Sunday, 24th November 2024

Vishwavani Editorial: ರಕ್ತದ ದಾಹ ಇನ್ನೂ ತೀರಿಲ್ಲವೇ ?

ಹೇ ಯುದ್ಧ.. ನೀನೇಕೆ ಬರುವೆ ಈ ಭೂಮಿಗೆ, ತೊಲಗಾಚೆ ನೀನು ಧರೆಯಾಚೆಗೆ, ಮಾನವನ ಮಾರಣಹೋಮಕ್ಕೆ ಸಿದ್ಧ, ಜಗ ನುಂಗೋ ಯಮದೂತ! ಜನ ನುಂಗೋ ರಣಭೂತ! ನಿನಗಿನ್ನೂ ದಾಹ ಹಿಂಗಿಲ್ವಾ?’ ಎನ್ನುತ್ತದೆ ಒಂದು ಚಲನಚಿತ್ರಗೀತೆ.

ಒಂದೆಡೆ, ಉಕ್ರೇನ್ ಮತ್ತು ರಷ್ಯಾ ನಡುವೆ ವರ್ಷಗಳ ಹಿಂದೆ ಶುರುವಾದ ಹಣಾಹಣಿ ಇನ್ನೂ ನಿಂತಿಲ್ಲ. ಮತ್ತೊಂದೆಡೆ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಶುರುವಾದ ಸಂಘರ್ಷ ಇನ್ನೂ ಮುಂದು ವರಿದಿದೆ. ಇವೆರಡು ಕಾಳಗಗಳಿಂದ ಸಂಭವಿಸಿದ ಸಾವು-ನೋವುಗಳು, ಸ್ವತ್ತುನಷ್ಟಗಳ ಸುದ್ದಿಗಳನ್ನು ಜನರು ಇನ್ನೂ ಜೀರ್ಣಿಸಿಕೊಳ್ಳುತ್ತಿರುವಾಗಲೇ, ಲೆಬನಾನ್ ಮೇಲೆ ಇಸ್ರೇಲ್ ಮುರಕೊಂಡು ಬಿದ್ದಿದೆ.

ಅಲ್ಲಿನ ಹಿಜ್ಬುಲ್ಲಾ ನೆಲೆಗಳನ್ನು ಕೇಂದ್ರೀಕರಿಸಿ ಇಸ್ರೇಲ್ ವಾಯುಪಡೆಯು ನಡೆಸಿದ ಕ್ಷಿಪಣಿಗಳ ತೀವ್ರದಾಳಿ ಯಿಂದಾಗಿ 550ಕ್ಕೂ ಹೆಚ್ಚು ಜನರು ಸಾವಿಗೀಡಾಗಿ, 2000ಕ್ಕೂ ಹೆಚ್ಚು ಮಂದಿ ಗಾಯಗೊಂಡ ಸುದ್ದಿ ಈಗಾಗಲೇ ಜಗಜ್ಜಾಹೀರು. ಇಂಥ ಸಂಘರ್ಷ, ದಾಳಿಗಳಿಗೆ ಕಾರಣವೇನೇ ಇರಲಿ ಮತ್ತು ಅವಕ್ಕೆ ಚಿತಾವಣೆ ನೀಡಿದ್ದು ಯಾರೇ ಆಗಿರಲಿ, ಅವುಗಳಿಂದ ಬಹುತೇಕವಾಗಿ ನರಳುವವರು ಅಮಾಯಕರು ಎಂಬುದು ಅಪ್ರಿಯಸತ್ಯ.

ಈ ಪ್ರಪಂಚದಲ್ಲಿ, ಸಂಧಾನ ಅಥವಾ ಶಾಂತಿ ಮಾತುಕತೆಗಳ ಮೂಲಕ ಪರಿಹರಿಸಲಾಗದ ಸಮಸ್ಯೆ ಯಾವುದೂ ಇಲ್ಲ. ಆದರೆ ಇಂಥ ನಿರುಪದ್ರವಿ ಹೆಜ್ಜೆಗಳು ರಕ್ತಪಿಪಾಸುಗಳಿಗೆ ಬೇಕಾಗಿಲ್ಲ; ತಮ್ಮ ಶಸಾಸಬಲ ತೋರಿಸಿಯೇ
ಇಷ್ಟಾರ್ಥ ನೆರವೇರಿಸಿಕೊಳ್ಳಬೇಕೆಂಬ ಅಹಮಿಕೆಯೇ ಇಂಥವರಿಗೆ ಪ್ರಿಯವಾಗಿಬಿಟ್ಟಿದೆ. ಈ ಬಯಕೆಯ ಬೆಂಕಿಗೆ ತಿದಿ ಊದಲು ಶಸಾಸಗಳ ಮಾರಾಟ ಗಾರರು ಇದ್ದೇ ಇರುತ್ತಾರೆ!

ಹೀಗಿದ್ದಾಗ, ಯುದ್ಧೋನ್ಮಾದಕ್ಕೆ ಕೊನೆಯೆಲ್ಲಿ? ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿರುವ ಪ್ರಪಂಚ,
ಮತ್ತೊಂದನ್ನು ಮಡಿಲು ತುಂಬಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದು ಗೊತ್ತಿದ್ದೂ ಕೆಲವರನ್ನು ಯುದ್ಧದ ಭೂತ ಮೆಟ್ಟಿಕೊಂಡಂತಿದೆ. ಮಹಾಯುದ್ಧದ ವೇಳೆ ಹಿರೋಷಿಮಾ-ನಾಗಾಸಾಕಿ ನಗರಗಳ ಮೇಲೆ ಬಾಂಬು ಹಾಕಿಸಿಕೊಂಡ
ಜಪಾನ್, ಅದರ ದುಷ್ಪರಿಣಾಮಗಳಿಂದ ಚೇತರಿಸಿಕೊಳ್ಳಲು ದಶಕಗಳೇ ಹಿಡಿಯಿತು ಎಂಬ ಜ್ಞಾನವೂ ಇಂಥ ರಕ್ತಪಿಪಾಸುಗಳಿಗೆ ಇಲ್ಲವಾಯಿತೇ?

ಇದನ್ನೂ ಓದಿ: Israel Airstrike: ಹೆಜ್ಬುಲ್ಲಾಗಳನ್ನು ಪುಡಿಗಟ್ಟಿದ ಇಸ್ರೇಲ್‌ ಸೇನೆ; 500ಕ್ಕೂ ಅಧಿಕ ಬಂಡುಕೋರರ ಹತ್ಯೆ