Tuesday, 26th November 2024

Surendra Pai Column: ನಲುಗುತ್ತಿದೆ ಮೂಲ ಅಸ್ಮಿತೆ

ಅಭಿಮತ

ಸುರೇಂದ್ರ ಪೈ

ಅದು 1857ರ ಕಾಲಘಟ್ಟ. ಬ್ರಿಟಿಷರ ದುರಾಡಳಿತದ ವಿರುದ್ಧ ಭಾರತೀಯರೆಲ್ಲರೂ ಜಾತಿ-ಮತ-ಪಂಥಗಳನ್ನು ಮರೆತು ಒಗ್ಗಟ್ಟಿನಿಂದ ಹೋರಾಡಿದ ಸಮಯವದು. ಅದು ‘ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದೇ ಜನಜನಿತವಾಯಿತು. ಈ ಬೆಳವಣಿಗೆಯನ್ನು ಕಂಡು ಬೆದರಿದ ಬ್ರಿಟಿಷರು ಹೇಗಾದರೂ ಮಾಡಿ ಈ ಒಗ್ಗಟ್ಟನ್ನು ಮುರಿಯದಿದ್ದರೆ ತಮಗೆ ಉಳಿಗಾಲವಿಲ್ಲವೆಂದು ಅರಿತು, ಭಾರತೀಯರ ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಎಲ್ಲ ಷಡ್ಯಂತ್ರಗಳನ್ನೂ ರಚಿಸಿ, ಸಾರ್ವಜನಿಕವಾಗಿ ಯಾರೊಬ್ಬರೂ ವಿಚಾರ ವಿನಿಮಯ ಮಾಡಿಕೊಳ್ಳಲಾಗದಂತೆ ನಿರ್ಬಂಧಿಸಿದರು.

ಆಗ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಆಚರಣೆಯ ನೆಪದಲ್ಲಿ ಭಾರತೀಯರನ್ನು ಒಗ್ಗೂಡಿಸುವ ಮೂಲಕ ರಾಷ್ಟ್ರೀಯ ಮನೋಭಾವನೆಗೆ ಮತ್ತು ನಮ್ಮ ಪರಂಪರೆಯ ಉಳಿವಿಗೆ ಬಲ ತುಂಬಲು ಮುಂದಾದರು. ಗಣೇಶೋತ್ಸವದ ವೇದಿಕೆಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಸ್ತ್ರವನ್ನಾಗಿಸಿ ಕೊಂಡು, ನಮ್ಮ ಮೂಲ ಅಸ್ಮಿತೆಗೆ ಎಲ್ಲೂ ಧಕ್ಕೆ ಬಾರದ ರೀತಿಯಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗೆ ಕಾರಣೀಭೂತರಾದರು.

11 ದಿನ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ವಿಚಾರ ವಿನಿಮಯ ಮಾತ್ರವಲ್ಲದೆ, ಸಾಮಾಜಿಕ ಪಿಡುಗುಗಳ ನಿವಾರಣೆ ಹಾಗೂ ಮಹಿಳಾ ಸ್ವಾತಂತ್ರ್ಯದ ಬಗ್ಗೆಯೂ ಚರ್ಚೆ ಗಳಾಗುತ್ತಿದ್ದವು. ತಿಲಕರ ಈ ಅದ್ಭುತ ಪರಿಕಲ್ಪನೆಯಿಂದಾಗಿ ಸಮಾಜದಲ್ಲಿ ಹಲವು ಕ್ರಾಂತಿಕಾರಕ ಬದಲಾ ವಣೆಗಳಾದವು. ಉದಾಹರಣೆಗೆ, ಆ ಕಾಲದಲ್ಲಿ ಅಸ್ಪೃಶ್ಯರಿಗೆ ದೇಗುಲ ಪ್ರವೇಶದ ಅವಕಾಶವಿರಲಿಲ್ಲ. ಆದರೆ, ಎಲ್ಲರೂ ಒಂದಾಗಿ ಭಕ್ತಿಭಾವದೊಂದಿಗೆ ಧಾರ್ಮಿಕವಾಗಿ ಬೆರೆಯಲು ಸಾರ್ವಜನಿಕ ಗಣೇಶೋತ್ಸವದ ವೇದಿಕೆ
ಅನುವು ಮಾಡಿಕೊಟ್ಟಿತು.

ಆದರೆ ಈಗಿನ ಸಾರ್ವಜನಿಕ ಗಣೇಶೋತ್ಸವದ ಆಚರಣೆಯನ್ನು ನೋಡಿದಾಗ ತಿಲಕರ ಮೂಲ ಅಸ್ಮಿತೆ ಮೂಲೆ ಗುಂಪಾಗಿದೆ ಎಂದು ಅನಿಸದಿರದು. ಎಲ್ಲರೂ ಒಂದೆಡೆ ಸೇರಿ ಆಚರಿಸಬೇಕಾದ ಉತ್ಸವವನ್ನು, ನಮ್ಮ ನಮ್ಮಲ್ಲೇ ನೂರಾರು ಸಂಘಟನೆಗಳನ್ನು ಮಾಡಿಕೊಂಡು ಪ್ರತ್ಯೇಕವಾಗಿ ಆಚರಿಸುತ್ತಿದ್ದೇವೆ. ಹೀಗೆ ಪ್ರತ್ಯೇಕತೆಯ ಕಡೆಗೆ ವಾಲುವುದು ಸರಿಯೇ? ಇಂಥ ಪೈಪೋಟಿಯಿಂದಾಗಿಯೇ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಾಗಿ ಪರಿಸರ-ಸ್ನೇಹಿ ಮಣ್ಣಿನ ಗಣಪನ ಜಾಗದಲ್ಲಿ ಪಿಒಪಿ ಗಣೇಶ ವಿರಾಜಮಾನನಾಗಿದ್ದಾನೆ.

ಇನ್ನು ಉತ್ಸವದ ವೇದಿಕೆಯಲ್ಲಿನ ‘ಡಿಜೆ’ ಆರ್ಭಟದಿಂದ ಗಣಪತಿಗೆ ಮಾತ್ರವಲ್ಲ, ಊರಿನವರ ನೆಮ್ಮದಿಗೂ ಭಂಗ ವಾಗುತ್ತಿದೆ. ಕೆಲವರು ರಾತ್ರಿ 12 ಗಂಟೆಯವರೆಗೂ ಅನ್ಯಭಾಷೆ/ಪಾಶ್ಚಾತ್ಯ ಗೀತೆಗಳನ್ನು ಜೋರಾಗಿ ಹಾಕಿಕೊಂಡು ಕುಣಿದು ಕುಪ್ಪಳಿಸುವುದಿದೆ. ಇದು ಅಗತ್ಯವಿದೆಯೇ? ಇಂಥವರು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಡೆಸಿಬೆಲ್‌ನಲ್ಲಿ ಧ್ವನಿವರ್ಧಕಗಳನ್ನು ಬಳಸಿ ಶಬ್ದಮಾಲಿನ್ಯ ಮಾಡುವುದೇಕೆ? ಇನ್ನು, ಗಣಪತಿಯ ವಿಸರ್ಜನೆಯ ವೇಳೆ ಕೆಲವರು ಪಾನಮತ್ತರಾಗಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು, ತಲೆಬುಡವಿಲ್ಲದ ಡಿಜೆ ಹಾಡಿಗೆ ರಣಕೇಕೆ ಹಾಕಿಕೊಂಡು ನರ್ತಿಸುವುದು ನಮ್ಮ ಸಂಸ್ಕೃತಿಯ ಪ್ರತೀಕವೇ? ಇದು ಬಾಲಗಂಗಾಧರ ತಿಲಕರಂಥ ದೂರದೃಷ್ಟಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಗೌರವವೇ? ಅಥವಾ ನಮಗೀಗ ಸಂಪೂರ್ಣ ಸ್ವಾತಂತ್ರ್ಯ ಬಂದಿರುವುದರಿಂದ ಕಾಲಕ್ಕೆ ತಕ್ಕಂತೆ ನಮ್ಮ ಉದ್ದೇಶವೂ ಬದಲಾಗಿದೆ ಎಂಬ ಮೌಢ್ಯ ಇಂಥವರನ್ನು ಆವರಿಸಿದೆಯೇ?

ಯಾವುದೇ ಉತ್ಸವದ ಆಚರಣೆಗೂ ಮುನ್ನ ಅದರ ಹಿಂದಿರುವ ಮೂಲ ಉದ್ದೇಶವನ್ನೊಮ್ಮೆ ಗ್ರಹಿಸಬೇಕು; ಆಗ ಮಾತ್ರವೇ ಅಂಥ ಆಚರಣೆಯು ಅರ್ಥಪೂರ್ಣವಾಗುತ್ತದೆ, ಮೌಲ್ಯಯುತವಾಗುತ್ತದೆ. ಅದರಿಂದ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಲು ಸಾಧ್ಯವಾಗುತ್ತದೆ. ಅಂಥ ಉತ್ತಮ ಬದಲಾವಣೆಯನ್ನು ಜನರೂ ಪ್ರೀತಿಯಿಂದ ಸ್ವಾಗತಿ ಸುತ್ತಾರೆ. ತಿಲಕರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು
ಹೋಗಲು ನಮ್ಮಲ್ಲಿ ಸಾಕಷ್ಟು ಸರಳ ಮಾರ್ಗಗಳಿವೆ; ಆದರೆ ಅವನ್ನು ಏಕನಿಷ್ಠೆಯಿಂದ, ನಿಸ್ವಾರ್ಥದಿಂದ ಅನು ಸರಿಸುವ ಮನಸ್ಥಿತಿ ನಮ್ಮದಾಗಬೇಕು.

ಸ್ವಾತಂತ್ರ್ಯಪೂರ್ವದಲ್ಲಿ, ‘ದೇಶವು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಕಳಚಿಕೊಳ್ಳಬೇಕು’ ಎಂಬುದಷ್ಟೇ ನಮ್ಮವರ ಗುರಿಯಾಗಿತ್ತು. ಅದರ ನೆರವೇರಿಕೆಗೆ ಅಗತ್ಯವಾದ ಕಾರ್ಯಯೋಜನೆಗಳನ್ನು ತಿಲಕರು ಸಜ್ಜು ಗೊಳಿಸಿದ್ದರು. ಆದರೆ ನಮಗೀಗ ಸ್ವಾತಂತ್ರ್ಯ ಸಿಕ್ಕಿದೆ; ಆದರೂ ನಮ್ಮ ಸುತ್ತಮುತ್ತ ನೂರಾರು ಸಮಸ್ಯೆಗಳಿವೆ.
ರಾಜ್ಯವ್ಯಾಪಿ ಎಲ್ಲಾ ಸಾರ್ವಜನಿಕ ಗಣೇಶೋತ್ಸವದ ವೇದಿಕೆ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಾರದೇಕೆ? ರಾಜ್ಯದ ಪ್ರತಿಯೊಂದು ತಾಲೂಕು ಕೇಂದ್ರದ ಒಂದು ಅನುಕೂಲಕರ ಪ್ರದೇಶದಲ್ಲಿ ಗಣಪನ ಪ್ರತಿಷ್ಠಾಪನೆ ಮಾಡಿ, ಎಲ್ಲರೂ ಅಲ್ಲಿ ಬಂದು ಸೇರುವ ಹಾಗೆ ಮೊದಲು ಯೋಜಿಸಬೇಕು.

ಅಲ್ಲಿ ಹತ್ತು ದಿನಗಳವರೆಗೆ ವಿಭಿನ್ನವೂ ಅರ್ಥಪೂರ್ಣವೂ ಆದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ವೇಳೆ ರಾಜಕೀಯದ ಲವಲೇಶವೂ ಸುಳಿಯದಂತೆ ಎಚ್ಚರ ವಹಿಸಬೇಕು. ಈ ಹತ್ತು ದಿನಗಳ ಪೈಕಿ ಮೊದಲ ದಿನದಂದು ನಮ್ಮ ನಾಡು-ನುಡಿಯ ಬಗ್ಗೆ ವಿಚಾರ ವಿನಿಮಯ ನಡೆಸಬಹುದು. ಅಂದರೆ, ಕನ್ನಡ ಭಾಷೆಯನ್ನು ಉಳಿಸಿ
ಬೆಳೆಸಲು ಏನು ಮಾಡಬಹುದು ಎಂಬುದನ್ನು ಚರ್ಚಿಸಿ, ಅದರ ಅನುಷ್ಠಾನಕ್ಕೆ ಮುಂದಿನ ಒಂದು ವರ್ಷ ಕಾಲ ಕಾರ್ಯನಿರತರಾಗುವಂತೆ ಆಳುಗರನ್ನು ಆಗ್ರಹಿಸಬೇಕು. ಇದೇ ರೀತಿಯಲ್ಲಿ ವಿಭಿನ್ನ ಸಮಸ್ಯೆಗಳನ್ನು ಅನುಕ್ರಮವಾಗಿ ಚರ್ಚೆಗೆ ಕೈಗೆತ್ತಿಕೊಳ್ಳಬಹುದು.

ಅಂದರೆ, ಅವನತಿ ಹೊಂದುತ್ತಿರುವ ಸರಕಾರಿ ಪ್ರಾಥಮಿಕ ಶಾಲೆಗಳ ಉಳಿವಿಗಾಗಿ ಒಕ್ಕೊರಲಿನ ನಿರ್ಣಯ ಕೈಗೊಳ್ಳು ವಿಕೆ, ಸುತ್ತಮುತ್ತಲಿನ ಕೆರೆ-ಕಲ್ಯಾಣಿ, ನದಿಗಳನ್ನು ಸ್ವಚ್ಛವಾಗಿಡಲು ದಿನಪೂರ್ತಿ ಶ್ರಮದಾನ ಮಾಡ ಬೇಕಿರುವುದರ ಅಗತ್ಯ, ಸಾವಯವ ಬೇಸಾಯಕ್ಕೆ ಉತ್ತೇಜನ, ಮಹಿಳಾ ಅಸಮಾನತೆಯನ್ನು ಮತ್ತು ಜಾತಿ ಪದ್ಧತಿಯಲ್ಲಿನ ತೊಡಕುಗಳನ್ನು ನಿವಾರಿಸುವ ಬಗೆಗಿನ ವಿಚಾರಗೋಷ್ಠಿ ಇತ್ಯಾದಿ ಉಪಕ್ರಮಗಳಿಗೆ ಮುಂದಾಗ ಬಹುದು. ಅದೇ ರೀತಿಯಲ್ಲಿ, ಮಾನವನ ಸ್ವಾರ್ಥಬುದ್ಧಿ ಮತ್ತು ಹಸ್ತಕ್ಷೇಪದಿಂದಾಗಿ ಹದಗೆಡುತ್ತಿರುವ ವಾತಾವರಣವನ್ನು ನಮ್ಮ ಕೈಲಾದಷ್ಟರ ಮಟ್ಟಿಗೆ ಸುಸ್ಥಿತಿಗೆ ತರಲು, ಗಣೇಶೋತ್ಸವದ ಆಚರಣೆಯ ಸಂದರ್ಭದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು, ಅವನ್ನು ಪೋಷಿಸುವ ಹೊಣೆಗಾರಿಕೆ ವಹಿಸಿಕೊಂಡರೆ ನಮಗೇ ಎಷ್ಟೊಂದು ಅನುಕೂಲವಾಗುತ್ತದೆ ಯಲ್ಲವೇ? ಹೇಳುತ್ತಾ ಹೋದರೆ, ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ವ್ಯಕ್ತಿತ್ವ ವಿಕಸನ, ಚಿತ್ರಕಲೆ ಪ್ರದರ್ಶನ ಮುಂತಾದ ಹಲವು ವಿಷಯಗಳಲ್ಲಿ ಜನರಿಗೆ ಆಸಕ್ತಿ ಉಂಟುಮಾಡಿ ಭಾಗೀದಾರರನ್ನಾಗಿಸಬಲ್ಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾರ್ವಜನಿಕ ಗಣೇಶೋತ್ಸವದ ವೇದಿಕೆ ಸೂಕ್ತವಾಗಬಲ್ಲದು.

ಇದರಿಂದಾಗಿ ಆಯಾ ಕ್ಷೇತ್ರದ ಕಲಾವಿದರು ಮತ್ತು ಪ್ರದರ್ಶಕರಿಗೂ ಉತ್ತೇಜನ ಸಿಕ್ಕಂತಾಗುತ್ತದೆ. ಇಂಥ ವಿನೂತನ ಕ್ರಮದ ಅನುಸರಣೆಯಿಂದಾಗಿ, ತಿಲಕರು ಹುಟ್ಟುಹಾಕಿದ ಸಾರ್ವಜನಿಕ ಗಣೇಶೋತ್ಸವದ ಆಚರಣೆಯ ಪರಿಕಲ್ಪನೆಗೆ ಮತ್ತಷ್ಟು ಜೀವವನ್ನು ಮತ್ತು ಗೌರವವನ್ನು ತುಂಬಲು, ತನ್ಮೂಲಕ ಜನರಲ್ಲಿ ಸಾಮರಸ್ಯವನ್ನು ಹುಟ್ಟುಹಾಕಲು ಸಾಧ್ಯವಿದೆ. ಯಾವ ಡಿಜೆ ಸದ್ದುಗದ್ದಲ ಇಲ್ಲದೆಯೂ ಇಂಥ ಅರ್ಥ ಪೂರ್ಣ ಕಾರ್ಯಕ್ರಮ ಮಾಡಿದಾಗ, ಆ ವಿಘ್ನ-ನಿವಾರಕನ ಅನುಗ್ರಹವು ದೊರಕುತ್ತದೆ ಎಂಬ ವಿಶ್ವಾಸ ಎಲ್ಲರಲ್ಲೂ ಮೂಡಬೇಕು.

ಹಬ್ಬಗಳು ಮತ್ತು ಉತ್ಸವಗಳು ಭಾರತದ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯದ ಸಂಕೇತವಾಗಿವೆ. ಇವು ನಮ್ಮೆಲ್ಲರ ಮನಸ್ಸುಗಳನ್ನು ಬೆಸೆಯುವ ಕೊಂಡಿಗಳಾಗಿವೆ. ಹಿರಿಯರು ಆಚರಿಸುತ್ತಿದ್ದ ಹಬ್ಬ- ಉತ್ಸವಗಳು ಮತ್ತು ಮೇಲ್ಪಂಕ್ತಿ ಹಾಕಿಕೊಟ್ಟ ಪ್ರತಿಯೊಂದು ವಿಚಾರದ ಹಿಂದೆಯೂ ಸದುದ್ದೇಶಗಳಿವೆ. ಅವನ್ನು ಮೊದಲು ನಾವು ಅರ್ಥಮಾಡಿ ಕೊಳ್ಳೋಣ. ಹೀಗಾದಾಗ, ತಿಲಕರ ಜಾತ್ಯತೀತ ಮನೋ ಭಾವಕ್ಕೆ ಬೆಲೆ ಕೊಟ್ಟಂತಾಗಿ, ಗಣೇಶೋತ್ಸವದ ಆಚರಣೆಯ ನೆಪದಲ್ಲಿ ಪರಸ್ಪರ ಕಿತ್ತಾಡಿಕೊಳ್ಳುವ ಪರಿಪಾಠಕ್ಕೆ ಲಗಾಮು ಬೀಳುತ್ತದೆ.

(ಲೇಖಕರು ಶಿಕ್ಷಕರು)

ಇದನ್ನೂ ಓದಿ: Surendra Pai Column: ನೀರಿನ ನಿಯಮದ ಇನ್ನಾದರೂ ಕಲಿಯೋಣು ಬಾರಾ