತ್ತಂಬರಿ ಸೊಪ್ಪಿನ ಗಿಡ ಎಲ್ಲಿ ಕಾಣ್ತಾ ಇಲ್ಲಾ ಎಂದ. ‘‘ಏನು ಗಿಡನಾ? ಗಿಡ ಇಲ್ಲೆಲ್ಲಿರುತ್ತೆ?’’ ಎಂದೆ. ‘‘ಇಲ್ಲೇ ಇತ್ತಲ್ಲಾ ಎಂದು ಅದು ಇದ್ದ ಜಾಗವನ್ನು ತೋರಿಸಿದ.

‘‘ಅಲ್ವೋ, ಅದು ಕೊತ್ತಂಬರಿ ಕಟ್ಟಲ್ವಾ? ನಾನು ಮೇಲಿನ ಸೊಪ್ಪನ್ನೆಲ್ಲಾ ಕತ್ತರಿಸಿ ತೊಳೆದು ಉಪ್ಪಿಟ್ಟಿಗೆ ಸ್ವಲ್ಪ ಹಾಕಿ ಉಳಿದಿ ದ್ದನ್ನು ಫ್ರಿಜ್‌ನಲ್ಲಿಟ್ಟಿದ್ದೇನೆ. ಬುಡವನ್ನು ಡಸ್ಟ್ ಬಿನ್‌ನಲ್ಲಿ ಏಸೆದಿದ್ದೇನೆ’’ ಎಂದೆ!

ಇದನ್ನು ಕೇಳಿ ಅವನು ಜೋರಾಗಿ ನಗಲಾರಂಬಿಸಿದ. ‘‘ಅಯ್ಯೋ ಪೆದ್ದ ಅದು ಕೊತ್ತಂಬರಿ ಕಟ್ಟಲ್ಲಾ! ಅದು ಕೊತ್ತಂಬರಿ ಗಿಡ!’’ ಎಂದ. ಅಲ್ಲೆೆಲ್ಲಾ ಸಣ್ಣ ಸಣ್ಣ ಕುಂಡಗಳಲ್ಲಿ ಕೊತ್ತಂಬರಿ ಬೀಜ ಹಾಕಿ, ಸುತ್ತಲೂ ಒಂದು ಕವರ್ ಕಟ್ಟಿ, ಹತ್ತು ಸೇಂಟಿಮೀಟರ್ ಎತ್ತರ ಆದ ಮೇಲೆ ಸೂಪರ್ ಬಜಾರ್‌ಗಳಲ್ಲಿ ಮಾರುತ್ತಾರೆ. ಆ ಗಿಡವನ್ನು ಖರೀದಿಸಿ ತಂದು, ಅಡುಗೆ ಕೋಣೆಯಲ್ಲಿ ಗ್ಯಾಸ್ ಬಳಿ ಇಟ್ಟರೆ ಸಾಕು, ಸ್ವಲ್ಪ ಸ್ವಲ್ಪ ನೀರು ಹಾಕುತ್ತಿರಬೇಕು.

ಅದು ಬೆಳೆಯುತ್ತಿರುತ್ತದೆ. ಬೇಕಾದಾಗ ಸ್ವಲ್ಪ ಸ್ವಲ್ಪ ತಾಜಾ ಕೊತ್ತಂಬರಿ ಸೊಪ್ಪನ್ನು ಕಿತ್ತು ಉಪಯೋಗಿಸಬಹುದು. ಅದು ಹಾಗೆ ಒಂದೆರಡು ತಿಂಗಳು ಗಿಡ ಬೆಳೆಯುತ್ತಿರುತ್ತದೆ. ಡೆನ್ಮಾರ್ಕಿಗರು ತಮ್ಮ ಸ್ಥಳೀಯ ಅಡುಗೆಯಲ್ಲಿ ಇದನ್ನು ಬಳಸುತ್ತಾರಂತೆ. ಪರ ವಾಗಿಲ್ಲಾ ಬಿಡು ಸಂಜೆ ಇನ್ನೊಂದು ತಂದರಾಯಿತು ಎಂದ. ಸಂಜೆ ಸೂಪರ್ ಮಾರ್ಕೆಟ್‌ಗೆ ಹೋದಾಗ ಮರೆಯದೇ ಇನ್ನೊಂದು ಕೊತ್ತಂಬರಿ ಗಿಡವನ್ನು ತಂದಿದ್ದೆ. ನಾನಲ್ಲಿದ್ದಷ್ಟು ದಿನ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕುತ್ತಿದ್ದೆ. ನಾನು ವಾಪಸ್ ಹೊರಡುವ ಹೊತ್ತಿಗೆ ಸುಮಾರು ಮೂರು ಸೇಂಟಿಮೀಟರ್‌ನಷ್ಟು ಎತ್ತರವಾಗಿತ್ತು.

ಗ್ಯಾಸ್ ಕಟ್ಟೆಯ ಮೇಲಿರುವ ಈ ಕೊತ್ತಂಬರಿ ಗಿಡವನ್ನು ನೋಡಿದಾಗಲೆಲ್ಲಾ ಅವನಿಗೆ ಈಗಲೂ ನಗು ಬರುತ್ತದೆ ಎಂದು ಫೋನ್ ಮಾಡಿದಾಗಲೆಲ್ಲಾ ಹೇಳುತ್ತಿರುತ್ತಾನೆ.