Sunday, 22nd December 2024

Vishwavani Editorial: ಅವರವರ ಭಾವಕ್ಕೆ, ಅವರವರ ಭಕುತಿಗೆ..

ಮೈಸೂರಿನ ಪುರಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಹಿಷ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ತಥಾಕಥಿತ ಎಡಪಂಥೀಯ ವಿಚಾರವಾದಿಯೊಬ್ಬರು, ‘ಹಿಂದೂ ಧರ್ಮ ನಮ್ಮದಲ್ಲ, ನಮಗೆ ಹಿಂದೂ ಧರ್ಮ ಬೇಕಾಗಿಲ್ಲ. ಶೂದ್ರರು ದೇಗುಲಕ್ಕೆ ಹೋಗುವುದನ್ನು ನಿಲ್ಲಿಸಬೇಕು’ ಎಂಬ ಆಣಿಮುತ್ತುಗಳನ್ನು ಉದುರಿಸಿದ್ದಾರೆ.

ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಮಹತ್ವ ನೀಡಿರುವ ನೆಲ ನಮ್ಮದು. ಹಾಗೆಂದ ಮಾತ್ರಕ್ಕೆ, ಅಭಿಪ್ರಾಯ ಸ್ವಾತಂತ್ರ್ಯದ ನೆಪದಲ್ಲಿ ಸ್ವಹಿತಾಸಕ್ತಿಯ ನೆರವೇರಿಕೆಯ ಮಾತುಗಳನ್ನಾಡಿ ನಾಲಗೆಯ ಚಪಲ ತೀರಿಸಿಕೊಳ್ಳುವವರ, ತನ್ಮೂಲಕ ಸಮಾಜದಲ್ಲಿ ವಿನಾಕಾರಣ ಒಡಕು ಉಂಟುಮಾಡುವವರ ನಡೆಯನ್ನು ಸಹಿಸಲಾಗದು. ಬಲವಂತದ ಮತಾಂತರ, ಸನಾತನ ಧರ್ಮದ ವಿರುದ್ಧದ ವ್ಯವಸ್ಥಿತ ಅಪಪ್ರಚಾರ ಸೇರಿದಂತೆ ವಿದೇಶಿ ಪ್ರೇರಿತ ಶಕ್ತಿಗಳು ಕಾಲಾನುಕಾಲಕ್ಕೆ ಹೂಡುತ್ತಿರುವ ಸಂಚುಗಳಿಂದಾಗಿ ಪ್ರಸ್ತುತ ನಮ್ಮ ಸಮಾಜದಲ್ಲಿ ತಳಮಳ ಮತ್ತು ಕದಲಿಕೆಗಳು ಆಗಾಗ ಇಣುಕುತ್ತಿವೆ.

ಸಾಲದೆಂಬಂತೆ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ‘ಸನಾತನದ ನಿರ್ಮೂಲನವಾಗಬೇಕು’ ಎಂದು ಫರ್ಮಾನು ಹೊರಡಿಸುವ ಜನನಾಯಕರೂ ನಮ್ಮ ಬಗಲಲ್ಲಿದ್ದಾರೆ. ಸನಾತನ ಧರ್ಮದ ಅಥವಾ ಹಿಂದೂ ಸಮಾಜದ ಬೇರುಗಳು ಇಂಥ ಪೊಳ್ಳು ಬೆದರಿಕೆಗಳಿಗೆ ನಾಶವಾಗಿಬಿಡುವಷ್ಟು ದುರ್ಬಲವಾಗಿಲ್ಲವಾದರೂ, ವೇದಿಕೆಗಳಿಂದ ಈ ಥರದ ಹೇಳಿಕೆಗಳು ಹೊಮ್ಮಿದಾಗ ಜನಮಾನಸದಲ್ಲಿ ಕೆಲಕಾಲವಾದರೂ ಗೊಂದಲ ತಾಂಡವ ವಾಡುವುದಿದೆ,

ಹಲವು ಜಾತಿಗಳ ಹದವಾದ ಮಿಶ್ರಣವಾಗಿರುವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಪರಸ್ಪರರನ್ನು ಅನುಮಾನದ ನೆಲೆಯಲ್ಲೇ ನೋಡುವಂಥ ವಾತಾವರಣ ಸೃಷ್ಟಿಯಾಗುವುದಿದೆ. ದೇಗುಲಕ್ಕೆ ಹೋಗಬೇಕೇ ಬೇಡವೇ?
ಹಿಂದೂ ಧರ್ಮವನ್ನು ಒಪ್ಪಬೇಕೇ ಬಿಡಬೇಕೇ? ಯಾವ ದೇವರನ್ನು ನಂಬಬೇಕು-ನೆಚ್ಚಬೇಕು? ಇತ್ಯಾದಿ ಬಾಬತ್ತು ಗಳೆಲ್ಲ ವ್ಯಕ್ತಿಗತ ಆಯ್ಕೆಗೆ ಮತ್ತು ನಂಬಿಕೆಗೆ ಬಿಟ್ಟ ವಿಚಾರ. ‘ಅವರವರ ಭಾವಕ್ಕೆ ಅವರವರ ಭಕುತಿಗೆ, ಅವರವರ ತೆರನಾಗಿ ಇರುತಿಹನು ಶಿವಯೋಗಿ’ ಎಂದಿದ್ದಾರೆ ಬಲ್ಲವರೊಬ್ಬರು.

ಹೀಗಾಗಿ, ಸಮಾಜವನ್ನು ಬೆಸೆದಿರುವ ‘ಸೌಹಾರ್ದ-ತಂತು’ವನ್ನು ಇನ್ನಷ್ಟು ಗಟ್ಟಿಯಾಗಿಸಲು ವಿಚಾರವಾದಿ ಗಳೆನಿಸಿ ಕೊಂಡವರು ಮುಂದಾಗಬೇಕೇ ವಿನಾ, ಸಲ್ಲದ ಸಂಗತಿಗಳನ್ನು ಜನಮನದಲ್ಲಿ ತುಂಬಿ ಹುಳಿಹಿಂಡಬಾರದು.
ಆದರೆ ಸಂಬಂಧಪಟ್ಟವರಿಗೆ ಇದು ಅರ್ಥವಾಗಬೇಕಲ್ಲ.

ಇದನ್ನೂ ಓದಿ: Dasara Shopping 2024: ವೀಕೆಂಡ್‌‌‌ನಲ್ಲೇ ನಡೆಯುತ್ತಿದೆ ದಸರಾ- ನವರಾತ್ರಿ ಭರ್ಜರಿ ಶಾಪಿಂಗ್‌!