Saturday, 28th September 2024

Roopa Gururaj Column: ಜೀವನಯಾತ್ರೆ ಮುಗಿಸಿದವರನ್ನು ಹೋಗಲು ಬಿಡಿ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಹಿಂದೆ ವೀರಶರ್ಮ ಎಂಬ ರಾಜನಿದ್ದ, ಅವನ ಪತ್ನಿ ಸೌಂದರ್ಯ. ಅವಳು ಹೆಸರಿಗೆ ತಕ್ಕ ಹಾಗೆ ಇದ್ದಳು. ರಾಜ ರಾಣಿಯರ ಅನ್ಯೋನ್ಯತೆ ಕುರಿತು ಅರಮನೆಯಲ್ಲಿ ಚರ್ಚೆಯಾಗುತ್ತಿತ್ತು. ರಾಜನ ಪತ್ನಿ ಅಚಾನಕ್ ಮರಣ ಹೊಂದಿದಳು. ರಾಜನು ದುಃಖ ತಡೆಯಲಾರದೆ ಶವದ ಮುಂದೆ ಕುಳಿತನು. ರಾಜ ಕಾರ್ಯಗಳೆಲ್ಲ ಸ್ಥಗಿತಗೊಂಡವು.
ರಾಜನ ತಂದೆ-ತಾಯಿ, ಮಂತ್ರಿಗಳು ಎಲ್ಲ ಯೋಚಿಸಿ ಒತ್ತಾಯದಿಂದ ರಾಣಿಯ ಶವಸಂಸ್ಕಾರ ಮಾಡಿದರು.

ರಾಜನು ಹೂಳಿದ ಶವ ತಂದು ರಾಸಾಯನಿಕಗಳಿಂದ ರಕ್ಷಣೆ ಮಾಡಿ ಮತ್ತೆ ಮೈಮರೆತನು. ರಾಜ್ಯದ ಗತಿ ಏನು ಎಂದು ಚಿಂತಿಸಿದ ರಾಜ ಪರಿವಾರ, ರಾಜನು ತನ್ನ ರಾಣಿ ಸತ್ತ ನಂತರ ಏನಾದಳು? ಎಂದು ತಿಳಿಯಲು ತ್ರಿಕಾಲ
ಜ್ಞಾನಿಗಳಾದ ಮಹರ್ಷಿಗಳಲ್ಲಿ ಹೋದನು. ಅರಮನೆಗೆ ಬಂದ ಮಹರ್ಷಿಗಳಿಗೆ ರಾಜ ತನ್ನ ಸಂಕಟವನ್ನು ಹೇಳಿ, ‘ನನ್ನ ಪತ್ನಿ ಈಗ ಎಲ್ಲಿದ್ದಾಳೆ ನಿಮಗೆ ಗೊತ್ತೇ?’ ಎಂದು ಕೇಳಿದ.

‘ಹೌದು ಗೊತ್ತು. ನಿನ್ನ ಪತ್ನಿ ಜೀವಿತ ಕಾಲದಲ್ಲಿ ತನ್ನ ದೇಹ ಸೌಂದರ್ಯ ಕುರಿತೇ ಗಮನ ಹರಿಸಿದ್ದಳು. ಹಾಗಾಗಿ ಅವಳು ಈಗ ಕುರೂಪಿ ದುಂಬಿಯಾಗಿ ಹುಟ್ಟಿ ಈ ಉದ್ಯಾನದಲ್ಲಿ ಗಂಡು ದುಂಬಿ ಜತೆ ಸುಖವಾಗಿದ್ದಾಳೆ’ ಎಂದು ಜ್ಞಾನಿಗಳು ಹೇಳಿದರು. ಇದನ್ನು ಕೇಳಿ ಅನುಮಾನಗೊಂಡ ರಾಜ, ಋಷಿಗಳಿಗೆ ತೋರಿಸುವಂತೆ ಹೇಳಿದ. ಋಷಿಗಳು ತಮ್ಮ ಜ್ಞಾನ ಶಕ್ತಿಯಿಂದ ದುಂಬಿಯನ್ನು ಕರೆದರು. ಅವರ ಮುಂದೆ ದುಂಬಿ ಬಂತು. ರಾಜನು ದುಂಬಿಗೆ ‘ನೀನು ಪತಿಯ ಜತೆ ಸುಖವಾಗಿರುವೆಯಾ? ನಿನಗೆ ಪೂರ್ವಜನ್ಮದ ಸ್ಮರಣೆ ಇದೆಯೇ?’ ಎಂದಾಗ, ಅದು ಹೇಳಿತು ‘ನಾನು ಈ ಜನ್ಮದಲ್ಲಿ ನನ್ನ ಪತಿ ಜತೆ ಸುಖವಾಗಿದ್ದೇನೆ.

ಹಿಂದಿನ ಜನ್ಮದ ಸ್ಮರಣೆಯೂ ಇದೆ. ನಾನು ನಿನ್ನ ಪ್ರೀತಿಯ ರಾಣಿ ಸೌಂದರ್ಯ’ ಆಗಿದ್ದೆ ಎಂದಿತು. ರಾಜ ಹೇಳಿದ,
‘ನೀನು ಈಗಲೂ ನನ್ನ ಪ್ರೀತಿಸುವೆಯಾ? ನನ್ನ ಅರಮನೆಯ ಉದ್ಯಾನವನಕ್ಕೆ ಬಾ, ನನ್ನ ಜತೆ ಇರು’ ಎಂದನು.
ಕೋಪಗೊಂಡ ದುಂಬಿ, ‘ನನ್ನ ಗಂಡ ನನಗಾಗಿ ಕಾಯುತ್ತಿದ್ದಾನೆ, ನಾನು ಈಗಲೇ ಹೋಗಬೇಕು. ಈ ಜನ್ಮದಲ್ಲಿ ನನ್ನ ಗಾತ್ರ ಹಾಗೂ ಪರಿಸರಕ್ಕನುಗು ಣವಾಗಿ ನನ್ನ ಪತಿಯ ಜತೆ ಸಂತೋಷವಾಗಿರುವೆ. ನೀನು ಹೀಗೆ ನನ್ನ ಸಮಯ ಹಾಳು ಮಾಡಿದರೆ ನಿನ್ನ ಕಿವಿಯೊಳಗೆ ಹೋಗಿ ಕೊರೆದು ತೂತು ಮಾಡುವೆ’ ಎಂದಿತು. ರಾಜನಿಗೆ ಅರ್ಥವಾಯಿತು, ಪತ್ನಿಯ ಮೇಲಿದ್ದ ವ್ಯಾಮೋಹ ಹರಿಯಿತು. ರಾಜಧಾನಿಗೆ ಬಂದು ರಾಣಿಯ ಶವ ಸಂಸ್ಕಾರ ಮಾಡಿ, ಪ್ರಜೆಗಳಿಗೆ ಒಳ್ಳೆಯ ರಾಜನಾಗುವ ಕಡೆ ಗಮನ ಕೊಟ್ಟನು. ಒಂದಷ್ಟು ವರ್ಷಗಳಲ್ಲಿ ಮತ್ತೆ ಮದುವೆಯಾಗಿ ಸುಖವಾಗಿದ್ದನು.
ಬದುಕಿನ ನಿಯಮವೇ ಹೀಗೆ! ಎಲ್ಲರೂ ಒಂದಲ್ಲ ಒಂದು ದಿನ ಅವರ ಆಯಸ್ಸು ತೀರಿದ ಮೇಲೆ ಹೊರಡಲೇಬೇಕು. ಬದುಕಿದ್ದಾಗ ನಾವು ಜೀವನವನ್ನು ಎಷ್ಟು ಸಾರ್ಥಕತೆಯಲ್ಲಿ ಕಳೆಯುತ್ತೇವೆ ಎನ್ನುವುದರ ಮೇಲೆ ನಮ್ಮ ಮುಂದಿನ ಜನ್ಮ ನಿರ್ಧಾರವಾಗುತ್ತದೆ.

ಸಾವಿಲ್ಲದ ಮನೆಯ ಸಾಸಿವೆಯಂತೆ ನಮಗೆ ಅತ್ಯಂತ ಪ್ರಿಯವಾದವರು, ನಮ್ಮ ಉಸಿರಾಗಿರುವವರು ಯಾವುದೋ ಒಂದು ಹೊತ್ತಿನಲ್ಲಿ ನಮ್ಮನ್ನು ಬಿಟ್ಟು ನಡೆದು ಬಿಡುತ್ತಾರೆ. ಅವರನ್ನು ಸಾರ್ಥಕವಾಗಿ ನೆನೆಸಿಕೊಂಡು ಅವರಿಂದ ಆಗುತ್ತಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು ಅವರಿಗೆ ಗೌರವ, ಪ್ರೀತಿ ಕೊಡುವ ವಿಧಾನ. ಅದನ್ನು ಬಿಟ್ಟು ಅವರದ್ದೇ ನೆನಪಿನಲ್ಲಿ ಕೊರಗುತ್ತಾ, ಅವರ ನೆನಪುಗಳನ್ನು ಮುಷ್ಟಿಯಲ್ಲಿ ಬಿಗಿ ಹಿಡಿದು ಸುತ್ತಲಿರುವವರನ್ನು ದುಃಖದ ಕೋಪದಲ್ಲಿ ತಳ್ಳುವುದು ಆರೋಗ್ಯಕರ ಬೆಳವಣಿಗೆಯಲ್ಲ. ಅತಿಯಾದ ಸಂಭ್ರಮ, ಅತೀ ದುಃಖ ಎರಡೂ ಒಳಿತಲ್ಲ. ನೆನಪಿರಲಿ ಹಿತಮಿತವಾಗಿ ಎಲ್ಲ ಭಾವಗಳನ್ನು ಒಂದು ಸಮಚಿತ್ತದಲ್ಲಿ ಅನುಭವಿಸುತ್ತಾ ಜೀವನದಲ್ಲಿ ಮುಂದೆ ಹೆಜ್ಜೆ ಹಾಕುತ್ತಾ ಹೋಗಬೇಕು.