Friday, 29th November 2024

Babar Azam: ಮತ್ತೆ ನಾಯಕತ್ವದಿಂದ ಕೆಳಗಿಳಿದ ಬಾಬರ್ ಅಜಂ

Babar Azam

ಕರಾಚಿ: ಪಾಕಿಸ್ತಾನ(Pakistan) ತಂಡದ ನಾಯಕ ಬಾಬರ್‌ ಅಜಂ(Babar Azam) ಮತ್ತೆ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸಸ್ತಾನ ತಂಡ ನಿರಾಶಾದಾಯಕ ಪ್ರದರ್ಶನ ತೋರಿದ ಕಾರಣಕ್ಕೆ ಅವರು ಎಲ್ಲಾ ಮಾದರಿಯ ನಾಯಕತ್ವ ತ್ಯಜಿಸಿದ್ದರು. ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ ವೇಳೆ ಮತ್ತೆ ಪಾಕ್‌ ಕ್ರಿಕೆಟ್‌ ಮಂಡಳಿ ಒತ್ತಾಯ ಪೂರ್ವಕವಾಗಿ ಬಾಬರ್‌ಗೆ ನಾಯಕತ್ವದ ಜವಾಬ್ದಾರಿ ನೀಡಿತ್ತು. ಇದೀಗ ಮತ್ತೆ ಬಾಬರ್‌ ನಾಯಕತ್ವಕ್ಕೆ ರಾಜೀನಾಮೆ(Babar Azam steps down captain) ನೀಡಿದ್ದಾರೆ. ಆದರೆ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

2019 ರಲ್ಲಿ ಸರ್ಫರಾಜ್ ಅಹ್ಮದ್ ಬದಲಿಗೆ ಬಾಬರ್ ಪಾಕ್ ತಂಡದ ಏಕದಿನ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ, ಪಾಕಿಸ್ತಾನವು ಏಷ್ಯಾ ಕಪ್ ಮತ್ತು 2022 ರಲ್ಲಿ ಟಿ20 ವಿಶ್ವಕಪ್‌ನ ಫೈನಲ್ ತಲುಪಿತ್ತು.

29 ರ ಹರೆಯದ ಬಾಬರ್ ಮಂಗಳವಾರ ತಡರಾತ್ರಿ ತಮ್ಮ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ನಾಯಕತ್ವದಿಂದ ಕೆಳಗಿಳಿದ ವಿಚಾರವನ್ನು ಘೋಷಣೆ ಮಾಡಿದ್ದಾರೆ. “ಪ್ರಿಯ ಅಭಿಮಾನಿಗಳೇ, ನಾನು ಇಂದು ನಿಮ್ಮೊಂದಿಗೆ ಕೆಲವು ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಕಳೆದ ತಿಂಗಳು ಪಿಸಿಬಿ ಮತ್ತು ಟೀಮ್ ಮ್ಯಾನೇಜ್‌ಮೆಂಟ್‌ಗೆ ನನ್ನ ಸೂಚನೆಯಂತೆ ನಾನು ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ, ”ಎಂದು ಬಾಬರ್ ಬರೆದಿದ್ದಾರೆ.

“ಈ ತಂಡವನ್ನು ಮುನ್ನಡೆಸುವುದು ಗೌರವವಾಗಿದೆ, ಇದು ಕಠಿಣ ನಿರ್ಧಾರವಾಗಿದೆ ಆದರೆ ಈ ನಿರ್ಧಾರಕ್ಕೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಆಟದ ಮೇಲೆ ಹೆಚ್ಚು ಕೇಂದ್ರೀಕರಿಸುವ ನಿಟ್ಟಿ ನಲ್ಲಿ ನಾನು ನಾಯಕತ್ವಕ್ಕೆ ಗುಡ್‌ ಬೈ ಹೇಳುತ್ತಿದ್ದೇನೆ. ಕೆಲಸದ ಹೊರೆಯನ್ನು ಕಡಿಮೆ ಮಾಡಿ ನಾನು ನನ್ನ ಪ್ರದರ್ಶನಕ್ಕೆ ಆದ್ಯತೆ ನೀಡಲು ಬಯಸುತ್ತೇನೆ, ನನ್ನ ಬ್ಯಾಟಿಂಗ್ ಅನ್ನು ಇನಷ್ಟು ಆನಂದಿಸಲು ಬಯಸುತ್ತೇನೆ, ಮತ್ತು ನನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ. ನನ್ನ ಆಟ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಶಕ್ತಿಯನ್ನು ಕೇಂದ್ರೀಕರಿಸುತ್ತೇನೆ. ನಿಮ್ಮ ಅಚಲ ಬೆಂಬಲ ಮತ್ತು ನನ್ನ ಮೇಲಿನ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ಆಟಗಾರರಾಗಿ ತಂಡಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಲು ಉತ್ಸುಕರಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು” ಎಂದು ಬಾಬರ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ IND vs BAN: ಮುರಳೀಧರನ್ ವಿಶ್ವ ದಾಖಲೆ ಸರಿಗಟ್ಟಿದ ಅಶ್ವಿನ್‌

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಅಫ್ರೀದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಬಾಬರ್‌ಗೆ ಮತ್ತೆ ನಾಯಕತ್ವ ನೀಡಲಾಗಿತ್ತು. ಆದರೆ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಹೀಗಾಗಿ ಬಾಬರ್‌ ವಿರುದ್ಧ ಮತ್ತೆ ಟೀಕೆ ಕೇಳಿ ಬರಲಾರಂಭಿಸಿತ್ತು. ಇದನ್ನು ಸಹಿಸಲಾಗದೆ ಬಾಬರ್‌ ಮತ್ತೆ ನಾಯಕತ್ವದಿಂದ ಕೆಳಗಿಳಿದಿದ್ದಾರೆ.