Friday, 20th September 2024

ಕೆಲವೊಮ್ಮೆ ಸೋತು ಗೆಲ್ಲೋಣ !

ಮಾತುಕತೆ

ಡಾ.ಕೆ.ಪಿ.ಪುತ್ತುರಾಯ

ಇದು ಸ್ಪರ್ಧಾತ್ಮಕ ಯುಗ. ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆಗಳು, ಅತ್ಯುನ್ನತ ಮಟ್ಟದ ಸಾಧನೆಗಳು ಅನಿವಾರ್ಯ. ಸ್ಪರ್ಧೆ ಎಂದ ಮೇಲೆ, ಎಲ್ಲರೂ ಗೆಲ್ಲಲೂ ಸಾಧ್ಯವಿಲ್ಲ. ಒಬ್ಬರು ಗೆಲ್ಲಬೇಕಾದರೆ, ಇನ್ನೊಬ್ಬರು ಸೋಲಲೇಬೇಕು, ಆದರೆ ಇಬ್ಬರೂ ಗೆಲ್ಲಬಹು  ದಾದ ಆಟವೆಂದರೆ ಪ್ರೇಮ; ಇಬ್ಬರೂ ಸೋಲುವ ಆಟವೆಂದರೆ ಮದುವೆ ಎಂದು ಮಾರ್ಮಿಕವಾದ ನುಡಿಗಳು.

ಅದೇನೆ ಇರಲಿ, ಗೆಲುವಿಗೆ ಬೆಲೆ ಬರೋದೆ ಸೋಲಿನಿಂದ. ಇದನ್ನೇ ಸ್ವಾರಸ್ಯಕರವಾಗಿ ಕವಿಯೊಬ್ಬರು ಹೀಗೆ ಬರೆದರು. ಕೆಲವರು ಸೋಲದೆ, ಎಲ್ಲರೂ ಗೆದ್ದರೆ, ಗೆಲುವಿಗೆ ಏನು ಬೆಲೆಯುಂಟು?. ಈ ಹಿನ್ನೆಲೆಯಲ್ಲಿ ಗೆಲುವೇ ಸೋಲಿಗೆ ಕಾರಣವಾದರೂ, ಸೋಲೇ
ಮುಂದಿನ ಗೆಲುವಿಗೆ ಸೋಪಾನವಾಗಬೇಕು. ಆಟದಲ್ಲಾಗಲೀ, ಬದುಕಿನಲ್ಲಾಗಲೀ, ನಿರಂತರವಾಗಿ ಗೆಲ್ಲುತ್ತಲೇ ಇರೋದು ಅಸಂಭವ. ಜೋಕಾಲಿ ಮುಂದಕ್ಕೆ ಹೋಗಬೇಕಾದರೆ, ಹಿಂದಕ್ಕೆ ಹೋಗಲೇಬೇಕು. ಜೀವನವೂ ಒಂದು ಜೋಕಾಲಿ ಇದ್ದಂತೆ.
ಮುನ್ನಡೆಗೆ ಮುನ್ನ, ಹಿನ್ನಡೆ ಸರ್ವೇ ಸಾಮಾನ್ಯ.

ಅಲೆಗಳೇ ಇಲ್ಲದ ಶಾಂತ ಸಮುದ್ರ ಸಮರ್ಥ ಈಜುಗಾರನನ್ನು ಸೃಷ್ಟಿಸಲಾರದು. ಅಂತೆಯೇ, ಏಳು ಬೀಳುಗಳಿಲ್ಲದ ಜೀವನ, ಸಮರ್ಥ ವ್ಯಕ್ತಿಯನ್ನೆಂದೂ ನಿರ್ಮಿಸಲಾರದು. ಆದರೆ ಸುಖ ದುಃಖೇ ಸಮೇ ಕೃತ್ವಾ, ಲಾಭಾ ಲಾಭ ಜಯಾ ಜಯಾ ಎಂಬ
ಗೀತೆಯ ವಾಣಿಯಂತೆ, ಗೆಲುವು – ಸೋಲು ಗಳೆರಡನ್ನೂ, ಏಕರೂಪದಲ್ಲಿ ಸಮಚಿತ್ತದಿಂದ ಸಮಭಾವದಿಂದ ಸ್ವೀಕರಿಸುವ ಸಿದ್ಧಾಂತ ನಮ್ಮದಾಗಬೇಕು.

ಯಾಕೆಂದರೆ “Success is never final and failure is never total”  ಎಂಬ ಮಾತಿನಂತೆ, ಗೆಲುವು – ಸೋಲುಗಳೆರಡೂ ಶಾಶ್ವತ ವಲ್ಲ. ಒಂದರ ಹಿಂದೆ, ಇನ್ನೊಂದು ಹೊಂಚು ಹಾಕುತ್ತಲೇ ಇರುತ್ತದೆ. ಸೋಲಿನಿಂದ ಕಲಿತಷ್ಟೇ ಗೆಲುವಿನಿಂದಲೂ ಕರಿಯುವು ದಿದೆ. ಸೋಲಿನಿಂದ ಮುಂದೆ ಹೇಗೆ ಗೆಲ್ಲಬೇಕು ಎಂಬುದನ್ನು ಕಲಿತುಕೊಳ್ಳಬೇಕಾದರೆ, ಗೆಲುವಿನಿಂದ ಮುಂದೆಯೂ ಹೇಗೆ ಸೋಲಬಾರದು ಎಂಬುದನ್ನು ತಿಳಿದುಕೊಂಡಿರಬೇಕು. ಹಾಗೇ ನೋಡಿದರೆ ಕೆಲವೊಮ್ಮೆ ವ್ಯಕ್ತಿಯ ಬೆಳವಣಿಗೆಗೆ ಗೆಲುವಿನಂತೆ, ಸೋಲು ಕೂಡಾ ಸಹಕಾರಿಯಾಗುತ್ತದೆ. ಅದು ಹೇಗೆಂದರೆ ಕೆಲವರಲ್ಲಿ ಗೆಲುವು ನೆತ್ತಿಗೆ ಏರಿ ಗರ್ವವನ್ನು ತಂದರೆ, ಸೋಲು ಹೃದಯಕ್ಕೆ ಇಳಿದು, ನಮ್ರತೆಯನ್ನು ತಂದುಕೊಡುತ್ತದೆ. ಗೆಲುವು ಗೈದ ತಪ್ಪುಗಳನ್ನು ಮುಚ್ಚಿ ಹಾಕಿದರೆ, ಸೋಲು ನಡೆದು ಹೋದ ತಪ್ಪುಗಳನ್ನು ಎತ್ತಿ ತೋರಿಸಿ ಮುಂದೆ ಪುನಾರವೃತ್ತಿ ಆಗದಂತೆ ನೋಡಿಕೊಳ್ಳುತ್ತದೆ.

ಒಟ್ಟಿನಲ್ಲಿ ಗೆದ್ದಾಗ, ಹಿಗ್ಗಿ ಬೂದು ಕುಂಬಳ ಕಾಯಿಯಂತೆಯೂ ಆಗಬಾರದು; ಸೋತಾಗ ಕುಗ್ಗಿ ಹಾಗಲಕಾಯಿಯಂತೆಯೂ ಆಗಬಾರದಂಬುದೇ ತಾತ್ಪರ್ಯ. ಆದರೆ, ವಾಸ್ತವದಲ್ಲಿ ಆಗೋದೇ ಬೇರೆ, ಬಹುತೇಕ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಗಳಿಗೆ ಗೆಲ್ಲೋದೆ ಮುಖ್ಯ. ಗೆಲ್ಲಲು ಅನುಸರಿಸುವ ಮಾರ್ಗವಲ್ಲ! ಒಮ್ಮೆ ಗೆದ್ದು ಬಿಟ್ಟರೆಂದರೆ, ಅವರನ್ನು ಹಿಡಿಯುವವರೇ ಇಲ್ಲ.
ಗೆಲುವಿಗೆ ಹೆತ್ತವರು ಹಲವಾರು, ಸೋಲಿಗೆ ಹೆತ್ತವರೇ ಇಲ್ಲ; ಅದು ಅನಾಥೆ ಎಂಬ ಮಾತಿನಂತೆ, ಈ ಗೆದ್ದ ಎತ್ತಿನ ಬಾಲ ಹಿಡಿಯಲು ಮುಂದಾಗುವವರೆ ಹೆಚ್ಚು.

ಗೆದ್ದವರಷ್ಟೇ ಗುಣಗಾನ; ಅವರಿಗೇ ಸನ್ಮಾನ, ಸೋತವರನ್ನು ಕೇಳುವವರ ಇಲ್ಲ. ಗೆದ್ದಾಗ ಪಾಲುದಾರರ ಅನೇಕ; ಆದರೆ ಸೋತಾಗ
ಮಾಲೀಕರು ಸೋತವರೊಬ್ಬರೇ. ಸೋತವರು ಅಷ್ಟೇ; ಸೋಲುತ್ತಿದ್ದಂತೆ, ಯಾರಿಗೂ ಗೊತ್ತಾಗದಂತೆ ಮತ ಎಣಿಕೆ ಕೇಂದ್ರದಿಂದ ಜಾಗ ಖಾಲಿ ಮಾಡುತ್ತಾರೆ ಮತ್ತು ತಮ್ಮ ಸೋಲನ್ನು ಎದೆಗುಂದದೆ ಸ್ವೀಕರಿಸೋದರ ಬದಲು ಹಾಗೂ ತಮ್ಮ ಸೋಲಿಗೆ ಕಾರಣ ವೇನೆಂಬುದನ್ನು ಪ್ರಾಮಾಣಿಕವಾಗಿ ಕಂಡುಹಿಡಿಯೋದರ ಬದಲು ತಮ್ಮ ಸೋಲಿಗೆ ಕುಂಟು ನೆಪಗಳನ್ನು ಹೇಳುತ್ತಿರುತ್ತಾರೆ ಹಾಗೂ ಗೆದ್ದವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಹೊರಿಸುತ್ತಿರುತ್ತಾರೆ. ಇದರ ಬದಲಿಗೆ, ಸೋಲೆಂದರೆ, ನೀನೆಂದೂ ಗೆಲ್ಲಲಾರೆ ಎಂಬ ಅರ್ಥವಲ್ಲ; ಮರಳಿ ಪ್ರಯತ್ನಿಸು ಎಂದಷ್ಟೆ ಅರ್ಥವೆಂದು ತಿಳಿದುಕೊಂಡು ಜಾಗರೂಕರಾದರೆ ಮುಂದೆ ಗೆಲುವು
ಅವರದಾಗಬಹುದಲ್ಲವೇ!.

ಮನೆಯಲ್ಲೂ ಅಷ್ಟೇ; ದಂಪತಿಗಳ ನಡುವೆ, ಭಿನ್ನಾಭಿಪ್ರಾಯಗಳು, ವಾಗ್ವಾದಗಳು, ಚರ್ಚೆಗಳು ಉಂಟಾಗೋದು ಸರ್ವೇ ಸಾಮಾನ್ಯ. ಜಗಳ ಮಾಡದ ದಂಪತಿಗಳೇ ಇಲ್ಲವೆನ್ನಬಹುದು. ಆದರ್ಶ ದಂಪತಿಗಳೆನ್ನಬಹುದು ಬರೇ ಕೇಳಲು ಮತ್ತು ಓದಲು ಸುಂದರವಾದ ಶಬ್ದ. ವಾಸ್ತವದಲ್ಲಿ ಆದರ್ಶ ದಂಪತಿಗಳೆನ್ನುವವರು ಬಹಳ ಅಪರೂಪ. ಕುರುಡ ಗಂಡ – ಕಿವುಡಿ ಹೆಂಡತಿ! ಕಾರಣ ಭಿನ್ನ ಭಿನ್ನವಾದ ಕೌಟುಂಬಿಕ, ಆರ್ಥಿಕ, ಸಾಂಸ್ಕೃತಿ, ಸಾಮಾಜಿಕ ಹಿನ್ನೆಲೆಯಿಂದ ಬಂದ ಎರಡು ವ್ಯಕ್ತಿಗಳ ನಡುವೆ
ಅಭಿಪ್ರಾಯ ಭೇದಗಳೇ ಇಲ್ಲವೆನ್ನುವುದು ಬುರುಡೆ ಮಾತಾದೀತು. ದಂಪತಿಗಳು ಒಮ್ಮತ ಇರುವ ವಿಷಯಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತಾರೆ ಅನ್ನೋದು ಮುಖ್ಯ. ಹೀಗಾಗಲೂ, ಎಲ್ಲಾ ಸಂದರ್ಭಗಳಲ್ಲೂ ತಾನೇ ಗೆದ್ದೆವೆಂಬ ಹಠ ಒಳ್ಳೆಯದಲ್ಲ.

ಕುಟುಂಬದಲ್ಲಂತೂ, ಕೆಲವೊಮ್ಮೆ ಸೋತು ಗೆಲ್ಲಬೇಕು; ಗೆದ್ದು ಸೋಲಬಾರದು! ಇದಕ್ಕೆ ತಮ್ಮ ಬಿಂಕದ ಅಹಂನ ಕೋಟೆಯಿಂದ ಹೊರಬರುವುದನ್ನು ರೂಢಿಮಾಡಿಕೊಳ್ಳಬೇಕು. ಆಗ ಮಾತ್ರ ಕೌಟುಂಬಿಕ ಸಾಮರಸ್ಯ ಏರ್ಪಟ್ಟಿತು. ಅಂತೆಯೇ, ಸಾಧನೆಗಳು ಮುಖ್ಯ. ಆದರೆ ಒಂದು ವೇಳೆ, ಸಾಧಿಸಲಾಗದಿದ್ದರೆ, ಜೀವನವೇ ಅಂತ್ಯಗೊಳೋದಿಲ್ಲ! ಯಾವುದೇ ಒಂದು ಬರವಣಿಗೆಯಲ್ಲಿ
ಪೂರ್ಣ ವಿರಾಮವೇ ಕೊನೆಯಲ್ಲವಲ್ಲ! ನಂತರವೂ ಹೊಸ ವಾಕ್ಯಗಳನ್ನು ಶುರುಮಾಡಬಹುದಲ್ಲ! ಈಗಿನ ಕಾಲದಲ್ಲಿ, ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳೆಂದರೆ ಒಂದು ‘ಯುದ್ಧ’ ವೆಂಬಂತೆ ಬಿಂಬಿಸಲಾಗುತ್ತದೆ. ಜಾಸ್ತಿ ಅಂಕಗಳನ್ನು
ಗಳಿಸಿದರೆ ಅದೇ ಒಂದು ದೊಡ್ಡ ‘ಗೆಲುವು’, ಕಡಿಮೆ ಅಂಕಗಳು ಬಂದರೆ ಇಲ್ಲವೇ ಅನುತ್ತೀರ್ಣನಾದರೆ, ‘ಸೋಲು’ ಎಂಬ ಭಾವನೆ ಯನ್ನು ಅವರ ತಲೆಯಲ್ಲಿ ತುಂಬಲಾಗುತ್ತದೆ.

ವಿದ್ಯಾರ್ಥಿಯ ಈ ಸೋಲಿಗೆ ಏನು ಕಾರಣವೆಂಬುದನ್ನು ಮುಕ್ತ ಮನಸ್ಸಿನಿಂದ ಯಾರೂ ವಿಶ್ಲೇಸೋದಿಲ್ಲ. ಜೀವನದಲ್ಲಿ ಅಂಕ ಗಳೇ ಅಂತ್ಯವಲ್ಲ! ಸೋಲು ಒಂದು ಅಪರಾಧವಲ್ಲ; ಅವಮಾನವಲ್ಲ. ಅದು ಒಂದು ತಾತ್ಕಾಲಿಕ ಹಿನ್ನಡೆ; ಮುಂದಿನ ಬಾರಿ, ಇನ್ನೂ ಹೆಚ್ಚಿನ ತಯಾರಿ ನಡೆಸಿ, ಪ್ರಯತ್ನಿಸಬೇಕಾದ ಸೂಚನೆ ಅಷ್ಟೇ ಎಂಬಂತಹ ಪ್ರೋತ್ಸಾಹದಾಯಕ ಮಾತುಗಳನ್ನು
ಪೋಷಕರಾಗಲಿ! ಶಿಕ್ಷಕರಾಗಲೀ ಹೇಳೋದೇ ಇಲ್ಲ.

ಸದಾ ಗೆಲ್ಲುತ್ತಲೇ ಇರುಬೇಕು; ಸೋಲೋ ದೌರ್ಬಲ್ಯದ, ಆತ್ಮವಿಶ್ವಾಸದ ಕೊರತೆಯ ಸಂಕೇತ ಎಂಬ ಧೋರಣೆಯನ್ನು, ಮಕ್ಕಳ ಮನಸ್ಸಿನಲ್ಲಿ ತುಂಬುತ್ತಾ ಹೋದರೆ, ಮುಂದಕ್ಕೆ ಅವರ ಜೀವನದಲ್ಲಿ, ಕೆಲವೊಮ್ಮೆ ಪ್ರತಿಭೆ, ಅರ್ಹತೆ ಇದ್ದು ಪ್ರಶಸ್ತಿಗಳು – ಪದ ಗಳು, ಭಡ್ತಿಗಳು ಸಿಗದಿದ್ದರೆ, ಇಲ್ಲವೇ ತಮ್ಮ ವ್ಯಾಪಾರ, ವ್ಯವಹಾರದಲ್ಲಿ ಕಷ್ಟ – ನಷ್ಟಗಳುಂಟಾದರೆ, ಅದು ದೊಡ್ಡ ಸೋಲು ಎಂದು ಭಾವಿಸಿ ಹತಾಶರಾಗುತ್ತಾರೆ. ಈ ಸೋಲನ್ನು ಅವಮಾನವೆಂದು ಪರಿಗಣಿಸಿ, ಆತ್ಮಹತ್ಯೆೆಗೂ ಶರಣಾಗೋದುಂಟು.

ಹೀಗಾಗದಂತೆ ಸೋತು ಗೆಲ್ಲುವ ವಿಧಾನವನ್ನು ಅವರಿಗೆ ಹೇಳಿಕೊಡಬೇಕು. ಹಾಗೆಂದು, ಸೋಲುವ ಭಯದಲ್ಲಿ ಕೆಲವರು,
ಸ್ಪರ್ಧೆಯಿಂದಲೇ ದೂರ ಸರಿಯುವುದುಂಟು. ಇದು ತರವಲ್ಲ. ನಡೆವವರು ಎಡಹುವರಲ್ಲದೆ, ಕುಳಿತವರು ಎಡಹುವರೇ? ಎಂಬ ರಾಘವಾಂಕ ಕವಿಯ ಮಾತು ಗಳನ್ನು ಎಂದು ಮರೆಯಬಾರದು. ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯೇ ಮುಖ್ಯವೆಂದು ತಿಳಿಯಬೇಕೇ ಹೊರತು ಬರೇ ಗೆಲುವೊಂದನ್ನು ಮಾತ್ರವಲ್ಲ, ಜೀವನದಲ್ಲಿ ತಾವು ಸೋಲಬೇಕೆಂದು ಯಾರೂ ತಮ್ಮ ಬಾಳ
ನಕ್ಷೆಯನ್ನು ಸಿದ್ಧಪಡಿಸಿರೋದಿಲ್ಲ. ಆದರೆ, ಸರಿಯಾದ ಬಾಳ ನಕ್ಷೆಯನ್ನು ಸಿದ್ಧಪಡಿಸುವಲ್ಲಿ ಸೋತಿರುತ್ತಾರೆ ಅಷ್ಟೇ.

ಆದುದರಿಂದ ನಕ್ಷೆ ಸರಿಯಾಗಿರಲಿ ಜೀವನವೆಂಬ ಬಯಲಾಟದಲ್ಲಿ, ಬಿದ್ದವ ಬಿದ್ದ; ಎದ್ದವ ಎದ್ದ, ಬಿದ್ದೂ ಏಳದವ ನೆಗೆದು
ಬಿಟ್ಟ! ಆದುದರಿಂದ, ಬಿದ್ದ ಮೇಲೂ ಎದ್ದೇಳುವ ಬುದ್ಧಿ ಇರಲಿ.